ಗೋಧಿ ರಫ್ತು: ಗೊಂದಲಮಯ ನೀತಿ ಅಥವಾ ಒಳಕಾರ್ಯಸೂಚಿ?

ಮಧುರಾ ಸ್ವಾಮಿನಾಥನ್ ಮತ್ತು ದೀಪಕ್ ಜಾನ್ಸನ್
ಅನುವಾದ : ಜಿ.ಎಸ್.ಮಣಿ

ಈ ಸರ್ಕಾರದಲ್ಲಿ ಆಹಾರ ಭದ್ರತೆಯ ಸುಸಂಬದ್ಧ ನೀತಿಯ ಕೊರತೆಯಿದೆ. ಆಹಾರ ಭದ್ರತೆಯು ತಕ್ಷಣದ ಮತ್ತು ದೀರ್ಘಾವಧಿಯ ಕಾಳಜಿಯಾಗಬೇಕಾಗಿದೆ ಮತ್ತು ಇದಕ್ಕೆ “ಸರ್ಜಿಕಲ್ ಸ್ಟ್ರೈಕ್” ಅಗತ್ಯವಿರುವುದಿಲ್ಲ. ಉತ್ತಮವಾಗಿ ಕಾರ್ಯನಿರ್ವಹಿಸುವ ಪಡಿತರ ವಿತರಣಾ ವ್ಯವಸ್ಥೆ ಬೆಲೆಗಳನ್ನು ನಿಯಂತ್ರಿಸುತ್ತದೆ ಮತ್ತು ಗ್ರಾಹಕರಿಗೆ ಪರಿಹಾರವನ್ನು ನೀಡುತ್ತದೆ. ಸರ್ಕಾರವು ಹೆಚ್ಚಿನ ಬೆಲೆಗೆ ಆಹಾರ ಧಾನ್ಯವನ್ನು ಸಂಗ್ರಹಿಸದೆ ವ್ಯಾಪಾರಿಗಳನ್ನು ಬೆಂಬಲಿಸಿ ರೈತರಿಗೆ ಶಿಕ್ಷೆ ವಿಧಿಸಿದೆ ಮತ್ತು ಭವಿಷ್ಯದ ಲಾಭಕ್ಕಾಗಿ ದಾಸ್ತಾನುಗಳನ್ನು ಖರೀದಿಸಲು ಖಾಸಗಿ ವ್ಯಾಪಾರಿಗಳಿಗೆ ಮುಕ್ತ ಅವಕಾಶ ಮಾಡಿಕೊಟ್ಟಿದೆ. ಈ ದೃಷ್ಟಿಯಿಂದ ನೋಡಿದಾಗ, ಸರ್ಕಾರ ಖಾಸಗಿಯವರಿಗೆ ಅಂದರೆ ವ್ಯಾಪಾರಿಗಳು ಮತ್ತು ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಒಳ ಕಾರ್ಯಸೂಚಿ ಹೊಂದಿರಬಹುದೆಂಬ ಸಂದೇಹ ಬರುತ್ತದೆ.

