ಡಾ ಎನ್.ಬಿ ಶ್ರೀಧರ
ವಾಂತಿ ಅಂದಾಕ್ಷಣ ವ್ಯಾಕ್… ಎಂದು ವಾಕರಿಕೆ ಬರುತ್ತದೆ. ಆದರೆ ‘ತಿಮಿಂಗಲ ವಾಂತಿ’ ಎಂದಾಕ್ಷಣ ಅನೇಕರಿಗೆ ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಧೀಶನನ್ನಾಗಿಸುವ ಅದೃಷ್ಟವೊಂದು ಚಕ್ಕನೆ ಬಾಗಿಲು ಸಹಸ್ರ ಸಿಡಿಲಿನ ಬೆಳಕು ಮೂಡುತ್ತದೆ. ಇದೇ ದುರಾಸೆಗೆ ಬಿದ್ದು ಕಳೆದ ಆರು ತಿಂಗಳ ಅವಧಿಯಲ್ಲಿ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲಿ 50ಕ್ಕೂ ಹೆಚ್ಚು ಜನ ಜೈಲು ಸೇರಿದ್ದಾರೆ. ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ‘ತಿಮಿಂಗಲ ವಾಂತಿ’ ಜಪ್ತಿಯಾಗಿದೆ. ಮುಂಬೈ, ಬೆಂಗಳೂರಿನಂತಹ ಮಹಾನಗರಗಳು ಮಾತ್ರವೇ ಅಲ್ಲದೆ, ಹೊಸಪೇಟೆಯಂತಹ ಪುಟ್ಟನಗರಗಳಲ್ಲೂ ಇದರ ಕಳ್ಳ ಸಾಗಣೆ ಪತ್ತೆಯಾಗಿದೆ. ಸದ್ಯ 1 ಕೆ.ಜಿ. ತಿಮಿಂಗಿಲ ವಾಂತಿಗೆ ಒಂದು ಕೋಟಿ ರು.ಗಿಂತ ಅಧಿಕ ಬೆಲೆ ಇದೆ. ಚಿನಿವಾರಪೇಟೆಯಲ್ಲಿ ಒಂದು ಕೆ.ಜಿ. ಚಿನ್ನಕ್ಕಿರುವ ದರ ಹೆಚ್ಚೆಂದರೆ 50 ಲಕ್ಷ ರೂಪಾಯಿಗಳು!
ತಿಮಿಂಗಲ ವಾಂತಿಯೆಂಬುದು ತಪ್ಪು ಹೆಸರು ?!
‘ತಿಮಿಂಗಿಲ ವಾಂತಿ’ ಎಂಬ ಹೆಸರಿನಿಂದ ಕುಖ್ಯಾತಿಗೀಡಾಗಿರುವ ವಸ್ತುವಿನ ಹೆಸರು ‘ಆ್ಯಂಬರ್‌ಗ್ರಿಸ್’. ವಾಸ್ತವವಾಗಿ ಇದು ತಿಮಿಂಗಿಲದ ವಾಂತಿಯಲ್ಲ ಬದಲಾಗಿ ತಿಮಿಂಗಲದ ಮಲ ಎಂದರೆ ಸರಿಯಾದ ಹೆಸರು. ತಿಮಿಂಗಿಲದ ಹೊಟ್ಟೆಯಲ್ಲಿ ಸೃಷ್ಟಿಯಾಗಿ ಗುದದ್ವಾರದಿಂದ ಹೊರಬರುವ ಮೇಣದಂತಹ ವಸ್ತು. ಇದರ ಬಗ್ಗೆ ಹಲವು ಕತೆಗಳು ಮತ್ತು ದಂತಕತೆಗಳಿವೆ. ಈ ಕುರಿತು ನೂರಾರು ವರ್ಷ ಸಂಶೋಧನೆ ಮಾಡಿದವರಿದ್ದಾರೆ. ಇಷ್ಟೆಲ್ಲಾ ನಿದ್ರೆಗೆಡಿಸಿರುವ ಆ್ಯಂಬರ್‌ಗ್ರಿಸ್ ಸೃಷ್ಟಿಯಾಗುವುದು ‘ಸ್ಪರ್ಮ್ ವೇಲ್’ ಎಂಬ ತಿಮಿಂಗಿಲ ತಳಿಯೊಂದರಲ್ಲಿ. ಈ ಸ್ಪರ್ಮ್ ವೇಲ್‌ಗಳು ನಮ್ಮೂರಿನಲ್ಲಿ ಓಡಾಡುವ ಬಸ್‌ಗಳಿಗಿಂತ 49-59 ಅಡಿ ಉದ್ದವಿರುವ, 35-45 ಟನ್ ಭಾರದ ದೈತ್ಯ ಪ್ರಾಣಿಗಳು.
