ಬಿಜೆಪಿಯವರು ಮಾಡಿರುವ ತಪ್ಪನ್ನು ನಾವು ಅಧಿಕಾರಕ್ಕೆ ಬಂದಾಗ ಸರಿ ಪಡಿಸುತ್ತೇವೆ : ಡಿಕೆಶಿ

ಬೆಂಗಳೂರು : ವಿಧಾನಸಭೆ ಚುನಾವಣೆಗೆ ನಾವು ಮೂರು ತಿಂಗಳ ಹಿಂದೆಯೇ ಸಿದ್ಧವಾಗಿದ್ದೇವೆ. ಎಷ್ಟು ಬೇಗ ಚುನಾವಣೆ ನಡೆಯುತ್ತದೆಯೋ ಅಷ್ಟು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಲಿದೆ. ಈ ಸರ್ಕಾರ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಮೀಸಲಾತಿ ವಿಷಯದಲ್ಲಂತೂ ಜನಾಕ್ರೋಶ ಹೆಚ್ಚಾಗಿದೆ. ಯಾರಿಗೂ ಸಮಧಾನ ಇಲ್ಲ. ಈ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳು ನ್ಯಾಯಲಯದಲ್ಲಿ ನಿಲ್ಲುವುದಿಲ್ಲ. ಬಿಜೆಪಿಯವರು ಮಾಡಿರುವ ತಪ್ಪನ್ನು ನಾವು ಅಧಿಕಾರಕ್ಕೆ ಬಂದಾಗ ಸರಿ ಪಡಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವರಿಗೂ ಸಮಪಾಲು, ಸಮಬಾಳು ಮಾದರಿಯಲ್ಲಿ ಜನಸಂಖ್ಯೆ ಆಧಾರದಲ್ಲಿ ಅವಕಾಶಗಳ ಹಂಚಿಕೆ ಮಾಡಲಾಗುವುದು ಎಂದರು. ಬಿಜೆಪಿಯವರು ಕೆಲ ಸಮುದಾಯಕ್ಕೆ ಅನ್ಯಾಯ ಮಾಡಿ ತಮ್ಮ ಮನೆಯ ಆಸ್ತಿ ಎಂಬಂತೆ ಹಂಚಿಕೊಂಡಿದ್ದಾರೆ. ಯಾವ ಆಧಾರದ ಮೇಲೆ ಮೀಸಲಾತಿ ಹಂಚಿಕೆ ಮಾಡಲಾಗಿದೆ ಎಂದು ಬಹಿರಂಗ ಪಡಿಸಲಿ. ಯಾವ ಸಮಿತಿ ವರದಿ ನೀಡಿದೆ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ವರದಿ ನೀಡಿದೆಯೇ ? ಸದಾಶಿವ ಆಯೋಗವನ್ನು ರಚನೆ ಮಾಡಿದ್ದು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ. ಆ ವರದಿ ಏನಿದೆ ಎಂದು ಜನರ ಮುಂದಿಡಿ, ಬೇರೆಯವರಿಗೆ ತೊಂದರೆ ಮಾಡಿ ಮೀಸಲಾತಿ ಹಂಚಿಕೆ ಮಾಡುವ ಮೂಲಕ ಮುಖ್ಯಮಂತ್ರಿ ಜೇನುಗೂಡಿಗೆ ಕೈ ಹಾಕಿಲ್ಲ, ಕಡಜದ ಗೂಡಿಗೆ ಕೈ ಇಟ್ಟಿದ್ದಾರೆ ಎಂದು ಹೇಳಿದರು.

ಕೈ ಟಿಕೆಟ್‌ಗಾಗಿ ಅನ್ಯ ಪಕ್ಷಗಳು ದುಂಬಾಲು ಬೀಳುತ್ತಿವೆ :  ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡುವಂತೆ ಅನ್ಯ ಪಕ್ಷಗಳ ಶಾಸಕರು ನಾವಿದ್ದಲ್ಲಿಗೆ ಹುಡುಕಿಕೊಂಡು ಬಂದು ದುಂಬಾಲು ಬೀಳುತ್ತಿದ್ದಾರೆ. ನಾವು ಯಾರಿಗೂ ಕರೆ ಮಾಡಿ ಕರೆಯುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಬಿಜೆಪಿಯ ಭ್ರಷ್ಟ ಆಡಳಿತ ತೊಲಗಿದರೆ ಸಾಕು ಎಂದು ಜನ ಆಕ್ರೋಶಗೊಂಡಿದ್ದಾರೆ. ಬೆಲೆ ಏರಿಕೆ ನಿಯಂತ್ರಿಸಿ, ಆದಾಯವನ್ನು ದುಪ್ಪಟ್ಟು ಮಾಡುವುದಾಗಿ ಬಿಜೆಪಿ ಹೇಳಿತ್ತು. ಅದ್ಯಾವುದನ್ನು ಮಾಡಿಲ್ಲ. ನಾವು ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಹಾಗೂ ಯುವಶಕ್ತಿ ಯೋಜನೆಗಳ ಮೂಲಕ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ಭರವಸೆಗಳನ್ನು ನೀಡಿದ್ದೇವೆ ಎಂದರು.

