ಪಶ್ಚಿಮ ಬಂಗಾಳ: ಬಿಜೆಪಿಗೆ ಭಾರೀ ಸೋಲು

– ವಸಂತರಾಜ ಎನ್.ಕೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಭಾರೀ ಸೋಲನ್ನು ಅನುಭವಿಸಿದೆ. ರಾಜ್ಯಕ್ಕೆ ಪ್ರಧಾನಿ ಮೋದಿ, ಗೃಹಮಂತ್ರಿ ಅಮಿತ್‌ ಷಾ, ಬಿಜೆಪಿ ಅಧ್ಯಕ್ಷ ನಡ್ಡಾ ಅವರ ಹೆಚ್ಚು ಕಡಿಮೆ ದೈನಿಕ ಭೇಟಿ; ಬಿಜೆಪಿಯ ತಾರಾಪ್ರಚಾರಕರ ಭೇಟಿ ಮತ್ತು ಇತರೇ ಪ್ರಚಾರ ರಣನೀತಿಗೆ ಅನುಕೂಲವಾಗುವಂತೆ ಹಾಗೂ ಎದುರಾಳಿ ಪಕ್ಷಗಳಿಗೆ ಅನಾನುಕೂಲವಾಗುವಂತೆ ಚುನಾವಣಾ ಕಮೀಷನ್ ರೂಪಿಸಿದ 8 ಹಂತಗಳ ಈವರೆಗಿನ ಅತ್ಯಂತ ದೀರ್ಘ ಚುನಾವಣೆ; ಸಿ.ಬಿ., .ಡಿ ಮುಂತಾದ ಕೇಂದ್ರೀಯ ಸಂಸ್ಥೆಗಳ ದುರುಪಯೋಗ; ಬಿಜೆಪಿಯ ಅಗಣಿತ ಹಣ, ಕಾರ್ಯಕರ್ತರ, ಸಂಪನ್ಮೂಲಗಳ ಬಲ; ಚುನಾವಣಾ ನೀತಿ ಸಂಹಿತೆಯನ್ನು ಗಾಳಿಗೆ ತೂರಿ ಜಾತಿಮತಧರ್ಮಗಳ ಹೆಸರಲ್ಲಿ ಧ್ರುವೀಕರಣ; ಚುನಾವಣೆಯ ಮೊದಲು ಹಲವು ತೃಣಮೂಲ ಶಾಸಕರು ನಾಯಕರನ್ನು ಸತತವಾಗಿಆಪರೇಷನ್ ಕಮಲದಲ್ಲಿ ಸೆಳೆದುಕೊಂಡದ್ದುಇವೆಲ್ಲದರ ನಂತರವೂ ಬಿಜೆಪಿಯ ಸೋಲು ಬಹಳ ಗಮನಾರ್ಹವಾದ ರಾಜಕೀಯ ಬೆಳವಣಿಗೆ. ಅದರಲ್ಲೂ ಬಿಜೆಪಿ ಚುನಾವಣೆಯನ್ನು ಮೋದಿ ವರ್ಸಸ್ ದೀದಿ ಎನ್ನುವಂತೆ ಮೋದಿಯರಾಜಕೀಯ ಪ್ರತಿಷ್ಠೆಯನ್ನು ಪಣಕ್ಕಿಟ್ಟದ್ದು, ಬಿಜೆಪಿ ಗೆಲುವು ಪೂರ್ವನಿಶ್ಚಿತ ಎನ್ನುವಂತೆ ಪ್ರಚಾರ ಮಾಡಿದ್ದು ಹಾಗೂ 200 ಕ್ಕಿಂತ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದು ಶಾ ಎದೆ ತಟ್ಟಿ ಹೇಳುತ್ತಾ ತಿಗುಗಿದ್ದು ಹಿನ್ನೆಲೆಯಲ್ಲಿ ಇದು ಬಿಜೆಪಿಗೆ ಅತ್ಯಂತ ಅವಮಾನಕಾರಿ ಸೋಲು ಸಹ.

ತೃಣಮೂಲ ಕಾಂಗ್ರೆಸ್ 292 ಸೀಟುಗಳಲ್ಲಿ (ಅಭ್ಯರ್ಥಿಗಳ ಮರಣದಿಂದಾಗಿ 2 ಸೀಟುಗಳಲ್ಲಿ ಚುನಾವಣೆ ಮುಂದೂಡಲಾಗಿದೆ) 213 ಸೀಟುಗಳನ್ನು ಮತ್ತು ಶೇ.47.94 ಮತಗಳನ್ನು ಪಡೆದು ಆಶ್ಚರ್ಯಕರ ರೀತಿಯಲ್ಲಿ ಮೂರನೆಯ ಬಾರಿ ಅಧಿಕಾರಕ್ಕೆ ಬಂದಿದೆ. ಆದರೆ ತೃಣಮೂಲ ನಾಯಕಿ ಮಮತಾ ಬ್ಯಾನರ್ಜಿ ತಮ್ಮ ಕ್ಷೇತ್ರದಲ್ಲಿ ತಮ್ಮ ಮಾಜಿ ನಿಕಟವರ್ತಿ ಮತ್ತು ತನ್ನ ನಾಯಕಿಗೆ ‘ದ್ರೋಹ’ಮಾಡಿ ಬಿಜೆಪಿಗೆ ಸೇರಿದ ಸುವೇಂದು ಅಧಿಕಾರಿ ಅವರ ಎದುರು ಸೋತಿದ್ದಾರೆ. 200 ಸೀಟುಗಳನ್ನು ಗೆದ್ದು ಸರಕಾರ ನಡೆಸಿಯೇ ತೀರುತ್ತೇವೆ ಎಂದು ಬೀಗುತ್ತಿದ್ದ ಬಿಜೆಪಿ 77 ಸೀಟುಗಳಿಗೆ ತೃಪ್ತಿ ಪಡಬೇಕಾಗಿದೆ. ಅದು ಶೇ. 38.1 ಮತಗಳನ್ನು ಗಳಿಸಿದೆ. ಇನ್ನೊಂದು ಆಶ್ಚರ್ಯಕರ ಬೆಳವಣಿಗೆಯಲ್ಲಿ ಎಡ ಪಕ್ಷಗಳು, ಕಾಂಗ್ರೆಸ್ ಮತ್ತು ಇಂಡಿಯನ್ ಸೆಕ್ಯುಲರ್ ಫ್ರಂಟ್ ಗಳಿದ್ದ ಸಂಯುಕ್ತ ಮೋರ್ಚಾ ಒಂದು ಸೀಟು ಮಾತ್ರ ಪಡೆದಿದೆ. ಇಂಡಿಯನ್ ಸೆಕ್ಯುಲರ್ ಫ್ರಂಟ್ ಆ ಸೀಟನ್ನು ಗಳಿಸಿದ್ದು, ಎಡಪಕ್ಷಗಳು ಮತ್ತು ಕಾಂಗ್ರೆಸ್ ಯಾವುದೇ ಸೀಟು ಗಳಿಸಿಲ್ಲ. ಸಂಯುಕ್ತ ಮೋರ್ಚಾ ಒಟ್ಟಾಗಿ ಶೇ. 8 ಮತಗಳನ್ನು ಗಳಿಸಿದೆ.

ಇದನ್ನು ಓದಿ: ನಿಲ್ಲದೆ ಸಾಗಿದೆ ಕೊವಿಡ್ ಉಬ್ಬರ-ತಪ್ಪಿಸಬಹುದಾಗಿದ್ದ ಸಾವುಗಳು ತಕ್ಷಣವೇ ಆಕ್ಸಿಜನ್ ಹರಿವು, ಸಾಮೂಹಿಕ ಲಸಿಕೀಕರಣಕ್ಕೆ ಕ್ರಮ – ಮತ್ತೊಮ್ಮೆ ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹ

ಪ.ಬಂಗಾಳದ ಚುನಾವಣಾ ಫಲಿತಾಂಶವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಕಳೆದ ಕೆಲವು ಚುನಾವಣೆಗಳ ಶೇಕಡಾವಾರು ಮತಗಳಿಕೆಯ ಮತ್ತು ಚುನಾವಣೋತ್ತರ ಸಮೀಕ್ಷೆಗಳ ಕೆಲವು ಅಂಶಗಳ ಅಂಕೆಸಂಖ್ಯೆಗಳನ್ನು ಗಮನಿಸಬೇಕು. ಕೋಷ್ಟಕ 1 ಮತ್ತು 2 2011ರಿಂದ 2021ರ ಚುನಾವಣೆವರೆಗಿನ ಸೀಟು ಗಳಿಕೆ ಮತ್ತು ಮತಗಳಿಕೆಯ ಅಂಕೆಸಂಖ್ಯೆಗಳನ್ನು ಕೊಡುತ್ತವೆ.