ಗೋಧಿಯ ರಫ್ತು ಹೆಚ್ಚಳದ ಮೂಲಕ “ಭಾರತೀಯ ರೈತರು ಜಗತ್ತನ್ನು ಪೋಷಿಸುತ್ತಿದ್ದಾರೆ” ಎಂದು ಪ್ರಧಾನಿ ಮೋದಿ ಹೇಳಿದ ಒಂದು ತಿಂಗಳ ನಂತರ, ಮೇ 13, 2022ರಂದು ಭಾರತ ಸರ್ಕಾರವು ಗೋಧಿಯ ರಫ್ತಿನ ಮೇಲೆ ಹಠಾತ್ ನಿಷೇಧವನ್ನು ಘೋಷಿಸಿತು. ಯಾಕೆ ಎಂಬ ಪ್ರಶ್ನೆ ಬೃಹತ್ತಾಗಿ ಉದ್ಭವಿಸುತ್ತದೆ. ವಾಟ್ಸಾಪ್ ನಲ್ಲಿ ಭಾರತ ಜಗತ್ತನ್ನೇ ಫೋಷಿಸುತ್ತಿದೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಮುನ್ನ ಪರಿಸ್ಥಿತಿಯ ಗಂಭೀರ ಪರಿಗಣನೆ ಮಾಡಿರಲಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅದು ಈ ಸರ್ಕಾರದ ಸ್ವಭಾವವೂ ಹೌದು. ಆಳವಾದ ವಿಶ್ಲೇಷಣೆಯ ಬದಲು ದೊಡ್ಡ ಗಂಟಲಿನ ಒದರುವಿಕೆ ಈ ಪರಿವಾರದ ವೈಶಿಷ್ಟ್ಯ. ರಫ್ತು ನಿಷೇಧವು ಜಾರಿಗೆ ಬರುವ ಒಂದು ದಿನದ ಮುಂಚೆಯೂ, ಸರ್ಕಾರಿ ಅಧಿಕಾರಿಗಳು ಸಂಭವನೀಯ ರಫ್ತು ಸ್ಥಳಗಳನ್ನು ಹುಡುಕುತ್ತಿದ್ದರು. ಇದು ಗೋಧಿ ರಫ್ತು ನಿಯಂತ್ರಣಕ್ಕೆ ಯಾವುದೇ ಸ್ಪಷ್ಟ ಮತ್ತು ತರ್ಕ ಬದ್ಧ ಯೋಜನೆಗಳಿಲ್ಲ ಎಂಬುದನ್ನು ಎತ್ತಿ ತೋರಿಸುತ್ತದೆ. ಈ ಘೋಷಣೆಯೊಂದಿಗೆ ಸರ್ಕಾರವು ಗೊಂದಲಮಯ ನೀತಿ ಸಂಕೇತಗಳನ್ನು ರವಾನಿಸಿದೆ.

ಆಹಾರ ಧಾನ್ಯಗಳ ಸಾರ್ವಜನಿಕ ಸಂಗ್ರಹಣೆಯ ವ್ಯವಸ್ಥೆಯು 1960 ರ ದಶಕದ ಮಧ್ಯಭಾಗದಿಂದ ನಮ್ಮ ದೇಶದಲ್ಲಿ ಜಾರಿಯಲ್ಲಿದೆ ಮತ್ತು ಅದು ನಮ್ಮ ಆಹಾರ ನೀತಿಯ ಬೆನ್ನೆಲುಬಾಗಿದೆ. ಉದಾರೀಕರಣ ನೀತಿಯ ಭಾಗವಾಗಿ, ಅನೇಕ ಅರ್ಥಶಾಸ್ತ್ರಜ್ಞರು ಭಾರತದಲ್ಲಿ ಆಹಾರ ದಾಸ್ತಾನುಗಳನ್ನು ಕಡಿಮೆಗೊಳಿಸಬೇಕು ಮತ್ತು ಆಹಾರ ಭದ್ರತೆಯ ಅಗತ್ಯಗಳನ್ನು ವಿಶ್ವ ವ್ಯಾಪಾರ ಮತ್ತು ಚಿಕಾಗೋ ಭವಿಷ್ಯದ ಮಾರುಕಟ್ಟೆಯ ಮೂಲಕ ಪೂರೈಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ. ಪ್ರಗತಿಪರ ಅರ್ಥಶಾಸ್ತ್ರಜ್ಞರು ಮತ್ತು ಸಾಮಾಜಿಕ ವಿಜ್ಞಾನಿಗಳು ಯಾವಾಗಲೂ ಭಾರತದ ಗಾತ್ರದ ದೇಶಕ್ಕೆ ದೇಶೀಯ ಉತ್ಪಾದನೆಯ ಮೂಲಕ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದೇ ವಾದಿಸುತ್ತಾರೆ. ಇದರ ಮಹತ್ವ ಸ್ವಲ್ಪ ವಿಚಾರ ಮಾಡಬಲ್ಲವರಿಗೂ ಮನದಟ್ಟಾಗುವಂತಹದ್ದು.

