ಗುತ್ತಿಗೆದಾರನಿಂದ ಲಕ್ಷ-ಲಕ್ಷ ಹಣ ಕೀಳಿ ಮೋಸ ಮಾಡಿದ ಕಳ್ಳ ಸ್ವಾಮೀಜಿಗಳು

Please follow and like us:

ಚಿಕ್ಕಮಗಳೂರು: ಗುತ್ತಿದಾರನೊಬ್ಬ 10 ಲಕ್ಷ ರೂಪಾಯಿ ಹಣದ ಆಸೆಗಾಗಿ 3 ಮೂರು ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಮೂಲದ ವಿಜಯ್‌ಕುಮಾರ್ ಅವರೇ ವಂಚನೆಗೆ ಒಳಗಾದವರು. ಮಠಕ್ಕೆ ರಾಜಕಾರಣಿಗಳಿಂದ ಅನುದಾನ ಬಂದಿದ್ದು, ಇದನ್ನು ಸಾಲದ ರೂಪದಲ್ಲಿ ಜನರಿಗೆ ನೀಡುತ್ತಿದ್ದೇವೆ ಎಂದು ನಂಬಿಸಿ ಅವರಿಂದ ಹಣ ಪಡೆದುಕೊಂಡಿದ್ದಾರೆ.

ನಾವು ಕಲ್ಲೂರು ಮಠದ ಸ್ವಾಮೀಜಿ, ಮಠಕ್ಕೆ ರಾಜಕಾರಣಿಗಳಿಂದ 350 ಕೋಟಿ ಹಣ ಬಂದಿದೆ ಎಂದು ಗುತ್ತಿಗೆದಾರನನ್ನ ನಂಬಿಸಿ 3 ಲಕ್ಷ ಪಡೆದುಕೊಂಡಿದ್ದಾರೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.

ಕಾವಿ ಬಟ್ಟೆ ಧರಿಸಿದ ಖದೀಮರು ಶಿವಮೊಗ್ಗದಲ್ಲಿ ವಿಜಯ್‌ಕುಮಾರ್ ನನ್ನ ಭೇಟಿಯಾಗಿದ್ದರು. 3 ಲಕ್ಷ ಹಣ ಕೊಡಿ, ನಾವು 10 ಲಕ್ಷ ಕೊಡುತ್ತೇವೆ. ಉಳಿದ ಹಣವನ್ನ 6 ತಿಂಗಳಲ್ಲಿ ತಲಾ 50 ಸಾವಿರ ನೀಡಿ ತೀರಿಸಿ ಎಂದು ಹೇಳಿ ನಂಬಿಸಿದ್ದರು. ವಿಜಯ್‌ಕುಮಾರ್ ಸ್ವಾಮೀಜಿಗಳ ಮಾತಿಗೆ ಮರುಳಾಗಿ ನನಗೆ 10 ಲಕ್ಷ ಹಣ ಬೇಕು ಎಂದು ಕೇಳಿದ್ದಾರೆ. ಆಗ ಸ್ವಾಮೀಜಿಗಳು ನಮ್ಮ ಬಳಿ ಬರೀ 100 ರೂಪಾಯಿಯ ನೋಟುಗಳಿವೆ. ಈ ಡಿಸೆಂಬರ್ ವೇಳೆಗೆ 100 ರೂಪಾಯಿ ಮುಖ ಬೆಲೆಯ ನೋಟುಗಳು ಬ್ಯಾನ್ ಆಗುತ್ತವೆ ಎಂದು ಹೇಳಿದ್ದಾರೆ. ಅದಕ್ಕೆ ಒಪ್ಪಿದ ಗುತ್ತಿಗೆದಾರ ವಿಜಯ್ ಒಪ್ಪಿ ಸಾಲ ಪಡೆಯಲು ಮುಂದಾಗಿದ್ದಾರೆ. ಖದೀಮರು ಹೇಳಿದಂತೆ ಬಾಳೆಹೊನ್ನೂರಿಗೆ ಬಂದು ವಿಜಯ್‌ಕುಮಾರ್ 3 ಲಕ್ಷ ರೂ. ಹಣ ನೀಡಿದ್ದಾರೆ.

ಬಾಳೆಹೊನ್ನೂರಿನಲ್ಲಿ ವಿಜಯಕುಮಾರ್‌ ನಿಂದ 3 ಲಕ್ಷ ಪಡೆದ ಸ್ವಾಮೀಜಿಗಳು 100ರ ಮುಖಬೆಲೆಯುಳ್ಳ ನೋಟುಗಳು ಕಾಣುವಂತೆ ಸಿದ್ಧಪಡಿಸಿದ್ದ ಮರದ ಬಾಕ್ಸ್‌ವೊಂದನ್ನು ನೀಡಿದ್ದಾರೆ. ವಿಜಯ್ ಅದನ್ನ ಕಂಡು ಎಲ್ಲಾ 100 ರೂಪಾಯಿಗಳೇ ಎಂದು ನಂಬಿ 3 ಲಕ್ಷ ಹಣ ಕೊಟ್ಟಿದ್ದಾರೆ. ವ್ಯವಹಾರ ಮುಗಿಸಿದ ಪೇಪರ್ ತುಂಬಿದ್ದ ಮರದ ಬಾಕ್ಸ್ ನೀಡಿ ಹಣ ಎಣಿಸಿಕೊಳ್ಳಿ ಎಂದು ಸ್ವಾಮೀಜಿಗಳು ಹೇಳಿ ಹೋಗಿದ್ದಾರೆ.

ವಿಜಯಕುಮಾರ್ ಬಾಕ್ಸ್ ತೆರೆದು ನೋಡಿದರೆ, ಅದರಲ್ಲಿ 100 ರೂ.ಗಳ 1,800 ರೂ. ಹಣ ಇದ್ದದ್ದು ಬಿಟ್ಟರೇ ಮತ್ತೆ ಉಳಿದದ್ದು ನ್ಯೂಸ್ ಪೇಪರ್ ಮಾತ್ರ. ಕೂಡಲೇ ವಿಜಯ್ ಕುಮಾರ್ ಕಳ್ಳ ಸ್ವಾಮೀಜಿಗಳಿಗಾಗಿ ಬಾಳೆಹೊನ್ನೂರು ತುಂಬ ಹುಡುಕಾಡಿದ್ದಾರೆ. ಆದರೆ, ಅವರು ಸಿಕ್ಕಿಲ್ಲ. ಅವರು ಕರೆ ಮಾಡಿದ್ದ ಎರಡೂ ನಂಬರ್‌ಗೆ ಫೋನ್ ಮಾಡಿದರೆ ಎರಡೂ ಸ್ವಿಚ್ ಆಫ್‌ಆಗಿದೆ.

ಮೋಸ ಹೋದ ವಿಜಯ್‌ಕುಮಾರ್ ತಕ್ಷಣವೇ ಬಾಳೆಹೊನ್ನೂರು ಠಾಣೆಗೆ ಬಂದು ಘಟನೆಯನ್ನ ವಿವರಿಸಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೋ ಬಾಳೆಹೊನ್ನೂರು ಪೊಲೀಸರು ಕಾವಿ ತೊಟ್ಟ ಕಳ್ಳ ಸ್ವಾಮೀಜಿಗಳ ಹುಡುಕಾಟ ಆರಂಭಿಸಿದ್ದಾರೆ.

Please follow and like us:
Donate Janashakthi Media

Leave a Reply

Your email address will not be published. Required fields are marked *