ಬಿಜೆಪಿ ನೀಡಿದ ಜಾಹೀರಾತು ಏನೆಂದು ನೋಡಿಕೊಳ್ಳಲಿ: ನಮ್ಮ ಭರವಸೆಗಳನ್ನು ಸುಳ್ಳು ಎಂದು ಹೇಳುವ ಬಿಜೆಪಿ 2013-14ರಲ್ಲಿ ಯಾವ ಭರವಸೆಗಳನ್ನು ನೀಡಿತ್ತು, ಆಗ ಏನೆಂದು ಜಾಹಿರಾತು ನೀಡಿತ್ತು ಎಂದು ತೆಗೆದು ನೋಡಲಿ. ಏಳರಿಂದ ಎಂಟು ಗಂಟೆ ವಿದ್ಯುತ್ ಸರಬರಾಜು, ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿತ್ತು. ಅದನ್ನು ಈಡೇರಿಸಿದೆಯೇ ಎಂದು ಪ್ರಶ್ನಿಸಿದರು. ಇಂದಿನಿಂದ ಬಿಜೆಪಿ ಸರ್ಕಾರದ ಅಂತ್ಯದ ದಿನಗಳು ಆರಂಭವಾಗಿವೆ, 60 ದಿನದಲ್ಲಿ ಕೊನೆಯಾಗಲಿದೆ. ಕಾಂಗ್ರೆಸ್ ನಿಶ್ಚಲ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ : ವಿಧಾನಸಭೆ ಚುನಾವಣೆ : ಇಂದಿನಿಂದಲೇ ನೀತಿ ಸಂಹಿತೆ ಜಾರಿ, ಪಾಲಿಸಬೇಕಾದ ನಿಯಮಗಳೇನು ?

ಬಿಜೆಪಿ ಪ್ರತಿಹಂತದಲ್ಲೂ ಜನರನ್ನು ದಾರಿ ತಪ್ಪಿಸುತ್ತಿದೆ : ಬಿಜೆಪಿ ಸರ್ಕಾರ ಜನರಿಗೆ ಎಲ್ಲಾ ಹಂತದಲ್ಲೂ ಸುಳ್ಳು ಹೇಳುತ್ತಾ ಬಂದಿದೆ. ಮೀಸಲಾತಿ ಹಂಚಿಕೆಯಷ್ಟೆ ಅಲ್ಲ, ಮಹದಾಯಿ ನದಿಗೆ ಅಡ್ಡಲಾಗಿ ಕಳಸಾ ಬಂಡೂರಿ ಬಳಿ ಅಣೆಕಟ್ಟು ಕಟ್ಟುವ ಯೋಜನೆಗೆ ಅನುಮತಿ ನೀಡುವ ವಿಷಯದಲ್ಲೂ ಸುಳ್ಳು ಹೇಳಲಾಗಿದೆ. ಅಣೆಕಟ್ಟು ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ರಾಜ್ಯ ಸರ್ಕಾರ ಭಾರಿ ಪ್ರಚಾರ ನಡೆಸಿತ್ತು. ಮುಖ್ಯಮಂತ್ರಿಯಾದಿಯಾಗಿ ಎಲ್ಲಾ ಸಚಿವರು ಕೇಂದ್ರವನ್ನು ಕೊಂಡಾಡಿದರು. ಬೆಳಗಾವಿಯ ಕಿತ್ತೂರಿನಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಎರಡು ರಾಜ್ಯಗಳ ವಿವಾದವನ್ನು ಅಂತ್ಯಗೊಳಿಸಿದ್ದಕ್ಕಾಗಿ ಕರ್ನಾಟಕದ ಬಿಜೆಪಿ ನಾಯಕರಿಗೆ ಅಭಿನಂದನೆ ತಿಳಿಸಿದ್ದಾರೆ. ನಿನ್ನೆ ಗೋವಾದ ವಿಧಾನಸಭೆಯಲ್ಲಿ ನೀಡಲಾಗಿರುವ ಲಿಖಿತ ಉತ್ತರದಲ್ಲಿ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿ ಇರುವುದರಿಂದ ಅಣೆಕಟ್ಟು ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಬಿಜೆಪಿ ಪ್ರತಿಹಂತದಲ್ಲೂ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *