ಮಹಿಳಾ ಸಬಲೀಕರಣದತ್ತ ಸರ್ಕಾರ ಚಿತ್ತ ಇನ್ನೆಂದು ?

ಬೆಂಗಳೂರು : ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ದಿನದ ಆರಂಭವಾದಾಗಿನಿಂದ ಹಿಡಿದು ಮುಗಿಯುವ ತನಕ ಕುಟುಂಬ, ಮನೆ, ಸಮಾಜಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬರುತ್ತಿರುವ ಆಕೆಯ ಸಾಧನೆ,ತ್ಯಾಗಗಳನ್ನು ಸ್ಮರಿಸುವ ಹೊತ್ತು ಇದಾಗಿದೆ.

ಮೊಟ್ಟ ಮೊದಲಬಾರಿಗೆ ನ್ಯೂಯಾರ್ಕ್‌ ನಗರದಲ್ಲಿ ರೆಡಿಮೇಟ್‌ ಗಾರ್ಮೆಂಟ್ಸ್‌ ಮಹಿಳಾ ಕಾರ್ಮಿಕರ ಮೇಲೆ ನಡೆಯುತ್ತಿದ್ದ ಶೋಷಣೆ, ದಬ್ಬಾಳಿಕೆಯನ್ನು ಖಂಡಿಸುವ ಮೂಲಕ ಕಾರ್ಮಿಕ ಹೋರಾಟಗಾರ್ತಿ ಥೆರೇಸಾ ಮಲ್ಕೈಲ್ ಅವರು ಮಹಿಳಾ ದಿನಾಚರಣೆಗೆ ಅಡಿಪಾಯ ಹಾಕುತ್ತಾರೆ. ಇದರ ಹಿನ್ನೆಲೆಯನ್ನು ವಿಶ್ವಸಂಸ್ಥೆಯು ಮಾರ್ಚ್ 8 ಅನ್ನು ಅಂತರರಾಷ್ಟ್ರೀಯ ಮಹಿಳಾ ದಿನವೆಂದು ಘೋಷಣೆ ಮಾಡುವ ಮೂಲಕ 1975ರಲ್ಲಿ ಮೊಟ್ಟ ಮೊದಲ ಬಾರಿಗೆ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಇದಾದ ನಂತರ 1977 ರಲ್ಲಿ ಯು ಎನ್ ಜನರಲ್ ಅಸೆಂಬ್ಲಿಯು ಮಹಿಳೆಯರ ಹಕ್ಕುಗಳು ಮತ್ತು ಜಾಗತಿಕ ಶಾಂತಿಯನ್ನು ಬೆಂಬಲಿಸಲು ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನ ಎಂದು ಘೋಷಣೆ ಮಾಡಲಾಯಿತು.  ಅಂದಿನಿಂದ ಪ್ರತಿ ವರ್ಷ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಪ್ರತಿ ವರ್ಷ ವಿಶ್ವಸಂಸ್ಥೆಯು ಹೊಸ ಥೀಮ್​ನೊಂದಿಗೆ ಈ ದಿನವನ್ನು ಆಚರಣೆ ಮಾಡುತ್ತಿದೆ.

ಈ ವರ್ಷದ ಥೀಮ್​ ಏನು :
“ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ”. ಮಹಿಳೆಯರ ಸ್ಥಿತಿಗತಿ (CSW-67) ಆಯೋಗದ ಮುಂಬರುವ 67 ನೇ ಅಧಿವೇಶನದ ಆದ್ಯತೆಯ ಥೀಮ್‌ನೊಂದಿಗೆ ಈ ಥೀಮ್ ಅನ್ನು ಹೊಂದಿಸಲಾಗಿದೆ. “ಲಿಂಗ ಸಮಾನತೆ ಮತ್ತು ಎಲ್ಲಾ ಮಹಿಳೆಯರು ಮತ್ತು ಹುಡುಗಿಯರ ಸಬಲೀಕರಣಕ್ಕಾಗಿ ಡಿಜಿಟಲ್ ಯುಗದಲ್ಲಿ ನಾವೀನ್ಯತೆ ಮತ್ತು ತಾಂತ್ರಿಕ ಬದಲಾವಣೆ ಮತ್ತು ಶಿಕ್ಷಣ” ಎನ್ನುವುದು ಈ ವರ್ಷದ ಥೀಮ್‌ ಆಗಿದೆ.

