ಶುಕ್ರವಾರ ಎಂದರೆ ಸಿನಿಪ್ರಯರಲ್ಲಿ ಸಂಭ್ರಮ.ಏಕೆಂದರೆ ಬಹುತೇಕ ಸಿನಿಮಾಗಳು ಶುಕ್ರವಾರದಂದೇ ಬಿಡುಗಡೆಯಾಗುತ್ತವೆ. ಹೀಗೆಯೆ ಈ ದಿನವೂ ಹಲವಾರು ಸಿನಿಮಾಗಳು ಪ್ರೇಕ್ಷಕರನ್ನು ತಮ್ಮತ್ತ ಸೆಳೆಯಲು ಚಿತ್ರಮಂದಿರಗಳಿಗೆ ಬಂದಿವೆ. ಯಾವೆಲ್ಲಾ ಸಿನಿಮಾಗಳು ಇಂದು ರಿಲೀಸ್ ಆಗಿವೆ ಎಂಬ ಮಾಹಿತಿ ಇಲ್ಲಿದೆ.
ಇಂದು (೧೩ ಅಕ್ಟೋಬರ್) ಚಿತ್ರಮಂದಿರಗಳಿಗೆ ಮಾರಕಾಸ್ತ್ರ, ಕುದ್ರು, ವೇಷ, ಜಲಪಾತ ಮುಂತಾದ ಕನ್ನಡ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ. ಸಿನಿಮಾಗಳಿಗೆ ಒಳ್ಳೆಯ ಪ್ರತಿಕ್ರೆಯೆ ಎಲ್ಲೆಡೆ ವ್ಯಕ್ತವಾಗುತ್ತಿದೆ.
ಗುರುಮೂರ್ತಿ ಸುನಾಮಿ ನಿರ್ದೇಶನದ ಮಾರಕಾಸ್ತ್ರ ಕನ್ನಡದ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ. ಚಿತ್ರದಲ್ಲಿ ಮಾಲಾಶ್ರೀ, ಆನಂದ್ ಆರ್ಯ ಮತ್ತು ಹರ್ಷಿಕಾ ಪೂರ್ಣಚ್ಚ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಉಗ್ರಂ ಮಂಜು, ಭರತ್ ಸಿಂಗ್ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಂಜು ಕವಿ ಸಂಗೀತ ಸಂಯೋಜಿಸಿದ್ದು, ಅರುಣ್ ಸುರೇಶ್ ಅವರ ಛಾಯಾಗ್ರಹಣ ಮತ್ತು ವಿಶ್ವ ಎನ್ ಎಂ ಸಂಕಲನವಿದೆ. ಶ್ರಾವ್ಯ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಕೋಮಲಾ ನಟರಾಜ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಕುದ್ರು ಸಿನಿಮಾ ಭಾಸ್ಕರ್ ನಾಯ್ಕ್ ನಿರ್ದೇಶನ ಮತ್ತು ನಿರ್ಮಾಣದ ಕನ್ನಡ ಡ್ರಾಮಾ ಥ್ರಿಲ್ಲರ್ ಚಲನಚಿತ್ರವಾಗಿದೆ. ಚಿತ್ರದಲ್ಲಿ ಪ್ರಿಯಾ ಹೆಗ್ಡೆ, ಹರ್ಷಿತ್ ಶೆಟ್ಟಿ, ಗಾಡ್ವಿನ್ ಸ್ಪಾರ್ಕಲ್, ಫರ್ಹಾನ್ ಉಡುಪಿ, ದೈನಾ ಡಿಸೋಜಾ ಮತ್ತು ವಿನುತ ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ ಮತ್ತು ಭಾಸ್ಕರ್ ನಾಯ್ಕ್, ಸತೀಶ್ ಆಚಾರ್ಯ ಮತ್ತು ಅನೇಕರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತೀಕ್ ಕುಂದು ಸಂಗೀತ ಸಂಯೋಜಿಸಿದ್ದು, ಶ್ರೀ ಪುರಾಣಿಕ್ ಅವರ ಛಾಯಾಗ್ರಹಣ ಮತ್ತು ಶ್ರೀನಿವಾಸ್ ಕಲಾಲ್ ಸಂಕಲನ ಮಾಡಿದ್ದಾರೆ. ನೀರಿನಿಂದ ಸುತ್ತುವರಿದ ದ್ವೀಪವನ್ನು ತುಳುವಿನಲ್ಲಿ ‘ಕುದ್ರು’ ಎಂದು ಕರೆಯಲಾಗುತ್ತದೆ. ಒಂದು ಸಣ್ಣ ದ್ವೀಪದಲ್ಲಿ ವಿವಿಧ ಸಮುದಾಯಗಳು ಸಾಮರಸ್ಯದಿಂದ ಬದುಕುತ್ತಿರುವಾಗ, ವಾಟ್ಸ್ಯಾಪ್ ಸಂದೇಶವು ಹೇಗೆ ಅಶಾಂತಿಯನ್ನು ಸೃಷ್ಟಿಸುತ್ತದೆ ಎಂಬುದು ಕಥೆಯ ತಿರುಳು ಆಗಿದೆ.
ವೇಷ ಚಿತ್ರವು ಕೃಷ್ಣ ನಡ್ಪಾಲ್ ನಿರ್ದೇಶನದ ಕನ್ನಡ ಚಲನಚಿತ್ರವಾಗಿದೆ. ಚಿತ್ರದಲ್ಲಿ ರಾಘವೇಂದ್ರ ದೇವಾಡಿಗ ಮತ್ತು ನಿಧಿ ಮರೋಳಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸೌಖ್ಯ ಗೌಡ, ರಾಜಾ ಅಲಿ, ಶಿಲ್ಪಾ ಕುಮಟಾ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉತ್ತಮ ಸಾರಂಗ್ ಸಂಗೀತ ಸಂಯೋಜಿಸಿದ್ದಾರೆ. ಹಂಸಿನಿ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ರಾಘವೇಂದ್ರ ದೇವಾಡಿಗ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಜಲಪಥವು ರಜನೀಶ್, ನಾಗಶ್ರೀ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ರಮೇಶ್ ಬೇಗಾರ್ ನಿರ್ದೇಶನದ ಕನ್ನಡ ನಾಟಕ ಚಲನಚಿತ್ರವಾಗಿದೆ. ಈ ಚಲನಚಿತ್ರವು ಪರಿಸರ ರಕ್ಷಣೆ, ಜೀವನಶೈಲಿ ಮತ್ತು ಆಹಾರ ಸೇವನೆಯನ್ನು ಎತ್ತಿ ತೋರಿಸುತ್ತದೆ.