ವೆಬ್ ಮಾಧ್ಯಮಗಳ ಸೆನ್ಸಾರಿನತ್ತ ದೊಡ್ಡ ಹೆಜ್ಜೆ

“ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆಗಳಿಗೆ ಮಾರ್ಗದರ್ಶಿ) ನಿಯಮಗಳು, 2021”

ಪ್ರಿಂಟ್ ಪತ್ರಿಕೆಗಳು ಮತ್ತು ಟಿವಿ ಗೆ ಅನ್ವಯವಾಗುವ ನಿಬಂಧನೆಗಳಲ್ಲಿ ಸರಕಾರಕ್ಕೆ ಯಾವುದೇ ಪಾತ್ರವಿಲ್ಲ. ಈ ಮಾಧ್ಯಮ ಸಂಘಟನೆಗಳ ಸ್ವಯಂ-ನಿಬಂಧನೆಗಳಷ್ಟೇ ಇರುವುದು. ಪ್ರಿಂಟ್ ಪತ್ರಿಕೆಗಳಿಗೆ ಪ್ರೆಸ್ ಕೌನ್ಸಿಲ್ ಮತ್ತು ಟಿವಿ ಗಳಿಗೆ ನ್ಯೂಸ್ ಬ್ರಾಡ್ ಕಾಸ್ಟಿಂಗ್ ಸ್ಟಾಂಡರ್ಡ್ಸ್ ಅಥಾರಿಟಿ ಯಂತಹ ಮಾಧ್ಯಮ ಸಂಘಟನೆಗಳು ಸ್ವಯಂ-ನಿಬಂಧನೆಗಳನ್ನು ಜಾರಿ ಮಾಡುತ್ತವೆ. ಆದರೆ ಈಗ ತಂದಿರುವ ಐಟಿ ನಿಯಮ 2021ರಲ್ಲಿ ವೆಬ್ ಮಾಧ್ಯಮಗಳ ನಿಬಂಧನೆಯಲ್ಲಿ ಸರಕಾರಕ್ಕೆ ನೇರ ಮತ್ತು ಪ್ರಧಾನ ಪಾತ್ರವಿದೆ. ಇದು ಖಂಡಿತ ‘ಸಮತಟ್ಟಾದ ಆಟದ  ಮೈದಾನ’ ಅಲ್ಲ. ಈ ನಿಯಮಗಳಲ್ಲಿ ದೂರು ನಿರ್ವಹಣೆ/ಪರಿಹಾರ ಮತ್ತು ಮೇಲ್ವಿಚಾರಣೆಯ ವಿವಿಧ ವಿಧಾನಗಳನ್ನು ನೋಡಿದರೆ, ಅವೆಲ್ಲದರಲ್ಲಿ (ವಕೀಲ, ಪೋಲಿಸ್ ಮತ್ತು  ಜಜ್ ಈ) ಎಲ್ಲ ಪಾತ್ರಗಳನ್ನು ವಹಿಸುವ ಸರಕಾರದ ಕಟುಹಸ್ತ ಕಾಣುತ್ತದೆ  “ಮೆದುವಾದ ಮೇಲುಸ್ತುವಾರಿ ವಿಧಾನ” ಕಾಣುವುದಿಲ್ಲ. ವಿವಾದ ಪರಿಹರಿಸಲು ಸರಕಾರದ ಮರ್ಜಿಯಿಂದ ಸ್ವತಂತ್ರವಾದ ಅರೆ-ನ್ಯಾಯಿಕ ಸಂಸ್ಥೆಯ ಸುತ್ತ ಕಟ್ಟಲಾದ ವ್ಯವಸ್ಥೆಯಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ, ಐಟಿ ನಿಯಮಗಳು 2021, ಸರಕಾರವನ್ನು ಟೀಕಿಸುವ  ವೆಬ್  ಮಾಧ್ಯಮಗಳ ಮೇಲೆ ಕಟುಕ್ರಮಗಳನ್ನು ಯಾವುದೇ ಲಂಗುಲಾಗಾಮಿಲ್ಲದೆ  ತೆಗೆದುಕೊಳ್ಳುವ ಅಧಿಕಾರವನ್ನು ಸರಕಾರಕ್ಕೆ ಕೊಡುವ ಮೂಲಕ ಇವುಗಳ ಸಾರಾ ಸಗಟು ಸೆನ್ಸಾರಿನತ್ತ ದಾಪುಗಾಲಿಟ್ಟಿದೆ.

– ವಸಂತರಾಜ ಎನ್.ಕೆ.

