ಪ್ರೊ.ಪ್ರಭಾತ್ ಪಟ್ನಾಯಕ್
ಅನು:ಕೆ.ಎಂ.ನಾಗರಾಜ್
ಎರಡು ಅಮೆರಿಕದ ಬ್ಯಾಂಕುಗಳ ಕುಸಿತ ಇಡೀ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಒಂದು ವೈರುಧ್ಯವನ್ನು ಬಿಂಬಿಸುತ್ತದೆ. ಬಂಡವಾಳಶಾಹಿಯ ಅಡಿಯಲ್ಲಿ ಹಣದುಬ್ಬರದ ವಿರುದ್ಧ ಹೋರಾಡುವ ಏಕೈಕ ಮಾರ್ಗವೆಂದರೆ ನಿರುದ್ಯೋಗವನ್ನು ಸೃಷ್ಟಿಸುವುದೇ ಆಗಿದೆ ಮತ್ತು ಹಣಕಾಸು ಬಂಡವಾಳದ ಪ್ರಾಬಲ್ಯದ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಈ ಕಾರ್ಯವನ್ನು ಬಡ್ಡಿ ದರಗಳ ಏರಿಕೆಯ ಮೂಲಕವೇ ಸಾಧಿಸಲಾಗುತ್ತದೆ, ಎಲ್ಲ ಸರಕಾರಗಳು ಇದನ್ನೇ ಒಂದು ಅಧಿಕೃತ ನೀತಿಯಾಗಿ ಅಳವಡಿಸಿಕೊಂಡಿವೆ. ಆದರೆ ಹಣಕಾಸು ನೀತಿಯಲ್ಲಿನ ಈ ತರ್ಕಹೀನ ನಿಲುವಿನಿಂದಾಗಿ ಅಮೆರಿಕದ ಬ್ಯಾಂಕಿಂಗ್ ವ್ಯವಸ್ಥೆಯಷ್ಟೇ ಅಲ್ಲ, ಇಡೀ ಬಂಡವಾಳಶಾಹಿ ಜಗತ್ತಿನ ಬ್ಯಾಂಕಿಂಗ್ ವ್ಯವಸ್ಥೆಯು ಅಪಾಯಕ್ಕೊಳಗಾಗಿದೆ. ಇತ್ತ ಯುರೋಪಿನಾದ್ಯಂತ ನಡೆಯುತ್ತಿರುವ ಕಾರ್ಮಿಕರ ಪ್ರತಿಭಟನೆಗಳು ಬಂಡವಾಳಶಾಹಿಯು ಅದರ ನವ ಉದಾರವಾದಿ ಹಂತದಲ್ಲಿ ಬಿಕ್ಕಟ್ಟಿಗೆ ಸಿಲುಕಿ ದಾರಿಗಾಣದ ಸ್ಥಿತಿ ತಲುಪಿರುವುದನ್ನು ಎತ್ತಿ ತೋರಿಸುತ್ತಿವೆ.
ಸಿಲಿಕಾನ್ ವ್ಯಾಲಿ ಬ್ಯಾಂಕ್ (ಎಸ್‌ವಿಬಿ) ಮತ್ತು ಸಿಗ್ನೇಚರ್ ಬ್ಯಾಂಕ್ ಎಂಬ ಎರಡು ಅಮೆರಿಕದ ಬ್ಯಾಂಕುಗಳು ಇತ್ತೀಚೆಗೆ ಮುಳುಗಿವೆ. ಅವು ಏಕೆ ಮುಳುಗಿದವು ಎಂಬುದು ಈಗ ನಿಗೂಢವಾಗಿ ಉಳಿದಿಲ್ಲ. ಮಾತ್ರವಲ್ಲ, ಬಂಡವಾಳಶಾಹಿ ಜಗತ್ತಿನ ಇಡೀ ಬ್ಯಾಂಕಿಂಗ್ ವ್ಯವಸ್ಥೆಯೇ ತೊಂದರೆಯಲ್ಲಿ ಸಿಲುಕಿದೆ ಎಂಬುದೂ ಸಹ ಈಗ ನಿಗೂಢವಾಗಿ ಉಳಿದಿಲ್ಲ. ಬ್ಯಾಂಕಿಂಗ್ ವ್ಯವಸ್ಥೆಯು ಕೆಲವು ತೊಂದರೆಗಳಿಗೆ ಸಿಲುಕಿಕೊಂಡ ನಂತರ, ಅದರ ಆಸ್ತಿಗಳು "ನಂಜು" ಆಸ್ತಿಗಳಾಗುತ್ತವೆ. ಒಂದು ಸಾಂಕ್ರಾಮಿಕವು ಹರಡುವ ರೀತಿಯಲ್ಲಿ "ಸರಣಿ ಪರಿಣಾಮ"ಕ್ಕೆ ಒಳಗಾಗುತ್ತವೆ. ಅಸಲಿ ಪ್ರಶ್ನೆಯೆಂದರೆ: ಅಮೆರಿಕದ ಬಂಡವಾಳಶಾಹಿ ಬ್ಯಾಂಕಿಂಗ್ ವ್ಯವಸ್ಥೆಯು ಒಂದು ತೀವ್ರ ಒತ್ತಡದ ಪರಿಸ್ಥಿತಿಗೆ ಒಳಗಾಗಿದೆ, ಹೇಗೆ ಎಂಬುದು. ಈ ಎರಡು ಬ್ಯಾಂಕುಗಳ ಕುಸಿತವು, ಅದರಲ್ಲೂ ವಿಶೇಷವಾಗಿ ಎಸ್‌ವಿಬಿಯ ಕುಸಿತವು ಕೇವಲ ಆ ಬ್ಯಾಂಕಿನ ಆಂತರಿಕ ಸಮಸ್ಯೆಯಾಗಿ ಉಳಿದಿಲ್ಲ. ಅದೊಂದು ವಿದ್ಯಮಾನವೇ ಹೌದು. ಈ ವಿದ್ಯಮಾನವು ಇಡೀ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಒಂದು ವೈರುಧ್ಯವನ್ನು ಪ್ರತಿಬಿಂಬಿಸುತ್ತದೆ. ಹಾಗಾದರೆ, ಈ ವೈರುಧ್ಯದ ಸ್ವರೂಪವೇನು?