ಮಹಿಳಾ ದಿನಾಚರಣೆ ಆಚರಣೆಯ ಉದ್ದೇಶ :
ಮಹಿಳೆಯರ ಸಾಧನೆಗಳನ್ನು ಪರಿಚಯಿಸಿ ಮತ್ತು ಅವರ ಸಾಧನೆಗಳನ್ನು ಉತ್ತೇಜಿಸಲು ಸಾಮಾಜಿಕವಾಗಿ ಹಾಗೂ ಸ್ಥಳೀಯವಾಗಿ ಆಚರಿಸಲಾಗುತ್ತದೆ. ಇದರ ಜೊತೆಹೆ ಮಹಿಳೆಯರ ಹಕ್ಕು ಮತ್ತು ಹೋರಾಟಗಳ ಕುರಿತು ಅಭಿಯಾನ,  ಚರ್ಚೆ, ಸ್ಪರ್ಧೆಗಳನ್ನು ಇಟ್ಟು ಮಹಿಳೆಯರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತಿದೆ.

ಯಾವೆಲ್ಲಾ ದೇಶಗಳಲ್ಲಿ ಇಂದು ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ :
ಭಾರತ,ನೇಪಾಳ, ಚೀನಾ, ಬಾಂಗ್ಲಾದೇಶ,ರಷ್ಯಾ,ಪೊಲ್ಯಾಂಡ್‌, ಇಟಲಿ ಮುತಾಂದ ಪ್ರಮುಖ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತಿದೆಯಾದರೂ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ತಮ್ಮ ಹಕ್ಕು ಭಾದ್ಯತೆಗಳಿಗಾಗಿ  ಪ್ರತಿದಿನ ಹೋರಾಟ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ.ಪ್ರತಿನಿತ್ಯ ಮಹಿಳೆಯ ಮೇಲಾಗುತ್ತಿರುವ ಜಾತಿ, ಲಿಂಗ ತಾರತಮ್ಯ, ವರದಕ್ಷಿಣೆ ಕಿರುಕುಳ, ಅತ್ಯಾಚಾರ ಇವುಗಳಾವುವು ನಿಂತಿಲ್ಲ. ಇಲ್ಲಿ ಪ್ರತಿನಿತ್ಯ ಆಕೆ ಹೋರಾಟ ಮಾಡುತ್ತಲೇ ಬರುತ್ತಿದ್ದಾಳೆ.

ಇದನ್ನೂ ಓದಿ : ಮಹಿಳೆಯರು ಭಾಗವಹಿಸದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ: ಎಸ್ ವರಲಕ್ಷ್ಮಿ