ಬಿಜೆಪಿ ಕಳೆದ (2019) ಲೋಕಸಭೆ ಚುನಾವಣೆಗೆ ಹೋಲಿಸಿದರೆ ಶೇಕಡಾ ಮತ ಮತ್ತು ಸೀಟು ಗಳಿಕೆ ಎರಡರಲ್ಲೂ ಕುಸಿತ ಕಂಡಿದೆ. ಸೀಟು ಗಳಿಕೆ (2019ರ ಲೋಕಸಭಾ ಚುನಾವಣೆಯಲ್ಲಿ ಅದು ಅತಿ ಹೆಚ್ಚು ಮತ ಪಡೆದ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ) 121 ರಿಂದ 77ಕ್ಕೆ ಕುಸಿದಿದೆ. ಆದರೆ ಕಳೆದ (2016) ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಶೇಕಡಾ ಮತ ಮತ್ತು ಸೀಟು ಗಳಿಕೆ ಎರಡರಲ್ಲೂ ಭಾರೀ ಏರಿಕೆ ಕಂಡಿದೆ. ಸೀಟು ಗಳಿಕೆ 3 ರಿಂದ 77ಕ್ಕೆ ಏರಿದೆ. ಮತಗಳಿಕೆ ಶೇ. 10.3ರಿಂದ ಶೇ. 38.1ಕ್ಕೆ ಏರಿದೆ. ಲೋಕಸಭಾ ಚುನಾವಣೆಯಲ್ಲಿ (ಮತಗಳಿಕೆ ಮತ್ತು ಸೀಟುಗಳಿಕೆ) ಕಂಡ ಏರುಗತಿಯನ್ನು 2014-2016ರಂತೆ, ಈ ಬಾರಿಯೂ (2019-2021) ಬಿಜೆಪಿಗೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದಕ್ಕೆ ಹೋಲಿಸಿದರೆ ಎಡರಂಗ 2011ರಿಂದ ಸತತವಾಗಿ ಮತಗಳಿಕೆ ಮತ್ತು ಸೀಟುಗಳಿಕೆ ಎರಡರಲ್ಲೂ ಸತತ ಇಳಿಕೆ ಕಂಡಿದೆ. ಕಾಂಗ್ರೆಸ್ 2011-16 ಅವಧಿಯಲ್ಲಿ ಸ್ವಲ್ಪ ಏರಿಕೆ ಕಂಡರೂ, ಆ ನಂತರ ಸತತ ಇಳಿಕೆ ಕಂಡಿದೆ. ಈ ವಿದ್ಯಮಾನ ಅರ್ಥಮಾಡಿಕೊಳ್ಳಬೇಕಾದರೆ ಅಲ್ಲಿನ ಕಳೆದ ಎರಡು ದಶಕಗಳ ರಾಜಕೀಯ ಬೆಳವಣಿಗೆಯನ್ನು ನೋಡಬೇಕು.

ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಪಲ್ಲಟಗಳು

2014ರ ವರೆಗೆ ಬಂಗಾಳ ಆರ್ಥಿಕ ವಿಷಯಗಳ ಸುತ್ತ ಇರುವ ಎಡ-ಬಲಗಳ ವರ್ಗ ರಾಜಕಾರಣವಿತ್ತು. ರೈತ-ಕಾರ್ಮಿಕ ವರ್ಗ ಸಖ್ಯತೆಯ ಮೇಲೆ ಆಧಾರಿತ ದುಡಿಯುವ ಜನರು ಮತ್ತು ಹೆಚ್ಚಿನ ಮಧ್ಯಮ ವರ್ಗವನ್ನು ಒಳಗೊಂಡ ಎಡಪಕ್ಷಗಳ ಜನತಾ ನೆಲೆ ಒಂದು ಕಡೆ, ಇನ್ನೊಂದು ಕಡೆ ಭೂಮಾಲಕ-ಬಂಡವಾಳಶಾಹಿ ಮತ್ತು ಅವರ ಬಾಲಬಡುಕರ, ಮಧ್ಯಮ ವರ್ಗದ ಒಂದು ವಿಭಾಗ ಹಾಗೂ ಎಡ ಸಂಘಟನಾ ವಲಯದಿಂದ ಹೊರಗಿದ್ದ ದುಡಿಯುವವರ ಕೂಟ ಇನ್ನೊಂದು ಕಡೆ. ಎಡ ಜನತಾ ನೆಲೆಯಲ್ಲಿ ಇಲ್ಲದ ದುಡಿಯುವವರು ಸೇರಿದಂತೆ ಈ ಕೂಟ ಹೆಚ್ಚಾಗಿ ಕಾಂಗ್ರೆಸ್ ನ್ನು ಬೆಂಬಲಿಸುತ್ತಿತ್ತು. ಪ್ರಗತಿಪರ ಜನಪರ ನೀತಿಗಳನ್ನು ಎತ್ತಿ ಹಿಡಿಯುವ ಎಡರಂಗವನ್ನು ಉರುಳಿಸಲು ದುರ್ಬಲಗೊಳಿಸಲು, ಭೂಮಾಲಕ-ಬಂಡವಾಳಶಾಹಿ ವರ್ಗ ಕಾಂಗ್ರೆಸ್ ಮೂಲಕ ಎಡ ಕಾರ್ಯಕರ್ತರ ಮೇಲೆ ದಾಳಿ, ಗೂಂಡಾಗಿರಿಯ ರಾಜಕೀಯ ಮಾಡುತ್ತಿತ್ತು. ಆದರೆ ಅದರ ಪ್ರತಿನಿಧಿಯಾದ ಕಾಂಗ್ರೆಸ್ ಶಿಥಿಲವಾಗುತ್ತಾ ದುರ್ಬಲವಾಗುತ್ತಾ ಹೋದಂತೆ ಅದಕ್ಕೆ ಇನ್ನೊಂದು ರಾಜಕೀಯ ಪಕ್ಷದ ಅಗತ್ಯ ಕಂಡಿತು.

ಕಾಂಗ್ರೆಸ್ ನಿಂದ ಹೊರ ಬಂದು, ಬಲಪಂಥೀಯ ಜನಮರುಳು ಸಾಮೂಹಿಕ ರಾಜಕೀಯ ಒಂದು ಕಡೆ, ಇನ್ನೊಂದು ಕಡೆ ದುಡಿಯುವ ಜನರ ಸಂಘಟನೆಗಳ ಮತ್ತು ಎಡ ಕಾರ್ಯಕರ್ತರ ಮೇಲೆ ದಾಳಿ-ದಾಂಧಲೆ ಗೂಂಡಾಗಿರಿ ನಡೆಸುವ ಹೊಸ ರಾಜಕೀಯ ಮಾಡಲಾರಂಭಿಸಿದ ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸನ್ನು ಭೂಮಾಲಕ-ಬಂಡವಾಳಶಾಹಿ ವರ್ಗ ಬಲವಾಗಿ ಬೆಂಬಲಿಸಲು ಆರಂಭಿಸಿತು. 1990ರ ದಶಕದ ನವ-ಉದಾರವಾದಿ ನೀತಿಗಳಿಂದಾಗಿ ಒಂದು ಕಡೆ ದುಡಿಯುವ ಜನರ ಸಂಕಷ್ಟಗಳು ಅಪಾರವಾಗಿ ಹೆಚ್ಚಿದ್ದು, ಇನ್ನೊಂದು ಕಡೆ ಒಕ್ಕೂಟ ತತ್ವದ ಮೇಲೆ ಸತತ ದಾಳಿಯಿಂದಾಗಿ ಅದಕ್ಕೆ ಪರಿಹಾರ ಒದಗಿಸುವ ರಾಜ್ಯ ಸರಕಾರಗಳ ಸಾಮರ್ಥ್ಯ ಕುಗ್ಗಿದ್ದು ಜನತೆಯಲ್ಲಿ ಅತೃಪ್ತಿ ಇತ್ತು. ತೃಣಮೂಲ ಕಾಂಗ್ರೆಸ್ 2011ರಲ್ಲಿ ಸಿಂಗೂರ್, ನಂದಿಗ್ರಾಮಗಳಲ್ಲಿ ಕೈಗಾರಿಕೀರಣದ ನೀತಿಯ ವಿರುದ್ಧ ಅಪಪ್ರಚಾರ ನಡೆಸಿ, ಅದರ ವಿರುದ್ಧ ಚಳುವಳಿ ನಡೆಸಿ ಅದರಲ್ಲಿ ತಾವೇ ಹಿಂಸಾಚಾರ ನಡೆಸಿ ಅದನ್ನು ಸರಕಾರದ ಮೇಲೆ ಹಾಕಿ (ತಮ್ಮ ನಿಕಟವರ್ತಿಯಾಗಿದ್ದು ಆನಂತರ ಬಿಜೆಪಿ ಸೇರಿದ ಸುವೇಂದು ಅಧಿಕಾರಿಯ ವಿರುದ್ಧ 2021ರ ಚುನಾವಣಾ ಪ್ರಚಾರದಲ್ಲಿ ಮಮತಾ ಬ್ಯಾನರ್ಜಿ ಸ್ವತಃ ಇದನ್ನು ಒಪ್ಪಿಕೊಂಡಿದ್ದಾರೆ), ಆ ಚಳುವಳಿಗೆ ಪ್ರತಿಕ್ರಿಯೆಯಲ್ಲಿ ಎಡರಂಗ ಸರ್ಕಾರದ ಕೆಲವು ತಪ್ಪುಗಳ ಪೂರ್ಣ ಉಪಯೋಗ ಪಡೆದು 2011ರಲ್ಲಿ ತೃಣಮೂಲ ಅಧಿಕಾರಕ್ಕೆ ಬಂದಿತು.