ಜಗತ್ತಿನ ಯಾವುದೇ ಸೃಷ್ಟಿಯಲ್ಲಿ ಕಂಡುಬರದ ಅತ್ಯಂತ ಬೃಹತ್ತಾದ ಮೆದುಳು ಇವುಗಳಲ್ಲಿದೆ. ಇವು ಸಸ್ಥನಿಗಳು ಸಹ. ಬಹುತೇಕ ಮೀನುಗಳು ಮೊಟ್ಟೆಯಿಟ್ಟು ಮರಿ ತೆಗೆದರೆ ಮನುಷ್ಯ ಮತ್ತು ಇತರ ಅನೇಕ ಪ್ರಾಣಿಗಳಂತೆ ಇವು ಮರಿ ಹಾಕಿ ಅದನ್ನು ಹಾಲೂಡಿ ಸಲಹುತ್ತವೆ. ಸ್ಪರ್ಮ್ ವೇಲ್ ತಲೆಯಲ್ಲಿ ಎಣ್ಣೆಯಂತಹ ದ್ರವ ಇರುತ್ತದೆ. ಪುರಾತನ ನಾಗರಿಕತೆಯ ಕಾಲದಲ್ಲಿ ದೀಪಗಳನ್ನು ಬೆಳಗಲು ಈ ಸ್ಪರ್ಮ್ ವೇಲ್‌ಗಳನ್ನು ಕೊಂದು ಅದರ ಎಣ್ಣೆ ಸಂಗ್ರಹಿಸುವ ಪದ್ಧತಿ ಇತ್ತು. ಈ ತಿಮಿಂಗಿಲಗಳ ಆಹಾರ ಮೀನು ಹಾಗೂ ‘ಸ್ಕ್ವಿಡ್’’ ಎಂಬ ಕೊಕ್ಕು ಹೊಂದಿರುವ ಸಮುದ್ರ ಜೀವಿ. ದಿನವೊಂದಕ್ಕೆ ಟನ್‌ಗಟ್ಟಲೆ ಆಹಾರ ಬೇಕು ಈ ಜೀವಿಗೆ.
ಇದನ್ನೂ ಓದಿ: ಮಹಿಳಾ ಸಮಾನತೆ ಮತ್ತು ವಿಮೋಚನೆಯ ಕಾಳಜಿ ಹೊಂದಿದ್ದ ನಾಯಕ ಸೀತಾರಾಂ ಯೆಚೂರಿ – ಜನವಾದಿ ಮಹಿಳಾ ಸಂಘಟನೆ
ಎಲ್ಲ ಸ್ಪರ್ಮ್ ವೇಲ್‌ಗಳಿಂದಲೂ ಆ್ಯಂಬರ್‌ಗ್ರಿಸ್ ಸೃಷ್ಟಿಯಾಗುವುದಿಲ್ಲ. ಶೇ.1 ರಿಂದ ಶೇ.5 ರಷ್ಟು ಅಥವಾ 100 ಸ್ಪರ್ಮ್ ವೇಲ್‌ಗಳ ಪೈಕಿ ಒಂದರಲ್ಲಿ ಆ್ಯಂಬರ್‌ಗ್ರಿಸ್ ಉತ್ಪತ್ತಿಯಾಗುತ್ತದೆ ಎಂಬ ಅಂದಾಜಿದೆ. ಟನ್‌ಗಟ್ಟಲೆ ಸ್ಕಿಡ್ವ್ ಎಂಬ ಸಮುದ್ರ ಜೀವಿಯನ್ನು ತಿಂದಾಗ ಅದರಲ್ಲಿರುವ ಕೊಕ್ಕುಗಳು ಒಮ್ಮೊಮ್ಮೆ ತಿಮಿಂಗಿಲದ ಹೊಟ್ಟೆಯಲ್ಲಿ ಸಿಲುಕಿ ಸಮಸ್ಯೆ ಉಂಟು ಮಾಡುತ್ತವೆ. ಇದರಿಂದ ಸ್ಪರ್ಮ್ ವೇಲ್‌ನಿಂದ ಮಲ ಹೊರಹೋಗುವುದಿಲ್ಲ. ಮಲವಿಸರ್ಜನೆಗೆ ಒತ್ತಡ ನಿರ್ಮಾಣವಾಗಿ ಗುದ ನಾಳವೇ ಒಡೆದುಹೋಗಿ ಸ್ಪರ್ಮ್ ವೇಲ್ ಸಾವಿಗೀಡಾಗುತ್ತದೆ. ಬಳಿಕ ಅದರಿಂದ ಆ್ಯಂಬರ್‌ಗ್ರಿಸ್ ಹೊರಬರುತ್ತದೆ ಎಂದು ಈ ಕುರಿತು ಸುದೀರ್ಘ 50 ವರ್ಷಗಳ ಕಾಲ ಸಂಶೋಧನೆ ನಡೆಸಿ 2011ರಲ್ಲಿ ಕಾಲವಾದ ಬ್ರಿಟನ್‌ನ ಸಮುದ್ರಜೀವಿ ಶಾಸ್ತ್ರಜ್ಞ ರಾಬರ್ಟ್ ಕ್ಲಾರ್ಕ್ ಪ್ರತಿಪಾದಿಸಿದ್ದಾರೆ. ಹೆಚ್ಚಾಗಿ ಈ ವಾದವನ್ನೆ ಜಗತ್ತಿನಾದ್ಯಂತ ನಂಬಲಾಗುತ್ತದೆ.