ನಾವು ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತೇವೆ‌ ,ಆದರೆ ಮಹಿಳೆಯರು ಸಮಸ್ಯೆಯ ಜೊತೆಗೆ ಬದುಕುತ್ತಿದ್ದಾರೆ :
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹಿಳಾ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ನಾವು ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತೇವೆ‌ . ಆದರೆ ಮಹಿಳೆಯರು ಸಮಸ್ಯೆಯ ಜೊತೆಗೆ ಬದುಕುತ್ತಿದ್ದಾರೆ. ಹೀಗಾಗಿ ಈ ವರ್ಷ ಬಜೆಟ್ ನಲ್ಲಿ ಹೊಲದಲ್ಲಿ ಕೆಲಸ ಮಾಡುವ ಎಲ್ಲ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ಸಾವಿರ ರೂ ನೀಡಲು ತೀರ್ಮಾನಿಸಲಾಗಿದೆ. ಅಂಗನವಾಡಿ ಕಾರ್ಯಕರ್ತರು ಎಲ್ಲ ಮಕ್ಕಳ ತಾಯಿಯಾಗಿ‌‌ ಕೆಲಸ ಮಾಡುತ್ತಿದ್ದಾರೆ. ಅವರ ಸಹನೆ ಮೆಚ್ಚುವಂತದ್ದು, ಅವರಿಗೆ ಕಳೆದ ವರ್ಷ 1000 ರೂ. ಈ ವರ್ಷ ಒಂದು ಸಾವಿರ. ರೂ. ಹೆಚ್ಚಳ ಮಾಡಲಾಗಿದೆ. ಉದ್ಯೋಗ, ಶಿಕ್ಷಣ ಮತ್ತು ಸಬಲೀಕರಣ ಎಂಬ ಮೂರು ಮಂತ್ರ ಅಳವಡಿಸಿಕೊಂಡು ಶಿಕ್ಷಣದ ಮೇಲೆ ಬಂಡವಾಳ ಹೂಡಿಮೆ ಮಾಡಲಾಗಿದೆ.
ಅದಕ್ಕಾಗಿ ಎಲ್ಲ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಕೊಡಲು‌ ತೀರ್ಮಾಸಲಾಗಿದೆ ಎಂದರಲ್ಲದೇ ಮಹಿಳೆಯರು ಎಲ್ಲ ರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ.‌ ಆತ್ಮವಿಶ್ವಾಸ ವಿದ್ದರೆ ಏನಾದರೂ ಸಾಧಿಸಬಹುದು ಎಂದರು.
ಸ್ತ್ರೀ ಸಾಮರ್ಥ್ಯ ಯೋಜನೆ ಅಡಿ 5 ಲಕ್ಷ ರೂ. ನೀಡಲಾಗುತ್ತಿದೆ. ಆರೂವರೆ ಕೊಟೆ ಜನಸಂಖ್ಯೆ ಇದೆ‌.‌ _13 ಕೋಟಿ ಕೈಗಳು ಕೆಲಸ ಮಾಡಿದರೆ ಇನ್ನೂ ಹೆಚ್ಚು ಅಭಿವೃದ್ದಿ ಸಾಧಿಸಲು ಸಾಧ್ಯ ಎಂದರು. ಸ್ತ್ರೀ ಶಕ್ತಿ ಯಿಂದ ರಾಜ್ಯದ ಅಭಿವೃದ್ಧಿ ಸಾಧ್ಯ ಎಂಬ ನಂಬಿಕೆ ನಮ್ಮ ಸರ್ಕಾರದ್ದು ಎಂದರು.