ಈ ಬೇಸಿಗೆಯಲ್ಲಿ, ಭಾರತೀಯ ಆಹಾರ ನಿಗಮದಿಂದ ಗೋಧಿ ಸಂಗ್ರಹಣೆ ತುಂಬಾ ಕಡಿಮೆಯಾಗಿದೆ. ಕಳೆದ ವರ್ಷ, ಭಾರತ ಆಹಾರ ನಿಗಮ ಮತ್ತು ಇತರ ಸಹ ಸಂಸ್ಥೆಗಳು 43.34 ಮಿಲಿಯನ್ ಟನ್ ಗೋಧಿಯನ್ನು ಸಂಗ್ರಹಿಸಿದ್ದವು. ಪ್ರಸ್ತುತ ಹಂಗಾಮಿನಲ್ಲಿ, ಅಂದರೆ, 2022 ರ ಮೇ 10, ಹೊತ್ತಿಗೆ ಸಂಗ್ರಹಣೆಯು ಕೇವಲ 17.8 ಮಿಲಿಯನ್ ಟನ್‌ಗಳಷ್ಟಾಗಿದೆ. ಕಡಿಮೆ ಪ್ರಮಾಣದ ಸಂಗ್ರಹಣೆಯನ್ನು ಗಮನಿಸಿದರೆ, ಸರ್ಕಾರವು ಪ್ರಸಕ್ತ ಋತುವಿನ ಸಂಗ್ರಹಣೆ ಗುರಿಯನ್ನು 44.4 ರಿಂದ 19.5 ಮಿಲಿಯನ್ ಟನ್‌ಗಳಿಗೆ ಇಳಿಸಿರುವುದು ಗೊತ್ತಾಗುತ್ತದೆ. ಖಾಸಗಿ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ರಫ್ತು ಸೇರಿದಂತೆ ಭವಿಷ್ಯದ ವ್ಯಾಪಾರ ಲಾಭಕ್ಕಾಗಿ ಗೋಧಿಯನ್ನು ಖರೀದಿಸುತ್ತಿದ್ದಾರೆ ಮತ್ತು ಸಂಗ್ರಹಿಸುತ್ತಿದ್ದಾರೆ ಎಂದು ತಜ್ಞರು ಹೇಳುತ್ತಿದ್ದಾರೆ. ರಫ್ತು ನೀತಿಯಲ್ಲಿನ ಹಠಾತ್ ತಿರುವು ಕಡಿಮೆ ಸಾರ್ವಜನಿಕ ಸಂಗ್ರಹಣೆಯು ದೇಶೀಯ ಆಹಾರ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಭಯದ ಕಾರಣದಿಂದಾಗಿ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ. ಶ್ರೀಲಂಕಾದ ಇಂದಿನ ಪರಿಸ್ಥಿತಿಯ ಅರಿವು ಈ ಸರ್ಕಾರವನ್ನು ಬಾಧಿಸಿರುವ ಸಾಧ್ಯತೆ ಈ ಎಲ್ಲ ಗೊಂದಲಮಯ ನಿಲುವುಗಳಲ್ಲಿ ಇರಬಹುದೆಂಬ ಸಂದೇಹ ಬಂದೇ ಬರುತ್ತದೆ. ಆಹಾರ ಧಾನ್ಯದ ಲಭ್ಯತೆಯ ವಿಷಯದಲ್ಲಿ ಚಿಂತೆ ಪಡುವ ಪರಿಸ್ಥಿತಿ ಇದೆಯೆ ಎಂಬ ಪ್ರಶ್ನೆ ಏಳುತ್ತದೆ. ಪಡಿತರ ವಿತರಣಾ ವ್ಯವಸ್ಥೆ ಮತ್ತು ನೀತಿಗಳನ್ನು ಸರಿಯಾಗಿ ನಿರ್ವಹಿಸಿ ಅನುಷ್ಟಾನಗೊಳಿಸಿ ಬೆಲೆಗಳನ್ನು ಸ್ಥಿರಗೊಳಿಸಿದರೆ  ಖಂಡಿತವಾಗಿಯೂ ಇಲ್ಲ.

ಕಳೆದ ಮಾರ್ಚ್‌ನಲ್ಲಿ ಹೆಚ್ಚಿನ ಉಷ್ಣತೆ ಮತ್ತು ಇತರ ಅಂಶಗಳಿಂದಾಗಿ ಗೋಧಿ ಉತ್ಪಾದನೆಯು ಅಂದಾಜು ಮಾಡಿದ್ದಕ್ಕಿಂತ ಕಡಿಮೆಯಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಉತ್ಪಾದನೆಯಲ್ಲಿ ದೊಡ್ಡ ಕೊರತೆಯೆನಿಲ್ಲ ಎಂಬುದು ಕೆಳಗಿನ ಅಂಕಿಗಳಿಂದ ಸ್ಪಷ್ಟವಾಗುತ್ತದೆ. ಗೋಧಿ ಉತ್ಪಾದನೆ 2018-19ರಲ್ಲಿ 103.6 ಮಿಲಿಯನ್ ಟನ್‌ಗಳು, 19-20ರಲ್ಲಿ 107.8 ಮಿಲಿಯನ್ ಟನ್‌ಗಳು ಮತ್ತು 2020-21ರಲ್ಲಿ 109.5 ಮಿಲಿಯನ್ ಟನ್‌ಗಳು. ಈ ವರ್ಷಕ್ಕೆ (2021-22) ಉತ್ಪಾದನೆ ದಾಖಲೆಯ 111.3 ಮಿಲಿಯನ್ ಟನ್‌ಗಳು ಎಂದು ನಿರೀಕ್ಷಿಸಲಾಗಿತ್ತು. 2021-22 ರ ಉತ್ಪಾದನೆಯ ಇತ್ತೀಚಿನ ಅಂದಾಜನ್ನು, ಹಿಂದಿನ ಅಂದಾಜಿನಿಂದ ಕೆಳಕ್ಕೆ ಪರಿಷ್ಕರಿಸಲಾಗಿದೆ, ಅಂದರೆ, 105 ಮಿಲಿಯನ್ ಟನ್‌ಗಳಿಗೆ ಇಳಿಸಲಾಗಿದೆ.

ಉಕ್ರೇನ್‌ನ ಯುದ್ಧದ ಕಾರಣದಿಂದಾಗಿ ಉತ್ಪಾದನೆ ಮತ್ತು ವ್ಯಾಪಾರದಲ್ಲಿ ಜಾಗತಿಕವಾಗಿ ಗೋಧಿ ಪೂರೈಕೆಯ ಕಡಿತದ ಸಮಸ್ಯೆ ಇದೆ. ರಷ್ಯಾ ಮತ್ತು ಉಕ್ರೇನ್ ಎರಡೂ ಜಾಗತಿಕ ಮಾರುಕಟ್ಟೆಯಲ್ಲಿ ಗೋಧಿಯ ಪ್ರಮುಖ ರಫ್ತುದಾರರಾಗಿದ್ದವು ಮತ್ತು ಯುದ್ಧದಿಂದ ಉಂಟಾಗುವ ಅಡಚಣೆಗಳು ಈಜಿಪ್ಟಿನಂತಹ ಈ ಎರಡೂ ದೇಶಗಳಿಂದ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಪರಿಣಾಮ ಬೀರುತ್ತಿವೆ. ಆಮದು ಮಾಡಿಕೊಳ್ಳುವ ದೇಶಗಳಿಗೆ ಪರಿಹಾರ ನೀಡಲು ರಫ್ತುಗಳನ್ನು ಸಡಿಲಿಸುವಂತೆ ಪಾಶ್ಚಿಮಾತ್ಯ ಅಭಿವೃದ್ಧಿ ಹೊಂದಿದ ದೇಶಗಳಿಂದ ಭಾರತಕ್ಕೆ ಒತ್ತಡ ಬರುತ್ತಿದೆ. ಆದರೆ ಪಾಶ್ಚಿಮಾತ್ಯ ದೇಶಗಳು, ಅವುಗಳಲ್ಲಿ ಕೆಲವು ಗೋಧಿಯ ದೊಡ್ಡ ರಫ್ತುದಾರರು, ಪ್ರಸ್ತುತ ಸಂದರ್ಭದಲ್ಲಿ ತಮ್ಮ ರಫ್ತುಗಳನ್ನು ಹೆಚ್ಚಿಸಿಲ್ಲ ಎಂಬುದು ಅವುಗಳ ದ್ವಿಮುಖ ನೀತಿಯ ಪರಿಣಾಮವಾಗಿದೆ. ಜಾಗತಿಕವಾಗಿ ಹಲವು ದೇಶಗಳು ಆಹಾರ ಧಾನ್ಯಗಳ ರಫ್ತಿನ ಮೇಲೆ ನಿಷೇಧ ಹೆರಿವೆ.