ಕುಸಿತದ ಒಂದಂಶ -ಬಡ್ಡಿ ದರಗಳ ಏರಿಕೆ
ಈ ಎರಡೂ ಬ್ಯಾಂಕುಗಳ ಕುಸಿತದ ಹಿಂದಿರುವ ಒಂದು ಅಂಶವನ್ನು ಗುರುತಿಸುವುದಾದರೆ, ಅದು ಬಡ್ಡಿ ದರಗಳ ಏರಿಕೆಯೇ. ಇಲ್ಲಿ ನಾವು ಎಸ್‌ವಿಬಿಯ ಪ್ರಕರಣವನ್ನು ಮಾತ್ರ ತೆಗೆದುಕೊಳ್ಳೋಣ. ಏಕೆಂದರೆ, ಇದು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ವೈರುಧ್ಯವನ್ನು ಹೆಚ್ಚು ಸ್ಪಷ್ಟವಾಗಿ ತೋರಿಸುತ್ತದೆ. ಸಿಗ್ನೇಚರ್ ಬ್ಯಾಂಕ್‌ನ ಕುಸಿತದ ಪ್ರಕರಣವು ಮುಖ್ಯವಾಗಿ ಕುಖ್ಯಾತ ಮತ್ತು ಅಸ್ಥಿರ ಕ್ರಿಪ್ಟೋ-ಕರೆನ್ಸಿಗಳೊಂದಿಗೆ ಸಂಬಂಧಿಸಿದೆ. ಬಡ್ಡಿ ದರಗಳ ಏರಿಕೆಯು ಬಾಂಡ್(ಸಾಲಪತ್ರ)ಗಳ ಬೆಲೆಗಳನ್ನು ಇಳಿಕೆ ಮಾಡುವ ಪರಿಣಾಮ ಹೊಂದಿರುತ್ತದೆ. (ಹಣದುಬ್ಬರದ ಪರಿಸ್ಥಿತಿಗನುಗುಣವಾಗಿ ಕೇಂದ್ರ ಬ್ಯಾಂಕ್‌ಗಳು ಬಡ್ಡಿ ದರಗಳನ್ನು ಆಗಾಗ ಏರಿಕೆ-ಇಳಿಕೆ ಮಾಡುತ್ತವೆ. ಸರ್ಕಾರಗಳು ಸಾಲ ಎತ್ತಲು ಒಂದು ವಾರದಿಂದ ಹಿಡಿದು ಮೂವತ್ತು ನಲವತ್ತು ವರ್ಷಗಳ ಅವಧಿಯ, ನಿರ್ದಿಷ್ಟ ಬಡ್ಡಿ ದರ ಹೊಂದಿದ, ಸಾಲಪತ್ರಗಳನ್ನು ಅಥವ ಬಾಂಡ್‌ಗಳನ್ನು ಬಿಡುಗಡೆ ಮಾಡುತ್ತವೆ. ನಂತರ, ಈ ಬಾಂಡ್‌ಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತವೆ-ಅನು). ಬಾಂಡ್ ಬೆಲೆಗಳ ಬಗ್ಗೆ ಹೇಳುವುದಾದರೆ, ಒಂದು ನಿರ್ದಿಷ್ಟ ಅವಧಿಯ ಬಾಂಡ್ ತನ್ನ ಜೀವಿತಾವಧಿಯಲ್ಲಿ ಒಂದು ನಿರ್ದಿಷ್ಟ ಮೊತ್ತದ ಬಡ್ಡಿಯನ್ನು ಗಳಿಸುತ್ತದೆ. ಆದರೆ, ಕಾರಣಾಂತರಗಳಿಂದ ಅದನ್ನು ಇಂದು ಮಾರಲಾಗಿದೆ ಎಂದು ಭಾವಿಸೋಣ. ಅದರ ಮಾರಾಟದ ಬೆಲೆಯನ್ನು ನಿರ್ಧರಿಸುವ ವಿಧಾನವೆಂದರೆ, ಅದರ ಪ್ರಸ್ತುತ ಗಳಿಕೆಯಲ್ಲಿ ಒಂದಿಷ್ಟು ಡಿಸ್ಕೌಂಟ್ ತೆಗೆದ ನಂತರದ ಉಳಿಯುವ ಮೊತ್ತವೇ ಅದರ ಇಂದಿನ ಬೆಲೆಯಾಗುತ್ತದೆ. ಬಡ್ಡಿ ದರಗಳು ಒಂದು ವೇಳೆ ಏರಿಕೆಯಾದರೆ, ಆಗ ಬಾಂಡ್ ಗಳಿಕೆಯು ಇಳಿಕೆಯಾಗುತ್ತದೆ ಮತ್ತು ಅದರ ಮಾರಾಟದ ಬೆಲೆಯೂ ಇಳಿಕೆಯಾಗುತ್ತದೆ. ಎಲ್ಲ ಬ್ಯಾಂಕುಗಳೂ ನಿರ್ದಿಷ್ಟ ಉದ್ದೇಶಕ್ಕಾಗಿ ಬಾಂಡ್‌ಗಳ ಮೇಲೆ ಹೂಡಿಕೆ ಮಾಡುತ್ತವೆ ಮತ್ತು ಅದೊಂದು ಬ್ಯಾಂಕಿಂಗ್ ಅವಶ್ಯಕತೆಯೂ ಹೌದು. ಆದರೆ, ಬಡ್ಡಿ ದರಗಳು ಏರಿಕೆಯಾದಾಗ, ಮಾರುಕಟ್ಟೆಯಲ್ಲಿ ಬಾಂಡ್ ಬೆಲೆಗಳು ಇಳಿಯುತ್ತವೆ. ಪರಿಣಾಮವಾಗಿ, ಬ್ಯಾಂಕಿನ ಆಸ್ತಿಗಳ (ಸಾಲಗಳ) ಮೌಲ್ಯವು ಅದರ ಬಾಧ್ಯತೆೆಗಳಿಗೆ (ಠೇವಣಿಗಳಿಗೆ) ಹೋಲಿಸಿದರೆ ಇಳಿಕೆಯಾಗಿರುತ್ತದೆ. ಈ ವಿದ್ಯಮಾನವು ಬ್ಯಾಂಕ್‌ಅನ್ನು ಒಂದು ರೀತಿಯ ಒತ್ತಡಕ್ಕೆ ಸಿಲುಕಿಸುತ್ತದೆ.
ಈ ರೀತಿಯ ಒತ್ತಡಕ್ಕೆ ಸಿಲುಕಿದ ಬ್ಯಾಂಕ್ ಆ ಒತ್ತಡವನ್ನು ನಿವಾರಿಸಿಕೊಳ್ಳಲು ಮಾಡುವ ಯಾವುದೇ ಪ್ರಯತ್ನವು ತಾನು ಒತ್ತಡದಲ್ಲಿ ಸಿಲುಕಿಕೊಂಡಿದ್ದೇನೆ ಎಂಬುದನ್ನು ಪ್ರಪಂಚದ ಮುಂದೆ ಮುಕ್ತವಾಗಿ ಒಪ್ಪಿಕೊಂಡಂತೆ ಬಿಂಬಿತವಾಗುತ್ತದೆ ಮತ್ತು ಆ ಬ್ಯಾಂಕಿನೊಂದಿಗಿನ ತಮ್ಮ ಲೆಕ್ಕವನ್ನು ಚುಕ್ತಾ ಮಾಡಿಕೊಳ್ಳುವಂತೆ ಕೊಟ್ಟ ಸೂಚನೆಯೂ ಆಗುತ್ತದೆ. ಆಗ ಷೇರು ಮಾರುಕಟ್ಟೆಯಲ್ಲಿ ಆ ಬ್ಯಾಂಕಿನ ಷೇರುಗಳ ಮೌಲ್ಯವು ಇಳಿಯುತ್ತದೆ. ಈ ಇಳಿಕೆಯು ಠೇವಣಿದಾರರಲ್ಲಿ ಆತಂಕ ಹುಟ್ಟಿಸುತ್ತದೆ. ನಂತರ ತಮ್ಮ ಠೇವಣಿಯ ಹಣವನ್ನು ಹಿಂತೆಗೆದುಕೊಳ್ಳಲು ಎಲ್ಲ ಠೇವಣಿದಾರರೂ ಬ್ಯಾಂಕಿನತ್ತ ಧಾವಿಸುತ್ತಾರೆ. ಈ ವಿದ್ಯಮಾನವು ಬ್ಯಾಂಕಿನ ಕುಸಿತಕ್ಕೆ ಕಾರಣವಾಗುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ, ಒಂದು ಬ್ಯಾಂಕ್ ಈ ರೀತಿಯ ಒತ್ತಡಕ್ಕೆ ಒಳಗಾದಾಗ, ಅದು ಏನೇ ಕ್ರಮ ಕೈಗೊಂಡರೂ ಸಹ, ಅದರ ಭವಿಷ್ಯವು ಮುಗಿದಂತೆಯೇ ಸರಿ. ಒಂದು ವೇಳೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಪ್ರಯತ್ನ ಮಾಡದಿದ್ದರೆ, ಕುಸಿತದ ಆಯ್ಕೆಯನ್ನು ತಾನೇ ಮಾಡಿಕೊಂಡಂತಾಗುತ್ತದೆ. ಕುಸಿತವನ್ನು ತಪ್ಪಿಸುವ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸಿದರೂ ಸಹ, ಕುಸಿತದ ಸಾಧ್ಯತೆಗಳು ಇದ್ದೇ ಇರುತ್ತವೆ. ಆದ್ದರಿಂದ, ಅಂತಹ ಸಂದರ್ಭಗಳಲ್ಲಿ ಕುಸಿತದ ಹೊಣೆಗಾರಿಕೆಯನ್ನು ಬ್ಯಾಂಕಿನ ಮೇಲೆ ಹೊರಿಸುವುದು ಉಚಿತವಾಗಲಾರದು. ಆದ್ದರಿಂದ, ಈ ಕುಸಿತವನ್ನು ಬ್ಯಾಂಕಿನಿಂದ ಆಚೆ ಇರುವ ಸ್ಥೂಲ ಆರ್ಥಿಕ ಅಂಶಗಳ ಮೂಲಕ ವಿವರಿಸಬೇಕಾಗುತ್ತದೆ.