ಮಹಿಳೆಯ ಸುರಕ್ಷತೆಗೆ ನಮ್ಮ ಸರ್ಕಾರ ವ್ಯವಸ್ಥೆ ಕಲ್ಪಿಸಿದ್ದು, ಸುರಕ್ಷಿತ ನಗರ ಯೋಜನೆ ಗೆ ಚಾಲನೆ ನೀಡಲಾಗಿದೆ. ಏಳು ಸಾವಿರ ಕ್ಯಾಮೆರಾ ಅಳವಡಿಸಿ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದೆ. 400 ವಾಹನಗಳನ್ನು ಒದಗಿಸಲಾಗಿದೆ. ಈ ಯೋಜನೆಯನ್ನು ತಾಲ್ಲೂಕು ಕೇಂದ್ರ ಹಾಗೂ ಎಲ್ಲಾ ಮಹಾನಗರಪಾಲಿಕೆಗಳಿಗೆ ವಿಸ್ತರಣೆ ಮಾಡಲಾಗುವುದು ಎಂದರು. ಎಲ್ಲಾ ಹಂತಗಳಲ್ಲಿ ಮಹಿಳಾ ಸುರಕ್ಷತೆ ಅತ್ಯಂತ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ನಾವು ಯಾರದೇ ಮನೆಯಲ್ಲಿ ಹುಟ್ಟಿದರೂ ನಾವು ಬೆಳೆದು ಇತರರಿಗೆ ನೆರವಾಗುವ ಕೆಲಸ ಮಾಡಬೇಕು. ಇದರಿಂದ ಸಮಾಜಕ್ಕೆ ಅನುಕೂಲವಾಗಲಿದೆ. ಐಟಿ ಬಿಟಿ, ಬ್ಯಾಂಕಿಂಗ್ ಕ್ಷೇತ್ರ, ಸೇರಿದಂತೆ ಎಲ್ಲಾ ರಂಗದಲ್ಲಿಯೂ ಮುಂದಿರುವ ಮಹಿಳೆಯರು ವಿಮಾನ, ಬಸ್ , ಟ್ರಕ್, ಟ್ರ್ಯಾಕ್ಟರ್ ಎಲ್ಲವನ್ನೂ ಓಡಿಸುತ್ತಾರೆ. ನಮ್ಮ ಕನ್ನಡದ ಮಹಿಳೆಯರು ಅಂತಾರಾಷ್ಟ್ರೀಯ ‌ಮಟ್ಟದಲ್ಲಿ ಹೆಸರು ಮಾಡಬೇಕು ಎಂದು ಸಿಎಂ ಆಶಿಸಿದ್ದಾರೆ. ಆದರೆ ಕರ್ನಾಟಕ ರಾಜ್ಯದಲ್ಲಿಯೂ ಮಹಿಳಾ  ದೌಜನ್ಯಗಳು ಸಾಕಷ್ಟು ನಡೆಯುತ್ತಿದ್ದು, ಮಂದ ಗತಿಯಲ್ಲಿ ಸರ್ಕಾರ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಇದಕ್ಕೆ ಮಂಡ್ಯದಲ್ಲಿ ನಡೆದ ಮಹಿಳಾ ಹತ್ಯೆಗಳನ್ನು ನಾವು ಉದಾಹರಣೆಯಾಗಿ ನೋಡಬಹುದಾಗಿದೆ.

ಮಹಿಳಾ ಏಳಿಗೆಗೆ ಬೆಂಬಲ ನೀಡಿದರೆ ದಿನಾಚರಣೆ ಸಾರ್ಥಕ :
ಮಹಿಳಾ ದಿನಾಚರಣೆ ಎನ್ನುವುದು ಕೇವಲ ಬಾಯಲ್ಲಿ ಹೇಳಲು, ಕೇವಲ ಸ್ಟೇಟಸ್ ವಾಟ್ಸಪ್ ಫೇಸ್ಬುಕ್ ಗೆ ಹಾಕಲು ಬಹಳ ಅಂದವಾಗಿ ಅಲಂಕಾರದಂತೆ ಕಾಣುತ್ತದೆ. ಮಹಿಳೆಯರ ಬಗ್ಗೆ ವಿವಿಧ ಹೊಗಳಿಕೆಯ ಬಗ್ಗೆ ಕವನ, ಲೇಖನ, ಸಂದೇಶ ಎಲ್ಲವೂ ನಿಜ ನಮಗೆ ಖುಷಿ ಕೊಡುತ್ತೆ ಆದರೆ ನಮ್ಮನ್ನ ನಾವು ಆತ್ಮಾವಲೋಕನ ಮಾಡಿಕೊಂಡಾಗ ನಾವು ನಿಜವಾಗಲೂ ಕೇವಲ ಭ್ರಮೆಯಲ್ಲಿದ್ದೇವೆ ಅಂತ ಅನ್ಸುತ್ತೆ ನಮ್ಮ ಹೆಣ್ಣುಮಕ್ಕಳು ಯಾವುದಕ್ಕೂ ಮುಂದೆ ಬರದೇ ಇರೋದು, ನಮ್ಮ ಕೈಲಿ ಏನೂ ಆಗಲ್ಲ ಅಂತಾ ಕೈ ಜೊತೆಗೆ ಮನಸ್ಸನ್ನು ಕಟ್ಟಿ ಹಾಕಿ ಕೊಂಡಿರುವವವರು ಹೆಚ್ಚಿನ ಮಂದಿ ಕಾಣ್ತಾರೆ. ಆದರೆ ಮನೆ ಕೆಲಸ ಕಚೇರಿ ಕೆಲಸ ಗಂಡ ಮಕ್ಕಳ ಕುಟುಂಬದ ಲಾಲನೆ ಪೋಷಣೆ ಜೊತೆ ಸಮಾಜ ಮುಖಿ ಕಾರ್ಯಗಳನ್ನು ಮಾಡುವಂತ ಮಹಿಳಾ ಸಾಧಕಿಯರು ಇತ್ತೀಚಿಗೆ ಕಾಣಿಸಿಕೊಳ್ಳುತ್ತಿದ್ದಾರೆ ಇಂತಹ ಮಹಿಳೆಯರನ್ನು ಗುರುತಿಸಲು.ಎಲ್ಲಾ ಮಹಿಳೆಯರಿಗೆ ಪ್ರೇರಣೆಯಾಗಲು ಹಾಗೆ ಕಾಲಕ್ರಮೇಣ ಮಹಿಳೆಯರು ಸ್ವಾಭಿಮಾನಿ, ಸ್ವಾವಲಂಬಿಯಾಗಲು ಜಾಗೃತಿ ಮೂಡಲು ಈ ಮಹಿಳಾ ದಿನಾಚರಣೆಯು ಸ್ಪೂರ್ತಿಯಾಗುವುದರಲ್ಲಿ ಸಂದೇಹವಿಲ್ಲ.