ಗೋಧಿಯ ದೊಡ್ಡ ಉತ್ಪಾದನೆ ಮತ್ತು ಭಾರತದೊಳಗೆ ಕೆಲವು ಮಟ್ಟದ ಆಹಾರ ಭದ್ರತೆಯು ಭಾಗಶಃ ಭಾರತದ ಆಹಾರ ಧಾನ್ಯ ಸಂಗ್ರಹ ನೀತಿಯ ಪರಿಣಾಮವಾಗಿದೆ. ಭಾರತದ ಸಾರ್ವಜನಿಕ ಆಹಾರ ಧಾನ್ಯ ಸಂಗ್ರಹಣೆ ನೀತಿಯನ್ನು ತೀವ್ರವಾಗಿ ಟೀಕಿಸುತ್ತಿದ್ದ ವಿಶ್ವಬ್ಯಾಂಕ್‌ನಂತಹ ಸಂಸ್ಥೆಗಳು ಮತ್ತು ಅಭಿವೃದ್ಧಿ ಹೊಂದಿದ ದೇಶಗಳು ಭಾರತದ ಗೋಧಿ ಉತ್ಪಾದನೆ ಮತ್ತು ರಫ್ತಿನ ಮೇಲಿನ ನಿಯಂತ್ರಣದ ಬಗ್ಗೆ ಮಾತನಾಡುವುದು ನಿಜಕ್ಕೂ ವಿಪರ್ಯಾಸ.

ಈ ವಿಷಯದಲ್ಲಿ ಜಾಗತಿಕ ಸಂವಾದವನ್ನು ಅರ್ಥ ಮಾಡಿಕೊಳ್ಳಲು ಮತ್ತು ಪ್ರಸ್ತುತ ನೀತಿ ಸಂದರ್ಭವನ್ನು ಅರ್ಥಮಾಡಿಕೊಳ್ಳಲು, ನಾವು ಭಾರತದಲ್ಲಿ ಹೊಂದಿರುವ ದಾಸ್ತಾನುಗಳನ್ನು ನೋಡುವುದು ಮುಖ್ಯವಾಗುತ್ತದೆ.

ಏಪ್ರಿಲ್ 30, 2022 ರಂದು ಕೇಂದ್ರೀಯ ಪೂಲ್‌ನಲ್ಲಿರುವ ಗೋಧಿಯ ದಾಸ್ತಾನುಗಳು 30.3 ಮಿಲಿಯನ್ ಟನ್‌ಗಳಾಗಿದ್ದು, ಕಳೆದ ವರ್ಷದ 52.5 ಮಿಲಿಯನ್ ಟನ್‌ಗಳಿಗಿಂತ ಇದು ಕಡಿಮೆಯಾಗಿದೆ. ಆದರೆ ಬಫರ್ (ಹೆಚ್ಚಿನ) ದಾಸ್ತಾನು ಮಾನದಂಡಗಳಿಗಿಂತ ಹೆಚ್ಚಾಗಿದೆ. ಈ ವ್ಯಾಪಾರ ಋತುವಿನಲ್ಲಿ ಸರ್ಕಾರದ ಗೋಧಿ ಸಂಗ್ರಹಣೆಯು ಹಿಂದಿನ ಎರಡು ವರ್ಷಗಳಿಗಿಂತ ಕಡಿಮೆಯಾಗಿದೆ. ಇದುವರೆಗಿನ ದಾಸ್ತಾನು 2019 ರಂತೆಯೇ ಇದೆ. ನಾವು ಏಪ್ರಿಲ್‌ ನಲ್ಲಿ 35.8 ಮಿಲಿಯನ್ ಟನ್ನುಗಳಷ್ಟು ದಾಸ್ತಾನು ಹೊಂದಿದ್ದೇವೆ. ಆದ್ದರಿಂದ ಪ್ರಸ್ತುತ ಮಟ್ಟದಲ್ಲಿ ದಾಸ್ತಾನು ಆತಂಕಕಾರಿಯಾಗಿ ಕಂಡುಬರುವುದಿಲ್ಲ.