ಬಡ್ಡಿ ದರಗಳ ಹೆಚ್ಚಳವು ಬ್ಯಾಂಕ್ ಕುಸಿತವನ್ನು ಪ್ರಚೋದಿಸುತ್ತದೆ ಎಂಬುದನ್ನು ಈ ಮೊದಲು ಸೂಚಿಸಲಾಗಿತ್ತು. ಆದರೆ ಇದು ನಿಜವಲ್ಲ. ಕೇಂದ್ರ ಬ್ಯಾಂಕ್ ನಿರ್ಧರಿಸುವ ಬಡ್ಡಿ ದರ ಏರಿಳಿಕೆಗಳು ಸಾಮಾನ್ಯವಾಗಿ ಸಣ್ಣ ಬದಲಾವಣೆಗಳಾಗಿ ಸಂಭವಿಸುತ್ತವೆ. ಬಡ್ಡಿ ದರದ ಏರಿಕೆಯು ಸಣ್ಣ ಪ್ರಮಾಣದಲ್ಲಿದ್ದರೆ ಬ್ಯಾಂಕುಗಳು ಅದನ್ನು ಸಾಮಾನ್ಯವಾಗಿ ನಿಭಾಯಿಸುತ್ತವೆ ಮತ್ತು ಈ ಏರಿಕೆಯಿಂದಾದ ಒತ್ತಡವು "ಮಾರುಕಟ್ಟೆ"ಯಲ್ಲಿ ಯಾವುದೇ ಊಹಾಪೋಹಗಳಿಗೆ ಅವಕಾಶವಾಗದಂತೆ ಪರಿಸ್ಥಿತಿಯನ್ನು ನಿಭಾಯಿಸುತ್ತವೆ ಕೂಡ. ಆದರೆ, ಕೇಂದ್ರ ಬ್ಯಾಂಕ್ ಬಡ್ಡಿ ದರವನ್ನು ಇದ್ದಕ್ಕಿದ್ದಂತೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿದಾಗ,
ಬ್ಯಾಂಕುಗಳು ತಮ್ಮ ಆಸ್ತಿಗಳು(ಸಾಲಗಳು) ಮತ್ತು ಬಾಧ್ಯತೆಗಳ(ಠೇವಣಿಗಳ) ನಡುವೆ ಒಂದು ಸಮತೋಲವನ್ನು ಸಾಧಿಸುವುದು ಸಾಧ್ಯವಾಗುವುದಿಲ್ಲ.
ಬಡ್ಡಿ ದರಗಳನ್ನು ಏರಿಸುತ್ತಿರುವುದೇಕೆ?
ಇತ್ತೀಚೆಗೆ ಅಮೆರಿಕಾದಲ್ಲಿ ಬಡ್ಡಿ ದರವನ್ನು ಗಣನೀಯ ಮಟ್ಟದಲ್ಲಿ ಹೆಚ್ಚಿಸಲಾಗಿದೆ. ಫೆಬ್ರವರಿ 2022ರಲ್ಲಿ ಶೇ. 0.25ರ ಮಟ್ಟದಲ್ಲಿದ್ದ ಬಡ್ಡಿ ದರವನ್ನು ಫೆಬ್ರವರಿ 2023ರ ವೇಳೆಗೆ ಶೇ. 4.75ಕ್ಕೆ ಏರಿಸಲಾಗಿದೆ. ಇಷ್ಟು ಸಣ್ಣ ಅವಧಿಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಹೆಚ್ಚಳ ಮಾಡಿದಾಗ, ತಮ್ಮ ಆಸ್ತಿಗಳು(ಸಾಲಗಳು) ಮತ್ತು ಬಾಧ್ಯತೆಗಳನ್ನು (ಠೇವಣಿಗಳನ್ನು) ಸುಗಮವಾಗಿ ನಿರ್ವಹಿಸುವುದು ಬ್ಯಾಂಕುಗಳಿಗೆ ಅಸಾಧ್ಯವಾಗುತ್ತದೆ. ಆದ್ದರಿಂದ, ನಿಜ ಪ್ರಶ್ನೆಯೆಂದರೆ: ಫೆಡರಲ್ ರಿಸರ್ವ್ ಬೋರ್ಡ್ (ಅಮೆರಿಕದ ಕೇಂದ್ರ ಬ್ಯಾಂಕ್) ಬಡ್ಡಿ ದರಗಳನ್ನು ಈ ರೀತಿಯಲ್ಲಿ ಹೆಚ್ಚಿಸುತ್ತಿದೆ, ಏಕೆ ?