ಇತ್ತೀಚೆಗೆ ಫೇಸ್ ಬುಕ್, ವಾಟ್ಸಪ್, ಟ್ವಿಟರ್, ಯೂ ಟ್ಯೂಬ್ ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳು, ಅಮೆಜಾನ್ ಮುಂತಾದ ಫಿಲಂ/ಟಿವಿ-ವೆಬ್ ಧಾರಾವಾಹಿ ವಿಡಿಯೋ ಹರಿಯಬಿಡುವ ವೇದಿಕೆಗಳು ಅವುಗಳ ‘ದುರ್ಬಳಕೆ’ಗಳ ಕಾರಣದಿಂದ ಭಾರೀ ಸುದ್ದಿಯಲ್ಲಿದ್ದವು. ‘ತಾಂಡವ್’ ಎಂಬ ವೆಬ್-ಧಾರಾವಾಹಿಯ ವಿರುದ್ಧ ‘ಜಾತಿ ನಿಂದನೆ’ಯ ಮತ್ತು ‘ಒಂದು ಜನವಿಭಾಗದ ಭಾವನೆಗಳನ್ನು ನೋಯಿಸಿದ” ಆಪಾದನೆಗಳು ಕೇಳಿಬಂದವು.  ಫೇಸ್ ಬುಕ್, ವಾಟ್ಸಪ್, ಟ್ವಿಟರ್, ಯೂ ಟ್ಯೂಬ್ ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳುಒಂದು ಕಡೆ ಫೇಕ್ ಸುದ್ದಿಗಳ, ಮಹಿಳೆಯರು ಮತ್ತು ಒಂದು ಸಿದ್ಧಾಂತದ (ಹೆಚ್ಚಾಗಿ ಉಗ್ರ ಬಲಪಂಥೀಯ) ಜನರಿಗೆ ಇಷ್ಟವಿಲ್ಲದ ಅಭಿಪ್ರಾಯಗಳನ್ನು ಹೊಂದಿದ ವ್ಯಕ್ತಿಗಳನ್ನು ‘ಟ್ರಾಲ್’ ಮಾಡಿ ನಿಂದಿಸುವ ಬೆದರಿಸುವ ಸೈಬರ್ ಗೂಂಡಾಗಿರಿಯ ತಾಣಗಳಾಗಿಬಿಟ್ಟಿವೆ. ಇನ್ನೊಂದು ಕಡೆ ಫೇಸ್ ಬುಕ್ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳು, ಫೇಕ್ ಸುದ್ದಿಗಳನ್ನು ‘ಟ್ರಾಲಿಂಗ’ನ್ನು ತಡೆಯುವ ನೆಪದಲ್ಲಿ ಬೇಕಾಬಿಟ್ಟಿಯಾಗಿ ಬಳಕೆದಾರರ ಅಕೌಂಟುಗಳನ್ನು ನಿಷ್ಕ್ರಿಯಗೊಳಿಸಿ ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುತ್ತಿವೆ, ಖಾಸಗಿತನವನ್ನು ತಮ್ಮ ಲಾಭಕ್ಕಾಗಿ ಬಲಿ ಕೊಡುತ್ತಿವೆ ಎಂಬ ಬಲವಾದ ಆಪಾದನೆಗಳು ಕೇಳಿಬರುತ್ತಿವೆ. ಇವೆಲ್ಲವನ್ನು ಎದುರಿಸಿ ಪರಿಹರಿಸಲು ಸಾಮಾಜಿಕ ಮಾಧ್ಯಮಗಳು ಮತ್ತು ವಿವಿಧ ವೆಬ್ ವೇದಿಕೆಗಳಿಗೆ ನಿಬಂಧನೆಗಳು ಬೇಕು ಎಂಬ ಅನಿಸಿಕೆ ಬಲವಾಗುತ್ತಿದೆ.

ಈ ಸನ್ನಿವೇಶದಲ್ಲಿ ಭಾರತ ಸರಕಾರ “ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆಗಳಿಗೆ ಮಾರ್ಗದರ್ಶಿ) ನಿಯಮಗಳು, 2021“ರ ಘೋಷಣೆಯನ್ನು ಫೆಬ್ರುವರಿ ಕೊನೆಯಲ್ಲಿ ಮಾಡಿದೆ. ಇದು 2011ರ ಮಾಹಿತಿ ತಂತ್ರಜ್ಞಾನ ನಿಯಮಗಳ ಮುಂದುವರಿಕೆಯಾಗಿ ಬಂದಿದೆ. ಹಿಂದಿನ ನಿಯಮಗಳು ಮಧ್ಯವರ್ತಿ ವೆಬ್ ವೇದಿಕೆಗಳಿಗೆ ಮಾತ್ರ ಅನ್ವಯವಾಗುತ್ತಿದ್ದವು. ಫೇಸ್ ಬುಕ್, ಟ್ವಿಟರ್ ಮುಂತಾದವುಗಳು ಬಳಕೆದಾರರ ಅಭಿವ್ಯಕ್ತಿಯನ್ನು ಹಂಚಿಕೊಳ್ಳುವ ವೇದಿಕೆ ಮಾತ್ರ. ಈ ವೇದಿಕೆಗಳು ಬಳಕೆದಾರ ಮತ್ತು ಸಾರ್ವಜನಿಕರ (ವೇದಿಕೆಯ ಇತರ ಬಳಕೆದಾರರ) ನಡುವಿನ ಮಧ್ಯವರ್ತಿ.  ಅವುಗಳು “ಆ ಅಭಿವ್ಯಕ್ತಿಯನ್ನು ಹೇಳಿ ಬರೆಯಿಸುವುದಿಲ್ಲ, ‘ಸಂಪಾದನೆ’ ಮಾಡುವುದಿಲ್ಲ, ಪ್ರಭಾವ ಬೀರುವುದಿಲ್ಲ, ಸೆನ್ಸಾರ್ ಮಾಡುವುದಿಲ್ಲ” ಎಂಬ ಹೇಳಿಕೆಯ ಅರ್ಥದಲ್ಲಿ ಅವು ಮಧ್ಯವರ್ತಿಗಳು ಮಾತ್ರ ಎಂದು ಹೇಳಲಾಗುತ್ತದೆ. ಆದರೆ ವಾಸ್ತವದಲ್ಲಿ ಅವು ಬರಿಯ ಮಧ್ಯವರ್ತಿಗಳಲ್ಲ.

