ನವದೆಹಲಿ: ಕೋವಿಡ್ ಸಾಂಕ್ರಮಿಕ ರೋಗದಿಂದ 2020-21ನೇ ಸಾಲಿನ ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ಸಾವನ್ನಪ್ಪಿದವರು ಭಾರತದ ಪ್ರಜೆಗಳು ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಹೆಚ್‌ಓ) ಅಧಿಕೃತ ವರದಿಯಿಂದ ತಿಳಿದು ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಬಗ್ಗೆ ಭಾರತ ಸರ್ಕಾರವು ಆಕ್ಷೇಪಿಸಿದೆ.
ಕೊವಿಡ್ 19 ಕಾರ್ಯಕಾರಿ ಗುಂಪಿನ ಮುಖ್ಯಸ್ಥ ಎನ್ . ಕೆ.ಅರೋರಾ ಡಬ್ಲ್ಯೂಹೆಚ್‌ಓ ವರದಿಯ ಪ್ರಕಾರ ಭಾರತದಲ್ಲಿ ಮರಣ ನೋಂದಣಿ ವ್ಯವಸ್ಥೆ ಅತ್ಯಂತ ಸ್ಪಷ್ಟವಾಗಿ ಮತ್ತು ನಿಖರವಾಗಿಯೇ ಇರುತ್ತದೆ. (ಭಾರತದಲ್ಲಿ ಮರಣ ನೋಂದಣಿ ವ್ಯವಸ್ಥೆಯನ್ನು ನಾಗರಿಕ ನೋಂದಣಿ ವ್ಯವಸ್ಥೆ ಅಥವಾ ಸಿಆರ್ಎಸ್ ಎಂದು ಕರೆಯಲಾಗುತ್ತದೆ). ಕೊವಿಡ್ 19ನಿಂದ ಉಂಟಾದ ಮರಣಗಳ ಸಂಖ್ಯೆಯನ್ನು ನಾವು ಸರಿಯಾಗಿಯೇ ನೋಂದಾಯಿಸಿದ್ದೇವೆ. ಶೇ.15-20ರಷ್ಟು ವ್ಯತ್ಯಾಸ ಇರಬಹುದೇ ಹೊರತು ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಅಂಕಿ-ಸಂಖ್ಯೆಯಷ್ಟೆಲ್ಲ ಸಾವು ಆಗಿಲ್ಲ ಎಂದು ಹೇಳಿರುವ ಬಗ್ಗೆ ಎನ್‌ಡಿ ಟಿವಿ ವರದಿ ಮಾಡಿದೆ.
2017ರಲ್ಲಿ ಸಿಆರ್ಎಸ್ ಮೂಲಕ ಎಷ್ಟು ಪ್ರಮಾಣದ ಮರಣ ನೋಂದಣಿ ಮಾಡಲಾಗಿತ್ತೋ, ಅದಕ್ಕಿಂತಲೂ 2018ರಲ್ಲಿ 5 ಲಕ್ಷ ಹೆಚ್ಚು ಜನರು ಮರಣಪಟ್ಟಿದ್ದರು. ಹಾಗೇ 2018ರಲ್ಲಿ ಒಟ್ಟಾರೆ ಮರಣದ ಅಂಕಿಸಂಖ್ಯೆ ಎಷ್ಟಿತ್ತೋ ಅದಕ್ಕಿಂತಲೂ ಏಳು ಲಕ್ಷ ಹೆಚ್ಚು 2019ರಲ್ಲಿ ದಾಖಲಾಯಿತು. ಹಾಗೇ 2020ರಲ್ಲಿ ಮತ್ತೆ 5 ಲಕ್ಷ ಹೆಚ್ಚು ಸಾವಿನ ಸಂಖ್ಯೆ ರಿಜಿಸ್ಟರ್ ಆಯಿತು. ಇದರ ಅರ್ಥ ಸರಳವಾಗಿದೆ. ನಾವೂ ಸಹ ಕೊವಿಡ್ 19 ಸೋಂಕಿನಿಂದಾದ ಸಾವಿನ ಸಂಖ್ಯೆಯನ್ನು ಸರಿಯಾಗಿಯೇ ನೋಂದಣಿ ಮಾಡುತ್ತಿದ್ದೇವೆ ಎಂದು ಅರೋರಾ ಹೇಳಿದ್ದಾರೆ.