ಈ ಪ್ರಶ್ನೆಗೆ ಹೇಳಬಹುದಾದ ಸರಳ ಉತ್ತರವೆಂದರೆ, ನವ ಉದಾರವಾದದ ಅಡಿಯಲ್ಲಿ, ಅರ್ಥವ್ಯವಸ್ಥೆಯಲ್ಲಿ ಸರ್ಕಾರದ ಮಧ್ಯಪ್ರವೇಶಕ್ಕಾಗಿ ಲಭ್ಯವಿರುವ ಏಕೈಕ ಅಸ್ತ್ರವೆಂದರೆ ಹಣಕಾಸು ನೀತಿಯೇ. ಎರಡನೆಯ ಮಹಾಯುದ್ಧದ ನಂತರದ ಅವಧಿಯಲ್ಲಿ ಬಹಳ ವರ್ಷಗಳ ಕಾಲ ಸರ್ಕಾರಗಳಿಗೆ ಮಧ್ಯಪ್ರವೇಶಕ್ಕಾಗಿ ಪ್ರಾಥಮಿಕ ಸಾಧನವಾಗಿದ್ದ ವಿತ್ತೀಯ ನೀತಿಯು ನವ ಉದಾರವಾದದಡಿಯಲ್ಲಿ ಹಿನ್ನೆಲೆಗೆ ಸರಿದಿದೆ. ಜಿಡಿಪಿಯ ಅನುಪಾತದಲ್ಲಿ ತಮ್ಮ ವಿತ್ತೀಯ ಕೊರತೆಗಳ ಮೇಲೆ ಒಂದು ಗರಿಷ್ಠ ಮಿತಿಯನ್ನು ವಿಧಿಸಿಕೊಳ್ಳುವಂತೆ ಜಾಗತಿಕವಾಗಿ ಚಲಿಸುವ ಹಣಕಾಸು ಬಂಡವಾಳವು ಎಲ್ಲ ಸರ್ಕಾರಗಳ ಮೇಲೂ ಒತ್ತಾಯ ಹೇರಿದೆ. ಅದೇ ರೀತಿಯಲ್ಲಿ ಬಂಡವಾಳಗಾರರ ಮೇಲೆ ಮತ್ತು ಶ್ರೀಮಂತರ ಮೇಲೆ ಯಾವುದೇ ತೆರಿಗೆ ವಿಧಿಸುವುದನ್ನೂ ಅದು ಬಯಸುವುದಿಲ್ಲ. ಹಾಗಾಗಿ, ಅರ್ಥವ್ಯವಸ್ಥೆಯಲ್ಲಿ ಚಟುವಟಿಕೆಗಳನ್ನು ಉತ್ತೇಜಿಸಲು ಇರುವ ಏಕೈಕ ಮಾರ್ಗವೆಂದರೆ, ಬಡ್ಡಿ ದರಗಳ ಇಳಿಕೆಯ ಕ್ರಮವೇ.
ಹಾಗೆ ನೋಡಿದರೆ ಅಮೆರಿಕವು ಯಾವುದೇ "ವಿತ್ತೀಯ ಜವಾಬ್ದಾರಿ" ಶಾಸನವನ್ನೂ ಹೊಂದಿಲ್ಲ ಮತ್ತು ಹಣಕಾಸು ಬಂಡವಾಳವು ಕಂಬಿಕೀಳುವ ಭಯದಿಂದಲ್ರೂ ಅದು ನಿರ್ಬಂಧಿತವಾಗಿಲ್ಲ. ಅಮೆರಿಕದಂತಹ ಒಂದು ಸುರಕ್ಷಿತ ನೆಲೆಯಿಂದ ಹಣಕಾಸು ಬಂಡವಾಳವು ಹಾರಿಹೋಗುವ ಸಾಧ್ಯತೆ ವಿರಳವೇ. ಹಾಗಾಗಿ, ತನ್ನ ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿಡುವ ಒತ್ತಾಯವೇ ಅಮೆರಿಕಾಗೆ ಇಲ್ಲ. ಆದರೆ, ಅಮೆರಿಕದ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲು ಅದರ ವಿತ್ತೀಯ ಕೊರತೆಯ ಮಟ್ಟವು ಹೆಚ್ಚಿದಾಗ ಅದು ವಿದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಏಕೆಂದರೆ ಅಮೆರಿಕದ ಆಂತರಿಕ ವೆಚ್ಚಗಳ ಒಂದು ಬಹು ದೊಡ್ಡ ಭಾಗವು ವಿದೇಶದಲ್ಲಿ ಉತ್ಪಾದಿಸುವ ಸರಕುಗಳು ಮತ್ತು ಸೇವೆಗಳಿಗಾಗಿ ಬೇಡಿಕೆಯ ರೂಪದಲ್ಲಿ ಸೋರಿಕೆಯಾಗುತ್ತದೆ ಮತ್ತು ಅಮೆರಿಕದ ವಿದೇಶಿ ಸಾಲವನ್ನು ಹೆಚ್ಚಿಸುತ್ತದೆ. ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಅಮೆರಿಕ ತನ್ನ ವಿತ್ತೀಯ ಕೊರತೆಯನ್ನು ಬೃಹತ್ ಪ್ರಮಾಣದಲ್ಲಿ ವಿಸ್ತರಿಸಿಕೊಂಡಿತ್ತು. ಈ ಅಂಶವೇ ಅಮೆರಿಕದ ಪ್ರಸ್ತುತ ಹಣದುಬ್ಬರದ ಹಿಂದಿರುವ ಕಾರಣವೆಂದು ಕೆಲವರು ಹೇಳುತ್ತಾರೆ. ಕೊರೊನಾ ಸಾಂಕ್ರಾಮಿಕವು ಒಂದು ವಿಶೇಷ ಸಂದರ್ಭವಾಗಿತ್ತು, ನಿಜ. ಆದರೆ, ವಸತಿ ಗುಳ್ಳೆಯ ಕುಸಿತದ ನಂತರದ ಅವಧಿಯಿಂದ ಹಿಡಿದು ಇತ್ತೀಚಿನವರೆಗೂ, ಸುಮಾರು ಹದಿನೈದು ವರ್ಷಗಳ ಕಾಲಾವಧಿಯಲ್ಲಿ, ಅರ್ಥವ್ಯವಸ್ಥೆಯನ್ನು ಉತ್ತೇಜಿಸಲು ಬಳಸಲಾದ ಏಕೈಕ ಸಾಧನವೆಂದರೆ ಬಡ್ಡಿ ದರವೇ. ಅದನ್ನು ಅತ್ಯಂತ ಕೆಳ ಮಟ್ಟಕ್ಕೆ, ಅಂದರೆ, ವಾಸ್ತವವಾಗಿ ಶೂನ್ಯದ ಹತ್ತಿರದ ಮಟ್ಟಕ್ಕೆ ಇಳಿಸಲಾಗಿತ್ತು.
ಇದನ್ನೂ ಓದಿ : ʻಬೆಳವಣಿಗೆಯ ಹಿಂದೂ ದರʼ ಅಂದರೆ ಕೆಳಮಟ್ಟದ ದರ ಈಗ ದುಡಿಯುವ ಜನಗಳಿಗೆ ಹೆಚ್ಚು ಕೆಟ್ಟದಾಗಿರುತ್ತದೆ
ಸರ್ಕಾರದ ತಿಕ್ಕಲುತನದಿಂದಲ್ಲ :
ಅಮೆರಿಕದ ವಸತಿ ಗುಳ್ಳೆಗಳು 2008ರಲ್ಲಿ ಸಿಡಿದವು. 2009ರ ಅಂತ್ಯದಿಂದ ಹಿಡಿದು 2022ರವರೆಗೆ – 2016 ಮತ್ತು 2020ರ ನಡುವಿನ ಒಂದು ಸಣ್ಣ ಅವಧಿಯಲ್ಲಿ ಹಂತ ಹಂತವಾಗಿ ಬಡ್ಡಿ ದರವನ್ನು ಗರಿಷ್ಠ ಶೇ. 2ರ ವರೆಗೆ ಏರಿಸಿದ ಅವಧಿಯನ್ನು ಹೊರತುಪಡಿಸಿದರೆ – ಫೆಡರಲ್ ಫಂಡ್ಸ್ ದರವು ಹೆಚ್ಚು ಕಡಿಮೆ ಶೇ. 0.25ಕ್ಕೇ ಅಂಟಿಕೊಂಡಿತ್ತು. ಅಸಾಧಾರಣ ಅಗ್ಗದ ಹಣ ಲಭ್ಯತೆಯ ಈ ಅಸಾಧಾರಣ ದೀರ್ಘ ಅವಧಿಯು, ತಮ್ಮ ಲಾಭದ ಅಂತರವನ್ನು ಮತ್ತು ಆ ಮೂಲಕ ಬೆಲೆಗಳನ್ನು ಹೆಚ್ಚಿಸುವ ಅವಕಾಶವನ್ನು ಅಮೆರಿಕದ ಶ್ರೀಮಂತ ಕುಳಗಳಿಗೆ(oligopolists) ಕಲ್ಪಿಸಿಕೊಟ್ಟಿತು ಮತ್ತು ಅದು ಪ್ರಸ್ತುತ ಹಣದುಬ್ಬರಕ್ಕೆ ಕಾರಣವಾಯಿತು ಕೂಡ. ಆದರೂ ಅದು ಅಮೆರಿಕದ ಅರ್ಥವ್ಯವಸ್ಥೆಯನ್ನು ಸಾಕಷ್ಟು ಉದ್ಯೋಗ ಸೃಷ್ಟಿಯ ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿಲ್ಲ. ಅಮೆರಿಕದ ಅಧಿಕೃತ ನಿರುದ್ಯೋಗ ದರವು ಶೇ. 