ವ್ಯಂಗ್ಯಚಿತ್ರ ಕೃಪೆ: ಸಂದೀಪ್ ಅಧ್ವರ್ಯು, ಟೈಮ್ಸ್ ಆಫ್ ಇಂಡಿಯಾ

ಆದರೆ ಹೊಸ ನಿಯಮಗಳಲ್ಲಿ ಡಿಜಿಟಲ್ ಮಾಧ್ಯಮಗಳನ್ನು ಸೇರಿಸಿದ್ದು, ಅವುಗಳೆರಡಕ್ಕೂ ನೀತಿಸಂಹಿತೆ ರೂಪಿಸಲು ಮಾರ್ಗದರ್ಶಿ ನಿಯಮಗಳನ್ನು ತರಲಾಗಿದೆ. ಇಲ್ಲಿ ಡಿಜಿಟಲ್ ಮಾಧ್ಯಮಗಳು ಎಂದರೆ – ‘ದಿ ವೈರ್’, ‘ದಿ ಪ್ರಿಂಟ್’, ‘ನ್ಯೂಸ್ ಕ್ಲಿಕ್’, ‘ನಾನುಗೌರಿ’, ‘ಜನಶಕ್ತಿ ಮೀಡಿಯಾ’ ದಂತಹ ವೆಬ್ ಪತ್ರಿಕೆಗಳು, ಅಮೆಜಾನ್ ಮುಂತಾದ ಫಿಲಂ/ಟಿವಿ-ವೆಬ್ ಧಾರಾವಾಹಿ ವಿಡಿಯೋ ಹರಿಯಬಿಡುವ ಒಟಿಟಿ ವೇದಿಕೆಗಳು, ವೆಬ್ ರೇಡಿಯೊ, ಪಾಡ್ ಕಾಸ್ಟ್ – ಎಲ್ಲವೂ ಸೇರುತ್ತವೆ. ಇವೆಲ್ಲವೂ ಹೆಚ್ಚಾಗಿ ಸಾಂಪ್ರದಾಯಿಕ ಮಾಧ್ಯಮಗಳಂತೆ “ಕೆಲವೊಮ್ಮೆ ಹೇಳಿ ಬರೆಯಿಸಿದ, ಆಹ್ವಾನಿತ, ಆರಿಸಿದ,  ಸಂಪಾದನೆಗೆ ಒಳಗಾದ” ಅಭಿವ್ಯಕ್ತಿಗಳನ್ನು ಪ್ರಸಾರ ಮಾಡುವ ವೇದಿಕೆಗಳು. ಈ ‘ವೆಬ್ ಮಾಧ್ಯಮ’ಗಳು ಸಾಂಪ್ರದಾಯಿಕ ಪತ್ರಿಕೆ, ಟಿವಿ, ರೇಡಿಯೊ, ಕೇಬಲ್ ಗಳಂತೆ ಮಾಧ್ಯಮಗಳು.

ಆದ್ದರಿಂದ ಅವುಗಳಿಗೆ ಅನ್ವಯವಾಗುವ ನಿಬಂಧನೆಗಳು ಇವಕ್ಕೂ ಅನ್ವಯವಾಗಬೇಕು. ಇವೆರಡರ ನಡುವೆ ಮಾಧ್ಯಮಗಳಾಗಿ ಪೈಪೋಟಿಯಿರುವುದರಿಂದ ‘ಸಮತಟ್ಟಾದ ಆಟದ ಮೈದಾನ’ ಇರಬೇಕು. ಈ ಮಾಧ‍್ಯಮಗಳ ಅಭಿವ್ಯಕ್ತಿಯಲ್ಲಿ ಸಾರ್ವಜನಿಕರಿಗೇ ಆಕ್ಷೇಪಾರ್ಹ ಅಂಶಗಳಿದ್ದರೆ, ಅವುಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರದ ರೀತಿಯಲ್ಲಿ ಪರಿಹರಿಸಲು “ಮೆದುವಾದ ಮೇಲುಸ್ತುವಾರಿ ವಿಧಾನ” ಬೇಕು, ಎಂಬ ಉದ್ದೇಶದಿಂದ ಈ ನಿಯಮಗಳನ್ನೊಳಗೊಂಡ ಕಾನೂನು ತರಲಾಗಿದೆ ಎಂದು ಮಾಹಿತಿ-ಪ್ರಸಾರ ಹಾಗೂ ಇಲೆಕ್ಟ್ರಾನಿಕ್ಸ್-ಮಾಹಿತಿ ತಂತ್ರಜ್ಞಾನ ಇಲಾಖೆಯ ಸಚಿವ ರವಿಶಂಕರ್ ಪ್ರಸಾದ್ ಪತ್ರಿಕಾಗೋ಼ಷ್ಟಿಯಲ್ಲಿ ಹೇಳಿದ್ದರು. ಆದರೆ ನಿಯಮಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಇದು ನಿಜವೆಂಬಂತೆ ತೋರುವುದಿಲ್ಲ. ಇದು ವೆಬ್ ಅಥವಾ ಡಿಜಿಟಲ್ ಮಾಧ್ಯಮವನ್ನು ತೀವ್ರ ಸೆನ್ಸಾರ್ ಗೆ ಒಳಪಡಿಸುವತ್ತ ಕಾರ್ಯಾಂಗಕ್ಕೆ ಭಾರೀ ಅಧಿಕಾರವನ್ನು ಕೊಡುವ ಕಾನೂನು ಆಗಿದೆ ಎಂದು ತೋರುತ್ತದೆ.

‘ಸಮತಟ್ಟಾದ ಆಟದ ಮೈದಾನ’ವೂ ಅಲ್ಲ!
‘ಮೆದುವಾದ ಮೇಲುಸ್ತುವಾರಿ’ ಯೂ ಅಲ್ಲ!

 ನಿಯಮಗಳಲ್ಲಿ ಮೂರು ಹಂತಗಳ ದೂರು ಪರಿಹಾರ ವಿಧಾನವನ್ನು ವಿಧಿಸಲಾಗಿದೆ. ಮೊದಲ ಹಂತ ವೆಬ್ ಮಾಧ್ಯಮವೇ. ಎರಡನೆಯ ಹಂತ ವಿಶ್ರಾಂತ ನ್ಯಾಯಾಧೀಶರು ಮುಖ್ಯಸ್ಥರಾಗಿರುವ ವೆಬ್ ಮಾಧ್ಯಮಗಳ ಉದ್ಯಮದ ಸ್ವಯಂ-ನಿಬಂಧನಾ ಸಂಘಟನೆ. ಈ ನ್ಯಾಯಾಧೀಶರನ್ನು ಸರಕಾರದ  ಮಾಹಿತಿ-ಪ್ರಸಾರ ಇಲಾಖೆ ಕೊಡುವ ಪಟ್ಟಿಯೊಳಗಿನಿಂದಲೇ ನೇಮಿಸಬೇಕು. ಮೂರನೆಯ ಹಂತದಲ್ಲಿರುವ, ಸರಕಾರದ ಹಲವು ವಿಭಾಗಗಳು ಪ್ರತಿನಿಧಿತವಾಗಿರುವ ಸಮಿತಿಯ ಮೇಲುಸ್ತುವಾರಿಯಲ್ಲಿ ಎಲ್ಲವೂ ನಡೆಯುತ್ತದೆ. ಸ್ವಯಂ-ನಿಬಂಧನಾ ಸಂಘಟನೆಯ ಉದ್ದೇಶ ಮತ್ತು ಆಚರಣೆಗಳ ಸಂಹಿತೆಯನ್ನು ರೂಪಿಸುವುದು ಸಹ ಈ ಸಮಿತಿಯೇ. ಸರಕಾರ ನಿರ್ವಹಿಸುವ ದೂರು ಪರಿಹಾರ ವೆಬ್ ತಾಣದ ನಿರ್ವಹಣೆ ಮತ್ತು ಈ ನಿಯಮಗಳ ಪ್ರಕಾರ ಶಿಕ್ಷಾ ಕ್ರಮಗಳನ್ನು ತೆಗೆದುಕೊಳ್ಳುವ ಅಧಿಕಾರವಿರುವ ಜಂಟಿ ಕಾರ್ಯದರ್ಶಿ ಸಹ ಈ ಸಮಿತಿಯ ನಿಯಂತ್ರಣದಲ್ಲೇ ಕೆಲಸ ಮಾಡುವುದು.