ಗ್ರಾಹಕರಿಗೆ ಆಹಾರ ಲಭ್ಯತೆ ಮತ್ತು ಸ್ಥಿರ ಆಹಾರ ಬೆಲೆಗಳನ್ನು ಖಚಿತಪಡಿಸಿಕೊಳ್ಳುವುದು ನಿರ್ಣಾಯಕ ಅಂಶವಾಗಿದೆ. ವಾಸ್ತವವಾಗಿ, ಸಾರ್ವಜನಿಕ ವಿತರಣಾ ವ್ಯವಸ್ಥೆ(ಪಿಡಿಎಸ್) ಮೂಲಕ ಗ್ರಾಹಕರಿಗೆ ನೇರವಾಗಿ ಕನಿಷ್ಠ ಪ್ರಮಾಣದ ಆಹಾರವನ್ನು ಒದಗಿಸಲು ಮತ್ತು ಮುಕ್ತ ಮಾರುಕಟ್ಟೆ ಕಾರ್ಯಾಚರಣೆಗಳ ಮೂಲಕ ಆಹಾರ ಬೆಲೆಗಳನ್ನು ನಿಯಂತ್ರಿಸುವಲ್ಲಿ ಭಾರತದಲ್ಲಿನ ಸರ್ಕಾರಗಳು ನಿರ್ಣಾಯಕ ಪಾತ್ರವನ್ನು ವಹಿಸಿವೆ.

ಎರಡು ಕೋವಿಡ್-19 ವರ್ಷಗಳಲ್ಲಿ (2020-21 ಮತ್ತು 2021-22), ಪಡಿತರ ವಿತರಣಾ ವ್ಯವಸ್ಥೆ ಒಂದು ಬಹುದೊಡ್ಡ ಪಾತ್ರವನ್ನು ವಹಿಸಿದೆ (ಮತ್ತು ನವ ಉದಾರವಾದಿ ಅರ್ಥಶಾಸ್ತ್ರಜ್ಞರ ಸಲಹೆಯ ಮೇರೆಗೆ ನಾವು ಅದನ್ನು ಕೆಡವದಿರುವುದು ಒಳ್ಳೆಯದು). ಪಡಿತರ ವಿತರಣೆ  ಮತ್ತು ಇತರ ಕಲ್ಯಾಣ ಯೋಜನೆಗಳ ಮೂಲಕ ವಿತರಣೆಯನ್ನು ಒಟ್ಟುಗೂಡಿಸಿ ನೋಡಿದಾಗ 2021-22ರಲ್ಲಿ ಅಕ್ಕಿ ಮತ್ತು ಗೋಧಿಯ ಒಟ್ಟು ವಿತರಣೆ 102.3 ಮಿಲಿಯನ್ ಟನ್‌ಗಳಷ್ಟಿತ್ತು. ಇದರಲ್ಲಿ 49 ಮಿಲಿಯನ್ ಟನ್ ಗೋಧಿ (21.7 ರೇಶನ್ ವ್ಯವಸ್ಥೆಯ ಮೂಲಕ ಮತ್ತು 27.3 ಇತರೆ ಕಲ್ಯಾಣ ಯೋಜನೆಗಳ ಮೂಲಕ). ಇದು ಜಾಗತಿಕ ದಾಖಲೆ ಮಾತ್ರವಲ್ಲ, ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ಜನರನ್ನು ಹಸಿವಿನಿಂದ ಕಾಪಾಡಿತು.

ಆಹಾರ ಬೆಲೆ ಹಣದುಬ್ಬರವನ್ನು ಮಣಿಸಲು ಪಡಿತರ ವಿತರಣೆ ಮತ್ತು ಮುಕ್ತ ಮಾರುಕಟ್ಟೆಯ ಕಾರ್ಯಾಚರಣೆಗಳನ್ನು ಬಳಸುವುದು ಅತ್ಯಗತ್ಯ. ಏಪ್ರಿಲ್ 2022 ಕ್ಕೆ ಅಖಿಲ ಭಾರತ ಮಟ್ಟದಲ್ಲಿ ಗ್ರಾಮೀಣ ಗ್ರಾಹಕ ಬೆಲೆ ಹಣದುಬ್ಬರವು ಶೇಕಡಾ 8.38 ರಷ್ಟಿದ್ದರೆ, ಗ್ರಾಮೀಣ ಆಹಾರ ಬೆಲೆ ಹಣದುಬ್ಬರ ಶೇ.8.5ರಷ್ಟಿತ್ತು. ಇದು ಹಿಂದಿನ ವರ್ಷದಲ್ಲಿ ದಾಖಲಾದ ಹಣದುಬ್ಬರಕ್ಕಿಂತ ಹೆಚ್ಚು. ಹೆಚ್ಚಿನ ರಾಜ್ಯಗಳು ಹೆಚ್ಚಿನ ಹಣದುಬ್ಬರ ದರವನ್ನು ಹೊಂದಿದ್ದರೆ, ಕೇರಳ ಮತ್ತು ತಮಿಳುನಾಡಿನಂತಹ ಉತ್ತಮ ಪಡಿತರ ವಿತರಣಾ ವ್ಯವಸ್ಥೆ ಹೊಂದಿರುವ ರಾಜ್ಯಗಳು ಕಡಿಮೆ ಹಣದುಬ್ಬರ ದರವನ್ನು ಹೊಂದಿವೆ. ಏಪ್ರಿಲ್ 2022 ರಲ್ಲಿ ಕೇರಳದಲ್ಲಿ ಸಾಮಾನ್ಯ ಗ್ರಾಹಕ ಬೆಲೆ ಹಣದುಬ್ಬರವು ಶೇಕಡಾ 4.82 ರಷ್ಟಿತ್ತು ಮತ್ತು ಇದು ತಮಿಳುನಾಡಿನಲ್ಲಿ ಶೇಕಡಾ 5.64 ರಷ್ಟಿತ್ತು.