ಇದನ್ನು ಓದಿ: ಎಲ್‌.ಡಿ.ಎಫ್‌.ಗೆ ಅಭೂತಪೂರ್ವ ಚಾರಿತ್ರಿಕ ಜನಾದೇಶ – ಸಿಪಿಐ(ಎಂ) ಕೇರಳ ರಾಜ್ಯ ಕಾರ್ಯದರ್ಶಿ ಮಂಡಳಿ

ಆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕು. ಅಧಿಕಾರಕ್ಕೆ ಬಂದ ಕೂಡಲೇ ವಿರೋಧ ಪಕ್ಷಗಳ ದಮನಕ್ಕೆ ಮುಂದಾದ ತೃಣಮೂಲ ಮುಖ್ಯವಾಗಿ ಎಡಪಕ್ಷಗಳ ಕಚೇರಿ ವಶಪಡಿಸಿಕೊಳ್ಳುವುದು, ಬೆಂಕಿ ಹಾಕುವುದು, ಕಾರ್ಯಕರ್ತರ ಮೇಲೆ ಹಿಂಸಾಚಾರ ಕೊಲೆ ಅತ್ಯಾಚಾರಗಳನ್ನು ಹರಿಯಬಿಡುವುದು ಮಾಡುತ್ತಿತ್ತು. ಚುನಾವಣೆಗಳಲ್ಲಿ ವಿರೋಧ ಪಕ್ಷಗಳು ನಾಮಪತ್ರ ಸಲ್ಲಿಸದಂತೆ, ಪ್ರಚಾರ ಮಾಡದಂತೆ, ಮತದಾನದ ದಿನ ಎಡ ಬೆಂಬಲಿಗರು ಮತದಾನ ಮಾಡದಂತೆ ಗೂಂಡಾಗಿರಿ ಮಾಡುತ್ತಿತ್ತು. ಅಧಿಕಾರಕ್ಕೆ ಬಂದ ಮೇಲೆ ಕೃಷಿ ಅಥವಾ ಕೈಗಾರಿಕಾ ಕ್ಷೇತ್ರದಲ್ಲಾಗಲಿ ಯಾವುದೇ ಗಮನಾರ್ಹ ಗಂಭೀರ ದೂರಗಾಮಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳದೆ, ಕೆಲ ಕಣ್ಣುಕಟ್ಟಿನ ಕಲ್ಯಾಣ ಯೋಜನೆಗಳನ್ನು ಚುನಾವಣೆಯ ಸುತ್ತಮುತ್ತ ಜಾರಿ ಮಾಡುವ ಬೂರ್ಜ್ವಾ-ಭೂಮಾಲಕ ತಂತ್ರಗಳನ್ನು ಕರಗತ ಮಾಡಿಕೊಂಡಿತು. ಅದರಲ್ಲೂ ತೃಣಮೂಲ ಕಾರ್ಯಕರ್ತರ‘ಕಟ್’, ನಾರದ ಚಿಟ್ ಫಂಡ್ ಮುಂತಾದ ಹಗರಣಗಳ ಮಹಾ ಭ್ರಷ್ಟಾಚಾರಗಳ ಮೂಲಕ ಮೊದಲ ಅವಧಿಯಲ್ಲೇ ತೀವ್ರ ಅತೃಪ್ತಿಗೆ ಕಾರಣವಾಯಿತು. ಈ ಅತೃಪ್ತಿಯನ್ನು ಹಿಂದೆ ತನ್ನ ‘ಮೈತ್ರಿ ಪಕ್ಷ’ವಾಗಿದ್ದ ತೃಣಮೂಲ ವಿರುದ್ಧ ಬಳಸಿಕೊಂಡು ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಮುಂದಾಯಿತು.

2014ರಿಂದ ಕೋಮುಧ್ರುವೀಕರಣದ ರಾಜಕಾರಣ

2014ರ ಚುನಾವಣಾ ಪ್ರಚಾರದಿಂದ ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಆಯಿತು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ‘ಜೈ ಶ್ರೀರಾಮ್’ನ್ನು ಯುದ್ಧ ಘೋಷಣೆಯಂತೆ ಬಳಸಿದ್ದು, ಬಾಂಗ್ಲಾದೇಶದ ಮುಸ್ಲಿಮರ ನುಸುಳುವಿಕೆ, ಮುಸ್ಲಿಮರ ಜನಸಂಖ್ಯೆ ಏರಿ ಹಿಂದೂಗಳು ಅಲ್ಪಸಂಖ್ಯಾತರಾಗುವ – ಹುಸಿ ವಿಷಯಗಳನ್ನು ದೊಡ್ಡದು ಮಾಡುತ್ತಾ ಬಿಜೆಪಿಯು ಕೋಮು-ಧ್ರುವೀಕರಣದ ರಾಜಕೀಯ ಮಾಡಲಾರಂಭಿಸಿತು. ಕೋಮುವಾದದ ಕುರಿತು ತೃಣಮೂಲದ ಅಸಡ್ಡೆಯನ್ನು ಬಳಸಿಕೊಂಡು ಸಂಘ ಪರಿವಾರದ ಸಂಘಟನೆಗಳನ್ನು ವ್ಯಾಪಕಗೊಳಿಸಿತು. 2014ರಲ್ಲಿ ಕೋಮು-ಧ್ರುವೀಕರಣದ ಮೂಲಕ ತನ್ನ ರಾಜಕೀಯ ನೆಲೆಯನ್ನು ಕಂಡುಕೊಳ್ಳಲು ಆರಂಭಿಸಿತು. 2016ರ ವಿಧಾನಸಭೆಯ ಚುನಾವಣೆಯಲ್ಲಿ ಅದು ಫಲಕೊಡದಿದ್ದರೂ ರಾಜಕೀಯವನ್ನು ಕೋಮುವಾದಿಕರಣಗೊಳಿಸಿ ಬಂಗಾಳದ ಕೋಮುಸಾಮರಸ್ಯ ಮತ್ತು ಸೆಕ್ಯುಲರ್ ರಾಜಕೀಯವನ್ನು ನಿಧಾನವಾಗಿ ಆದರೆ ಸತತವಾಗಿ ಬುಡಮೇಲು ಮಾಡುವಲ್ಲಿ ಯಶಸ್ವಿಯಾಯಿತು. ಸೆಕ್ಯುಲರ್ ಅಥವಾ ಯಾವುದೇ ಸೈದ್ಧಾಂತಿಕ ವಿಷಯದ ಕುರಿತಾಗಿ ದೃಢವಾದ ಯಾವುದೇ ನೀತಿ ಇಲ್ಲದ ತೃಣಮೂಲ ಈ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ. ತೃಣಮೂಲದ ದುರಾಡಳಿತ, ಭ್ರಷ್ಟಾಚಾರ, ಗೂಂಡಾರಾಜ್ಯದ ವಿರುದ್ಧ ಅತೃಪ್ತಿ ಮತ್ತು ಕೋಮುವಾದಿ ಧ್ರುವೀಕರಣದ ಪೂರ್ಣ ಫಲವನ್ನು ಬಿಜೆಪಿ 2019ರಲ್ಲಿ ಪಡೆಯಿತು. ಬಿಜೆಪಿಯ ಮತಗಳಿಕೆ ಮತ್ತು ಸೀಟುಗಳಿಕೆಯಿಂದ ಹೌಹಾರಿದ ಮಮತಾ ಎಲ್ಲ ಬೂರ್ಜ್ವಾ-ಭೂಮಾಲಕ ಪಕ್ಷಗಳಂತೆ ಒಂದು ಕಡೆ ‘ಮೃದು-ಹಿಂದುತ್ವ’ ಇನ್ನೊಂದು ಕಡೆ ಪ್ರತಿ-ಧ್ರುವೀಕರಣದ ತಂತ್ರ ಹೂಡಿದರು. ಇದು ಧ್ರುವೀಕರಣವನ್ನು ಇನ್ನಷ್ಟು ಗಟ್ಟಿ ಮಾಡುತ್ತಾ ಹೋಯಿತು. ವಿರೋಧ ಪಕ್ಷಗಳ ಮೇಲೆ ಹಿಂಸಾಚಾರ, ಭ್ರಷ್ಟಾಚಾರ, ಕೋಮುದ್ವೇಷದ ನಿಯಂತ್ರಣದ ವೈಫಲ್ಯದ ಹಿನ್ನೆಲೆಯಲ್ಲಿ, ತಾನು ಅಧಿಕಾರಕ್ಕೆ ಬರಲು ಇದೇ ಅತ್ಯುತ್ತಮ ಅವಕಾಶ ಎಂದು ಬಗೆದ ಬಿಜೆಪಿಯು ಅತ್ಯಂತ ಆಕ್ರಾಮಕ ಚುನಾವಣಾ ತಂತ್ರವನ್ನು ಅನುಸರಿಸಿತು. ಕೋಮು ಧ್ರುವೀಕರಣದ ಜೊತೆಗೆ ಕೆಲವು ಆಯ್ದ ಜಾತಿ-ಬುಡಕಟ್ಟುಗಳ ಧ್ರುವೀಕರಣಕ್ಕೆ ಪ್ರಯತ್ನಿಸಿತು.

