ನವದೆಹಲಿ: ಕೋವಿಡ್-19 ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಮಾಡಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇಂದು ಪತ್ರಿಕಾಗೋಷ್ಠಿಯನ್ನು ವಿವರಿಸಿದರು.
ಏಪ್ರಿಲ್ 17ರಿಂದಲೇ ವಾರಾಂತ್ಯದಲ್ಲಿ ರಾಷ್ಟ್ರ ರಾಜಧಾನಿ ಸ್ಥಗಿತಗೊಳ್ಳಲಿದೆ ಎಂದು ದೆಹಲಿ ಸರ್ಕಾರ ಪ್ರಕಟಿಸಿದೆ. ಮುಂದಿನ ಆದೇಶದವರೆಗೂ ವಾರದ ದಿನಗಳಲ್ಲಿ ರೆಸ್ಟೋರೆಂಟ್ಗಳು, ಶಾಪಿಂಗ್ ಮಾಲ್ಗಳು ಮತ್ತು ಸಭಾಂಗಣಗಳು ಮುಚ್ಚಲ್ಪಡುತ್ತವೆ.
ಇದನ್ನು ಓದಿ: ಎರಡನೇ ಕೋವಿಡ್ ಅಲೆ: ಜನಗಳ ಆರೋಗ್ಯ ಮತ್ತು ಜೀವನೋಪಾಯ ರಕ್ಷಿಸಬೇಕು
ವೈದ್ಯಕೀಯ ಮೂಲಸೌಕರ್ಯ ಮತ್ತು ಆರೋಗ್ಯ ಕಾರ್ಯಕರ್ತರನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿರುವ ಕೋವಿಡ್-19 ಹರಡುವುದನ್ನು ತಡೆಗಟ್ಟಲು ಕಠಿಣ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ ಎಂದು ಕೇಜ್ರಿವಾಲ್ ಹೇಳಿದರು.
ಜಿಮ್ಗಳು ಮತ್ತು ಸ್ವಿಮ್ಮಿಂಗ್ ಫೂಲ್ಗಳು ಮುಚ್ಚಲಾಗುತ್ತದೆ. ಆದರೆ ಸಿನೆಮಾ ಹಾಲ್ಗಳು ಶೇಕಡಾ 30 ರಷ್ಟು ಸಾಮರ್ಥ್ಯದೊಂದಿಗೆ ತೆರೆಯಲು ಅವಕಾಶವಿರುತ್ತದೆ ಎಂದು ಹೇಳಿದರು.
ಈಗಾಗಲೇ ನಿಗದಿಪಡಿಸಲಾದ ಮದುವೆ ಸಮಾರಂಭಗಳಿಗೆ ಕುಟುಂಬ ಸದಸ್ಯರಿಗೆ ವಾರಾಂತ್ಯದಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಅಗತ್ಯ ವಸ್ತುಗಳು ಮನೆಗೆ ಪಾರ್ಸಲ್ ಸೇವೆಗಳಿಗೂ ಅನುಮತಿಸಲಾಗಿದೆ ಮತ್ತು ಅಗತ್ಯ ಸೇವೆಗಳಿಗಾಗಿ ನಿಯೋಜನೆಗೊಂಡಿರುವ ಜನರಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ ಎಂದರು.
ಇದನ್ನು ಓದಿ: ಗಂಗಾ ಸ್ನಾನ ಮಾಡಿದ್ರೆ ಕೊರೊನಾ ಹೋಗುತ್ತೆ: ತೀರ್ಥಸಿಂಗ್ ರಾವತ್
ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿ ಆಡಳಿತದ ಉನ್ನತ ಅಧಿಕಾರಿಗಳು ಭಾಗವಹಿಸಿದ್ದ ಉನ್ನತ ಮಟ್ಟದ ಸಭೆಯಲ್ಲಿ ಕರ್ಫ್ಯೂ ಜಾರಿಯ ಕುರಿತು ಚರ್ಚಸಲಾಗಿದೆ. ಸದ್ಯದಲ್ಲಿ ಗುಣಮುಖರಾಗುವವ ಸಂಖ್ಯೆಯೂ ಅಧಿಕಪ್ರಮಾಣದಲ್ಲಿ ದಾಖಲಾಗುತ್ತಿರುವುದರಿಂದ ಲಾಕ್ಡೌನ್ ಮಾಡಲು ಉದ್ದೇಶಿಸಲಾಗಿಲ್ಲ ಎಂದು ಹೇಳಿದ್ದಾರೆ.
ದೆಹಲಿ ಸರ್ಕಾರದ ಕೋವಿಡ್ ನಿಯಂತ್ರಣ ಡ್ಯಾಶ್ಬೋರ್ಡ್ ಪ್ರಕಾರ, ಕೋವಿಡ್-19 ರೋಗಿಗಳಿಗೆ 15,225 ಹಾಸಿಗೆಗಳಲ್ಲಿ, 4,816 ಪ್ರಸ್ತುತ ಖಾಲಿ ಇವೆ. ಐಸಿಯು ಹಾಸಿಗೆಗಳ ಸಂದರ್ಭದಲ್ಲಿ, 3,771 ರಲ್ಲಿ 545 ಮಾತ್ರ ಲಭ್ಯವಿದೆ.
“ಈಗಾಗಲೇ 5,000 ಕ್ಕೂ ಹೆಚ್ಚು ಹಾಸಿಗೆಗಳು ಲಭ್ಯವಿದೆ ಮತ್ತು ನಾವು ಆಮ್ಲಜನಕ ಉಪಕರಣಗಳು ಒಳಗೊಂಡ ಹಾಸಿಗೆಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಸರ್ಕಾರ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ನಗರದಲ್ಲಿ ವಾರಾಂತ್ಯದ ಕರ್ಫ್ಯೂ ವಿಧಿಸಲಾಗುವುದು. ಕೋವಿಡ್ ಪ್ರಸರಣ ಕೊಂಡಿಯ ಸರಪಳಿಯನ್ನು ಮುರಿಯಲು, ವಾರಾಂತ್ಯದ ನಿರ್ಬಂಧಗಳನ್ನು ಜಾರಿಗೊಳಿಸಲಾಗುತ್ತಿದೆ”ಎಂದು ಕೇಜ್ರಿವಾಲ್ ಹೇಳಿದರು.