ಈ ಮೂರು ಹಂತದ ದೂರು ಪರಿಹಾರ ವಿಧಾನದಲ್ಲಿ ಕೆಳಗಿನ ಹಂತವಾದ ವೆಬ್ ಮಾಧ್ಯಮದಿಂದ ಆರಂಭವಾಗುತ್ತದೆ. ಅದು ದೂರನ್ನು ಪರಿಹರಿಸದಿದ್ದರೆ ಮೇಲಿನ ಹಂತಗಳಿಗೆ ಹೋಗುತ್ತದೆ ಎಂದು ನೀವು ನಿರೀಕ್ಷಿಸಿದ್ದರೆ ಅದು ತಪ್ಪು. ದೂರು ದಾಖಲಾಗುವುದು ಸರಕಾರದ ವೆಬ್ ತಾಣದಲ್ಲಿ. ಆ ದೂರನ್ನು ಮೂರನೇ ಹಂತದ ನಿರ್ವಾಹಕರು ಕೆಳಗಿನ ಎರಡು (ವೆಬ್ ಮಾಧ್ಯಮ ಮತ್ತು ಅವುಗಳ ಸ್ವಯಂ-ನಿಬಂಧನಾ ಸಂಘಟನೆ) ಹಂತಗಳಿಗೆ ಕಳಿಸುತ್ತಾರೆ. 15 ದಿನಗಳೊಳಗೆ ವೆಬ್ ಮಾಧ್ಯಮ ಅದನ್ನು ಪರಿಹರಿಸಿ ವೆಬ್ ತಾಣದಲ್ಲಿ ಕಾಣಿಸದಿದ್ದರೆ, ದೂರು ಎರಡನೆಯ ಮತ್ತು ಮೂರನೆಯ ಹಂತಕ್ಕೆ ಹೋಗುತ್ತದೆ. ಮೂರನೆಯ ಹಂತದ ಸರಕಾರದ ನಿರ್ಣಯ ಅಂತಿಮವಾದ್ದು ಆಗಿರುತ್ತದೆ. ಮಧ್ಯವರ್ತಿ ವೇದಿಕೆಗಳ ಸಂದರ್ಭದಲ್ಲಿ ವೈಯಕ್ತಿಕ ಅಕೌಂಟುಗಳನ್ನು ತಡೆ ಹಿಡಿಯುವ ನಿರ್ದೇಶನ ಕೋರ್ಟುಗಳಿಂದ ಅಥವಾ ಸರಕಾರದ ಜಂಟಿ ಕಾರ್ಯದರ್ಶಿಯಿಂದ ಬರಬಹುದು ಎಂಬುದನ್ನೂ ಗಮನಿಸಬೇಕು. ಹೀಗೆ ಮೂರು ಹಂತದ ದೂರು ಪರಿಹಾರ ವಿಧಾನ ಕೆಳಗಿನಿಂದ ಮೇಲಕ್ಕೆ ಅಲ್ಲ, ಮೇಲಿನಿಂದ ಕೆಳಕ್ಕೆ ಹರಿಯುತ್ತದೆ.

ಪ್ರಿಂಟ್ ಪತ್ರಿಕೆಗಳು ಮತ್ತು ಟಿವಿ ಗೆ ಅನ್ವಯವಾಗುವ ನಿಬಂಧನೆಗಳಲ್ಲಿ ಸರಕಾರಕ್ಕೆ ಯಾವುದೇ ಪಾತ್ರವಿಲ್ಲ. ಈ ಮಾಧ್ಯಮ ಸಂಘಟನೆಗಳ ಸ್ವಯಂ-ನಿಬಂಧನೆಗಳಷ್ಟೇ ಇರುವುದು. ಪ್ರಿಂಟ್ ಪತ್ರಿಕೆಗಳಿಗೆ ಪ್ರೆಸ್ ಕೌನ್ಸಿಲ್ ಮತ್ತು ಟಿವಿ ಗಳಿಗೆ ನ್ಯೂಸ್ ಬ್ರಾಡ್ ಕಾಸ್ಟಿಂಗ್ ಸ್ಟಾಂಡರ್ಡ್ಸ್ ಅಥಾರಿಟಿ ಯಂತಹ ಮಾಧ್ಯಮ ಸಂಘಟನೆಗಳು ಸ್ವಯಂ-ನಿಬಂಧನೆಗಳನ್ನು ಜಾರಿ ಮಾಡುತ್ತವೆ. ಆದರೆ ಮೇಲೆ ವಿವರಿಸಿದಂತೆ, ಈಗ ತಂದಿರುವ ಐಟಿ ನಿಯಮ 2021ರಲ್ಲಿ ಸರಕಾರಕ್ಕೆ ನೇರ ಮತ್ತು ಪ್ರಧಾನ ಪಾತ್ರವಿದೆ. ಇದು ಖಂಡಿತ ‘ಸಮತಟ್ಟಾದ ಆಟದ  ಮೈದಾನ’ ಅಲ್ಲ.  ಈ ನಿಯಮಗಳಲ್ಲಿ ದೂರು ನಿರ್ವಹಣೆ/ಪರಿಹಾರ ಮತ್ತು ಮೇಲ್ವಿಚಾರಣೆಯ ವಿವಿಧ ವಿಧಾನಗಳನ್ನು ನೋಡಿದರೆ, ಅವೆಲ್ಲದರಲ್ಲಿ (ವಕೀಲ, ಪೋಲಿಸ್ ಮತ್ತು ಜಜ್ ಈ) ಎಲ್ಲ ಪಾತ್ರಗಳನ್ನು ವಹಿಸುವ ಸರಕಾರದ ಕಟುಹಸ್ತ ಕಾಣುತ್ತದೆ  “ಮೆದುವಾದ ಮೇಲುಸ್ತುವಾರಿ ವಿಧಾನ” ಕಾಣುವುದಿಲ್ಲ.  ವಿವಾದ ಪರಿಹರಿಸಲು ಸರಕಾರದ ಮರ್ಜಿಯಿಂದ ಸ್ವತಂತ್ರವಾದ ಅರೆ-ನ್ಯಾಯಿಕ ಸಂಸ್ಥೆಯ ಸುತ್ತ ಕಟ್ಟಲಾದ ವ್ಯವಸ್ಥೆಯಿಲ್ಲ.