ಇದನ್ನು ಓದಿ: ಕೋವಿಡ್ ನಿಂದ ನಲುಗಿಹೋದ ಸಮಸ್ತ ಜನರ ಸಂಕಷ್ಟಗಳ ಪರಿಹಾರಕ್ಕೆ ಸಿಪಿಐ(ಎಂ) ಮನವಿ

ಆದರೆ ಚುನಾವಣಾ ಫಲಿತಾಂಶದ ವಿವರವಾದ ಅಂಕೆಸಂಖ್ಯೆಗಳು ಮತ್ತು ಕೆಲವು (ಪ್ರಮುಖವಾಗಿ ಲೋಕನೀತಿ-ಸಿ.ಎಸ್.ಡಿ.ಎಸ್) ಚುನಾವಣೋತ್ತರ ಸಮೀಕ್ಷೆಗಳನ್ನು ಪರಿಶೀಲಿಸಿದರೆ, ಈ ಧ್ರುವೀಕರಣದ ಪ್ರಯತ್ನಗಳು ವಿಫಲವಾದದ್ದು ಮಾತ್ರವಲ್ಲ ಅದಕ್ಕೆ ಮುಳುವಾದ ಹಾಗೆ ಕಾಣುತ್ತದೆ. 2016ಕ್ಕೆ ಹೋಲಿಸಿದರೆ ಅದರ ಪ್ರಗತಿಗೆ ಈ ಧ್ರುವೀಕರಣದ ಪ್ರಯತ್ನಗಳೇ ಕಾರಣವಾದರೂ 2019ಕ್ಕೆ ಹೋಲಿಸಿದರೆ ಕುಸಿಯಲು ಧ್ರುವೀಕರಣದ ಪ್ರಯತ್ನದ ‘ಅತಿ’ಗಳು ಮತ್ತು ಅದರ ಸಹಜ ಮಿತಿಗಳು ಕಾರಣವಾಗಿವೆ ಎಂಬಂತೆ ಕಾಣುತ್ತದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ‘ಜೈ ಶ್ರೀರಾಮ್’ನ್ನು ಯುದ್ಧ ಘೋಷಣೆಯಂತೆ ಬಳಸಿದ್ದು, ಬಾಂಗ್ಲಾದೇಶದ ಮುಸ್ಲಿಮರ ನುಸುಳುವಿಕೆ, ಮುಸ್ಲಿಮರ ಜನಸಂಖ್ಯೆ ಏರಿ ಹಿಂದೂಗಳು ಅಲ್ಪಸಂಖ್ಯಾತರಾಗುವ – ಇವು ಒಂದು ಹಂತದ ಕೋಮು-ಧ್ರುವೀಕರಣ ಸಾಧಿಸಿ ಬಿಜೆಪಿಗೆ ಮತಗಳನ್ನು ತಂದಿತು. ಆದರೆ ಧ್ರುವೀಕರಣದ ‘ಅತಿ’ ಒಂದು ಕಡೆ ಸೆಕ್ಯುಲರ್ ಜನತೆಯ ದೊಡ್ಡ ವಿಭಾಗದಲ್ಲಿ ಆತಂಕ ಉಂಟು ಮಾಡಿದರೆ, ಮುಸ್ಲಿಂ ಸಮುದಾಯದಲ್ಲಿ ಪ್ರತಿ-ಧ್ರುವೀಕರಣವನ್ನು ಉಂಟು ಮಾಡಿತು. ಸಿಎಎ-ಎನ್.ಆರ್.ಸಿ ಬಳಸಿ ಬಾಂಗ್ಲಾದೇಶದ ನುಸುಳುಕೋರರನ್ನು ವಾಪಸು ಕಳಿಸುವ ಘೋಷಣೆ ಕೆಲವು ಜನವಿಭಾಗಗಳಿಗೆ ಖುಷಿ ತಂದರೆ ಹಲವು ಜನವಿಭಾಗಗಳಿಗೆ ಆತಂಕ ತಂದಿತು. ತೃಣಮೂಲದ ‘ಮೃದು ಹಿಂದುತ್ವ’ ಮತ್ತು ಮುಸ್ಲಿಂ ಧ್ರುವೀಕರಣದ ಪ್ರಯತ್ನಗಳು ಇದರ ಪೂರ್ಣ ಪ್ರಯೋಜನ ಪಡೆದವು. ಈ ಎರಡೂ ವಿಭಾಗಗಳಿಗೆ ಬಿಜೆಪಿಯನ್ನು ಸೋಲಿಸುವುದು ಆದ್ಯತೆಯ ವಿಷಯವಾಯಿತು. ಇದೇ ರೀತಿಯಲ್ಲಿ ಬಿಜೆಪಿಯು 2019ರ ವರೆಗೆ ಕೆಳಜಾತಿಗಳನ್ನು ಅವರದೇ ಐಡೆಂಟಿಟಿ ಮತ್ತು ಆಕ್ರಾಮಕ ‘ಹಿಂದೂ ಐಡೆಂಟಿಟಿ’ ಆಧಾರದ ಮೇಲೆ ವ್ಯಾಪಕವಾಗಿ ಅಣಿ ನೆರೆಸಿತ್ತು. ಈ ವಿಭಾಗಗಳ 2021ರಲ್ಲಿ ಅಣಿನೆರೆಸುವಿಕೆ ಶಿಥಿಲವಾಗಿ ಇಂತಹ ಕೆಲವು ವಿಭಾಗಗಳಲ್ಲಿ (ಒಬಿಸಿ ಶೇ.75 ರಿಂದ 49ಕ್ಕೆ, ರಾಜಬಂಶಿ ಶೇ.75 ರಿಂದ 59ಕ್ಕೆ ಮತ್ತು ಆದಿವಾಸಿಗಳು ಶೇ.62 ರಿಂದ 46ಕ್ಕೆ) ಗಮನಾರ್ಹ ಕುಸಿತ ಕಂಡು ಬಂದಿದೆ ಎಂದು ಲೋಕನೀತಿ ಚುನಾವಣೋತ್ತರ ಸಮೀಕ್ಷೆ ವರದಿಮಾಡಿದೆ. ಐಡೆಂಟಿಟಿ ಆಧಾರಿತ ಧ್ರುವೀಕರಣಕ್ಕೆ ಒಂದು ಮಿತಿಯಿದೆ. ಬಹಳ ಸಮಯ ಇಂತಹ ಧ್ರುವೀಕರಣವನ್ನು ಸಾಧಿಸುವುದು ಕಾರ್ಯಸಾಧ್ಯವಲ್ಲ ಎಂಬ ಸತ್ಯವನ್ನು ಇವು ಸಾಬೀತು ಪಡಿಸುತ್ತವೆ.

