ಈ ಫೋಟೋ ಫಾತಿಮಾಳ ಕುರಿತು ಏನೇಳುತ್ತಿದೆ…

 

ಮೂಲ: ರೊಸಲಿಂಡಾ ಓ ಹ್ಯಾನ್ ಲೋನ್
(ಪ್ರಾಧ್ಯಾಪಕಿ. ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ. ಆಕ್ಸ್ಫರ್ಡ್ ವಿಶ್ವವಿದ್ಯಾಲಯ.)
ಅನುವಾದ- ಹರೀಶ್ ಗಂಗಾಧರ

 

ಭಾರತದಲ್ಲಿ ಶಿಕ್ಷಣಕ್ಕಾಗಿ ನೆಡದ ಜನಪ್ರಿಯ ಹೋರಾಟದ ಸುದೀರ್ಘ ಇತಿಹಾಸದಲ್ಲಿ ನಿರ್ದಿಷ್ಟವಾಗಿ ಜನವರಿಯ ತಿಂಗಳಿಗೆ ಬಹಳ ಮಹತ್ವವಿದೆ. ಸಮಾಜ ಕಡೆಗಣಿಸಿದ ದಮನಿತರ ಮತ್ತು ಮಹಿಳೆಯರ ಶಿಕ್ಷಣಕ್ಕಾಗಿ ಕೆಚ್ಚೆದೆಯಿಂದ ಹೋರಾಟ ಮಾಡಿದ ಮತ್ತು ಇಂದು ಮಹಾರಾಷ್ಟ್ರದ ಪುಣೆಯಲ್ಲಿರುವ ಪ್ರತಿಷ್ಠಿತ ವಿಶ್ವವಿದ್ಯಾಲಯವಾದ ಸಾವಿತ್ರಿಬಾಯಿ ಪುಲೆ ವಿಶ್ವವಿದ್ಯಾಲಯಕ್ಕೆ ಸ್ಪೂರ್ತಿಯಾದ ಸಾವಿತ್ರಿಬಾಯಿ ಫುಲೆಯವರ ಜನ್ಮದಿನವನ್ನು ಜನವರಿ 3ರಂದು ಆಚರಿಸುತ್ತೇವೆ. ಇದೇ ಜನವರಿ 9 ರಂದು, ಫುಲೆಯವರೊಂದಿಗೆ ದಿಟದಿ ಹೋರಾಟ ಮಾಡಿದ, ಅವರ ಎಲ್ಲಾ ಚಳುವಳಿಗಳಲ್ಲೂ ಸಕ್ರಿಯವಾಗಿದ್ದ, ಒಡನಾಡಿ ಮತ್ತು ಶಿಕ್ಷಕಿ ಫಾತಿಮಾ ಶೇಖ್ ಅವರ ಹುಟ್ಟುಹಬ್ಬವೂ ಕೂಡ. ಫೋಟೋ

ಇವರಿಬ್ಬರ ಇತಿಹಾಸ, ವಿಶೇಷವಾಗಿ ಸಾವಿತ್ರಿಬಾಯಿ ಫುಲೆಯವರ ಹೋರಾಟದ ಹಾದಿ ನಮಗೆಲ್ಲ ಚಿರಪರಿಚಿತ. ಈ ಜೋಡಿಯ ಹೋರಾಟದ ಪರಿಚಯ ನಮಗಿದ್ದರು, ಇವರ ಧೈರ್ಯ, ನೋಟದ ಹರವು ನಮ್ಮಲ್ಲಿ ಪುಳಕ ಮತ್ತು ಅಚ್ಚರಿಯನ್ನ ಮೂಡಿಸದೆ ಇರದು. 19ನೇ ಶತಮಾನದ ನಡುವಲ್ಲಿ ವಸಹಾತು ಆಳ್ವಿಕೆ ಉತ್ತುಂಗದಲ್ಲಿದ್ದಾಗ, ಸವಾಲುಗಳೇ ಇಲ್ಲದೆ ಹಲವು ಸಮುದಾಯಗಳಲ್ಲಿ ಸಂಕುಚಿತ ಸಂಪ್ರದಾಯವಾದಿ ಆಲೋಚನೆ, ಮನೋಭಾವಗಳು ಜೀವಂತವಾಗಿರುವಾಗ ಈ ಹೆಂಗಸರು ಶಿಕ್ಷಣ ಉಳ್ಳವರಿಗೆ ಮಾತ್ರವಲ್ಲದೆ ಎಲ್ಲರಿಗು ಸಿಗುವುವಂತಾಗಬೇಕು ಎಂದು ಪ್ರಬಲವಾಗಿ ವಾದಿಸಿದ್ದರು. ಅವರು ಹೀಗೆ ಪಟ್ಟು ಹಿಡಿದು ವಾದಿಸಿದ್ದು, ಹೋರಾಟ ನೆಡೆಸಿದ್ದು ಉದ್ದಾತ ಆಲೋಚನೆಯುಳ್ಳ ಭಾರತದ ಒಂದು ವಸಾಹತು ನಗರ ಅಥವಾ ಕೇಂದ್ರದಲ್ಲಲ್ಲ, ಬದಲಾಗಿ ಮಹಾರಾಷ್ಟ್ರದ 18ನೇ ಶತಮಾನದ ಬ್ರಾಹ್ಮಣ ಪೇಶ್ವಾಗಳ ಹಳೆಯ ರಾಜಧಾನಿಯಾಗಿದ್ದ ಮತ್ತು 19ನೇ ಶತಮಾನದ ನಡುವಿನಲ್ಲೂ ಸಾಂಪ್ರದಾಯಿಕ ಸಮಾಜವಾಗಿಯೇ ಉಳಿದಿದ್ದ ಪುಣೆಯಲ್ಲಿ! ಫೋಟೋ

ಅದ್ಭುತ ಸಮಾಜ ಸುಧಾರಕ, ಜಾತಿ ಪದ್ದತಿಯ ವಿರುದ್ಧ ಆಂದೋಲನ ನೆಡೆಸಿದ್ದ ಜೋತಿರಾವ್ ಫುಲೆಯ ಮಡದಿಯಾಗಿದ್ದ ಸಾವಿತ್ರಿ, ಪತಿಯ ಜೊತೆಗೂಡಿ ಹುಡುಗಿಯರಿಗೆ, ದಲಿತರಿಗೆ ಮತ್ತಿತರ ದಮನಿತರಿಗಾಗಿ ಪುಣೆಯಲ್ಲಿ ಶಾಲೆಗಳನ್ನ ತೆರೆದರು. ಜನನಿಬಿಡ ವ್ಯಾಪಾರ ವಹಿವಾಟು ಕೇಂದ್ರವಾದ ಗಂಜ್ ಪಥ್ ನಿವಾಸಿಯಾಗಿದ್ದ ಜೋತಿರಾವ್ ಅವರ ಆಪ್ತಮಿತ್ರ ಮತ್ತು ನೆರೆಯವರಾದ ಮಿಯಾ ಉಸ್ಮಾನ್ ಶೇಖ್ 1848ರಲ್ಲಿ ತನ್ನ ಮನೆಯಲ್ಲಿಯೇ ಒಂದು ಶಾಲೆ ಸ್ಥಾಪಿಸಲು ಸ್ಥಳಾವಕಾಶಾ ಮಾಡಿಕೊಟ್ಟ. ಅಹಮದ್ ನಗರದ ಅಮೆರಿಕನ್ ಮಿಷನರಿ ನೆರವಿನೊಂದಿಗೆ ಅಲ್ಲಿ ಹುಡುಗಿಯರ ಪುಟ್ಟ ಗುಂಪೊಂದಕ್ಕೆ ಪಾಠ ಹೇಳಿಕೊಡುವ ಜವಾಬ್ದಾರಿಯನ್ನ ಸಾವಿತ್ರಿಬಾಯಿ ಮತ್ತು ಉಸ್ಮಾನ್ ಶೇಖ್ ಸಹೋದರಿ ಫಾತಿಮಾ ಹೊತ್ತರು. ಮುಂದೆ ದಲಿತ ಮತ್ತು ಬಹುಜನರ ಮಕ್ಕಳಿಗಾಗಿ ಇನ್ನಷ್ಟು ಶಾಲೆಗಳನ್ನ ತೆರೆದರು. ಸಾವಿತ್ರಿ ಮತ್ತು ಫಾತಿಮಾ ಮನೆ ಮನೆ ಅಲೆದರು, ಹೆಣ್ಣು ಮಕ್ಕಳನ್ನ ಶಾಲೆಗೆ ಕಳುಹಿಸಲು ಮನಸ್ಸಿಲ್ಲದವರ ಮನವೊಲಿಸಿದರು, “ನಿಮ್ಮ ಮಕ್ಕಳ ನಮ್ಮಲ್ಲಿ ಸುರಕ್ಷಿತ”ವೆಂಬ ಧೈರ್ಯ ತುಂಬಿದರು. ಹಗಲಿರುಳೆನ್ನದೆ ತರಗತಿಯ ಒಳಗೂ ಹೊರಗೂ ಅವಿರತವಾಗಿ ಶ್ರಮಿಸಿದರು. ಫೋಟೋ