ಏಕೆ ವೆಬ್ ಮಾಧ್ಯಮ ನಿಬಂಧನೆಗೆ ತರಾತುರಿ?

ಮಾಧ್ಯಮ ನೀತಿಸಂಹಿತೆ ಉಲ್ಲಂಘನೆ ಯಾವುದು? ಮತ್ತು ಅವುಗಳ ಆಧಾರದ ಮೇಲೆ ಯಾವ ಶಿಕ್ಷಾ ಕ್ರಮ ಕೈಗೊಳ್ಳಬಹುದು? ಎಂಬುದರ ಕುರಿತು ನಿಯಮಗಳು ಅತ್ಯಂತ ಗೋಜಲಾಗಿವೆ, ಅಸ್ಪಷ್ಟವಾಗಿವೆ. “ಭಾರತದ ಐಕ್ಯತೆ, ಸಮಗ್ರತೆ, ಭದ್ರತೆ ಅಥವಾ ಸಾರ್ವಭೌಮತೆ, ಅಥವಾ ಸಾರ್ವಜನಿಕ ವ್ಯವಸ್ಥೆ”ಗೆ ಬೆದರಿಕೆಯೊಡ್ಡುವ; “ಅಪರಾಧವೆಂದು ಪರಿಗಣಿಸಲಾಗುವ ಯಾವುದೇ ಕಾರ್ಯಾಚರಣೆಯನ್ನು ಉತ್ತೇಜಿಸುವ”; “ಯಾವುದೇ ಕಾನೂನನ್ನು ಉಲ್ಲಂಘಿಸುವ”’; “ಯಾವುದೇ ಜನಾಂಗೀಯ ಅಥವಾ ಧಾರ್ಮಿಕ ಗುಂಪಿನ ಆಚರಣೆಗಳು, ನಂಬಿಕೆಗಳು, ಅಭಿಪ್ರಾಯಗಳು” ಇವುಗಳನ್ನು  ಗಮನಕ್ಕೆ ತೆಗೆದುಕೊಳ್ಳದ – ಅಭಿವ್ಯಕ್ತಿಗಳು,ಮಾಧ್ಯಮ ನೀತಿಸಂಹಿತೆ ಉಲ್ಲಂಘನೆ ಎನ್ನಲಾಗಿದೆ. ಇವೆಲ್ಲವೂ ಹೇಗೆ ಬೇಕಾದರೂ ವ್ಯಾಖ್ಯಾನಿಸಬಹುದಾದ, ಯಾವುದೇ ಸಂದರ್ಭಕ್ಕೂ ಅನ್ವಯಿಸಬಹುದಾದವುಗಳು. ಅದರಲ್ಲೂ ಪಕ್ಷಪಾತದ ನೀತಿಯನ್ನು ಅನುಸರಿಸುತ್ತಿರುವುದಕ್ಕೆ ಹೆಸರಾದ ಈಗಿನ ಸರಕಾರ ಇದನ್ನು ಬೇಕಾಬಿಟ್ಟಿಯಾಗಿ ಬಳಸಿ ಯಾವ ಕ್ರಮವನ್ನು ಬೇಕಾದರೂ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಉಗ್ರ ಬಲಪಂಥದ ಸಂಘಟಿತ ‘ಟ್ರಾಲ್ ಪಡೆ”ಗಳ ಕಾರ್ಯಾಚರಣೆಗಳು ಮತ್ತು ಯಾವುದೇ “ಕಾನೂನುಬಾಹಿರ” ಅಭಿವ್ಯಕ್ತಿಯನ್ನು ಸರಕಾರಕ್ಕೆ ವರದಿ ಮಾಡಬೇಕು ಎಂದು ಉತ್ತೇಜಿಸುವ  ಗೃಹ ಸಚಿವಾಲಯದ “ಸೈಬರ್ ಅಪರಾಧ ಸ್ವಯಂಸೇವಕರ” ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈ ದೂರು ಪರಿಹಾರ ವ್ಯವಸ್ಥೆ ಮಾಡಬಹುದಾದ ಅವಾಂತರಗಳನ್ನು ಸುಲಭವಾಗಿ ಊಹಿಸಬಹುದು.