ಆಪರೇಷನ್ ಕಮಲಕ್ಕೆ ಸೋಲು

ಬಿಜೆಪಿಗೆ ಪಶ್ಚಿಮ ಬಂಗಾಳದಲ್ಲಿ ಜನರ ವಿಶ್ವಾಸ ಗಳಿಸಿದ ನಾಯಕತ್ವವಾಗಲಿ, ಕಾರ್ಯಕರ್ತರಾಗಲಿ ಇರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕೇಂದ್ರದ ನಾಯಕರು, ಹೊರಗಿನ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಚುನಾವಣಾ ಪ್ರಚಾರ ನಿರ್ವಹಿಸುವುದು ಸಮಸ್ಯೆಯಾಗಲಿಲ್ಲ. ಆದರೆ ವಿಧಾನಸಭಾ ಚುನಾವಣೆಯಲ್ಲಿ ಜನರಿಗೆ ಗುರುತು ಇರುವ ವಿಶ್ವಾಸವಿರುವ ರಾಜ್ಯದಲ್ಲಿ ನೆಲೆಸಿರುವ ನಾಯಕರು, ಕಾರ್ಯಕರ್ತರು ಇಲ್ಲದಿದ್ದರೆ, ಎಷ್ಟೇ ಜನಪ್ರಿಯ ಪ್ರಭಾವಶಾಲಿ ರಾಷ್ಟ್ರ ನಾಯಕರಿದ್ದರೂ ಜನಬೆಂಬಲ ಪಡೆಯುವುದು ಕಷ್ಟ ಎಂಬುದು ಸರ್ವವಿಧಿತ. ಈ ನ್ಯೂನತೆ ಹೋಗಲಾಡಿಸಲು ದೊಡ್ಡ ಸಂಖ್ಯೆಯಲ್ಲಿ ತೃಣಮೂಲ ನಾಯಕರು ಶಾಸಕರನ್ನು ಬಿಜೆಪಿ ‘ಆಪರೇಶನ್ ಕಮಲ’ ಮೂಲಕ ಸೆಳೆಯಿತು. ಆದರೆ ಇವರಲ್ಲಿ ಹೆಚ್ಚಿನವರು ಸಹಜವಾಗಿಯೇ ಅತ್ಯಂತ ಭ್ರಷ್ಟರು, ದಮನಕಾರಿಗಳು ಮತ್ತು ಜನಪ್ರಿಯತೆ ಕಳೆದುಕೊಂಡವರಾಗಿದ್ದರು. ಇಂತಹ ಕೆಲವರಿಗೆ ತೃಣಮೂಲ ಟಿಕೆಟು ಸಿಗುವುದು ಅನುಮಾನ ಇದ್ದದ್ದರಿಂದ ಅವರು ಬಿಜೆಪಿಗೆ ಸೇರಿಕೊಂಡರು. ರಾತ್ರೋರಾತ್ರಿ ಪಕ್ಷಕ್ಕೆ ತೃಣಮೂಲದಿಂದ ಬಂದವರಿಗೆ ಟಿಕೇಟು ಕೊಟ್ಟದ್ದು ಮೂಲ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಲ್ಲಿ ತೀವ್ರ ಅತೃಪ್ತಿ ಉಂಟು ಮಾಡಿತು, ಎರಡು ಬಣಗಳ ನಡುವೆ ಹೊಡೆದಾಟಗಳಿಗೆ ಕಾರಣವಾಗಿತ್ತು. ಹೀಗೆ ಈ ನಡೆ ಬಿಜೆಪಿಗೆ ಮುಳುವಾಯಿತು. 25 ಶಾಸಕರು ಸೇರಿದಂತೆ 148 ತೃಣಮೂಲದಿಂದ ಪಕ್ಷಾಂತರ ಮಾಡಿದ ನಾಯಕರು ಬಿಜೆಪಿಯಿಂದ ಸ್ಪರ್ಧಿಸಿದ್ದರು. ಇವರಲ್ಲಿ ಮಮತಾ ಅವರ ನಿಕಟವರ್ತಿಗಳಾದ ಮತ್ತು ಪ್ರಭಾವಿ ನಾಯಕರಾದ ಸುವೇಂದು ಅಧಿಕಾರಿ, ಮುಕುಲ್ ರಾಯ್ ಸೇರಿದಂತೆ 6 ಜನ ಮಾತ್ರ ಗೆದ್ದಿದ್ದಾರೆ. ಬಿಜೆಪಿಯ ಈ ತಂತ್ರ ಬ್ಯೂಮರಾಂಗ್ ಆಯಿತು ಎಂಬುದು ಸ್ಪಷ್ಟ. ತೃಣಮೂಲ ನಾಯಕರಲ್ಲಿ ಹಲವರು ಭ್ರಷ್ಟರು ಇದ್ದಿದ್ದು, ಆಡಳಿತ ಅತ್ಯಂತ ಭ್ರಷ್ಟವಾಗಿತ್ತು ಎಂಬುದು ನಿಜ. ಆದರೆ ಬಿಜೆಪಿಯ ‘ವಾಶಿಂಗ್ ಮಶೀನ್’ ಹಾದು ಹೋದವರು ‘ಸ್ವಚ್ಛ’ ಎನ್ನುತ್ತಾ, ತೃಣಮೂಲದಲ್ಲಿ ಉಳಿದ ಭ್ರಷ್ಟರ ಮೇಲೆ ಸಿ.ಬಿ.ಐ, ಇ.ಡಿ ಅಸ್ತ್ರಗಳನ್ನು ಪ್ರಯೋಗಿಸುವ ಬಿಜೆಪಿಯ ಗೋಸುಂಬೆತನವನ್ನು ರಾಜ್ಯದ ಜನತೆ ಒಪ್ಪಿಕೊಳ್ಳಲಿಲ್ಲ. ಬಿಜೆಪಿಗೆ ಹೋದ ಮತ್ತು ತೃಣಮೂಲದಲ್ಲಿ ಉಳಿದ ಹಲವು ಪ್ರಭಾವಿ ನಾಯಕರು ಶಾರದ ಚಿಟ್ ಫಂಡ್ ಮಹಾ ಹಗರಣದಲ್ಲಿ ಭಾಗಿಯಾಗಿದ್ದು ಇದರ ಸಿಬಿಐ ತನಿಖೆ ಹಲವು ವರ್ಷಗಳ ನಂತರವೂ ಮುಗಿಯದೇ ಇರುವುದು ಬಿಜೆಪಿ ಯ ‘ಭ್ರಷ್ಟಾಚಾರ’ದ ಅಭಿಯಾನದ ಡೋಂಗಿತನವನ್ನು ಬಯಲಿಗೆಳೆಯಿತು.

ಇದನ್ನು ಓದಿ: ಬಿಜೆಪಿಯನ್ನು ಸೋಲಿಸುವ ಜನಗಳ ಆಕಾಂಕ್ಷೆಯಿಂದಾಗಿ ಟಿಎಂಸಿಗೆ ಪ್ರಯೋಜನವಾಗಿದೆ: ಬಿಮನ್ ಬಸು

ಪ್ರಾದೇಶಿಕ ಭಾಷೆ, ಅಸ್ಮಿತೆಗಳನ್ನು ಗೌರವಿಸದ ಹಿಂದಿ ಹೇರಿಕೆಯ ಹಣೆಪಟ್ಟಿ ಬಿಜೆಪಿಗೆ ಇದ್ದು, ಬಂಗಾಳದಲ್ಲಿ ಇದೊಂದು ದೊಡ್ಡ ನಕಾರಾತ್ಮಕ ಅಂಶವಾಗಬಹುದು ಎಂದು ಬಿಜೆಪಿಗೆ ಗೊತ್ತಿತ್ತು. ಬಂಗಾಳದ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ನಾಯಕರ (ಟಾಗೋರ್ ಇತ್ಯಾದಿ) ಪರಂಪರೆಗೆ ಹುಸಿ ಸಂಬಂಧವನ್ನು (ಪ್ರತಿದಿನ ಬೆಳಿಗ್ಗೆ ಎದ್ದು ರಬೀಂದ್ರ ಸಂಗೀತ್ ಕೇಳುತ್ತಿದ್ದೆ ಎಂಬ ಮೋದಿಯ ಹಾಸ್ಯಾಸ್ಪದ ಹೇಳಿಕೆ ಇತ್ಯಾದಿ) ಕಲ್ಪಿಸಿಕೊಳ್ಳುವ, ವಾರಸುದಾರಿಕೆಯನ್ನು ‘ವಶಪಡಿಸಿಕೊಳ್ಳುವ’ ಪ್ರಯತ್ನವನ್ನು ಬಿಜೆಪಿ ಮಾಡಿತು. ಬಂಗಾಳವನ್ನು ಚಿನ್ನದ ನಾಡು (ಶೋನಾರ್ ಬಾಂಗ್ಲಾ) ಮಾಡ್ತೇವೆ ಎನ್ನುವ ಘೋಷಣೆ ಕೊಟ್ಟಿತು. ಅದಕ್ಕೆ ಬದಲಾಗಿ ತೃಣಮೂಲ ‘ಬಿಜೆಪಿಯ ಗುಜರಾತ್, ಯು.ಪಿ ಯ ನಾಯಕರು ಬೇಡ’, ‘ಮಮತಾ ಬಂಗಾಳದ ಮಗಳು’ ಎಂದು ಪ್ರಾದೇಶಿಕ ಅಂಧಾಭಿಮಾನವನ್ನು ಬಡಿದೆಬ್ಬಿಸಿ ಬಿಜೆಪಿಯನ್ನು ಫಜೀತಿಗೆ ಈಡು ಮಾಡಿತು. ಬಿಜೆಪಿ ಕೇಂದ್ರ ಸರಕಾರ ಹಲವು ಸಂದರ್ಭಗಳಲ್ಲಿ ಒಕ್ಕೂಟ ತತ್ವಗಳನ್ನು ಗಾಳಿಗೆ ತೂರಿ ರಾಜ್ಯಗಳ ಅಧಿಕಾರಗಳ ಮೇಲೆ ದಾಳಿ ಮಾಡಿದ್ದರ ಮತ್ತು ಕೇಂದ್ರೀಯ ಏಜೆನ್ಸಿಗಳನ್ನು ವಿರೋಧ ಪಕ್ಷಗಳನ್ನು ಬಗ್ಗು ಬಡಿಯಲು ಬಳಸಿದ್ದರ ವಿರುದ್ಧ ಸಂಯುಕ್ತ ಮೋರ್ಚಾ ಪ್ರಚಾರ ಮಾಡಿ, ಬಂಗಾಳದ ಪ್ರಾದೇಶಿಕ ಅಸ್ಮಿತೆಯ ಬಗ್ಗೆ ಬಿಜೆಪಿಯ ನಾಟಕಗಳನ್ನು ಬಯಲಿಗೆಳೆಯಿತು.