ಸ್ಕಿಡ್ವ್ ಮೀನುಗಳ ಗಟ್ಟಿಯಾದ ಎಲುಬುಗಳು ತಿಮಿಂಗಿಲದಲ್ಲಿ ಸಂಪೂರ್ಣವಾಗಿ ಜೀರ್ಣವಾಗುವುದಿಲ್ಲ. ಅದು ಜೀರ್ಣಾಂಗದಲ್ಲೇ ತಿಂಗಳು, ವರ್ಷಗಟ್ಟಲೇ ಉಳಿಯುತ್ತದೆ. ಇದರಿಂದ ತಿಮಿಂಗಿಲ ಕಿರಿಕಿರಿ ಅನುಭವಿಸುತ್ತದೆ. ಕೊನೆಗೆ ವಾಂತಿ ಮಾಡಿ ಹೊರಹಾಕುತ್ತದೆ. ಕೆಲವೊಮ್ಮೆ ಮಲದಲ್ಲೂ ಸೇರಿರುತ್ತದೆ. ಮೀನಿನ ಮೂಳೆಗಳು ತಿಮಿಂಗಿಲದ ಹೊಟ್ಟೆಯಲ್ಲಿ ತಿಂಗಳುಗಟ್ಟಲೆ ಸಂಗ್ರಹವಾಗಿದ್ದಾಗ ಹಲವು ರಾಸಾಯನಿಕ ಪ್ರಕ್ರಿಯೆಗಳಿಗೆ ಒಳಗಾಗುತ್ತದೆ. ಅದು ಮೇಣದಂಥ ರಚನೆಯಾಗಿ ಪರಿವರ್ತನೆಯಾಗುತ್ತದೆ.
ಏಕೆಂದರೆ, ಆ್ಯಂಬರ್‌ಗ್ರಿಸ್‌ನಲ್ಲಿ ಸ್ಕಿಡ್ವ್ ಇದ್ದರೆ ಮಾತ್ರ ಅದನ್ನು ನೈಜ ಎಂದು ವ್ಯಾಪಾರಿಗಳು ಪರಿಗಣಿಸುತ್ತಾರೆ. ಆ್ಯಂಬರ್‌ಗ್ರಿಸ್ ನೈಜವೆಂದು ಸಿದ್ಧ ಮಾಡಲು ಸ್ಕಿಡ್ವ್ ಕಲಬೆರಕೆ ಮಾಡುವ ಖದೀಮರೂ ಇದ್ದಾರೆ. ಕಾರಣ ತಿಂದ ಆಹಾರ ಜೀರ್ಣವಾಗದೆ ಸ್ಪರ್ಮ್ ವೇಲ್ ಅದನ್ನು ಉಗುಳಿದಾಗ ಆ್ಯಂಬರ್‌ಗ್ರಿಸ್ ಹೊರಬರುತ್ತದೆ ಎಂಬ ವಾದ ಕೂಡ ಜನಪ್ರಿಯವಾಗಿರುವುದರಿಂದ ಇದಕ್ಕೆ ‘ತಿಮಿಂಗಿಲ ವಾಂತಿ’ ಎಂಬ ಹೆಸರೂ ಇದೆ. ಆದರೆ ಇದು ನಿಜವಲ್ಲ.
