ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣಾ :ಫಲಿತಾಂಶ ಪ್ರಕಟಣೆಗೆ ಕಲ್ಕತ್ತ ಹೈಕೋರ್ಟಿನ ಮಧ್ಯಂತರ ತಡೆ

ಹೈಕೋರ್ಟ್ ನಿರ್ದೇಶನಗಳನ್ನು ಬಹಿರಂಗವಾಗಿ ಉಲ್ಲಂಘಿಸಲಾಗಿದೆ  – ಸಿಪಿಐಎಂ ಪೊಲಿಟ್‍ಬ್ಯುರೊ ಆಪಾದನೆ

ಕೋಲ್ಕತ್ತ: ಪಶ್ಚಿಮ ಬಂಗಾಳದ ಮೂರು ಹಂತಗಳ ಪಂಚಾಯತಿಗಳಿಗೆ ಮತದಾನ ಮತ್ತು ನಂತರ ಮತ ಎಣಿಕೆಯ ಪ್ರಕ್ರಿಯೆಯಲ್ಲಿ ನಡೆದಿರುವ ಹಿಂಸಾಚಾರಗಳು ಮತ್ತು ಅವ್ಯವಹಾರಗಳ ಆರೋಪಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು ಫಲಿತಾಂಶಗಳ ಘೋಷಣೆ, ಇದಕ್ಕೆ ಸಂಬಂಧಪಟ್ಟಂತೆ ತನ್ನ ಅಂತಿಮ ಆದೇಶಗಳಿಗೆ ಒಳಪಡುತ್ತದೆ ಎಂದು ಕಲ್ಕತ್ತ ಹೈಕೋರ್ಟ್ ಜುಲೈ 11 ರಂದು ಹೇಳಿದೆ. ಈಗಾಗಲೇ ಚುನಾಯಿತರಾಗಿದ್ದಾರೆ ಎಂದು ಘೋಷಿಸಲಾದ ಅಭ್ಯರ್ಥಿಗಳಿಗೆ ಈ ಅಂಶವನ್ನು ತಿಳಿಸಬೇಕೆಂದು ಅದು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ರಾಜ್ಯ ಚುನಾವಣಾ ಆಯೋಗದ ಸ್ಪಂದನೆ ಅಗತ್ಯ ಮಟ್ಟದಲ್ಲಿಲ್ಲ- ವಿಶೇಷವಾಗಿ ನ್ಯಾಯಾಲಯ ಈ ಇಡೀ ಪ್ರಕ್ರಿಯೆಯ ಮೇಲೆ ನಿಗಾ ಇಟ್ಟಿದ್ದು, ಜೂನ 13 ರಂದು ಮೊದಲ ತೀರ್ಪನ್ನೂ ನೀಡಿರುವಾಗ-ಎಂದು ಹೈಕೋರ್ಟ್ ಟಿಪ್ಪಣಿ ಮಾಡಿದೆ. ಚುನಾವಣೆಗಳ ಫಲಿತಾಂಶಗಳ ನಂತರವೂ ಹಲವು ಕಡೆ ಹಿಂಸಾಚಾರ ಭುಗಿಲೆದ್ದಿದ್ದು ಶಾಂತಿ ಸ್ಥಾಪನೆಯ ಹೊಣೆಗಾರಿಕೆ ಇರುವ ರಾಜ್ಯ ಸರಕಾರ ಅದನ್ನು ತಡೆಯುವಲ್ಲಿ ಅಸಮರ್ಥವಾಗಿದೆ ಎಂದಿರುವ ಹೈಕೋರ್ಟ್ ಅರ್ಜಿದಾರರ ಎಲ್ಲ ಆರೋಪಗಳಿಗೆ ಸಂಬಂಧಿಸಿದಂತೆ ಅಫಿಡವಿಟ್‍ ಗಳನ್ನು ಸಲ್ಲಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗ, ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರಕ್ಕೆ ನಿರ್ದೇಶನವಿತ್ತಿದೆ, ಮುಂದಿನ ವಿಚಾರಣೆಯನ್ನು ಜುಲೈ 19 ರಂದು ನಡೆಸಲಾಗುವುದು ಎಂದು ಅದು ಹೇಳಿದೆ.

ಇದನ್ನೂ ಓದಿ:ಮತದಾನದ ದಿನವೂ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ

ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆಕ್ರೋಶ: ಪ್ರಜಾಪ್ರಭುತ್ವದ ಅಪಹಾಸ್ಯ ಮಾಡಿರುವ ಈ ಚುನಾವಣೆಯ ಪ್ರಹಸನದಿಂದಾಗಿ ಕಲ್ಕತ್ತ ಹೈಕೋರ್ಟ್ ಫಲಿತಾಂಶಗಳ ಪ್ರಕಟಣೆಗೆ ತಡೆ ನೀಡುವ ಮಧ್ಯಂತರ ಆದೇಶವನ್ನು ಹೊರಡಿಸಬೇಕಾಗಿ ಬಂದಿದೆ ಎಂದು ಪೊಲಿಟ್‍ ಬ್ಯುರೊ ಹೇಳಿದೆ.

