ಕೋಲ್ಕತ್ತ: ಪಶ್ಚಿಮ ಬಂಗಾಳ ರಾಜ್ಯಕ್ಕೆ ಇತ್ತೀಚಿಗಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ)ಯಿಂದ ಆಯ್ಕೆಯಾಗಿದ್ದ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ.
ಬಿಜೆಪಿಯಿಂದ ಈಗಾಗಲೇ ಲೋಕಸಭೆ ಸದಸ್ಯರಾದ ಜಗನ್ನಾಥ ಸರ್ಕಾರ್ ಮತ್ತು ನಿಶಿತ್ ಪ್ರಮಾಣಿಕ್ ಅವರು ವಿಧಾನಸಭಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದನ್ನು ಓದಿ: ಕೊರೊನಾ ನಿರ್ವಹಣೆ ವೈಫಲ್ಯ: ಕೇಂದ್ರ, ರಾಜ್ಯ ಸರಕಾರದ ವಿರುದ್ಧ ಧರಣಿ ಆರಂಭಿಸಿದ ಕಾಂಗ್ರೆಸ್
ಈ ಇಬ್ಬರು ಲೋಕಸಭೆಯಲ್ಲಿ ರಣಘಾಟ್ ಮತ್ತು ಕೂಚ್‌ಬೆಹರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇಂದು ವಿಧಾನಸಭೆ ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.
ಬಿಜೆಪಿ ಪಕ್ಷದ ಸೂಚನೆ ಮೇರೆಗೆ ಈ ನಿರ್ಧಾರಕ್ಕೆ ಬಂದು ಇವರಿಬ್ಬರೂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಅಲ್ಲದೆ, ಲೋಕಸಭಾ ಸದಸ್ಯರಾದ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಮತ್ತು ಲಾಕೆಟ್ ಚಟರ್ಜಿ, ರಾಜ್ಯಸಭೆ ಸದಸ್ಯ ಸ್ವಪನ್ ದಾಸ್‌ಗುಪ್ತಾ ಅವರು ಸಹ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಈ ಮೂವರು ಸೋಲನ್ನು ಅನುಭವಿಸಿದರು.
ಇದನ್ನು ಓದಿ: ಪ್ರಧಾನ ಮಂತ್ರಿಗಳಿಗೆ ಮತ್ತೊಮ್ಮೆ 12 ಪ್ರತಿಪಕ್ಷಗಳ ಮುಖಂಡರ ಜಂಟಿ ಪತ್ರ
ಈ ಬಗ್ಗೆ ಟಿಎಂಸಿ ಸಂಸದ ಡೆರೆಕ್ ಒ’ಬ್ರಿಯೆನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು “ಬಿಜೆಪಿ ತನ್ನ 4 ಲೋಕಸಭಾ ಸಂಸದರನ್ನು ಮತ್ತು ಒಬ್ಬ ರಾಜ್ಯಸಭಾ ಸಂಸದರನ್ನು ಬಂಗಾಳ ಚುನಾವಣೆಯಲ್ಲಿ ಕಣಕ್ಕಿಳಿಸಿತು. ಅವರಲ್ಲಿ 3 ಮಂದಿ ಚುನಾವಣೆಯಲ್ಲಿ ಸೋತರು ಮತ್ತು 2 ಮಂದಿ ಗೆದ್ದರು. ಈ ವಿಜೇತ ಸಂಸದರು ಸಹ ಇಂದು ರಾಜೀನಾಮೆ ನೀಡಿದರು. ವಿಶ್ವದ ಅತಿದೊಡ್ಡ ಪಕ್ಷವು ಚುನಾವಣೆಯಲ್ಲಿ ಶೂನ್ಯ ಸಾಧಿಸಿದ ವಿಶ್ವ ದಾಖಲೆಯನ್ನು ನಿರ್ಮಿಸಿತು ಎಂದು ಹೇಳಿದ್ದಾರೆ.
ಒಟ್ಟು 292 ಸದಸ್ಯ ಬಲದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 77 ಸ್ಥಾನ ಗೆದ್ದಿದ್ದರೆ, ತೃಣಮೂಲ ಕಾಂಗ್ರೆಸ್ ಪಕ್ಷ 213 ಸ್ಥಾನ ಗೆಲ್ಲುವ ಮೂಲಕ ಅಧಿಕಾರ ಉಳಿಸಿಕೊಂಡಿತ್ತು.