ದೀದಿ ದೀದಿ

ಪಶ್ಚಿಮ ಬಂಗಾಳದಲ್ಲೂ ಬೇರೆ ರಾಜ್ಯಗಳಂತೆ ಬಿಜೆಪಿ ಯ ಪ್ರಚಾರದಲ್ಲಿ ಎದುರಾಳಿಗಳನ್ನು ವೈಯಕ್ತಿಕವಾಗಿ ನಿಂದಿಸುವ, ಅಶ್ಲೀಲವಾದ ಕೆಳಮಟ್ಟದ ಅಸಭ್ಯ ಭಾಷೆಯ ಪ್ರಯೋಗ ಸಾಮಾನ್ಯವಾಗಿತ್ತು. ಮಮತಾ ಬ್ಯಾನರ್ಜಿಯನ್ನು ಗುರಿ ಮಾಡಿ ಪ್ರಧಾನಿ ಮೋದಿಯಿಂದ ಆರಂಭಿಸಿ ಎಲ್ಲರೂ ಅಸಹ್ಯ ಅಸಭ್ಯ ಟೀಕೆ/ವ್ಯಂಗ್ಯಗಳನ್ನು ಮಾಡುತ್ತಿದ್ದರು. ಮೋದಿ ಅವರ ‘ದೀದಿ ಓ ದೀದಿ’ ಕುಪ್ರಸಿದ್ಧವಾಯಿತು. ಬಂಗಾಳದ ಮುಖ್ಯಮಂತ್ರಿಯಾಗಿರುವ ಒಬ್ಬ ಒಂಟಿ ಮಹಿಳೆಯನ್ನು ದೆಹಲಿಯ ಮೂರು ಪ್ರಬಲ ನಾಯಕರು ಅಸಭ್ಯ ಭಾಷೆಯಲ್ಲಿ ನಿಂದಿಸುವುದು ತೃಣಮೂಲದ ವಿರೋಧಿಗಳು ಸೇರಿದಂತೆ ಹಲವರಿಗೆ ಇಷ್ಟವಾಗಲಿಲ್ಲ. ನಂದಿಗ್ರಾಮಕ್ಕೆ ಪ್ರಚಾರಕ್ಕೆ ಹೋದಾಗ ಮಮತಾ ಬ್ಯಾನರ್ಜಿ ಅವರ ಕಾಲಿಗೆ ತೀವ್ರವಾಗಿ ಏಟು (ಈ ಕುರಿತು ಏನೇ ವಿವಾದಗಳಿದ್ದರೂ) ಬಿದ್ದು, ಗಾಲಿ ಕುರ್ಚಿಯಲ್ಲಿ ಓಡಾಡಿ ಪ್ರಚಾರ ಮಾಡುವಾಗಲೂ ಈ ರೀತಿಯ ಅಸಹ್ಯ ಅಸಭ್ಯ ನಡವಳಿಕೆ ಇನ್ನಷ್ಟು ಹೇಸಿಗೆಯನ್ನು ಹುಟ್ಟಿಸಿತು. ಇವೆಲ್ಲ ಮಮತಾ ಮತ್ತು ತೃಣಮೂಲದ ಪರವಾಗಿ ಅನುಕಂಪದ ಅಲೆಯನ್ನು ಹಬ್ಬಿಸಿತು. ಅದರಲ್ಲೂ ಒಬ್ಬ ಮಹಿಳಾ ನಾಯಕಿಗೆ ಸಹಜವಾಗಿಯೇ ಮಹಿಳೆಯರು ಸಹಾನುಭೂತಿಯನ್ನು ಹೊಂದಿರುವಾಗ, ಇಂತಹ ನಡವಳಿಕೆ ಅದನ್ನು ಇನ್ನಷ್ಟು ಹೆಚ್ಚಿಸಿತು. ಬಿಜೆಪಿಯ ಈ ತಂತ್ರ ಸಹ ಬ್ಯೂಮರಾಂಗ್ ಆಯಿತು.

ಇದನ್ನು ಓದಿ: ಪಂಚರಾಜ್ಯ ಚುನಾವಣೆ : ಕೇರಳದಲ್ಲಿ ಎಲ್‌ಡಿಎಫ್‌ ಮತ್ತೆ ಅಧಿಕಾರಕ್ಕೆ ಬರಲು ಕಾರಣವೇನು?

ತೃಣಮೂಲ ಹಿಂಸಾಚಾರದಲ್ಲಿ ಎತ್ತಿದ ಕೈ ಆಗಿದ್ದು, ಅದರ ಗೂಂಡಾಗಿರಿಯ ಕುರಿತು ಬಿಜೆಪಿ ತೀವ್ರ ಪ್ರಚಾರ ಮಾಡಿತು. ಆದರೆ ಹಿಂದೆನೂ ಪ್ರಚಾರದ ಸಂದರ್ಭದಲ್ಲೂ ಬಿಜೆಪಿ ಹರಿಯ ಬಿಟ್ಟ ಹಿಂಸಾಚಾರ ತೃಣಮೂಲವನ್ನು ನಾಚಿಸುವಂತಿತ್ತು. ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜಕೀಯ ಹಿಂಸಾಚಾರ ಅಲ್ಲದೆ ಕೋಮು ಹಿಂಸಾಚಾರ ಸಹ ಇದಕ್ಕೆ ಸೇರಿಕೊಳ್ಳುತ್ತದೆ ಎಂಬ ಆತಂಕ ವ್ಯಾಪಕವಾಗಿತ್ತು. ಬಿಜೆಪಿ ಕೇಂದ್ರ-ರಾಜ್ಯ ಸರ್ಕಾರಗಳು ಕೋವಿಡ್ ಎರಡನೆಯ ಅಲೆಯನ್ನು ನಿರ್ವಹಿಸಿದ ರೀತಿ ಮತ್ತು ಅಗಾಧ ವೈಫಲ್ಯಗಳೂ ಬಿಜೆಪಿ ಸೋಲಿಸಬೇಕು ಎಂಬ ಧೋರಣೆಗೆ ಪುಷ್ಟಿ ಕೊಟ್ಟಿತು. ಇದಲ್ಲದೆ ತೃಣಮೂಲ 2019ರ ಹಿನ್ನಡೆಯ ನಂತರ ಪ್ರಶಾಂತ ಕಿಶೋರ್ ಅವರನ್ನು ಸಲಹೆಗಾರನಾಗಿ ತೆಗೆದುಕೊಂಡು ಅವರ ಹಲವು ಸಲಹೆಗಳನ್ನು ಜಾರಿ ಮಾಡಿದ್ದು ತೃಣಮೂಲದ ವಿರುದ್ಧ ತೀವ್ರ ಅತೃಪ್ತಿಯನ್ನು ಸ್ವಲ್ಪ ಮಟ್ಟಿಗೆ ಶಮನ ಮಾಡುವುದರಲ್ಲಿ ಸಫಲವಾಯಿತು. ತೃಣಮೂಲದ ನ್ಯೂನತೆಗಳನ್ನು – ಪ್ರಮುಖವಾಗಿ ತಳಮಟ್ಟದ ಭ್ರಷ್ಟಾಚಾರ, ದುರಾಡಳಿತ, ಹಿಂಸಾಚಾರ, ಶಾಸಕರ ವಿರುದ್ಧ ಆಕ್ರೋಶಗಳನ್ನು – ಸ್ವಲ್ಪ ಮಟ್ಟಿಗೆ ತಹಬಂದಿಗೆ ತಂದು, ಚುನಾವಣೆಯ ಮೊದಲ ತಿಂಗಳುಗಳಲ್ಲಿ ಹಲವು ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಿಸಿದ್ದು, ಜನರ ಸವಾಲುಗಳನ್ನು ಮಮತಾ ನೇರವಾಗಿ ಕೇಳುವ ವ್ಯವಸ್ಥೆ, ಸಮೀಕ್ಷೆ ನಡೆಸಿ ಜನಾಕ್ರೋಶಕ್ಕೆ ಒಳಗಾದ ಶಾಸಕರಿಗೆ ಟಿಕೆಟ್ ನಿರಾಕರಿಸಿದ್ದು – ಇತ್ಯಾದಿ ಅವರ ಸಲಹೆಗಳ ಜಾರಿ ತೃಣಮೂಲದ ಆಡಳಿತ-ವಿರೋಧಿ ಅತೃಪ್ತಿಯನ್ನು ಕಡಿಮೆ ಮಾಡುವಲ್ಲಿ ಸಹಾಯಕವಾದವು.