ಇವತ್ತಿನ ಮಹಿಳೆಯರ ಪರಿಸ್ಥಿತಿಗೆ ಬಂದರೆ ಇನ್ನೂ ಬಾಲ್ಯ ವಿವಾಹ, ಶೋಷಣೆ, ಅತ್ಯಾಚಾರ, ವರದಕ್ಷಿಣೆ ಕಿರುಕುಳ ಇವೆಲ್ಲವೂ ಇನ್ನೂ ಜೀವಂತವಾಗಿರಲು ಕಾರಣ ಸಾಮಾಜಿಕ ಕಟ್ಟುಪಾಡುಗಳ ಜೊತೆಗೆ ಮಹಿಳೆಯ ಒಳಗಡೆ ಭಯ ಆತಂಕ ಹಿಂಜರಿಕೆ ಜಾಗೃತಿ ಸತ್ತು ಹೋಗಿರುವುದೇ ಕಾರಣ ಅಂತ ಹೇಳಬಹುದು

ನಿಜವಾಗಲೂ ಈ ಮಹಿಳಾ ದಿನಾಚರಣೆ ಹೇಗಿರಬೇಕು ಅಂದ್ರೆ ಪ್ರತಿಮನೆಯಲ್ಲೂ ಅವಳ ಆಸೆ, ಆಕಾಂಕ್ಷೆಗಳಿಗೆ ಗೌರವ ಕೊಡುವುದು ಅವಳ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಅವಳ ಕನಸುಗಳಿಗೆ ನೀರೆರೆಯುವುದು ಹಾಗೆ ಸಮಾಜದಲ್ಲಿ ಭ್ರೂಣಹತ್ಯೆ, ಅತ್ಯಾಚಾರಗಳಾದಾಗ ಈ ಬಗ್ಗೆ ಕಠಿಣ ಕಾನೂನು ಕ್ರಮ ಜಾರಿಗೆ ತರುವುದರ ಮೂಲಕ ಮನೆ ಮತ್ತು ಸಮಾಜದಲ್ಲಿ ಮಹಿಳಾ ಸಾಧಕಿಯರಿಗೆ ನೈತಿಕ ಸ್ಥೈರ್ಯ ತುಂಬಿ, ಅವಳ ಏಳ್ಗೆಗಾಗಿ ಬೆಂಬಲ ಕೊಟ್ಟರೆ ಈ ಮಹಿಳಾ ದಿನಾಚರಣೆ ಸಾರ್ಥಕವಾಗುತ್ತದೆ.

ಸುಜಾತ ಹೆಚ್ ಕೆ
ಸಹ ಶಿಕ್ಷಕಿ
ಪಾಂಡವಪುರ ತಾ
ಮಂಡ್ಯ ಜಿ

ಮಹಿಳೆಯರಿಗೆ ಮತ್ತಷ್ಟು ಸವಲತ್ತುಗಳು ದೊರಕಲಿ : 

ವಿಶ್ವ ಪರಿಸರ ದಿನಾಚರಣೆ ,ಯೋಗ ದಿನಾಚರಣೆ, ಕ್ರೀಡಾ ದಿನಾಚರಣೆಯಂತೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾಡುವಂತಹ ಕಾರ್ಯದ ಮೂಲಕ ನೆನೆಯುವಂತಹ ದಿನಾಚರಣೆಯಾಗಬೇಕು ಹೇಗೆಂದರೆ ಅವರಿಗೆ ಎಲ್ಲಾ ರೀತಿಯ ಸವಲತ್ತುಗಳು ದೊರಕುವಂತೆ ಆಗಬೇಕು ಉದಾಹರಣೆಗೆ ವಸತಿ,
ಮೀಸಲಾತಿ, ಸಂಘ ಸಂಸ್ಥೆಗಳು, ಸ್ವಯಂ ಉದ್ಯೋಗ, ಕಡುಬಡವರಿಗೆ ಆಹಾರ ವ್ಯವಸ್ಥೆ, ಉದ್ಯೋಗದಲ್ಲಿ ಆದಾಯ, ವಿದ್ಯಾಭ್ಯಾಸ, ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸಾ ವಿಧಾನ ಇವುಗಳತ್ತ ಸರ್ಕಾರ ಗಮನಹರಿಸಿ ಚಾಲ್ತಿಗೆ ತರಬೇಕು.ಎಲ್ಲೋ ಒಂದು ಕಡೆ ಎಲ್ಲಾ ವಿದ್ಯಾಭ್ಯಾಸ ಫಲಿತಾಂಶ ಇದ್ದರು ಹೆಣ್ಣುಮಕ್ಕಳಿಗೆ ಅವಕಾಶದ ಕೊರತೆ ಕಡಿಮೆ ಇದ್ದು ಹೆಚ್ಚು ಹೆಚ್ಚು ಅವಕಾಶಗಳು ಒದಗಿಸುವ ಕಾರ್ಯಕ್ರಮವನ್ನು ಮಾಡಬೇಕಾಗುತ್ತದೆ. ಮಹಿಳೆಯರು 25% ಧನ ಏರಿಕೆ ಮಾಡಬೇಕು, ಉದ್ಯೋಗದಲ್ಲಿ ವಿದ್ಯಾಭ್ಯಾಸಕ್ಕಾಗಿ 30% ಕಡಿಮೆ ರಿಯಾಯಿತಿ ನೀಡಬೇಕು, ಬ್ಯಾಂಕ್ ಖಾತೆಯಲ್ಲಿ ಬಡ್ಡಿದರ ಮಹಿಳೆಯರಿಗೆ 50% ಇಳಿಕೆ ಮಾಡಿದ್ದಲ್ಲಿ ಮಹಿಳಾ ದಿನಾಚರಣೆಗೆ ಸಾರ್ಥಕತೆ ಸಿಕ್ಕಂತಾಗುತ್ತದೆ.

ಚೈತ್ರ ಪ್ರಭು – ಚಿತ್ರಕಲಾ ಕಲಾವಿದರು
ಬೆಂಗಳೂರು. 

 

Donate Janashakthi Media

Leave a Reply

Your email address will not be published. Required fields are marked *