ಗುರುವಾರ ಹೊರಬಂದ ವರದಿಯ ಪ್ರಕಾರ ಡಿಸೆಂಬರ್ 2020ರಿಂದ ಜನವರಿ2021ರವರೆಗೆ 4.7 ಮಿಲಿಯನ್ ನಿಂದ 16.6 ಮಿಲಿಯನ್ ನಡುವೆ ಕೋವಿಡ್ ಸಾಂಕ್ರಾಮಿಕತೆಯಿಂದ ಮರಣ ಹೊಂದಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿಯನ್ನು ಬಿಡುಗಡೆ ಮಾಡಿದೆ. ಇದೇ ಅವಧಿಯಲ್ಲಿ ಭಾರತದ ಅಧಿಕೃತ ಮರಣ ಸಂಖ್ಯೆ 4,81,894 ದಾಖಲಾಗಿದೆ. ಇದು ಅಧಿಕೃತ ಅಂಕಿಅಂಶಗಳಿಗಿಂತ ಅಂದಾಜು ಹತ್ತು ಪಟ್ಟು ಅಧಿಕ ಮತ್ತು ಒಟ್ಟಾರೆ ಜಾಗತಿಕ ಕೋವಿಡ್ ಮರಣಗಳು ಸುಮಾರು ಮೂರನೇ ಒಂದು ಪಾಲು ಹೊಂದಿದೆ. ಜಗತ್ತಿನಾದ್ಯಂತ ದಾಖಲಾಗಿರುವ ಅಧಿಕೃತ ಕೋವಿಡ್ ಮರಣ ಸಂಖ್ಯೆ 60 ಲಕ್ಷ ಇದೆ. ಆದರೆ ವರದಿ ಪ್ರಕಾರ, 1.50 ಕೋಟಿ ಮಂದಿ ಬಲಿಯಾಗಿದ್ದಾರೆ.
ಶೇಕಡ 5 ರಿಂದ 15 ಸಾವುಗಳ ಡೇಟಾಗಳು ಪ್ರಕಟಣೆ ಅಥವಾ ದೃಢೀಕರಿಸದೆ ಇರಬಹುದು. ಆದರೆ ವಿಶ್ವ ಆರೋಗ್ಯ ಸಂಸ್ಥೆಯು ಎರಡು ದೇಶಗಳ ಮಧ್ಯೆ ನಮ್ಮನ್ನು ನಿಲ್ಲಿಸಿರುವುದು ತಪ್ಪು ಎಂದು ಎನ್ ಕೆ. ಅರೋರಾ ಹೇಳಿದರು. ಭಾರತದಲ್ಲಿ ಹೆಚ್ಚಿನ ಮರಣ ಸಂಖ್ಯೆಯನ್ನು ತೋರಿಸುವ ಸಲುವಾಗಿಯೇ ವೈಜ್ಞಾನಿಕವಾಗಿ ಪ್ರಶ್ನಾರ್ಹವಾದ ಡೇಟಾ ಸಂಗ್ರಹಣೆ ಮಾದರಿಯನ್ನು ಬಳಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಡಬ್ಲ್ಯೂಎಚ್‌ಒ ದೇಶಗಳಲ್ಲಿನ ಕೋವಿಡ್ ಮರಣ ಸಂಖ್ಯೆಯನ್ನು ಲೆಕ್ಕ ಹಾಕಿ ಈ ದಾಖಲೆ ನೀಡಿಲ್ಲ. ಬದಲಾಗಿ ತನ್ನದೇ ಮಾದರಿಗಳ ಮೂಲಕ ಸಾವಿನ ಸಂಖ್ಯೆಯನ್ನು ಅಂದಾಜಿಸಿದೆ. ಕೋವಿಡ್ ಮರಣ ಪ್ರಮಾಣವನ್ನು ಗಣಿತ ಮಾದರಿಯಲ್ಲಿ ಲೆಕ್ಕ ಹಾಕುವ ಸಂಸ್ಥೆಯ ವಿಧಾನವೇ ಅಸಮರ್ಪಕ. ಇದರಿಂದ ಬಂದಿರುವ ಫಲಿತಾಂಶ ಕೂಡ ವಾಸ್ತವದಿಂದ ದೂರ ಇದೆ ಎಂದು ಭಾರತ ಪ್ರತಿಪಾದಿಸಿದೆ. ಜನನ ಮತ್ತು ಮರಣ ನೋಂದಣಿಯನ್ನು ದಾಖಲಿಸಲು ಭಾರತವು ಅತ್ಯಂತ ಸಮರ್ಥ ವ್ಯವಸ್ಥೆಯನ್ನು ಹೊಂದಿದೆ. ಡಬ್ಲ್ಯೂಎಚ್‌ಒದ ಡೇಟಾ ಸಂಗ್ರಹಣೆ ವ್ಯವಸ್ಥೆಯು ಸಾಂಖ್ಯಿಕವಾಗಿ ದುರ್ಬಲ ಮತ್ತು ವೈಜ್ಞಾನಿಕವಾಗಿ ಪ್ರಶ್ನಾರ್ಹ ಎಂದು ಭಾರತ ಸರ್ಕಾರದ ಹೇಳಿದೆ.