ರಾಜ್ಯ ಆಡಳಿತ ಮತ್ತು ರಾಜ್ಯ ಚುನಾವಣಾ ಆಯೋಗವು ಆಡಳಿತ ಪಕ್ಷದೊಂದಿಗೆ ಶಾಮೀಲಾಗಿ ಕಾರ್ಯನಿರ್ವಹಿಸುತ್ತಿದ್ದು, ಜನರು ಚಲಾಯಿಸಿದ ಆಯ್ಕೆಯನ್ನು ದೊಡ್ಡ ಪ್ರಮಾಣದಲ್ಲಿ ಹುಸಿಗೊಳಿಸುವಲ್ಲಿ ತೊಡಗಿವೆ, ರಾಜ್ಯ ಚುನಾವಣಾ ಆಯೋಗದ ಆದೇಶಗಳನ್ನು, ಹೈಕೋರ್ಟ್ ನಿರ್ದೇಶನಗಳನ್ನು ಬಹಿರಂಗವಾಗಿ ಉಲ್ಲಂಘಿಸಲಾಗಿದೆ ಎಂದು ಪೊಲಿಟ್‍ಬ್ಯುರೊ ಆಪಾದಿಸಿದೆ.

ಭಾಂಗಾರ್ ಪ್ರದೇಶದ ಜಿಲ್ಲಾ ಪರಿಷತ್ತಿನ ಸ್ಥಾನವೊಂದರಲ್ಲಿ ಎಡಪಕ್ಷಗಳ ಬೆಂಬಲಿತ ಪ್ರತಿಪಕ್ಷ ಐಎಸ್‍ಎಫ್ ಅಭ್ಯರ್ಥಿ ಭಾರಿ ಅಂತರದಿಂದ ಗೆದ್ದಿದ್ದರು. ಆದರೆ ಚುನಾವಣಾ ಅಧಿಕಾರಿಗಳು ಫಲಿತಾಂಶವನ್ನು ಬದಲಾಯಿಸಿ ಟಿಎಂಸಿ ಅಭ್ಯರ್ಥಿ ಚುನಾಯಿತರಾಗಿದ್ದಾರೆ ಎಂದು ಘೋಷಿಸಿದರು. ಇದರಿಂದಾಗಿ ಜನಗಳ ಬೃಹತ್‍ ಪ್ರತಿಭಟನೆ ನಡೆದಾಗ, ಪೋಲೀಸರು ಮನಬಂದಂತೆ ಗುಂಡು ಹಾರಿಸಿ ನಾಲ್ವರ ಸಾವಿಗೆ ಕಾರಣರಾದರು. ತರುವಾಯ, ಪೊಲೀಸರು ಭಯೋತ್ಪಾದನೆಯನ್ನು ಹರಿಬಿಟ್ಟರು. ಆ ಜಾಗಕ್ಕೆ ಈಗ ಯಾರೂ ಪ್ರವೇಶಿಸದಂತಾಗಿದೆ.

ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಚುನಾವಣಾ ಹಿಂಸಾಚಾರ ಮತ್ತು ಕೈವಾಡ: ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡನೆ

ಭಾಂಗಾರ್ ಪ್ರದೇಶದ ಈ ಘಟನೆ ವ್ಯಾಪಕ ಪ್ರಮಾಣದಲ್ಲಿ ಫಲಿತಾಂಶಗಳನ್ನು ಹುಸಿಗೊಳಿಸುವುದರ ಪ್ರತೀಕವಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ರಾಜ್ಯ ಚುನಾವಣಾ ಆಯೋಗದ ವೆಬ್‍ ಸೈಟನ್ನು ನಿಷ್ಕ್ರಿಯಗೊಳಿಸಲಾಯಿತು ಮತ್ತು ಫಲಿತಾಂಶಗಳನ್ನು ತಿರುಗುಮುರುಗುಗೊಳಿಸಲು ಅನುಕೂಲವಾಗುವಂತೆ ಮತ ಎಣಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸಲಾಯಿತು ಎಂದು ಆರೋಪಿಸಿದೆ. ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಪರಿಷತ್ತಿನ ಫಲಿತಾಂಶಗಳು ಯಾವುದೇ ರೀತಿಯಲ್ಲಿ ನ್ಯಾಯಸಮ್ಮತವಾಗಿಲ್ಲ. ಏಕೆಂದರೆ ಎಣಿಕೆಯು ನಡುರಾತ್ರಿಯಲ್ಲಿ ನಡೆದಿದೆ. ಮತ್ತು ಎಡ ಮತ್ತು ಇತರ ಜಾತ್ಯತೀತ ಶಕ್ತಿಗಳ ಎಣಿಕೆ ಏಜೆಂಟರನ್ನು ಮತ ಎಣಿಕೆ ಕೇಂದ್ರದಿಂದ ಬಲವಂತದಿಂದ ಹೊರಹಾಕಲಾಯಿತು. ಎಷ್ಟೊಂದು ಅಕ್ರಮ ನಡೆದಿದೆಯೆಂದರೆ ಎಣಿಕೆ ಕೇಂದ್ರಗಳ ಹೊರಗೆ ಸಿಪಿಐ(ಎಂ) ಪರವಾಗಿ ಮುದ್ರೆಯೊತ್ತಲಾದ ಮತಪತ್ರಗಳು ಕಾಣಸಿಕ್ಕವು. ಅವನ್ನು ಎಣಿಕೆ ಪ್ರಕ್ರಿಯೆಯಲ್ಲಿ ಪರಿಗಣಿಸಲಿಲ್ಲ ಎಂಬುದು ಸ್ಪಷ್ಟ ಎಂದು ಸಿಪಿಐ(ಎಂ) ಹೇಳಿದೆ.

ಪ.ಬಂಗಾಳದ ಜನತೆಯ ಪ್ರಜಾಪ್ರಭುತ್ವಕ್ಕಾಗಿನ ಹೋರಾಟದ ಬೆಂಬಲಕ್ಕೆ ನಿಲ್ಲಬೇಕು ಈ ಕುಟಿಲೋಪಾಯದ ವಿಧಾನವನ್ನು , ಬುಡಮಟ್ಟದ ವಾಸ್ತವತೆಯನ್ನು ಸಂಪೂರ್ಣವಾಗಿ ತಿರುಚಿ ಟಿಎಂಸಿಯ ಗೆಲುವನ್ನು ಖಚಿತಪಡಿಸಿಕೊಳ್ಳಲು ಮತ್ತು ಬಿಜೆಪಿಯನ್ನು ಎರಡನೇ ಸ್ಥಾನದಲ್ಲಿರುವಂತೆ ಮಾಡುವುದಕ್ಕಾಗಿಯೇ ಕೈಗೊಳ್ಳಲಾಗಿದೆ ಎಂಬುದು ಕಾಣಿಸುತ್ತದೆ. ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಈ ರೀತಿ ಈ ಚುನಾವಣೆಯ ಪ್ರಹಸನ ಪ್ರಜಾಪ್ರಭುತ್ವದ ಅಪಹಾಸ್ಯದ ಮಟ್ಟಕ್ಕೆ ಇಳಿದಿರುವುದರಿಂದಾಗಿಯೇ ಕಲ್ಕತ್ತ ಹೈಕೋರ್ಟ್ ಫಲಿತಾಂಶ ಪ್ರಕಟಣೆಗೆ ತಡೆ ಹಾಕುವ ಮಧ್ಯಂತರ ಆದೇಶವನ್ನು ಹೊರಡಿಸಬೇಕಾಗಿ ಬಂದಿದೆ ಎಂದು ಹೇಳಿದೆ.

ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಟಿಎಂಸಿ ಮತ್ತು ಬಿಜೆಪಿ ವಿರುದ್ಧ ಜೀವನ್ಮರಣ ಹೋರಾಟದಲ್ಲಿ ತೊಡಗಿರುವ ಎಡ, ಕಾಂಗ್ರೆಸ್, ಐಎಸ್‌ಎಫ್ ಮತ್ತು ಇತರ ಜಾತ್ಯತೀತ ಶಕ್ತಿಗಳೊಂದಿಗೆ ಸೌಹಾರ್ದವನ್ನು ವ್ಯಕ್ತಪಡಿಸುತ್ತ ಸಿಪಿಐ(ಎಂ) ಪೊಲಿಟ್ ಬ್ಯೂರೋ, ಇಂತಹ ಕಠಿಣ ಸನ್ನಿವೇಶದಲ್ಲಿ, ದೇಶದ ಪ್ರಜಾಸತ್ತಾತ್ಮಕ ಮನೋಭಾವದ ಜನರು ಪಶ್ಚಿಮ ಬಂಗಾಳದ ಜನತೆಯ ಬೆಂಬಲಕ್ಕೆ ನಿಲ್ಲಬೇಕು ಎಂದು ಆಗ್ರಹಪಡಿಸಿದೆ.

Donate Janashakthi Media

Leave a Reply

Your email address will not be published. Required fields are marked *