ಟಿವಿ ಸುದ್ದಿ ಮಾಧ್ಯಮಗಳ ಸ್ವಯಂ-ನಿಬಂಧನಾ ಸಂಸ್ಥೆಗೆ ಅಗತ್ಯವಾದ ಕಾನೂನುಬದ್ಧ ಸ್ಥಾನಮಾನ ಕೊಡದೆ, ಕೆಲವು ಟಿವಿ ವಾಹಿನಿಗಳು ನಿಜವಾಗಿಯೂ ಎಲ್ಲರ ಒಪ್ಪಿತ ಮಾಧ್ಯಮ ನೀತಿಸಂಹಿತೆಗಳನ್ನು ಉಲ್ಲಂಘಿಸುವಾಗ ಯಾವುದೇ ರೀತಿಯ ಮಧ್ಯಪ್ರವೇಶ ಮಾಡದೆ ಸರಕಾರವು ತೆಪ್ಪಗಿರುವುದನ್ನು ನೋಡಿದ್ದೇವೆ. ನಿರ್ದಿಷ್ಟ ಸಮುದಾಯಗಳವರನ್ನು “ಗುಂಡಿಟ್ಟು ಕೊಲ್ಲಿ” ಎಂದು ಎಲ್ಲ ವಾಹಿನಿಗಳಲ್ಲಿ ಪ್ರಸಾರವಾದ ಉನ್ನತ ನಾಯಕರ ಭಾಷಣಗಳನ್ನು ಹರಡಲು;ಒಂದು ಧಾರ್ಮಿಕ ಪಂಥ ಕೊವಿದ್ ನ್ನು ಬೇಕೆಂತಲೇ ಹರಡುವ ಪಿತೂರಿ ನಡೆಸಿದೆ, ಒಂದು ಸಮುದಾಯ ಆಡಳಿತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹುನ್ನಾರ ನಡೆಸಿದೆ ಎಂಬಂತಹಭಾರೀ ಫೇಕ್ ಸುದ್ದಿಗಳನ್ನು ಹರಡಲು ಯಾವುದೂ ಅಡ್ಡಿಯಾಗಲಿಲ್ಲ. ಇಂತಹ ವಿಶೇ಼ಷ ಸಂದರ್ಭಗಳಲ್ಲಿ ಕೇಬಲ್ ಟಿವಿ ಜಾಲ ನಿಯಮಗಳು 1994 ಅಡಿಯಲ್ಲಿ ಸರಕಾರಕ್ಕೆ ಕ್ರಮಕೈಗೊಳ್ಳಲಿಕ್ಕೆ ಅವಕಾಶವಿದೆ. ಈಸಂದರ್ಭದಲ್ಲಿ, ಅವು ಆಳುವ ಪಕ್ಷದ ಹಿತಾಸಕ್ತಿಗೆ ಪೂರಕವಾಗಿದ್ದವು ಎಂಬ ಕಾರಣಕ್ಕೆ ಯಾವುದೇ ಕ್ರಮ ಕೈಗೊಳ್ಳದ ಸರಕಾರವು, ವೆಬ್ ಮಾಧ್ಯಮಗಳಲ್ಲಿ ಫೇಕ್  ಸುದ್ದಿ, ಟ್ರಾಲ್ ಪಡೆಗಳ ಹಾವಳಿ ತಡೆಲು ನೀತಿಸಂಹಿತೆಯನ್ನು ಜಾರಿ ಮಾಡಲು ಈ ಹೊಸ ಕಾನೂನು ತರಲು ಹೊರಟಿದೆ ಎಂಬುದು ನಂಬಲರ್ಹವೇ?ಪತ್ರಿಕೆ, ಟಿವಿಗಳ ಒಡೆಯರನ್ನು ಖರೀದಿ ಮಾಡಲು ಸಾಧ್ಯವಿರುವುದರಿಂದ ಮತ್ತು ಈಗಾಗಲೇ ಇದನ್ನು ಮಾಡಿರುವುದರಿಂದ ಅವನ್ನು ನಿಬಂಧಿಸುವ ಅಗತ್ಯ ಸರಕಾರಕ್ಕೆ ಕಾಣುತ್ತಿಲ್ಲ. ಆದರೆ ವೆಬ್ ಮಾಧ್ಯಮ ವೇದಿಕೆಗಳು ಹಲವರ ಒಡೆತನಗಳಲ್ಲಿ ಇರುವುದರಿಂದ ಮತ್ತು ಅವುಗಳನ್ನು ಖರೀದಿಸುವುದು ಕಷ್ಟಕರವಾದ್ದರಿಂದ ಅವುಗಳನ್ನು ‘ನಿಬಂಧಿಸುವುದು’ ಸರಕಾರಕ್ಕೆ ಅಗತ್ಯವಾಗಿ ಕಂಡು ಬಂದಿದೆ.

ಅದೇ ರೀತಿ “ಮಧ್ಯವರ್ತಿ ವೇದಿಕೆ” ಎಂದು ಹೇಳಿಕೊಳ್ಳುವ ಫೇಸ್ ಬುಕ್, ವಾಟ್ಸಪ್ ಮುಂತಾದ ದೈತ್ಯ ಕಂಪನಿಗಳು ತಮ್ಮ ಉದ್ಯಮದಲ್ಲಿ ಏಕಸ್ವಾಮ್ಯ ನಿರ್ಬಂಧಕ ಕಾನೂನುಗಳನ್ನು ಉಲ್ಲಂಘಿಸುವುದರ ವಿರುದ್ಧ ಕ್ರಮ ಕೈಗೊಳ್ಳುವ ಪೋಸು ಕೊಟ್ಟರೂ ಅದೂ ಈ ಕಾನೂನಿನ ಉದ್ದೇಶವಲ್ಲ. ಸಾಂಪ್ರದಾಯಿಕ ಮಾಧ್ಯಮಗಳ ಅಭಿವ್ಯಕ್ತಿಗಳನ್ನು ಯಾವುದೇ ಖರ್ಚಿಲ್ಲದೆ ಬಳಸುವ; ವೆಬ್ ಜಾಹೀರಾತಿನಲ್ಲಿ ಏಕಸ್ವಾಮ್ಯ ಸಾಧಿಸುವ; ತನ್ನ ಬಳಕೆದಾರರ ಖಾಸಗಿ ಮಾಹಿತಿಗಳನ್ನು ಕಾನೂನು ಬಾಹಿರವಾಗಿ ಜಾಹೀರಾತುದಾರರಿಗೆ ಮಾರಾಟ ಮಾಡುವ ಅವರ ಖಾಸಗಿತನಕ್ಕೆ ಧಕ್ಕೆ ತರುವ; ಹಣಪಾವತಿ ಮಾಡಲು ಸಿದ್ಧರಿರುವ ಬಳಕೆದಾರ ಕಂಪನಿ, ರಾಜಕೀಯ ಪಕ್ಷ, ಸಂಘಟನೆಗಳಿಗೆ ಅನುಕೂಲಕರವಾಗಿ ಇತರ ಬಳಕೆದಾರರ ಸಂವಹನವನ್ನು ತಿರುಚುವ ನಿಯಂತ್ರಿಸುವ; – ಇಂತಹ “ಮಧ್ಯವರ್ತಿ ವೇದಿಕೆ”ಗಳ ಅಕ್ರಮಗಳ ಮೇಲೆ ನಿರ್ಬಂಧ ಹೇರುವ  ಉದ್ದೇಶವೂ ಅಂಶಗಳೂ ಈ ಕಾನೂನಿನಲ್ಲಿ ಇಲ್ಲ. ಆಸ್ಟ್ರೇಲಿಯಾ, ಯುರೋಪಿನ ಕೆಲವು ಸರಕಾರಗಳು ಇಂತಹ ಪ್ರಯತ್ನ ನಡೆಸಿವೆ. ಫೇಸ್ ಬುಕ್, ವಾಟ್ಸಪ್ ಮುಂತಾದ ಇಂತಹ ವೇದಿಕೆಗಳನ್ನೂ, ಅಳುವ ಪಕ್ಷ ಮತ್ತು ಪರಿವಾರಗಳ, ಅವುಗಳ ಸದಸ್ಯರ ಫೇಕ್ ಸುದ್ದಿ, ಅಪಪ್ರಚಾರಕ್ಕೆ ಅಡ್ಡಿಯಾದಾಗ ಮಾತ್ರ ಬೆದರಿಸಲು, ಈ ಕಾನೂನುಗಳನ್ನು ಬಳಸಲು ಉದ್ದೇಶಿಸಿರುವಂತಿದೆ.

