ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಕ್ರೀಡಾಕೂಟದ 6ನೇ ದಿನವಾದ ಇಂದು ಭಾರತದ 24 ವರ್ಷದ ವೇಟ್ ಲಿಫ್ಟರ್ ಲವ್‌ಪ್ರೀತ್ ಸಿಂಗ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಪುರುಷರ 109 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಲವ್‌ಪ್ರೀತ್ ಸಿಂಗ್ ಒಟ್ಟು 355 ಕೆಜಿ ಭಾರ ಎತ್ತುವ ಮೂಲಕ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲ ಸ್ನ್ಯಾಚ್‌ನಲ್ಲಿ ಅಮೃತ್‌ಸರ್ ಮೂಲದ ಲವ್‌ಪ್ರೀತ್ ಸಿಂಗ್ 157 ಕೆಜಿ ವೇಟ್ ಲಿಫ್ಟ್ ಮಾಡಿದರು. ಎರಡನೇ ಸ್ನ್ಯಾಚ್‌ನಲ್ಲಿ 161 ಕೆಜಿ ಭಾರ ಎತ್ತುವಲ್ಲಿ ಯಶಸ್ವಿಯಾದರು. ಇನ್ನು ಮೂರನೇ ಹಾಗೂ ಕೊನೆಯ ಪ್ರಯತ್ನದಲ್ಲಿ ಲವ್‌ಪ್ರೀತ್ ಸಿಂಗ್ 163 ಕೆಜಿ ಭಾರ ಎತ್ತುವ ಮೂಲಕ ಸ್ನ್ಯಾಚ್ ಸ್ಪರ್ಧೆ ಮುಕ್ತಾಯದ ವೇಳೆಗೆ ಜಂಟಿ ಎರಡನೇ ಸ್ಥಾನ ಪಡೆದರು.
ಇನ್ನು ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ ಲವ್‌ಪ್ರೀತ್ ಸಿಂಗ್ ಮೊದಲ ಪ್ರಯತ್ನದಲ್ಲಿ 185 ಕೆಜಿ ಎರಡನೇ ಕ್ಲೀನ್ ಅಂಡ್ ಜರ್ಕ್ ಸ್ಪರ್ಧೆಯಲ್ಲಿ 189 ಕೆಜಿ ಭಾರ ಎತ್ತಿದರು. ಇನ್ನು ಮೂರನೇ ಹಾಗೂ ಕೊನೆಯ ಪ್ರಯತ್ನದಲ್ಲಿ 192 ಕೆಜಿ ಭಾರ ಎತ್ತುವ ಮೂಲಕ ಲವ್‌ಪ್ರೀತ್ ಸಿಂಗ್ ಪದಕ ಗೆದ್ದುಕೊಂಡರು.
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 9ನೇ ಪದಕ ಗೆದ್ದು ಕೊಡುವಲ್ಲಿ ಯಶಸ್ವಿಯಾಗಿರುವ ವೇಟ್ ಲಿಫ್ಟಿಂಗ್ ವಿಭಾಗದ ಲವ್‌ಪ್ರೀತ್ ಸಿಂಗ್ ರಾಷ್ಟ್ರೀಯ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೊದಲು ಮೀರಾಬಾಯಿ ಚಾನು, ಜೆರೆಮಿ ಲಾಲ್ರಿನ್ನುಂಗಾ, ಅಚಿಂತಾ ಶೆಯುಲಿ, ಸಂಕೇತ್ ಸರ್ಗರ್, ಬಿಂದ್ಯಾರಾಣಿ ರಾಣಿ, ಗುರುರಾಜ್ ಪೂಜಾರಿ, ಹಜಿರ್ಂದರ್ ಕೌರ್, ವಿಕಾಸ್ ಅವರುಗಳು ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪದಕ ಗೆದ್ದಿದ್ದಾರೆ.
ಅದೇ ರೀತಿ ಕ್ರೀಡಾಕೂಟದ ಬ್ಯಾಡ್ಮಿಂಟನ್ ಮಿಶ್ರ ವಿಭಾಗದಲ್ಲಿ ಮಲೇಷ್ಯಾ ತಂಡದ ವಿರುದ್ಧ 3-1 ಅಂತರದಿಂದ ಸೋಲುವ ಮೂಲಕ ಭಾರತ ತಂಡ ಬೆಳ್ಳಿಗೆ ತೃಪ್ತಿ ಪಟ್ಟುಕೊಂಡಿದೆ. ತಡರಾತ್ರಿ ನಡೆದ ಮಿಶ್ರ ವಿಭಾಗದ ಅಂತಿಮ ಪಂದ್ಯದಲ್ಲಿ ಭಾರತೀಯ ಬ್ಯಾಡ್ಮಿಂಟನ್ ಆಟಗಾರರಾದ ಕಿದಂಬಿ ಶ್ರೀಕಾಂತ್, ಚಿರಾಗ್ ಶೆಟ್ಟಿ, ಸಾತ್ವಿಕ್ ರಾಜ್ ರಂಕಿರೆಡ್ಡಿ, ಗಾಯಿತ್ರಿ ಗೋಪಿಚಂದ್ ಮತ್ತು ಜೋಲಿ ತ್ರೀಸಾ ಜೋಡಿ ಸೋಲು ಕಂಡಿತು.
ಇದರೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಒಟ್ಟಾರೆ ಇದುವರೆಗೆ 14 ಪದಕಗಳು ಬಾಚಿಕೊಂಡಿರುವ ಭಾರತಕ್ಕೆ 5 ಚಿನ್ನ, 5 ಬೆಳ್ಳಿ ಮತ್ತು 4 ಕಂಚು ಲಭಿಸಿದೆ.