ಬಂಗಾರವನ್ನು ಹುಡುಕಿಕೊಂಡು ದೇಶ ವಿದೇಶಗಳನ್ನು ಜುಚ್ಚರಂತೆ ಸುತ್ತುವವರು ಇರುವಂತೆ ಹತ್ತಾರು ವರ್ಷ ತಿಮಿಂಗಲ ವಾಂತಿ ಸಂಗ್ರಹಿಸಿ ಇದ್ದಕ್ಕಿದ್ದಹಾಗೆ ಶ್ರೀಮಂತರಾಗಲು ಹುಚ್ಚರಂತೆ ಅಲೆದವರಿದ್ದಾರೆ. ಚಂಡಮಾರುತಗಳು ಆ್ಯಂಬರ್‌ಗ್ರಿಸ್ ಅನ್ನು ತೀರದತ್ತ ಹೊತ್ತು ತರಬಹುದು ಎಂಬ ನಿರೀಕ್ಷೆಯೊಂದಿಗೆ ಚಂಡಮಾರುತಗಳ ಮೇಲೆ ನಿಗಾ ಇಡುವ ಜಾಲಗಳೂ ಇವೆ. ಚಂಡಮಾರುತ ಅಪ್ಪಳಿಸಿದ ಬಳಿಕ ತೀರಪ್ರದೇಶದಲ್ಲಿ ಆ್ಯಂಬರ್‌ಗ್ರಿಸ್‌ಗಾಗಿ ಜಾಲಾಡುವ ತಂಡಗಳೂ ವಿಶ್ವದ ವಿವಿಧೆಡೆ ಇವೆ.
ಏನಿವು ಸ್ಪರ್ಮ್ ವೇಲುಗಳು?
ಸ್ಪರ್ಮ್ ಎಂದರೆ ವೀರ್ಯಾಣು ಎಂಬ ಅರ್ಥ ಬರುತ್ತದೆ. ಇವು ವೀರ್ಯಾಣುವಿನ ಆಕಾರದಲ್ಲಿರುತ್ತವೆ ಎಂದು ಈ ಹೆಸರೇ? ಅಲ್ಲವೇ ಅಲ್ಲ. ಆದರೆ ಸ್ಪರ್ಮ್ ಶಬ್ಧಕ್ಕೂ ಸ್ಪರ್ಮ್ ವೇಲುಗಳಿಗೂ ಯಾವುದೇ ಸಂದರ್ಭಗಳಿಲ್ಲ. ಈ ತಿಮಿಂಗಿಲಗಳಿಗೆ ಅವುಗಳ ತಲೆಯಲ್ಲಿ ಕಂಡುಬರುವ ಮೇಣದಂಥ ವಸ್ತು ವೀರ್ಯವಿರಬಹುದು ಎಂದು ಭಾವಿಸಿ ಹೆಸರನ್ನು ಇಡಲಾಗಿದೆ. ಆದರೆ ಈ ಮೇಣದಂತ ವಸ್ತುವಿಗೆ ಸ್ಪೆರ್ಮಾಸೆಟಿ ಎಂದು ಕರೆಯಲಾಗುತ್ತದೆ. ಇದನ್ನು ತಿಮಿಂಗಿಲಗಳ ವೀರ್ಯ ಎಂದು ತಪ್ಪಾಗಿ ಭಾವಿಸಿ ಆ ಹೆಸರನನ್ನು ಇಟ್ಟಿದ್ದರೂ ಸಹ ಅದೇ ಹೆಸರು ಈಗ ಖಾಯಂ ಆಗಿಬಿಟ್ಟಿದೆ.
ಯಾಕೆ ಇದು ಇಷ್ಟೊಂದು ದುಬಾರಿ?
ನಾವು ಬಳಸುವ ಸುಗಂಧದ್ರವ್ಯಗಳು ಸುದೀರ್ಘ ಅವಧಿಗೆ ಪರಿಮಳವನ್ನು ಹೊರಸೂಸುವುದಿಲ್ಲ. ಎಷ್ಟೇ ಸಾವಿರ, ಲಕ್ಷ ರುಪಾಯಿ ಕೊಟ್ಟು
ಪರಿಮಳದ್ರವ್ಯ ಖರೀದಿಸಿದರೂ ಒಂದಷ್ಟು ಸಮಯದ ಬಳಿಕ ಅದರ ಸುಗಂಧ ಕಡಮೆಯಾಗಿಬಿಡುತ್ತದೆ. ಆದರೆ ವಿಶ್ವದಲ್ಲಿ ಲಭ್ಯ ಇರುವ ಎಲ್ಲ ಸುಗಂಧದ್ರವ್ಯಗಳಿಗಿ0ತ ಸುದೀರ್ಘ ಅವಧಿಗೆ ಸುವಾಸನೆಯನ್ನು ಹೊರಸೂಸುವ ವಿಶಿಷ್ಟಗುಣ ಆ್ಯಂಬರ್‌ಗ್ರಿಸ್‌ಗೆ ಇದೆ. ಸುಮಾರು 1000 ವರ್ಷಗಳಿಂದ ಇದು ಪ್ರಪಂಚದಲ್ಲಿ ಬಳಕೆಯಲ್ಲಿದೆ. ಸುಗಂಧ ದ್ರವ್ಯ ತಯಾರಿಕೆಗೆ ಆ್ಯಂಬರ್‌ಗ್ರಿಸ್‌ನ ಬಳಕೆ ಆರಂಭವಾಗಿದ್ದೇ ಅರಬ್ ನಾಡಿನಲ್ಲಿ. ಈಜಿಪ್ಟ್ನಲ್ಲಿ ಇದನ್ನು ಬಳಸಿ ಊದುಬತ್ತಿ ಉತ್ಪಾದಿಸಲಾಗುತ್ತಿತ್ತು. ಆ್ಯಂಬರ್‌ಗ್ರಿಸ್‌ನ ಉಪಯೋಗ ಅರಬ್ ನಾಡಿನಿಂದ ಐರೋಪ್ಯ ದೇಶಗಳಿಗೆ ಪರಿಚಯವಾಯಿತು.
13ನೇ ಶತಮಾನದಲ್ಲಿ ಪ್ಲೇಗ್ ಬಂದು ಯುರೋಪ್‌ನ ಜನ ಎಲ್ಲೆಂದರಲ್ಲಿ ಸಾಯತೊಡಗಿದಾಗ, ದುರ್ವಾಸನೆಯಿಂದ ಪ್ಲೇಗ್ ಬರುತ್ತದೆ ಎಂಬ ಮೂಢನಂಬಿಕೆಗೆ ಒಳಗಾದ ಜನರು ಕುತ್ತಿಗೆ, ಸೊಂಟಕ್ಕೆ ಆ್ಯಂಬರ್‌ಗ್ರಿಸ್ ಧರಿಸಿ ಪರಿಮಳ ಸೂಸುತ್ತಾ ಓಡಾಡುತ್ತಿದ್ದರು. ಬ್ರಿಟನ್‌ನ ರಾಜ 2 ನೇ ಚಾರ್ಲ್ಸ್ ತಾನು ತಿನ್ನುವ ಮೊಟ್ಟೆಗೆ ಆ್ಯಂಬರ್‌ಗ್ರಿಸ್ ಹಾಕಿಕೊಂಡು ತಿನ್ನುತ್ತಿದ್ದರು ಎಂಬೆಲ್ಲಾ ದಂತಕತೆಗಳು ಇವೆ. 19ನೇ ಶತಮಾನದಿಂದ ಕೃತಕ ಆ್ಯಂಬರ್‌ಗ್ರಿಸ್ ಬಳಕೆಯಲ್ಲಿದೆಯಾದರೂ, ಆದರೆ ನೈಸರ್ಗಿಕ ಆ್ಯಂಬರ್‌ಗ್ರಿಸ್‌ಗೆ ಅದು ಸಾಟಿಯೇ ಅಲ್ಲ. ಹೀಗಾಗಿ ಇವತ್ತಿಗೂ ವಿಶ್ವ ಸುಗಂಧ ದ್ರವ್ಯ ಮಾರುಕಟ್ಟೆಯಲ್ಲಿ ಆ್ಯಂಬರ್‌ಗ್ರಿಸ್‌ಗೆ ಬಲು ಬೇಡಿಕೆಯಿದೆ. ಶ್ರೀಮಂತರು ಬಳಸುವ ಅತ್ಯಂತ ದುಬಾರಿ ಪಫ್ರ‍್ಯೂಮ್‌ಗಳಿಗೆ ಆ್ಯಂಬರ್‌ಗ್ರಿಸ್ ಬೇಕೇಬೇಕು. ಹೀಗಾಗಿ ಆ್ಯಂಬರ್‌ಗ್ರಿಸ್ ಹುಲುಸಾದ ದಂಧೆ. ಕೆಲವೊಂದು ದೇಶಗಳಲ್ಲಿ ಆ್ಯಂಬರ್‌ಗ್ರಿಸ್ ಹೊಂದಿದವರು, ಅದನ್ನು ಖರೀದಿಸುವವರ ನಡುವೆ ಸಂಪರ್ಕ ಏರ್ಪಡಿಸಲು ದಲ್ಲಾಳಿ ಸಂಸ್ಥೆಗಳೇ ಇವೆ.
