ಸಂದರ್ಭ ಬಂದರೆ ಕುಮಾರಸ್ವಾಮಿ ಬಂಧನ – ಸಿಎಂ ಸಿದ್ದರಾಮಯ್ಯ

ಕೊಪ್ಪಳ : ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿಯವರನ್ನು ಅರೆಸ್ಟ್ ಮಾಡುವುದಾಗಿ ನಾವು ಎಲ್ಲಿಯೂ ಹೇಳಿಲ್ಲ. ಬಂಧಿಸುವ ಸಂದರ್ಭ ಬಂದರೆ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಗಿಣಿಗೇರ ಏರ್ಸ್ಟ್ರಿಪ್ಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಧಿಸಬೇಕಾದ ಸಂದರ್ಭ ಬಂದರೆ ಮುಲಾಜಿಲ್ಲದೆ ಬಂಧಿಸುತ್ತೇವೆ. ಸದ್ಯಕ್ಕೆ ಅಂತಹ ಯಾವುದೇ ಸಂದರ್ಭ ಇಲ್ಲ ಎಂದು ಹೇಳಿದರು. ಕುಮಾರಸ್ವಾಮಿ ಭಯ ಬಿದ್ದಿದ್ದಾರೆ. ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ಕೊಟ್ಟುಬಿಡಬಹುದು ಎಂಬ ಆತಂಕವಿದೆ. ಲೋಕಾಯುಕ್ತ ಸಂಸ್ಥೆ ತನಿಖೆ ಮಾಡಿ ಸಾಕ್ಷ್ಯ ಸಂಗ್ರಹಿಸಿ ನಂತರ ಅಭಿಯೋಜನೆಗೆ ಅನುಮತಿ ಕೇಳಿದೆ.

ಅದರ ಅರ್ಥ ಅವರ ವಿರುದ್ಧ ಸಾಕ್ಷ್ಯ ಇದೆ ಎಂದು. ಸಾಕ್ಷ್ಯ ಪುರಾವೆ ಇದ್ದರೂ ಅಂತಹ ಪ್ರಕರಣಗಳನ್ನು ಕೈಬಿಟ್ಟುಬಿಡಬೇಕೆ? ಎಂದು ಪ್ರಶ್ನಿಸಿದರು.ಗಣಿಗಾರಿಕೆಗೆ ಅನುಮತಿ ನೀಡಿದ ವಿಚಾರವಾಗಿ ತನಿಖೆಗೆ ಎಸ್ಐಟಿ ರಚಿಸಲಾಗಿತ್ತು. ಸದರಿ ತನಿಖಾ ಸಂಸ್ಥೆ ರಾಜ್ಯಪಾಲರಿಂದ ಅಭಿಯೋಜನೆಗೆ ಪೂರ್ವಾನುಮತಿ ಕೇಳಿದೆ. ನಾವಾಗಲೀ, ಖಾಸಗಿ ವ್ಯಕ್ತಿಯಾಗಲೀ ಅನುಮತಿ ಕೇಳಿಲ್ಲ. ರಾಜ್ಯಪಾಲರು ಅನುಮತಿ ಕೊಟ್ಟಿಲ್ಲ. ಹಲವು ದಿನಗಳಿಂದಲೂ ಅರ್ಜಿ ಬಾಕಿ ಉಳಿದಿದೆ. ಸೋಮವಾರ ಲೋಕಾಯುಕ್ತ ಸಂಸ್ಥೆ ಎರಡನೇ ಪತ್ರ ಬರೆದಿದೆ ಎಂದು ಹೇಳಿದರು.

ಇದನ್ನೂ ಓದಿ :ರಾಜ್ಯಪಾಲರ ವಿಚಾರದಲ್ಲಿ ಜಾತಿ ರಾಜಕಾರಣ ಸರಿಯಲ್ಲ : ಪರಮೇಶ್ವರ್‌

ಟಿ.ಜೆ.ಅಬ್ರಹಾಂ ದೂರು ಕೊಟ್ಟ ಕೆಲವೇ ಗಂಟೆಗಳಲ್ಲಿ ನನಗೆ ಶೋಕಾಸ್ ನೋಟೀಸ್ ನೀಡಿದ್ದರು. ಮೈಸೂರಿನ ಮುಡಾ ಪ್ರಕರಣದಲ್ಲಿ ಯಾವುದೇ ಪೊಲೀಸ್ ಅಧಿಕಾರಿಗಳು ಅಥವಾ ಲೋಕಾಯುಕ್ತ ಪೊಲೀಸರು ಅಭಿಯೋಜನೆಗೆ ಅನುಮತಿ ಕೇಳಿರಲಿಲ್ಲ. ಪ್ರಾಥಮಿಕ ತನಿಖೆಯೂ ಆಗಿರಲಿಲ್ಲ. ಆದರೂ ರಾಜ್ಯಪಾಲರು ಪೂರ್ವಾನುಮತಿ ನೀಡಿದ್ದಾರೆ. ಕುಮಾರಸ್ವಾಮಿ ಪ್ರಕರಣದಲ್ಲಿ ತನಿಖೆಯಾಗಿದ್ದರೂ ಅನುಮತಿ ಕೊಟ್ಟಿಲ್ಲ. ಇದು ತಾರತಮ್ಯ ಅಲ್ಲವೇ? ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಸದಾಕಾಲ ಹಿಟ್ ಅಂಡ್ ರನ್ ರೀತಿ ವರ್ತಿಸುತ್ತಾರೆ. ಯಾವುದನ್ನೂ ತಾರ್ಕಿಕ ಹಂತಕ್ಕೆ ತೆಗೆದುಕೊಂಡು ಹೋಗಿಲ್ಲ. ತಮ ಬಳಿ ಪೆನ್ಡ್ರೈವ್ ಇದೆ ಎಂದು ಜೇಬಿಂದ ತೆಗೆದು ತೋರಿಸಿದ್ದರು. ಇವತ್ತಿನವರೆಗೂ ಅದನ್ನು ಬಿಡುಗಡೆ ಮಾಡಿಲ್ಲ. ಅವರ ಮಾತು ನಂಬುವಂತಿಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ಕೊಪ್ಪಳದಲ್ಲಿ ವಿಮಾನ ಅಭಿವೃದ್ಧಿ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಕೆಲಸದಲ್ಲಿ ನಾವು ರಾಜಕಾರಣ ಮಾಡುವುದಿಲ್ಲ. ಕೊಪ್ಪಳದ ಬಗ್ಗೆ ವಿಶೇಷ ಪ್ರೀತಿಯಿದೆ. ಜಿಲ್ಲೆಯ ಜನರಿಗೆ ಅನುಮಾನ ಕಾಡದಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಹೆಸರುಕಾಳು ಬೆಲೆ ಕುಸಿದಿದ್ದು, ಅದನ್ನು ಬೆಂಬಲ ಬೆಲೆಯಡಿ ಖರೀದಿಸಲು ಶೀಘ್ರವೇ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

 

Donate Janashakthi Media

Leave a Reply

Your email address will not be published. Required fields are marked *