ನವದೆಹಲಿ: “ಗೋಧಿಯ ರಫ್ತು ನೀತಿಯನ್ನು ತಕ್ಷಣವೇ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ” ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ) ನೆನ್ನೆ (ಮೇ 13) ಅಧಿಸೂಚನೆ ಹೊರಡಿಸಿದೆ.
ಗೋಧಿಯ ಬೇಡಿಕೆಗೆ ತಕ್ಕಂತೆ ಬೆಳೆ ಇಲ್ಲದ ಕಾರಣ, ಗೋಧಿ ಹಾಗೂ ಹಿಟ್ಟಿನ ಬೆಲೆ ಏರಿಕೆ ಕಂಡಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಗೋಧಿ ರಫ್ತು ನಿಷೇಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈಗಾಗಲೇ ಪಾವತಿಯಾಗಿರುವ ವಹಿವಾಟಿಗೆ ಸಂಬಂಧಿಸಿದ ಸಾಗಾಟಕ್ಕೆ ಅನುಮತಿ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ದೇಶದಲ್ಲಿ ದರ ಏರಿಕೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಇದನ್ನು ಓದಿ: ದಶಕದ ಬಳಿಕ ಗರಿಷ್ಠ ಬೆಲೆ ಏರಿಕೆ ಕಂಡ ಗೋಧಿ-ಹಿಟ್ಟಿನ ದರ
ಬೇಡಿಕೆ ತಕ್ಕಂತೆ ಗೋಧಿ ಹಿಟ್ಟಿನ ಉತ್ಪಾದನೆ ಇಲ್ಲದ ಕಾರಣ, ಗೋಧಿ ಹಿಟ್ಟಿನ ಬೆಲೆ ಗಗನಕ್ಕೇರಿದೆ. ಏಪ್ರಿಲ್ನಲ್ಲಿ ಒಂದು ಕೆಜಿ ಗೋಧಿ ಹಿಟ್ಟಿಗೆ 32.38 ರೂ. ಇತ್ತು ಇದು 2010ರ ಬಳಿಕ ತಲುಪಿದಂತಹ ಅತಿ ಗರಿಷ್ಠ ಬೆಲೆ ಇದಾಗಿದೆ. ಭಾರತದಲ್ಲಿ ಗೋಧಿ ಉತ್ಪಾದನೆ ಹಾಗೂ ಶೇಖರಣೆ ಕ್ರಮೇಣವಾಗಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಗೋಧಿ ಹಿಟ್ಟಿನ ಬೆಲೆ ಏರಿಕೆಯಾಗುತ್ತಿದೆ. ವಿದೇಶಗಳಲ್ಲಿಯೂ ಗೋಧಿ ಹಿಟ್ಟಿಗೆ ಬೇಡಿಕೆ ಹೆಚ್ಚಾಗಿದೆ.
ಉಕ್ರೇನ್ ಮೇಲೆ ಫೆಬ್ರುವರಿಯಲ್ಲಿ ರಷ್ಯಾ ಅತಿಕ್ರಮಣ ಆರಂಭಿಸಿದ ಬಳಿಕ ಕಪ್ಪು ಸಮುದ್ರ ಮಾರ್ಗವಾಗಿ ಗೋಧಿ ಪೂರೈಕೆ ಕಡಿಮೆಯಾದ ಬೆನ್ನಲ್ಲೇ ಜಾಗತಿಕ ಖರೀದಿದಾರರು ಭಾರತದತ್ತ ಬೇಡಿಕೆ ಮುಂದಿಟ್ಟರು.
ಇದನ್ನು ಓದಿ: ಸಗಟು ಹಣದುಬ್ಬರ 13 ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ಏರಿಕೆ
ವಿದೇಶಗಳಿಗೆ ಆಹಾರ ಭದ್ರತೆ ಅಗತ್ಯತೆಗಳನ್ನು ಪೂರೈಸಲು ಆಯಾ ಸರಕಾರಗಳ ಕೋರಿಕೆಯ ಆಧಾರದ ಮೇಲೆ ನೀಡುವ ಅನುಮತಿಯ ಮೇರೆಗೆ ಗೋಧಿ ರಫ್ತುಗಳನ್ನು ಅನುಮತಿ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರವು ಸ್ಪಷ್ಟಪಡಿಸಿದೆ.
ಬೇರೆ ದೇಶಗಳಿಗೆ ಗೋಧಿ ರಫ್ತು ಮಾಡಬೇಕಿದ್ದರೆ ಸರ್ಕಾರದ ಅನುಮತಿ ಪಡೆಯಬೇಕು, ಬೇರೆ ದೇಶಗಳ ವಿನಂತಿಗೆ ತಕ್ಕಂತೆ ಗೋಧಿ ರಫ್ತು ಮಾಡಲಾಗುತ್ತದೆ. ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಗೋಧಿ ಉತ್ಪಾದಕ ರಾಷ್ಟ್ರವಾಗಿದೆ.