ಗಾಳಿಯಿಂದ ಸುವಾಸನೆ ಪ್ರಾಪ್ತಿ
ತಿಮಿಂಗಿಲದಿಂದ ಸಮುದ್ರಕ್ಕೆ ಬಿಡುಗಡೆಯಾಗುವ ಆ್ಯಂಬರ್‌ಗ್ರಿಸ್ ನೀರಿನ ಮೇಲೆ ಸುಲಭವಾಗಿ ತೇಲುವುದಿಲ್ಲ. ನೀರಿನ ಮೇಲ್ಪದರದಿಂದ ಒಂದಷ್ಟು ಅಡಿ ಕೆಳಗಿರುತ್ತದೆ. ಕಪ್ಪು, ಬಿಳಿ, ಬೂದು ಬಣ್ಣದಲ್ಲಿ ಹೊಂದಿರುವ ಇದು ನಂತರ ಬಣ್ಣ ಬದಲಿಸುತ್ತದೆ. ಒಣಗಿದ ಬಳಿಕ ಹಳದಿ ಬಣ್ಣಕ್ಕೆ ತಿರುಗುತ್ತದೆ. ಆ್ಯಂಬರ್‌ಗ್ರಿಸ್ ಸಂಗ್ರಹಿಸಲು ಸಮುದ್ರ ತೀರದಲ್ಲಿ ಅಡ್ಡಾಡುವವರು ಕಲ್ಲು, ರಬ್ಬರ್, ಕೊನೆಗೆ ನಾಯಿ ಮತ್ತು ಮನುಷ್ಯರ ಮಲಕ್ಕೆ ಕೈ ಹಾಕಿ ಬೇಸ್ತು ಬಿದ್ದ ನಿದರ್ಶನಗಳು ಸಾಕಷ್ಟಿವೆ. ತಿಮಿಂಗಿಲದಿ0ದ ಬಿಡುಗಡೆಯಾದ ಹೊಸತರಲ್ಲಿ ಆ್ಯಂಬರ್‌ಗ್ರಿಸ್ ಪರಿಮಳದಾಯಕವಾಗಿರುವುದಿಲ್ಲ. ಥೇಟ್ ತಿಮಿಂಗಿಲದ ಮಲದ ವಾಸನೆಯನ್ನೆ ಹೊಂದಿರುತ್ತದೆ. ದಿನಗಳು ಉರುಳಿದಂತೆ ಗಾಳಿ ಹಾಗೂ ಸಮುದ್ರ ನೀರಿನಿಂದ ರಾಸಾಯನಿಕ ಕ್ರಿಯೆಗಳು ಉಂಟಾಗಿ ಅದಕ್ಕೆ ವಿಶಿಷ್ಟ ಸುವಾಸನೆ ಪ್ರಾಪ್ತವಾಗುತ್ತದೆ. ಇದನ್ನು ಸುಗಂಧ ದ್ರವ್ಯ ತಯಾರಿಕೆ ಮಾತ್ರವಲ್ಲದೆ, ಸಾಂಪ್ರದಾಯಿಕ ಔಷಧಗಳು ಹಾಗೂ ಆಹಾರ ಉತ್ಪನ್ನಗಳಿಗೂ ಬಳಸಲಾಗುತ್ತದೆ. ಇನ್ನು ಇದಕ್ಕೆ ಲೈಂಗಿಕ ಶಕ್ತಿ ವರ್ಧನೆ ಸಾಮರ್ಥ್ಯ ಇದೆ ಎಂದು ಇದರ ಬಳಕೆ ಮಾಡುವವರ ಸಂಖ್ಯೆಯೂ ಸಹ ಸಾಕಷ್ಟಿದೆ ಎನ್ನಲಾಗಿದೆ.
40 ದೇಶಗಳಲ್ಲಿದೆ ನಿಷೇಧ !
ಸ್ಪರ್ಮ್ ವೇಲ್ ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿರುವ ಕಾರಣ ಭಾರತ, ಅಮೆರಿಕ, ಆಸ್ಪ್ರೇಲಿಯಾ ಸೇರಿದಂತೆ 40 ದೇಶಗಳಲ್ಲಿ ಆ್ಯಂಬರ್‌ಗ್ರಿಸ್ ಮಾರಾಟಕ್ಕೆ ನಿಷೇಧವಿದೆ. 1972ರ ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಸ್ಪರ್ಮ್ ವೇಲ್‌ನ ಯಾವುದೇ ಉತ್ಪನ್ನವನ್ನು ಮಾರಾಟ ಮಾಡುವುದು ಭಾರತದಲ್ಲಿ ಅಪರಾಧ. ಹೀಗಾಗಿಯೇ ದೇಶದಲ್ಲಿ ಆ್ಯಂಬರ್‌ಗ್ರಿಸ್ ಹೊಂದಿದವರ ಬಂಧನವಾಗುತ್ತಿದೆ. ಮೊದಮೊದಲು ಕಳ್ಳಸಾಗಣೆದಾರರನ್ನು ವಶಕ್ಕೆ ಪಡೆದಾಗ ಅವರ ಬಳಿ ಇರುವ ಮೇಣದಂತಹ ವಸ್ತು ಏನೆಂದು ಗೊತ್ತಾಗದೆ ಪೊಲೀಸರೂ ಕಂಗಾಲಾಗಿದ್ದರು. ಅಧ್ಯಯನದ ಬಳಿಕ ಇದರ ಮಹತ್ವ ಅವರಿಗೆ ಅರಿವಾಯಿತು. ಒಂದು ವೇಳೆ ಆ್ಯಂಬರ್‌ಗ್ರಿಸ್‌ಗೆ ನಿಷೇಧ ಇಲ್ಲದೆ ಹೋದರೆ ಬೇಟೆಗಾರರು ಅಳಿವಿನಂಚಿನಲ್ಲಿರುವ ಈ ಪ್ರಾಣಿಯನ್ನು ಬೇಟೆಯಾಡಲೂ ಹೇಸುವುದಿಲ್ಲ ಎನ್ನುತ್ತಾರೆ ತಜ್ಞರು.
ಭಾರತದಲ್ಲೂ ಇವೆ ಸ್ಪರ್ಮ್ ವೇಲ್
ಗುಜರಾತ್ ಹಾಗೂ ಒಡಿಶಾ ಸಮುದ್ರದಲ್ಲಿ ಸ್ಪರ್ಮ್ ವೇಲ್‌ಗಳು ಇವೆ. ಹವಾಮಾನ ಬದಲಾವಣೆಯಿಂದಾಗಿ ಇವು ದಕ್ಷಿಣದತ್ತ ಬಂದಿರಲೂಬಹುದು ಎಂಬ ಅಂದಾಜಿದೆ. ಮಹಾರಾಷ್ಟ್ರದಲ್ಲಿ ಆ್ಯಂಬರ್‌ಗ್ರಿಸ್ ಕಳ್ಳಸಾಗಣೆದಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಾವು ಅದನ್ನು ಕರ್ನಾಟಕದಿಂದ ತಂದಿದ್ದಾಗಿ ಬಂಧಿತರು ಹೇಳಿದ್ದರು. ತಮಿಳುನಾಡು ಪೊಲೀಸರು ಕೂಡ ಒಡಿಶಾದಿಂದ ಸ್ಪರ್ಮ್ ವೇಲ್‌ಗಳು ತಮಿಳುನಾಡಿನತ್ತ ಬರುತ್ತಿರಬಹುದು ಎಂದು ಶಂಕಿಸಿದ್ದರು. ಆದರೆ ತೀರಾ ಅಪರೂಪಕ್ಕೆ ಸಿಗುವ ಆ್ಯಂಬರ್‌ಗ್ರಿಸ್ ಭಾರತದಲ್ಲಿ 2021ರಲ್ಲಿ ಈ ಪ್ರಮಾಣದಲ್ಲಿ ಪತ್ತೆಯಾಗಿದ್ದೇಕೆ? ಈ ಮೊದಲಿನಿಂದಲೂ ಇದರ ಕಳ್ಳಸಾಗಣೆ ನಡೆಯುತ್ತಿತ್ತಾ? ಈಗ ಈ ದಂಧೆ ಬಯಲಾಗಿದೆಯಾ? ಭಾರತದಿಂದ ಇದು ಎಲ್ಲಿಗೆ ಹೋಗುತ್ತದೆ? ಎಂಬುದಕ್ಕೆ ಉತ್ತರವಿಲ್ಲ.
ಈ ವರ್ಷ ಭಾರತದ ಆರ್ಥಿಕತೆ ಭರ್ಜರಿ ಶೇ. 9.2 ರಷ್ಟು ಏರಿಕೆ!