ಈಗಾಗಲೇ ಈ ಸರಕಾರ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನೂ ಎಲ್ಲಾ ಕಾನೂನುಗಳನ್ನು ಸರಕಾರದ ವಿರುದ್ಧ ದನಿಯೆತ್ತುವ ಎಲ್ಲರ ವಿರುದ್ಧ ಬಳಸುತ್ತದೆ ಎಂಬುದು ಜಗಜ್ಜಾಹೀರಾಗಿದೆ. ಹೀಗಿರುವಾಗ ಈ ಹೊಸ ಐಟಿ ನಿಯಮಗಳನ್ನೂ ತನ್ನ ವಿರುದ್ಧ ದನಿ ಎತ್ತುತ್ತಿರುವ ವೆಬ್ ಪತ್ರಿಕೆಗಳು, ವೆಬ್ ವೇದಿಕೆಗಳು, ವೆಬ್ ಮಾಧ್ಯಮಗಳ ವಿರುದ್ಧ ಬಳಸಲೋಸುಗವೇ ತಂದಿದೆ ಎಂದು ಅವುಗಳಿಗೆ ಅನುಮಾನ ಬಂದರೆ ಆಶ್ಚರ್ಯವೇನಿಲ್ಲ.

ಕಾನೂನು ತೊಡಕುಗಳು, ಅಸಾಂವಿಧಾನಿಕ ಅಂಶಗಳು

ಐಟಿ ಕಾನೂನಿನ ನಿಯಮಗಳಲ್ಲಿ ತಂದಿರುವ ಬದಲಾವಣೆಗಳು ಮೂಲ ಕಾನೂನನ್ನು ಉಲ್ಲಂಘಿಸುವಂತಿವೆ. ಡಿಜಿಟಲ್ ಪತ್ರಿಕೆಗಳು ಮತ್ತು ಇತರ ವೆಬ್ ಮಾಧ‍್ಯಮಗಳನ್ನು ಈ ಕಾನೂನಿನಲ್ಲಿ ಸೇರಿಸಲಾಗಿದೆ. ಆದರೆ ಇವುಗಳ ಮೇಲೆ ಕ್ರಮ ತೆಗೆದುಕೊಳ್ಳುವ ಜವಾಬ್ದಾರಿ ಮಾಹಿತಿ-ಪ್ರಸಾರ ಇಲಾಖೆಯ ಮೇಲಿದೆ. ಈ ಕಾನೂನಿಗೆ ಸಂಬಂಧಿಸಿದ ಇಲಾಖೆಯಾದ ಇಲೆಕ್ಟ್ರಾನಿಕ್ಸ್  ಮತ್ತು ಐಟಿ ಇಲಾಖೆಯ ಮೇಲಲ್ಲ. ಈ 2021ರ ಕಾನೂನು  ಮೂಲ ಐಟಿ ಕಾನೂನು 2000 ರ ನಿಯಮಗಳನ್ನು ರೂಪಿಸುತ್ತದೆ. ಮೂಲ ಕಾನೂನು ಯಾವುದೇ ಅಭಿವ್ಯಕ್ತಿಯ ನಿಬಂಧನೆಯನ್ನು ಒಳಗೊಂಡಿಲ್ಲವಾದ್ದರಿಂದ ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ರೂಪಿಸುವಂತಿಲ್ಲ. ಐಟಿ ಕಾನೂನಿನಲ್ಲಿ ಅಭಿವ್ಯಕ್ತಿಯ ನಿಬಂಧನೆಗೆ ಸಂಬಂಧಿಸಿದ ಕುಖ್ಯಾತ ಕಲಮು 66ಎ ಯನ್ನು ಅಸಾಂವಿಧಾನಿಕವೆಂದು ಸುಪ್ರೀಂ ಕೋರ್ಟು ರದ್ದು ಮಾಡಿತ್ತು.ವೆಬ್ ಮಾಧ್ಯಮದ ಅಭಿವ್ಯಕ್ತಿಯ ನಿಬಂಧನೆ ಮಾಡಬೇಕಾದರೆ ಪ್ರತ್ಯೇಕ ಕಾನೂನು ಮಾಡುವ ಅಗತ್ಯವಿದೆ.  ಅದಕ್ಕೆ ಅಗತ್ಯವಾದ ಸಾರ್ವಜನಿಕ ಪರಾಮರ್ಶೆ ಇತ್ಯಾದಿ ಮಾಡಬೇಕಾಗುತ್ತದೆ. ಆದ್ದರಿಂದ ಅದರಿಂದ ತಪ್ಪಿಸಿಕೊಳ್ಳಲು ಐಟಿ ಕಾನೂನಿನ ನಿಯಮಗಳಲ್ಲಿ ಅದನ್ನು ಸೇರಿಸಲಾಗಿದೆ. ಇದು ವೆಬ್ ಮಾಧ‍್ಯಮಗಳ ನಿಬಂಧನೆಗಳನ್ನು ಹಿಂಬಾಗಿಲಿಂದ ತರುವ ಪ್ರಯತ್ನವಲ್ಲದೆ ಮತ್ತೇನಲ್ಲ.