4ಕ್ಕೆ ಇಳಿಯಿತು ಎಂಬುದೇನೊ ನಿಜ. ಆದರೆ, ಅದೇ ಸಮಯದಲ್ಲಿ ಕಾರ್ಮಿಕ ಶಕ್ತಿಯ ಭಾಗವಹಿಸುವಿಕೆಯ ದರದಲ್ಲಿ ಇಳಿಕೆ ಕಂಡುಬಂದಿದೆ. ಕಾರ್ಮಿಕ ಶಕ್ತಿಯ ಭಾಗವಹಿಸುವಿಕೆಯ ದರವು 2008ರ ಮಧ್ಯಭಾಗದಲ್ಲಿದ್ದ ಅದೇ ಮಟ್ಟದಲ್ಲಿ ಮುಂದುವರಿದಿದೆ ಎಂದು ಊಹಿಸಿಕೊಂಡು ಹಾಕಿದ ಲೆಕ್ಕಾಚಾರದ ಪ್ರಕಾರ, ನಿರುದ್ಯೋಗ ದರವು 2008ರ ನಂತರದ ಅವಧಿಯುದ್ದಕ್ಕೂ ಹೆಚ್ಚಿನ ಮಟ್ಟದಲ್ಲೇ ಇದೆ. ಹಣದುಬ್ಬರವು ಅಮೆರಿಕಾವನ್ನು ಬಲವಾಗಿ ಅಪ್ಪಳಿಸಿದಾಗ, ಬಡ್ಡಿ ದರವನ್ನು ಇದ್ದಕ್ಕಿದ್ದಂತೆ ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಯಿತು. ಹಣಕಾಸು ನೀತಿಯಲ್ಲಿನ ಈ ತರ್ಕಬದ್ಧವಲ್ಲದ ನಿಲುವಿಗೆ, ಬಡ್ಡಿ ದರದಲ್ಲಿನ ಈ ಅತಿರೇಕದ ಚಲನೆಗೆ, ಕಾರಣವೆಂದರೆ
ಜಾಗತಿಕವಾಗಿ ಚಲಿಸುವ ಹಣಕಾಸು ಬಂಡವಾಳದ ಪ್ರಾಬಲ್ಯದ ಅಡಿಯಲ್ಲಿ, ಪರ್ಯಾಯವೇ ಇಲ್ಲ ಎಂಬುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ತರ್ಕಹೀನತೆಯು ಸರ್ಕಾರದ ತಿಕ್ಕಲುತನದಿಂದ ಉದ್ಭವಿಸಲಿಲ್ಲ; ಅದು ಜಾಗತಿಕ ಹಣಕಾಸು ಬಂಡವಾಳದ ಪ್ರಾಬಲ್ಯದಿಂದಾಗಿ ಉದ್ಭವಿಸಿದೆ.
ಬಡ್ಡಿ ದರಗಳ ಈ ರೀತಿಯ ಹುಚ್ಚಾಪಟ್ಟೆ ಏರಿಳಿತಗಳ ಪ್ರತಿಕೂಲ ಪರಿಣಾಮವು ಮತ್ತೊಂದು ಅಂಶದಿಂದಲೂ ಉಲ್ಬಣಗೊಳ್ಳುತ್ತದೆ. ಬಡ್ಡಿ ದರ ಕುಸಿದಾಗ ಮತ್ತು ಬಾಂಡ್ ಬೆಲೆಗಳು ಏರಿದಾಗ, ಇದು ಅರ್ಥವ್ಯವಸ್ಥೆಯನ್ನು ಉತ್ತೇಜಿಸುತ್ತದೆಯೋ ಅಥವಾ ಇಲ್ಲವೋ ಎಂಬುದು ಬೇರೆ ವಿಷಯ, ಕೊನೆಯ ಪಕ್ಷ ಅದು ಬ್ಯಾಂಕಿಂಗ್ ವ್ಯವಸ್ಥೆಗೆ ಯಾವುದೇ ಅಪಾಯವನ್ನು ಉಂಟುಮಾಡುವುದಿಲ್ಲ. ಬ್ಯಾಂಕಿನ ಆಸ್ತಿಗಳ ಮೌಲ್ಯದ ಹೆಚ್ಚಳವು ಅದನ್ನು ಯಾವುದೇ ರೀತಿಯಲ್ಲಿ ದುರ್ಬಲಗೊಳಿಸುವುದಿಲ್ಲ. ಆದರೆ ಬಡ್ಡಿ ದರವು ಏರಿಕೆಯಾದಾಗ ಮತ್ತು ಬಾಂಡ್ ಬೆಲೆಗಳು ಕುಸಿದಾಗ, ಬ್ಯಾಂಕಿನ ಆಸ್ತಿಗಳ ಮೌಲ್ಯವು ಅದರ ಬಾಧ್ಯತೆಗಳ ಮೌಲ್ಯಕ್ಕೆ ಹೋಲಿಸಿದರೆ ಕುಸಿಯುತ್ತದೆ. ಇದು "ಮಾರುಕಟ್ಟೆ"ಯಲ್ಲಿ ಪ್ರಚೋದಿಸುವ ಪ್ರತಿಕ್ರಿಯೆಗಳು ಬ್ಯಾಂಕ್‌ಅನ್ನು ಕಾರ್ಯಸಾಧು-ಅಲ್ಲದ ಪರಿಸ್ಥಿತಿಗೆ ತಳ್ಳಬಹುದು. ಬಡ್ಡಿ ದರದ ಇಳಿಕೆಯ ಪರಿಣಾಮ ಮತ್ತು ಏರಿಕೆಯ ಪರಿಣಾಮ ಇವುಗಳ ನಡುವಿನ ಈ ಅಸಮತೋಲನದ ಪರಿಣಾಮವಾಗಿ ಅದು ಬ್ಯಾಂಕಿಂಗ್ ವ್ಯವಸ್ಥೆಯನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ.