ತನಿಖಾಧಿಕಾರಿಗಳ ಪ್ರಕಾರ, ಆ್ಯಂಬರ್‌ಗ್ರಿಸ್ ಬಗ್ಗೆ ಬಹುತೇಕ ಮೀನುಗಾರರಿಗೂ ಅರಿವಿಲ್ಲ. ಕೆಲವು ದಂಧೆಕೋರರು ಮೀನುಗಾರರ ಮೇಲೆ ನಿಗಾ ಇಟ್ಟು ಅವರ ಬಳಿ ಏನಾದರೂ ಆ್ಯಂಬರ್‌ಗ್ರಿಸ್ ಸಿಕ್ಕರೆ ಅದನ್ನು ಕಡಿಮೆ ಬೆಲೆಗೆ ಖರೀದಿಸಿ ದುಬಾರಿ ಬೆಲೆಗೆ ವಿದೇಶಕ್ಕೆ ಸಾಗಿಸುತ್ತಾರೆ. ಆ ಸಾಗಣೆಯ ಚೈನ್ ಲಿಂಕ್ ಭಾರತ ಆಗಿರಲೂಬಹುದು. ಹೆಚ್ಚಿನ ಪ್ರಕರಣಗಳಲ್ಲಿ, ಆ್ಯಂಬರ್‌ಗ್ರಿಸ್ ಸಮೇತ ಸಿಕ್ಕಿಬಿದ್ದವರಿಗೆ ಅದು ಎಲ್ಲಿಗೆ ಹೋಗುತ್ತಿತ್ತು? ಯಾರಿಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿಯೇ ಇರುವುದಿಲ್ಲ. ತಮಿಳುನಾಡಿಗೆ ಶ್ರೀಲಂಕಾದಿAದಲೂ ಆ್ಯಂಬರ್‌ಗ್ರಿಸ್ ಬರುತ್ತಿರಬಹುದು ಎಂಬ ಶಂಕೆ ಇದೆ.
ಯೆಮೆನ್ ಮೀನುಗಾರರು ಕೋಟ್ಯಧೀಶರಾದ ಕತೆ
ಯುದ್ಧದಿಂದ ಜರ್ಜರಿತವಾಗಿರುವ ಯೆಮೆನ್‌ನಲ್ಲಿ 2021ರ ಫೆಬ್ರವರಿಯಲ್ಲಿ ಮೀನುಗಾರರ ಗುಂಪೊ0ದು ಸತ್ತ ತಿಮಿಂಗಿಲ ಎಳೆಯುವಾಗ ಆ್ಯಂಬರ್‌ಗ್ರಿಸ್ ಸಿಕ್ಕಿತ್ತು. ಅದನ್ನು ಮಾರಾಟ ಮಾಡಿದಾಗ 11 ಕೋಟಿ ರೂಪಾಯಿಗಳಿಗೂ Æ ಅಧಿಕ ಹಣ ದೊರೆತಿತ್ತು. ಇದು ವಿಶ್ವಾದ್ಯಂತ ವ್ಯಾಪಕ ಪ್ರಚಾರ ಪಡೆದಿತ್ತು. ಆ್ಯಂಬರ್‌ಗ್ರಿಸ್ ಸಿಕ್ಕರೆ ರಾತ್ರೋ ರಾತ್ರಿ ಶ್ರೀಮಂತರಾಗಿಬಿಡಬಹುದು ಎಂಬ ನಂಬಿಕೆ ಅದಾದ ಬಳಿಕ ಬಲವಾಗಿ ಬೇರೂರಿದೆ.
ಮುಗ್ದಜೀವಿಯೊಂದರ ಸಹಜ ವಿಸರ್ಜನೆ ಮನುಷ್ಯರ ಕಾಳದಂಧೆಯ ಭಾಗವಾಗಿ ಬಡಪಾಯಿ ಸ್ಪರ್ಮ್ ವೇಲ್‌ಗಳು ನಿರ್ನಾಮವಾಗುತ್ತಿರುವುದು ದುರಂತವೇ ಸರಿ.
ಇದನ್ನೂ ನೋಡಿ: ಕಾಂಪ್ಲೆಕ್ಸ್ ತೆಗೆದು ಮಾಲ್ ಮಾಡಿದ್ರೆ ಜನರ ಆರೋಗ್ಯ ಹಾಳಾಗುತ್ತೆ | ಬಿಡಿಎ ನಮ್ಮ ಸ್ವತ್ತು ಖಾಸಗೀಯವರಿಗೆ ಕೊಡೋದಿಲ್ಲ