ಈ ಕಾನೂನಿನಲ್ಲಿರುವ ನಿಯಮಗಳಲ್ಲಿ ಇನ್ನಷ್ಟು ಹೆಚ್ಚಿನ ಕಾನೂನು ತೊಡಕುಗಳಿವೆ. ಇಲ್ಲಿನ ಹಲವು ನಿಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಖಾಸಗಿತನದ ಹಕ್ಕುಗಳನ್ನು ಉಲ್ಲಂ‍ಘಿಸುತ್ತವೆ. ಎಲ್ಲ ವೆಬ್ ಮಾಧ್ಯಮಗಳು ಒಂದೇ ಬಗೆಯವಲ್ಲ. ಆದ್ದರಿಂದ ಅವುಗಳ ನಿಬಂಧನೆ ಸಹ ಭಿನ್ನವಾಗಿರಬೇಕಾಗುತ್ತದೆ. ಇಂತಹ ವಿಷಯಗಳತ್ತವೂ ಈ ಕಾನೂನು ರಚಿಸುವಾಗ ಗಮನ ಹರಿಸಿದಂತಿಲ್ಲ. ಉದಾಹರಣೆಗೆ ಈ ಕಾನೂನು, ಸಂದೇಶ ವಾಹಕ ವೇದಿಕೆಗಳನ್ನು (ಉದಾ: ವಾಟ್ಸಪ್ ) ಆಕ್ಷೇಪಾರ್ಹ ಸಂದೇಶ ಕಳಿಸಿದ ಮೂಲವ್ಯಕ್ತಿಯ ಸಂದೇಶ ಮತ್ತು ವಿವರಗಳನ್ನು ಕೊಡಲು ಬಾಧ್ಯ ಮಾಡುತ್ತದೆ. ಆದರೆ ಸಂದೇಶಗಳು ಈ ತುದಿಯಿಂದ ಆ ತುದಿಯವರೆಗೆ ಕೋಡ್ ಬಳಸಿ ರಹಸ್ಯವಿರುವಾಗ ಯಾವ ಆದಾರದ ಮೇಲೆ ಅದನ್ನು ಜಾರಿ ಮಾಡಬೇಕು? ಹಾಗೆ ಜಾರಿ ಮಾಡಿದರೆ ಅದು ಐಟಿ ಕಾನೂನಿನ ಕಲಮು 79ಎ ಉಲ್ಲಂಘನೆಯಾಗುವುದಿಲ್ಲವೇ? ಇಂತಹ ಹಲವು ಕಾನೂನು ತೊಡಕುಗಳು ಇದ್ದು ಈ ಕಾನೂನು ಅಸಾಂವಿಧಾನಿಕವಾಗಿರುವುದಲ್ಲದೆ,ಕೋರ್ಟಿನ ಪರಾಮರ್ಶೆ ಮುಂದೆ ನಿಲ್ಲುವುದು ಕಷ್ಟವಿದೆ.

ಇದು ಸರಕಾರಕ್ಕೂ ಗೊತ್ತಿದೆ. ಈ ಕಾನೂನಿಗೆ ಸವಾಲು ಹಾಕಿದವರ ಮೇಲೆ ಇತರ ಕಾನೂನು ಮತ್ತು ಸಂಸ್ಥೆಗಳನ್ನು ಬಳಸಿ ಕ್ರಮಕೈಗೊಳ್ಳುವ ಭಯವಿದ್ದೇ ಇರುತ್ತದೆ. ಯಾರಾದರೂ ಅದಕ್ಕೆ ಕಾನೂನಿನ, ಸಾಂವಿಧಾನಿಕ ಸವಾಲು ಹಾಕಿದರೂ ಕೋರ್ಟುಗಳಲ್ಲಿ ವಿಳಂಬದಿಂದಾಗಿ ತಾನು ಸುರಕ್ಷಿತ ಎಂದು ಸರಕಾರ ಭಾವಿಸಿರಬೇಕು. ಇದೇ ಐಟಿ ಕಾನೂನು ಬಳಸಿ ಹಲವು ಪ್ರದೇಶಗಳಲ್ಲಿ ದೀರ್ಘ ಕಾಲ ನೆಟ್ ಕಡಿತ ಮಾಡಿದ್ದು ಕಾನೂನು ಬಾಹಿರವೇ, ಇದು ಅಸಾಂವಿಧಾನಿಕ ಕ್ರಮವೇ ಎಂಬ ಪ್ರಶ‍್ನೆ ಕೋರ್ಟಿನ ಮುಂದೆ ಹಲವು ತಿಂಗಳುಗಳಿಂದ ಬಿದ್ದಿದೆ. ಈ ನಡುವೆ ಹಿಂಬಾಗಿಲಿಂದ ಸರಕಾರಕ್ಕೆ ಕಿರಿ ಕಿರಿಯುಂಟು ಮಾಡುವ ವೆಬ್ ಮಾಧ್ಯಮಗಳ ಮೇಲೆ ಕಟುಕ್ರಮ ಕೈಗೊಳ್ಳಬಹುದು ಎಂದು ಸರಕಾರ ಭಾವಿಸಿದಂತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಐಟಿ ನಿಯಮಗಳು 2021, ಸರಕಾರವನ್ನು ಟೀಕಿಸುವ  ವೆಬ್  ಮಾಧ್ಯಮಗಳ ಮೇಲೆ ಕಟುಕ್ರಮಗಳನ್ನು ಯಾವುದೇ ಲಂಗುಲಾಗಾಮಿಲ್ಲದೆ  ತೆಗೆದುಕೊಳ್ಳುವ ಅಧಿಕಾರವನ್ನು ಸರಕಾರಕ್ಕೆ ಕೊಡುವ ಮೂಲಕ ಇವುಗಳ ಸಾರಾ ಸಗಟು ಸೆನ್ಸಾರಿನತ್ತ ದಾಪುಗಾಲಿಟ್ಟಿದೆ.

Donate Janashakthi Media

Leave a Reply

Your email address will not be published. Required fields are marked *