ಹಣದುಬ್ಬರಕ್ಕೆ ಪ್ರತಿಕ್ರಿಯೆಯಾಗಿ ಎಲ್ಲೆಡೆಯೂ ಬಡ್ಡಿ ದರ ಏರಿಕೆಯನ್ನೇ ಒಂದು ಅಧಿಕೃತ ನೀತಿಯಾಗಿ ಅಳವಡಿಸಿಕೊಳ್ಳಲಾಗಿದೆ. ಹಾಗಾಗಿ, ಬಡ್ಡಿ ದರದ ತೀವ್ರ ಏರಿಕೆಯಿಂದ ಅಮೆರಿಕದ ಬ್ಯಾಂಕಿಂಗ್ ವ್ಯವಸ್ಥೆ ಮಾತ್ರವಲ್ಲ, ಇಡೀ ಬಂಡವಾಳಶಾಹಿ ಜಗತ್ತಿನ ಬ್ಯಾಂಕಿಂಗ್ ವ್ಯವಸ್ಥೆಯು ಅಪಾಯಕ್ಕೊಳಗಾಗಿದೆ. ಕ್ರೆಡಿಟ್ಸ್ ನ್ಯೂ ಸ್‌ನಂತಹ ಪ್ರಖ್ಯಾತ ಬ್ಯಾಂಕ್ ಸಹ ಇತ್ತೀಚೆಗೆ ಅದರ ಷೇರು ಬೆಲೆಗಳು ನೆಲ ಕಚ್ಚಿದ ನಂತರ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಅದರ ಪ್ರತಿಸ್ಪರ್ಧಿಯಾಗಿದ್ದ ಯುಬಿಎಸ್ ಬ್ಯಾಂಕ್ ಅದನ್ನು ಸ್ವಾಧೀನಪಡಿಸಿಕೊಂಡಿದೆ.
ಅದಕ್ಕಿಂತಲೂ ಮುಖ್ಯವಾದ ವಿಷಯವೆಂದರೆ, ಬಂಡವಾಳಶಾಹಿ ಜಗತ್ತಿನ ಬ್ಯಾಂಕಿಂಗ್ ವ್ಯವಸ್ಥೆಗೆ ಎದುರಾಗಿರುವ ಅಪಾಯದ ಮಟ್ಟವು ಇನ್ನೂ ತಗ್ಗಿಲ್ಲ. ಹಣದುಬ್ಬರವನ್ನು ಎದುರಿಸಲು ಬಡ್ಡಿ ದರಗಳನ್ನು ಇನ್ನಷ್ಟು ಏರಿಸಲು ಫೆಡರಲ್ ರಿಸರ್ವ್ ಬೋರ್ಡ್ ಈ ಹಿಂದೆ ಯೋಜಿಸಿತ್ತು. ಅಮೆರಿಕದ ಈ ಎರಡು ಬ್ಯಾಂಕುಗಳ ಕುಸಿತದ ನಂತರ ಅದು ಈಗ ನಿಧಾನ ನೀತಿಯನ್ನು ಅನುಸರಿಸಬಹುದು. ಆದರೆ ಮುಂದುವರಿಯುತ್ತಿರುವ ಹಣದುಬ್ಬರವು, ಬಡ್ಡಿ ದರಗಳನ್ನು ಏರಿಸುವುದನ್ನುಬಿಟ್ಟರೆ ಬೇರೆ ಆಯ್ಕೆಯೇ ಇಲ್ಲ ಎನ್ನುವಂತೆ ಮಾಡಿದೆ. ಏಕೆಂದರೆ, ಬಂಡವಾಳಶಾಹಿಯ ಅಡಿಯಲ್ಲಿ ಹಣದುಬ್ಬರದ ವಿರುದ್ಧ ಹೋರಾಡುವ ಏಕೈಕ ಮಾರ್ಗವೆಂದರೆ ನಿರುದ್ಯೋಗವನ್ನು ಸೃಷ್ಟಿಸುವುದೇ ಆಗಿದೆ ಮತ್ತು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಈ ಕಾರ್ಯವನ್ನು ಬಡ್ಡಿ ದರಗಳ ಏರಿಕೆಯ ಮೂಲಕವೇ ಸಾಧಿಸಲಾಗುತ್ತದೆ. ಬಂಡವಾಳಶಾಹಿಯು ಅದರ ನವ ಉದಾರವಾದಿ ಹಂತದಲ್ಲಿ ಬಿಕ್ಕಟ್ಟಿಗೆ ಸಿಲುಕಿ ಒದ್ದಾಡುತ್ತಿರುವಾಗ, ಅದರ ಅಂತ್ಯ ಸಮೀಪಿಸಿದೆ ಎಂಬುದನ್ನುಯುರೋಪಿನಾದ್ಯಂತ ನಡೆಯುತ್ತಿರುವ ಕಾರ್ಮಿಕರ ಪ್ರತಿಭಟನೆಗಳು ಒತ್ತಿಹೇಳುತ್ತಿವೆ.