ಉತ್ಪಾದನೆಯನ್ನು ಹೆಚ್ಚಿಸಲು ಆಹಾರ ನೀತಿಯ ಪ್ರಮುಖ ದಾರಿಯೆಂದರೆ ರೈತರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವುದು. ಈಗ ತಿಳಿದಿರುವಂತೆ, ರೈತರ ಮೇಲಿನ ರಾಷ್ಟ್ರೀಯ ಆಯೋಗದ ವರದಿಗಳ ಪ್ರಕಾರ, ಗೋಧಿಗೆ ಘೋಷಿಸಲಾದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಅನೇಕ ಪ್ರದೇಶಗಳು ಮತ್ತು ರೈತ ವರ್ಗಗಳಿಗೆ ಕೃಷಿ ವೆಚ್ಚವನ್ನು ಸರಿದೂಗಿಸಲು ಅಸಮರ್ಪಕವಾಗಿದೆ. ವಿಶೇಷವಾಗಿ ಸಮಗ್ರ ವೆಚ್ಚಗಳನ್ನು (ಅಥವಾ ವೆಚ್ಚ ಸಿ2) ಆಧಾರವಾಗಿ ತೆಗೆದುಕೊಳ್ಳಲಾಗಿದೆ. ಹೊಸ ಕೃಷಿ ಕಾಯಿದೆಗಳು ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನೀಡುವ ಸಾರ್ವಜನಿಕ ಬದ್ಧತೆಯನ್ನು ದುರ್ಬಲಗೊಳಿಸುತ್ತಿವೆ ಎಂಬ ಕಾರಣಕ್ಕೆ ಕಳೆದ ವರ್ಷಪೂರ್ತಿ ರೈತ ಪ್ರತಿಭಟನೆಗಳು ನಡೆದವು.

ಕಳೆದ ಎರಡು ವರ್ಷಗಳಲ್ಲಿ, ಉತ್ಪಾದನಾ ವೆಚ್ಚಗಳು ತೀವ್ರವಾಗಿ ಏರಿವೆ. ಸತತವಾಗಿ ಏರುತ್ತಿರುವ ಇಂಧನದ ಬೆಲೆಯು ಒಂದು ಪ್ರಮುಖ ಅಂಶವಾಗಿದೆ. ಈ ಸಂದರ್ಭದಲ್ಲಿ, ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಮತ್ತು ಇತರ ರೈತ ಸಂಘಟನೆಗಳು ಈ ವರ್ಷದ ಹೆಚ್ಚಿನ ಉತ್ಪಾದನಾ ವೆಚ್ಚ ಮತ್ತು ಇಳುವರಿ ನಷ್ಟವನ್ನು ಸರಿದೂಗಿಸಲು ಪ್ರಸ್ತುತ ಎಂ.ಎಸ್.ಪಿಯಲ್ಲಿ ಪ್ರತಿ ಕ್ವಿಂಟಾಲ್‌ಗೆ ರೂ 500 ಬೋನಸ್ ನೀಡಬೇಕೆಂದು ಒತ್ತಾಯಿಸಿವೆ.

ಖರೀದಿಯಲ್ಲಿ ಸರ್ಕಾರ ನಿರಾಸಕ್ತಿ ತೋರುತ್ತಿರುವ ಕಾರಣ ರೈತರು ಕಂಗಾಲಾಗಿದ್ದಾರೆ. ಈ ವರ್ಷ ಒಟ್ಟು ಆಹಾರ ಧಾನ್ಯದ ಸಂಗ್ರಹಣೆಯಲ್ಲಿ ಗೋಧಿಯ ಪಾಲು ಕುಸಿದಿದೆ. ಸಂಗ್ರಹಣೆ ಬೆಲೆಯನ್ನು ಹೆಚ್ಚಿಸುವ ಮತ್ತು ಹೆಚ್ಚು ಖರೀದಿಸುವ ಮೂಲಕ ಈ ಕೊರತೆಯನ್ನು ನೀಗಿಸುವ ಬದಲು, ಗೋಧಿ ದಾಸ್ತಾನು ಹೆಚ್ಚಿಸಿಕೊಳ್ಳಲು ಸರ್ಕಾರವು ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಟ್ಟಿದೆ. ಭವಿಷ್ಯದ ಮಾರಾಟದಿಂದ, ದೇಶೀಯ ಅಥವಾ ರಫ್ತು ಮಾರುಕಟ್ಟೆಯಲ್ಲಿನ ಲಾಭವು ರೈತರಿಗಿಂತ ಹೆಚ್ಚಾಗಿ ವ್ಯಾಪಾರಿಗಳಿಗೆ ಹೋಗುವ ಸಾಧ್ಯತೆಯಿದೆ. ಈ ದೃಷ್ಟಿಯಿಂದ ನೋಡಿದಾಗ, ಸರ್ಕಾರ ಖಾಸಗಿಯವರಿಗೆ ಅಂದರೆ ವ್ಯಾಪಾರಿಗಳು ಮತ್ತು ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಒಳ ಕಾರ್ಯಸೂಚಿ ಹೊಂದಿರಬಹುದೆಂಬ ಸಂದೇಹ ಬರುತ್ತದೆ.

ಈ ಸರ್ಕಾರದಲ್ಲಿ ಆಹಾರ ಭದ್ರತೆಯ ಸುಸಂಬದ್ಧ ನೀತಿಯ ಕೊರತೆಯಿದೆ. ಆಹಾರ ಭದ್ರತೆಯು ತಕ್ಷಣದ ಮತ್ತು ದೀರ್ಘಾವಧಿಯ ಕಾಳಜಿಯಾಗಬೇಕಾಗಿದೆ ಮತ್ತು ಇದಕ್ಕೆ “ಸರ್ಜಿಕಲ್ ಸ್ಟ್ರೈಕ್” ಅಗತ್ಯವಿರುವುದಿಲ್ಲ. ಉತ್ತಮವಾಗಿ ಕಾರ್ಯನಿರ್ವಹಿಸುವ ಪಡಿತರ ವಿತರಣಾ ವ್ಯವಸ್ಥೆ ಬೆಲೆಗಳನ್ನು ನಿಯಂತ್ರಿಸುತ್ತದೆ ಮತ್ತು ಗ್ರಾಹಕರಿಗೆ ಪರಿಹಾರವನ್ನು ನೀಡುತ್ತದೆ. ಸರ್ಕಾರವು ಹೆಚ್ಚಿನ ಬೆಲೆಗೆ ಆಹಾರ ಧಾನ್ಯವನ್ನು ಸಂಗ್ರಹಿಸದೆ ವ್ಯಾಪಾರಿಗಳನ್ನು ಬೆಂಬಲಿಸಿ ರೈತರಿಗೆ ಶಿಕ್ಷೆ ವಿಧಿಸಿದೆ ಮತ್ತು ಭವಿಷ್ಯದ ಲಾಭಕ್ಕಾಗಿ ದಾಸ್ತಾನುಗಳನ್ನು ಖರೀದಿಸಲು ಖಾಸಗಿ ವ್ಯಾಪಾರಿಗಳಿಗೆ ಮುಕ್ತ ಅವಕಾಶ ಮಾಡಿಕೊಟ್ಟಿದೆ.

(‘ದಿ ಹಿಂದೂ’ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ಸಂಗ್ರಹಾನುವಾದ)

Donate Janashakthi Media

Leave a Reply

Your email address will not be published. Required fields are marked *