ಸಂಯುಕ್ತ ಮೋರ್ಚಾ ಅಜೆಂಡಾ ಯಾಕೆ ಜನ ಸ್ವೀಕರಿಸಲಿಲ್ಲ

ಹೀಗೆ ಬಿಜೆಪಿಯ ಅತಿ ಧ್ರುವೀಕರಣದ, ಹುಸಿ ಭ್ರಷ್ಟಾಚಾರ-ವಿರೋಧದ, ಹುಸಿ ಪ್ರಾದೇಶಿಕ ಅಸ್ಮಿತೆಯ, ಹಿಂಸಾಚಾರ, ವೈಯಕ್ತಿಕ ಟೀಕೆಯ ಎಲ್ಲ ತಂತ್ರಗಳು ವಿಫಲವಾದವು. ಮಾತ್ರವಲ್ಲ ಬ್ಯೂಮರಾಂಗ್ ಆದವು. ಬಂಗಾಳದ ದೊಡ್ಡ ಜನವಿಭಾಗಗಳಲ್ಲಿ ಬಿಜೆಪಿಯನ್ನು ಸೋಲಿಸದೆ ರಾಜ್ಯಕ್ಕೆ ಉಳಿಗಾಲವಿಲ್ಲ ಎಂಬ ಭಾವನೆಯನ್ನು ತಂದಿತು. ಇದು ಬಿಜೆಪಿಯ ಕಟ್ಟಾ ಬೆಂಬಲಿಗರನ್ನು ಬಿಟ್ಟರೆ, ಅವರ ರಾಜಕೀಯ ಅಭಿಪ್ರಾಯ ಬೇಧವಿಲ್ಲದೆ ಎಲ್ಲರಲ್ಲೂ ಆಕ್ರೋಶವನ್ನು ತಂದಿತು. ಬಿಜೆಪಿ ಯನ್ನು ಸೋಲಿಸಬೇಕಾದರೆ ತೃಣಮೂಲ ಉತ್ತಮ ಅಸ್ತ್ರ ಎಂದು ಜನ ನಿರ್ಧರಿಸಿದರು. ಧ್ರುವೀಕರಣದ ಸಂದರ್ಭದಲ್ಲಿ ಮೂರನೇ ರಂಗ ಅಥವಾ ಪಕ್ಷಕ್ಕೆ ನಷ್ಟವಾಗುವುದು ನಮ್ಮ ಈಗಿನ ಚುನಾವಣಾ ವ್ಯವಸ್ಥೆಯಲ್ಲಿ ಸಾಮಾನ್ಯ.  ಹಾಗಾಗಿಈ ಚುನಾವಣೆಯಲ್ಲಿ ಜನತೆ ಉತ್ತಮ ಆಡಳಿತ ಕೊಡುತ್ತಾರೆ ಎಂದು ತೃಣಮೂಲವನ್ನು ಆಯ್ಕೆ ಮಾಡಲಿಲ್ಲ. ಬಿಜೆಪಿಯನ್ನು ಸೋಲಿಸಲು ಆಯ್ಕೆ ಮಾಡಿದರು. ಮೇಲೆ ಹೇಳಿದ ಕಾರಣಗಳಿಗೆ ಬಿಜೆಪಿ 2019ರಲ್ಲಿ ಗೆದ್ದುಕೊಂಡಿದ್ದ ಜನವಿಭಾಗಗಳಲ್ಲಿ ಸಾಕಷ್ಟು ಕುಸಿತ ಅನುಭವಿಸಿತು. ಈ ಜನವಿಭಾಗಗಳು ತೃಣಮೂಲವನ್ನು ಬೆಂಬಲಿಸಿದವು. ಸಂಯುಕ್ತ ಮೋರ್ಚಾದ ಕಟ್ಟಾ ಬೆಂಬಲಿಗರನ್ನು ಬಿಟ್ಟರೆ, ಉಳಿದವರು ಬಿಜೆಪಿ ಸೋಲಿಸಲು ತೃಣಮೂಲವನ್ನು ಬೆಂಬಲಿಸಿದರು. ಹಿಂದಿನ ಚುನಾವಣೆಯಲ್ಲಿ ಬಿಜೆಪಿಗೆ ಹೋಗಿದ್ದ ತೃಣಮೂಲ ವಿರೋಧಿ ಜನವಿಭಾಗಗಳು ಇದರಿಂದಾಗಿ ಸಂಯುಕ್ತ ಮೋರ್ಚಾಗೆ ವಾಪಸು ಬರುವ ಬದಲು ತೃಣಮೂಲಕ್ಕೆ ಹೋದವು.

ಕಳಪೆ ಆಡಳಿತ, ಭ್ರಷ್ಟಾಚಾರ, ಹಿಂಸಾಚಾರ, ಪ್ರಜಾಪ್ರಭುತ್ವದ ಅಭಾವ, ಜನರ ಸಂಕಷ್ಟಗಳನ್ನು ವಾಸ್ತವವಾಗಿ ಪರಿಹರಿಸದ ಬರಿಯ ಸೋಗಿನ ಕಲ್ಯಾಣ ಯೋಜನೆಗಳನ್ನು ಘೋಷಿಸುವ ತೃಣಮೂಲ; ಮತ್ತು ಬಿಜೆಪಿಯ ಕೋಮುವಾದ, ಕಟು ನವ-ಉದಾರವಾದಿ ನೀತಿಗಳು, ರಾಜ್ಯಗಳ ಹಕ್ಕುಗಳ ಮೇಲೆ ದಾಳಿ – ಎರಡನ್ನೂ ವಿರೋಧಿಸಿದ ಎಡರಂಗದ ಸಂಯುಕ್ತ ಮೋರ್ಚಾದ ಅಜೆಂಡಾವನ್ನು ಯಾಕೆ ಜನರು ಆಯ್ಕೆ ಮಾಡಲಿಲ್ಲ ಎಂಬ ಪ್ರಶ್ನೆ ಉಳಿಯುತ್ತದೆ. ಇಂದಿನ ಚುನಾವಣೆಗಳು ಹಣಬಲ, ತೋಳ್ಬಲ, ಮಾಧ್ಯಮ ಬಲ ಮತ್ತು ಅಗಾಧ ಸಂಪನ್ಮೂಲಗಳ ಆಟ. ಬಿಜೆಪಿ ಮತ್ತು ತೃಣಮೂಲ ಎರಡಕ್ಕೂ ಇವು ಬೇಕಾದಷ್ಟು ಪ್ರಮಾಣದಲ್ಲಿ ಇವೆ. ಅಲ್ಲದೆ ಆಳುವ ವರ್ಗಗಳ ಸೈದ್ಧಾಂತಿಕ, ಭೌತಿಕ ಬೆಂಬಲವಿದೆ. ಎಡಪಕ್ಷಗಳು ಮತ್ತು ಸಂಯುಕ್ತ ಮೋರ್ಚಾಕ್ಕೆ ಇದು ಇಲ್ಲ. ಚುನಾವಣೆಗಳು ಜಾತಿ-ಬುಡಕಟ್ಟು-ಮತಧರ್ಮ ಗಳ ಐಡೆಂಟಿಟಿ ಮತ್ತು ಧ್ರುವೀಕರಣದ ರಾಜಕಾರಣದ ಆಟ ಕೂಡಾ. ಇಂತಹ ರಾಜಕಾರಣವನ್ನು ಮಾಡಲೊಪ್ಪದ ಎಡಪಕ್ಷಗಳು ಈ ಆಟದಲ್ಲಿ ಸೋಲುವ ಸಾಧ್ಯತೆಯೇ ಹೆಚ್ಚು. ಆದರೆ ಬಿಜೆಪಿಯ ಈ ಭಾರೀ ಸೋಲಿನ ಫಲಿತಾಂಶ ಬರುವುದರಲ್ಲಿ ಎಡಪಕ್ಷಗಳ ಮತ್ತು ಸಂಯುಕ್ತ ಮೋರ್ಚಾದ ಪಾತ್ರವಿಲ್ಲ ಎಂದು ಹೇಳುವಂತಿಲ್ಲ. ಮೊದಲನೆಯದಾಗಿ ಕೋಮು-ಧ್ರುವೀಕರಣ ಮತ್ತು ಅದರ ಜೊತೆ ಕೋಮು ರಾಜಕಾರಣದ ಸಂಕಥನ ಬಲವಾಗಿ ಮುನ್ನೆಲೆಗೆ ಬಂದಿದ್ದರೂ, ಎಡರಂಗದ ಹಲವು ದಶಕಗಳ ಸೆಕ್ಯುಲರ್ ರಾಜಕಾರಣದ ಪರಂಪರೆ ಮತ್ತು ಈಗಲೂ ಕೋಮುವಾದದ ವಿರುದ್ಧ ರಾಜಿಯಿಲ್ಲದ ಪ್ರಚಾರಾಂದೋಲನ ಈಗಿನ  ಕೋಮು ರಾಜಕಾರಣದ ಅಲೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದನ್ನು ತಡೆಯಲು ಸಾಧ್ಯವಾಗುವಷ್ಟು ಬಲವಾಗಿತ್ತು. ಲೋಕನೀತಿ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಮತದಾರರು ಸೇರಿದಂತೆ ರಾಷ್ಟ್ರೀಯ ಸರಾಸರಿಗಿಂತ ಎಷ್ಟೋ ಹೆಚ್ಚು ಪ್ರಮಾಣದ ಜನ ಸೆಕ್ಯುಲರ್-ಅಲ್ಪಸಂಖ್ಯಾತರ ಕುರಿತು ನೀತಿ ಸಂಬಂಧಿತ ಪ್ರಶ್ನೆಗಳಿಗೆ (ಅಯೋಧ್ಯಾ ಮಂದಿರ, ಅಲ್ಪಸಂಖ್ಯಾತರಿಗೆ ರಕ್ಷಣೆ, ಸಿಎಎ-ಎನ್.ಆರ್.ಸಿ ಇತ್ಯಾದಿ) ಸೆಕ್ಯುಕರ್ ಉತ್ತರ ನೀಡಿದ್ದಾರೆ ಎನ್ನುವ ಮೂಲಕ ದೃಢಪಡಿಸಿದೆ. ಮಾತ್ರವಲ್ಲ, ತೃಣಮೂಲದ ಕಳಪೆ ಆಡಳಿತ, ಭ್ರಷ್ಟಾಚಾರ, ಹಿಂಸಾಚಾರ, ಪ್ರಜಾಪ್ರಭುತ್ವದ ಅಭಾವ, ಜನರ ಸಂಕಷ್ಟಗಳನ್ನು ಮುನ್ನೆಲೆಗೆ ತರುವ ಎಡರಂಗ ಮತ್ತು ಸಂಯುಕ್ತ ಮೋರ್ಚಾ ಪ್ರಯತ್ನ ಮತ್ತು ಅದರ ಸುತ್ತ ಪ್ರಬಲ ಪ್ರಚಾರವು, ಬಿಜೆಪಿಯ ಕೋಮು-ಜಾತಿ ಐಡೆಂಟಿಟಿ ರಾಜಕಾರಣವು ತೃಣಮೂಲ-ವಿರೋಧಿ ಅತೃಪ್ತಿಯ ಪೂರ್ಣ ಲಾಭ ಪಡೆಯುವುದನ್ನು ತಡೆಯುವ ಮೂಲಕವೂ ಬಿಜೆಪಿ ಸೋಲಿನಲ್ಲಿ ಕೊಡುಗೆ ನೀಡಿದೆ.