ಇರುವ ತರ್ಕಹೀನ ಕಟ್ಟಳೆಗಳನ್ನ ಕೆಡಹುವ ಇಂತಹ ಅನಿರೀಕ್ಷಿತ ಸವಾಲುಗಳ ವಿರುದ್ಧ ಸಹಜವಾಗಿಯೆ ಸಂಪ್ರದಾಯವಾದಿಗಳು ಸಿಡಿಮಿಡಿಗೊಂಡರು. ಅವರ ತೀವ್ರ ಪ್ರತಿರೋಧವನ್ನ ಸಾವಿತ್ರಿ ಮತ್ತು ಫಾತಿಮಾ ಎದುರಿಸಬೇಕಾಯಿತು. ಅವರು ಕೆಲಸಕ್ಕೆ ಹೋಗುವಾಗ ಅವರ ಮೇಲೆ ಕಲ್ಲು ತೂರಲಾಯಿತು, ಸಗಣಿ ಎಸೆಯಲಾಯಿತು, ನಿಂದಿಸಲಾಯಿತು. ಈ ಪರಿಯ ಸಾರ್ವಜನಿಕ ತಿರಸ್ಕಾರದಿಂದ ವಿಚಲಿತರಾದ ಫುಲೆಯ ತಂದೆ, ದಂಪತಿಗಳನ್ನ ಮನೆ ಬಿಡುವಂತೆ ಕೇಳಿಕೊಂಡರು. ಇಂತಹ ಸಂಕಷ್ಟದ ದಿನಗಳಲ್ಲಿ ಮತ್ತೊಮ್ಮೆ ಫುಲೆ ದಂಪತಿಗಳ ಸಹಾಯಕ್ಕೆ ಬಂದವರು ಉಸ್ಮಾನ್ ಶೇಖ್. ಆತ ದಂಪತಿಗಳಿಗೆ ತನ್ನ ಮನೆಯಲ್ಲಿರಲು ಅವಕಾಶ ಮಾಡಿಕೊಟ್ಟ. 1856 ರಲ್ಲಿ ಕಾಣಿಸಿಕೊಂಡ ತಾತ್ಕಾಲಿಕ ಅನಾರೋಗ್ಯವೊಂದು ಮತ್ತೆ ಸತಾರ ಬಳಿಯ ನಯ್ಗಾವ್ನ ತಂದೆಯ ಮನೆಯ ಮೊರೆಹೋಗುವಂತೆ ಸಾವಿತ್ರಿಬಾಯಿಯನ್ನ ವಿವಶಗೊಳಿಸುವರೆಗೆ ಫುಲೆ ದಂಪತಿಗಳು ಉಸ್ಮಾನ್ ಮನೆಯಲ್ಲೇ ನೆಲೆಸಿದ್ದರು. ಫೋಟೋ

ನೂರಾರು ಸಂಶೋಧಕರ ಪರಿಶ್ರಮದ ಫಲವಾಗಿ ಅಲ್ಲಿಂದಾಚೆಯ ಸಾವಿತ್ರಿಬಾಯಿಯ ಬದುಕು ಮತ್ತು ಜೀವನದ ಕುರಿತು ಸಾಕಷ್ಟು ಮಾಹಿತಿಯಿದೆ. ಆದರೆ ಫಾತಿಮಾಳ ಬದುಕು ನಿಗೂಢವಾಗಿಯೇ ಉಳಿದುಬಿಟ್ಟಿದೆ. ಕಾಲ ನಂತರ ಉಳಿದುಕೊಳ್ಳುವ ಯಾವುದೇ ಬರಹವನ್ನ ಅವಳು ಬಿಟ್ಟುಹೋಗಲಿಲ್ಲ. ಸಾವಿತ್ರಿಬಾಯಿಯ ನೆನಪನ್ನ ಅಮರವಾಗಿಸಿಲು ದುಡಿದ ದಲಿತರ ಮತ್ತು ಬಹುಜನರ ಹುರುಪು ಈ ಮುಸ್ಲಿಂ ಮಹಿಳೆಗಿರಲಿಲ್ಲ. ಇತ್ತೀಚಿಗಷ್ಟೇ ಅವಳನ್ನ ಕೊಂಡಾಡಲಾಗುತ್ತಿದೆ. ಮಹಾರಾಷ್ಟ್ರದ ಉರ್ದು ಪಠ್ಯ ಪುಸ್ತಕ, ಬಾಲ ಭಾರತೀ ಪುಸ್ತಕದಲ್ಲಿ ಅವಳ ಜೀವನ ಕುರಿತಾದ ಸಣ್ಣ ಪಾಠವಿದೆ. ಆದರೆ ಅವಳ ಜೀವನದ ನೇರ ಪುರಾವೆಗಳು, ಸಾಕ್ಷಿಗಳು ನಶಿಸಿಹೋಗಿವೆ. ಫೋಟೋ

ಇದನ್ನು ಓದಿ : ‘ಮತ್ತೆ ಉಸಿರಾಡುವಂತಾಯಿತು’ | ಸುಪ್ರೀಂ ತೀರ್ಪಿಗೆ ಬಿಲ್ಕಿಸ್ ಬಾನೋ ಪ್ರತಿಕ್ರಿಯೆ

ಅದೃಷ್ಟವೆಂಬಂತೆ ಕೆಳಗೆ ಪೋಸ್ಟ್ ಮಾಡಿರುವ ಫಾತಿಮಾಳ ಒಂದು ಫೋಟೋಗ್ರಾಫ್ ಉಳಿದುಕೊಂಡಿದೆ. ಈ ಫೋಟೋ ಬಿಟ್ಟು ಅಂತರ್ಜಾಲದಲ್ಲಿ ಹರಿದಾಡುವ ಬೇರೆಲ್ಲವೂ ಚಿತ್ರಕಾರರು ಕುಂಚದಿಂದ ಮೂಡಿದ ಕಾಲ್ಪನಿಕ ಚಿತ್ರಗಳು. ಇರುವ ಈ ಒಂದು ಚಿತ್ರವನ್ನ ಸೂಕ್ಷ್ಮವಾಗಿ ಪರೀಕ್ಷಿಸುವ ಅಗತ್ಯವಿದೆ. ಈ ಚಿತ್ರವೇ ಫಾತಿಮಾಳ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತದೆ. ಅವಳು ಬದುಕಿದ ಕಾಲ, ಸನ್ನಿವೇಶಗಳು ಮತ್ತು ಶಿಕ್ಷಕಿಯಾಗಿ ಅವಳ ಪಾತ್ರದ ಕುರಿತು ಹಲವು ವಿಷಯವನ್ನ ನಮ್ಮ ಮುಂದೆ ತೆರೆದಿಡುತ್ತದೆ. ಈ ಚಿತ್ರವನ್ನ 1850ರ ಅವಧಿಗೆ ಸೇರಿದ್ದು. ಆಗಿನ್ನೂ ಡಿಗೇರೋ ಟೈಪ್ ತಂತ್ರಜ್ಞಾನ ಭಾರತದಲ್ಲಿ ಫೋಟೋಗ್ರಫಿ ಎಲ್ಲರ ಕೈಗೆಟುಕುವಂತೆ ಮಾಡಿತ್ತು. ಫುಲೆ ಮತ್ತು ಅವರ ಪ್ರಗತಿಪರ ಸಹಕೆಲಸಗಾರಿಗೆ ಫೋಟೋಗ್ರಫಿಯ ಸಾಧ್ಯತೆಗಳ ಅರಿವಿತ್ತು. ಅದರಿಂದಲೇ ಜೋತಿರಾವ್ ಫುಲೆ ಅವರ ಮುಂಚಿನ ಚಿತ್ರಗಳು ಇಂದಿಗೂ ಉಳಿದುಕೊಂಡಿವೆ. ಫೋಟೋ

ಈ ಕೆಳಕೊಂಡ ಚಿತ್ರದಲ್ಲಿ ಸಾವಿತ್ರಿಬಾಯಿ ಮತ್ತು ಫಾತಿಮಾ ಅಕ್ಕಪಕ್ಕ ಕುಳಿತ್ತಿದ್ದಾರೆ. ಸಾವಿತ್ರಿಬಾಯಿ ನೇರ ಕ್ಯಾಮೆರಾವನ್ನು ನೋಡಿದರೆ, ನವನವೀನ ತಂತ್ರಜ್ಞಾನದಿಂದ ಕಸಿವಿಸಿಗೊಂಡ ಫಾತಿಮಾ ಕ್ಯಾಮೆರಾದ ಕಡೆಗೆ ದೃಷ್ಟಿ ಹಾಯಿಸಿಲ್ಲ. ಇಬ್ಬರೂ ಒಂದೇ ತರಹದ ಆಕರ್ಷಕ ಸೀರೆ ಉಟ್ಟಿದ್ದಾರೆ, ಚಿತ್ತಾರಗಳಿಲ್ಲದ ಸಾಧಾರಣ ಸೀರೆಯಾದರು ಸರಳ ಹಾಗು ಪ್ರಭಾವಿ ಅಂಚುಗಳುಳ್ಳ ಸೀರೆಯವು. ದಕ್ಷ ಶಿಕ್ಷಕರೆಂದು ತಮ್ಮನ್ನ ತಾವು ಪ್ರಸ್ತುತ ಪಡಿಸಿಕೊಳ್ಳಲು ಉಟ್ಟ ಸೂಚಕ ಸೀರೆಗಳವು. ಸರಳವಾಗಿ ಉಟ್ಟ ಘನತೆಯುಳ್ಳ ಸಮವಸ್ತ್ರಗಳವು. ಅವರು ಸೀರೆಗಳನ್ನ ಆಧುನಿಕ ನೀವಿ ಶೈಲಿಯಲ್ಲಿ ಬಿಗಿಯಾಗಿ ಕಟ್ಟಿಕೊಂಡಿರುವುದನ್ನ ಗಮನಿಸಬಹುದು. ವಸಾಹತು ಕಾಲದಲ್ಲಿ ಮಹಿಳೆಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಶುರುವಾದಾಗ ಹುಟ್ಟಿಕೊಂಡ ಶೈಲಿಯಿದು. ಕೈಕಾಲುಗಳನ್ನ ಮುಚ್ಚುವ ಆಡಂಬರವಿಲ್ಲದ ಸೀರೆ ಉಡುವ ಶೈಲಿಯದು. ಅವರು ಕುಳಿತಿರುವ ಭಂಗಿ ವೃತ್ತಿಪರ ಪಾಲುದಾರರದ್ದು, ಸಹಪಾಠಿಗಳದ್ದು, ಒಟ್ಟಿಗೆ ದುಡಿದು, ಒಬ್ಬರನೊಬ್ಬರು ಅರಿತ ತಂಡದ್ದು. ಅಪರಿಮಿತ ಮೌನದ ನಡುವೆ ಇಬ್ಬರಲ್ಲೂ ಸಮಚಿತ್ತವಿದೆ. ಫೋಟೋ

ಆಗಿನ ಕಾಲದ ಸಾಂಸಾರಿಕ ಬದುಕಿನ ಬಗ್ಗೆ ಮತ್ತಷ್ಟು ಸುಳಿವು ನೀಡುವಂತೆ ಕುತೂಹಲಕಾರಿ ವ್ಯಕ್ತಿಯೊಬ್ಬರು ಸಾವಿತ್ರಿ ಮತ್ತು ಫಾತಿಮಾರ ಹಿಂದೆ ನಿಂತಿದ್ದಾರೆ. ಏಕಕಾಲಕ್ಕೆ ಸಾವಿತ್ರಿ, ಫಾತಿಮಾ ಮತ್ತು ಕ್ಯಾಮೆರವನ್ನೂ ನೋಡುತ್ತಲಿರುವ ಹಿರಿಯ ಹೆಂಗಸು ಆಕೆ. ಮುಸ್ಲಿಂ ಮಹಿಳೆಯ ದೇಹದ ಮೇಲ್ಭಾಗವನ್ನ ಮುಚ್ಚುವ ಸಾಂಪ್ರದಾಯಿಕ ಖಿಮರ್ ಹಿಜಾಬ್ ತೊಟ್ಟಿದ್ದಾಳೆ ಆಕೆ. ಫುಲೆ ದಂಪತಿಗಳು ಉಸ್ಮಾನ್ ಶೇಖ್ ಮನೆಯಲ್ಲಿದ್ದಾಗ ತೆಗೆದ ಚಿತ್ರವಿರಬಹುದು ಇದು. ಶಿಕ್ಷಣ ಕ್ಷೇತ್ರದ ಆರಂಭಿಕ ದಿನಗಳಲ್ಲಿ ಕ್ರಾಂತಿಮಾಡಿದ, ವೃತ್ತಿಪರ ಶಿಕ್ಷಕರ ಜೊತೆಗೆ ನಿಂತು ಫೋಟೋ ತೆಗೆಸಿಕೊಳ್ಳಲು ಉತ್ಸುಕಳಾದ ಆ ಕುಟುಂಬದ ಹಿರಿಯ ಹೆಂಗಸು ಇವಳಿರಬಹುದು. ಬಹುಶಃ ಸಾವಿತ್ರಿಬಾಯಿ ಮತ್ತು ಫುಲೆ ಅವರಿಗೆ ಮನೆಯಲ್ಲಿರಲು ಎಲ್ಲ ಅನುಕೂಲ ಮಾಡಿಕೊಟ್ಟ ಉಸ್ಮಾನ್ ಕುಟುಂಬದ ಮತ್ತೊಬ್ಬ ಸದಸ್ಯೆ ಇವಳಿರಬಹುದೆಂದು ನಾವು ಊಹಿಸಬಹುದು ಕೂಡ. ಫೋಟೋ

ಸಾವಿತ್ರಿ ಮತ್ತು ಫಾತಿಮಾರ ಪಾದದ ಬಳಿ ಪುಟ್ಟ ಹುಡುಗಿಯರು ಕುಳಿತ್ತಿದ್ದಾರೆ. ಎಡಕ್ಕೆ ಕುಳಿತ ಹಣೆಬೊಟ್ಟಿಟ್ಟಿರುವ ಹುಡುಗಿ ಹಿಂದೂ ಹಿನ್ನಲೆಯವಳಿರಬೇಕು. ಬಲಕ್ಕೆ ಕುಳಿತವಳು ಮಕ್ಕಳ ಖಿಮರ್ ಹಿಜಾಬ್ ಧರಿಸಿದ ಮುಸ್ಲಿಂ. ಚಿತ್ರದ ಬಹು ಮುಖ್ಯ ಸಂದೇಶವನ್ನ ಈ ಮಕ್ಕಳು ಪ್ರತಿಧ್ವನಿಸುತ್ತಾರೆ- ಜಾತಿ, ಧರ್ಮ, ವರ್ಗ, ವಯಸ್ಸು, ಸಮಾಜಿಕ ಹಿನ್ನೆಲೆಗಳನ್ನ ಮೀರಿದ ಮಹಿಳಾ ಶಿಕ್ಷಣಕ್ಕೆ ಬೆಂಬಲ ಹಾಗು ಸಹಮತ. ಫೋಟೋ

ಚಿತ್ರ ಫಾತಿಮಾಳನ್ನ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಸಾವಿತ್ರಿಬಾಯಿಯೊಡನಿದ್ದ ಅವಳ ಆಪ್ತ ಗೆಳತನವನ್ನ ನಮ್ಮೆಲ್ಲರಿಗೆ ಪರಿಚಯಿಸಿ, ಹತ್ತಿರವಾಗಿಸುತ್ತದೆ. ಇವರಿಬ್ಬರಿಗೂ ನಮ್ಮ ಸಲಾಂ. ಫೋಟೋ

ಇದನ್ನು ನೋಡಿ : ಕಲಾಸಕ್ತರ ಕಣ್ಮನ ತಣಿಸಿದ ಚಿತ್ರಸಂತೆ : ಹರಿದು ಬಂದ ಕಲಾ ಪ್ರೇಮಿಗಳ ಸಾಗರ Janashakthi Media

 

Donate Janashakthi Media

Leave a Reply

Your email address will not be published. Required fields are marked *