ಬಿಜೆಪಿಯನ್ನು ಸೋಲಿಸುವ ಜನಗಳ ಆಕಾಂಕ್ಷೆಯಿಂದಾಗಿ ಟಿಎಂಸಿಗೆ ಪ್ರಯೋಜನವಾಗಿದೆ: ಬಿಮನ್ ಬಸು

ಪಶ್ಚಿಮ ಬಂಗಾಳದ 17ನೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸೋಲು ಒಂದು ಮಹತ್ವದ ಘಟನೆ. ತೃಣಮೂಲ ಕಾಂಗ್ರೆಸ್ ಗೆದ್ದಿದೆ. ಸಂಯುಕ್ತ ಮೋರ್ಚಾಕ್ಕೆ ತೀವ್ರ ನಿರಾಸೆಯಾಗಿದೆ. ಈ ಬಗ್ಗೆ ಮೋರ್ಚಾದ ಅಂಗ ಪಕ್ಷಗಳಲ್ಲಿ ಮತ್ತು ಸಂಯುಕ್ತ ಮೋರ್ಚಾದಲ್ಲಿ ಜಂಟಿಯಾಗಿ ವಿಮರ್ಶೆಗಳನ್ನು ನಡೆಸಿ ಅದರಿಂದ ಪಾಠ ಕಲಿಯಲಾಗುವುದು ಎಂದು ಎಡರಂಗದ ಅಧ್ಯಕ್ಷ ಬಿಮನ್ ಬಸು ಹೇಳಿದ್ದಾರೆ. ಆದರೆ, ಮೊದಲ ನೋಟಕ್ಕೆ, ಬಿಜೆಪಿಯನ್ನು ಸೋಲಿಸುವ ಜನಗಳ ಆಕಾಂಕ್ಷೆಯಿಂದಾಗಿ ತೃಣಮೂಲ ಕಾಂಗ್ರೆಸಿಗೆ ಪ್ರಯೋಜನವಾಗಿರುವಂತೆ ಕಾಣುತ್ತದೆ ಎಂದು ಅವರು ಹೇಳಿದ್ದಾರೆ.

ಕಳೆದ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ 16 ಸ್ಥಾನಗಳನ್ನು ಪಡೆದಿತ್ತು ಮತ್ತು ಈ ವಿಧಾನಸಭಾ ಚುನಾವಣೆಗಳನ್ನು ಗೆಲ್ಲಲು ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡಿತು, ಆರೆಸ್ಸಸನ್ನು, ಸಂಘ ಪರಿವಾರವನ್ನು ಬಳಸಿತು, ಎಲ್ಲ ಜಿಲ್ಲೆಗಳನ್ನು ಕವರ್ ಮಾಡಲು ಹಲವು ಹೆಲಿಕ್ಯಾಪ್ಟರುಗಳನ್ನು ಬಳಸಿತು. ಆದರೂ ಜನಗಳು ಅದನ್ನು ಸೋಲಿಸಿದ್ದಾರೆ. ಆದರೆ ಅದು ಬಂಗಾಳದ ಸಾಮಾಜಿಕ ಹಂದರದಲ್ಲಿ ಒಂದು ಶಾಶ್ವತ ಗಾಯವನ್ನು ಉಂಟುಮಾಡಿದೆ, ಇದು ಮುಂದೆ ಬಂಗಾಳದ ಸಂಸ್ಕೃತಿಗೆ ಮತ್ತು ಸಮಾಜಕ್ಕೆ ಹಾನಿಯುಂಟು ಮಾಡಬಹುದು ಎಂಬ ಭೀತಿಯನ್ನು ಬಿಮನ್ ಬಸು ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಎಲ್ಲ ಟಿಎಂಸಿ-ವಿರೋಧಿ ಶಕ್ತಿಗಳ ಹೊಣೆಗಾರಿಕೆ ಹೆಚ್ಚಿದೆ. ಸಂಯುಕ್ತ ಮೋರ್ಚಾ ಸಂವಿಧಾನದ ನಿಬಂಧನೆಗಳನ್ನು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು, ಜಾತ್ಯತೀತತೆಯನ್ನು ರಕ್ಷಿಸಬೇಕಾಗಿದೆ, ದುಡಿಯುವ ಜನಗಳ ಜೀವನೋಪಾಯದ ಹೋರಾಟವನ್ನು ಬಲಪಡಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಈ ಚುನಾವಣೆಗಳಲ್ಲಿ ಸಂಯುಕ್ತ ಮೋರ್ಚಾದ ಪ್ರಚಾರದಲ್ಲಿ ಪಾತ್ರ ವಹಿಸಿದ ಕಾರ್ಮಿಕ ವರ್ಗವನ್ನು ಅಭಿನಂದಿಸುತ್ತ ಬಿಮನ್ ಬಸು, ಮತಗಣನೆಯ ನಂತರ ರಾಜ್ಯದಲ್ಲಿ ಶಾಂತಿ ಮತ್ತು ವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು ಎಂದಿದ್ದಾರೆ. ಮಹಾಸೋಂಕನ್ನು ಎದುರಿಸುವಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯಸರಕಾರ ತಮ್ಮ ಹೊಣೆಗಾರಿಕೆ ಮತ್ತು ಕರ್ತವ್ಯಗಳನ್ನು ನಿಭಾಯಿಸಬೇಕು ಎಂದು ಆಗ್ರಹಪಡಿಸುತ್ತಲೇ ಸಂಯುಕ್ತ ಮೋರ್ಚಾ ಇಂತಹ ಸಮಯದಲ್ಲಿ ಜನತೆಯ ಬೆಂಬಲಕ್ಕೆ ನಿಲ್ಲುವ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಸಮರೋಪಾದಿಯಲ್ಲಿ ಮುಂದುವರೆಸಬೇಕು ಎಂದು ಅವರು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *