ಯುದ್ಧ
ಬೆಂಗಳೂರು: ವೆನೆಜುವೆಲಾ ವಿರುದ್ಧ ಯು.ಎಸ್. ಆಕ್ರಮಣ ಮತ್ತು ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರ ಅಪಹರಣವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇದು ವಿಶ್ವಸಂಸ್ಥೆಯ ಚಾರ್ಟರನ್ನು ಮತ್ತು ಹಲವು ಅಂತರರಾಷ್ಟ್ರೀಯ ಕಾನೂನು ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುವ, ಒಂದು ಸಾರ್ವಭೌಮ ರಾಷ್ಟ್ರದ ಮೇಲೆ ನಡೆಸಿರುವ ದಾಳಿ ಎಂದು ಆರೋಪಿಸಿ ಎಡಪಕ್ಷಗಳು ಪ್ರತಿಭಟನೆ ನಡೆಸಿದವು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇಂದು ಸಿಪಿಐ, ಸಿಪಿಐ(ಎಂ), ಸಿಪಿಐ(ಎಂ.ಎಲ್-ಲಿಬರೇಶನ್), ಎಸ್.ಯು.ಸಿ.ಐ(ಸಿ), ಎಐಎಫ್‌ಬಿಯ ಪಕ್ಷದ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ವೆನೆಜುವೆಲಾ ಜೊತೆ ನಾವಿದ್ದೇವೆ ಎಂದು ಘೋಷಣೆ ಮೊಳಗಿಸಿದರು.
ಸೆಪ್ಟೆಂಬರ್ 2025ರಿಂದ ‘ನರ್ಕೊ-ಟೆರರಿಸ್ಟ (ಮಾದಕದ್ರವ್ಯ-ಭಯೋತ್ಪದಕ) ಗ್ಯಾಂಗುಗಳ ವಿರುದ್ಧ ಯುದ್ಧದ ಹುಸಿನೆಪದಲ್ಲಿ ವೆನೆಜುವೇಲಾದ ಸುತ್ತಲೂ ಕಳೆದ ಹಲವು ದಶಕಗಳಲ್ಲಿ ಕಂಡಿರದ ಭಾರೀ ನೌಕಾ-ವಾಯುಸೇನಾ ಜಮಾವಣೆಯಾಗಿತ್ತು. ಯಾವುದೇ ಪುರವಾಯಿಲ್ಲದೆ ನರ್ಕೊ-ಟೆರರಿಸ್ಟ ಗ್ಯಾಂಗುಗಳದ್ದು ಎಂದು ಆಪಾದಿಸಿ ೩೫ ನಾಗರಿಕ ದೋಣಿಗಳ ಮೇಲೆ ಬಾಂಬ್ ದಾಳಿ ನಡೆಸಿ 115 ಅಮಾಯಕ ಜನರ ಕಗ್ಗೊಲೆ ಮಾಡಲಾಗಿದೆ. “ದಿಗ್ಬಂಧಿತ ತೈಲ” ಸಾಗಾಣಿಕೆಯೆಂದು ಆಫಾದಿಸಿ ಎರಡು ತೈಲ ಹಡಗಗಳನ್ನು ಕಡಲುಗಳ್ಳತನದಂತಹ ಕಾರ್ಯಾಚರಣೆಯಲ್ಲಿ ತಡೆದು ನಿಲ್ಲಿಸಲಾಗಿದೆ ಎಂದು ಪ್ರತಿಭಟನೆಕಾರರು ಆರೋಪಿಸಿದರು.
ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲಿ, ವೆನೆಜುವೆಲಾದ ತೈಲ ನಿಕ್ಷೇಪಗಳನ್ನು ವಶಪಡಿಸಿಕೊಳ್ಳುವುದಾಗಿ ಹೇಳಿರುವುದು, ‘ನರ್ಕೊ-ಟೆರರಿಸಂ’ ಹೆಸರಿನ ಆಪಾದನೆ ಹಸಿ ಸುಳ್ಳು ಮತ್ತು ಈ ಆಕ್ರಮಣದ ಹಿಂದಿನ ನಿಜವಾದ ದುರುದ್ದೇಶಗಳನ್ನು ಬಯಲಿಗೆ ತಂದಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಒಂದು ಹೆಜ್ಜೆ ಮುಂದೆ ಹೋಗಿ ಕ್ಯೂಬಾ ಮತ್ತು ಮೆಕ್ಸಿಕೊ ಅವರ ಮುಂದಿನ ಗುರಿಯಾಗಿರುತ್ತಾರೆ ಎಂದು ಎಚ್ಚರಿಸಿದರು.
ಇದನ್ನೂ ಓದಿ: 23 ವಿಧೇಯಕಗಳಲ್ಲಿ 7ಕ್ಕೆ ರಾಜ್ಯಪಾಲರ ಅನುಮೋದನೆ
ಅಮೆರಿಕದ ‘ರಾಷ್ಟ್ರೀಯ ಭದ್ರತಾ ರಣನೀತಿ 2025’ ಬಿಡುಗಡೆಯಾದ ಕೆಲವು ದಿನಗಳ ನಂತರ ಬರುತ್ತಿರುವ ಈ ಹೇಳಿಕೆಗಳು, ಯುಎಸ್ ಸಾಮ್ರಾಜ್ಯಶಾಹಿ ಇಡೀ ಪ್ರಪಂಚದ ಮೇಲೆ ತನ್ನ ಪ್ರಾಬಲ್ಯವನ್ನು ಹೇರುವ ಪ್ರಯತ್ನದಲ್ಲಿ ಮಿಲಿಟರಿ ದಾಳಿಗಳನ್ನು ನಡೆಸಲೂ ಹೇಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಇಡೀ ಪಶ್ಚಿಮ ಗೋಳಾರ್ಧವನ್ನು ತನ್ನ ಹಿತ್ತಲಿನಂತೆ ಪರಿಗಣಿಸುವ ಮತ್ತು ತನ್ನದೇ ಮಾತು ನಡೆಯಬೇಕು ಎನ್ನುವ ಕುಖ್ಯಾತ ಮನ್ರೋ ಸಿದ್ಧಾಂತದ ಟ್ರಂಪ್ ಉಪಬಂಧವನ್ನು ಹೇರಲು ಯು.ಎಸ್. ಬಯಸುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ವೆನೆಜುವೇಲಾದ ಮೇಲೆ ಈಗಿನ ದಾಳಿ ಅಲ್ಲಿ ತೈಲ ಮತ್ತು ಹಲವು ಖನಿಜಗಳ ನಿಕ್ಷೇಪವಿದೆ ಎಂಬ ಕಾರಣಕ್ಕೆ ಮಾತ್ರವಲ್ಲ. ಈ ಶತಮಾನದ ಆರಂಭದಿಂದ ಆಗಿನ ಅಧ್ಯಕ್ಷ ಚವೇಝ್ ಆರಂಭಿಸಿದ ‘ಬೊಲಿವಾರಿಯನ್ ಕ್ರಾಂತಿ’ ಯು.ಎಸ್ ಸರಕಾರವನ್ನು ಆತಂಕಿತವಾಗಿಸಿತ್ತು. ಇದರ ಭಾಗವಾಗಿ – ತೈಲ ನಿಕ್ಷೇಪಗಳನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿದ ಹೈಡ್ರೋ ಕಾರ್ಬನ್ ಕಾನೂನು, ತೈಲ ಆದಾಯದ ದೊಡ್ಡ ಭಾಗವನ್ನು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸಿದ್ದು, ಲ್ಯಾಟಿನ್ ಅಮೆರಿಕದ ದೇಶಗಳ ನಡುವೆ ಕ್ರೂಬಾದ ಜತೆ ಸೇರಿ ಪ್ರಾದೇಶಿಕ ಸೌಹಾರ್ದತೆ, ಸಹಕಾರವನ್ನು ಉತ್ತೇಜಿಸುವ ಸಾಂಸ್ಥಿಕ ಚೌಕಟ್ಟು (ಅಲ್ಬಾ, ಪೆಟ್ರಿಕೆರಿಬಿ, ಟೆಲಿಸುರ್, ಉನಾಸುರ್) ಕಟ್ಟಿಕೊಂಡದ್ದು, ಜಾಗತಿಕವಾಗಿಯೂ ಸಾಮ್ರಾಜ್ಯಶಾಹಿ-ವಿರೋಧಿ ಪ್ರಕ್ರಿಯೆಯನ್ನು ಗಟ್ಟಿಗೊಳಿಸಿದ್ದು-ಇವೆಲ್ಲ ಯು.ಎಸ್. ಸಾಮ್ರಾಜ್ಯಶಾಹಿಯನ್ನು ಕೆರಳಿಸಿತ್ತು. ಈ ಟ್ರೆಂಡ್ ಲ್ಯಾಟಿನ್ ಅಮೆರಿಕದ ಇತರ ದೇಶಗಳಿಗೂ ಹಬ್ಬಿ ಈ ಶತಮಾನದ ಮೊದಲ ದಶಕದಲ್ಲಿ ಇಡೀ ಖಂಡದಲ್ಲಿ ‘ಎಳೆಗೆಂಪು ಅಲೆ” (ಪಿಂಕ್ ಟೈಡ್) ಬೀಸುತ್ತಿದೆ ಎಂದು ಹೇಳಲಾಗಿತ್ತು ಎಂದು ಹೇಳಿದೆ.

ಚವೇಝ್ ಅವರ ನಿಧನದ ನಂತರ ಅಧ್ಯಕ್ಷ ಮದುರೊ ಅವರು ಬೊಲಿವಾರಿಯನ್ ಕ್ರಾಂತಿ’ಯ ಪ್ರಕ್ರಿಯೆ ಮುಂದೊಯ್ಯಲು ಪ್ರಯತ್ನಿಸಿದರೂ,2014ರ ನಂತರದ ತೈಲ ಬೆಲೆಗಳ ಕುಸಿತ ಮತ್ತು ಯು.ಎಸ್ ಹೊರಿಸಿದ ತೀವ್ರ ಆರ್ಥಿಕ ದಿಗ್ಬಂಧನದ ಕ್ರಮಗಳು ವೆನೆಜುವೇಲಾದಲ್ಲಿ ಬಿಕ್ಕಟ್ಟನ್ನು ಸೃಷ್ಟಿಸಿವೆ. ‘ಬೊಲಿವಾರಿಯನ್ ಕ್ರಾಂತಿ’ ಪ್ರಕ್ರಿಯೆಯ ಅಪಾಯ ಅರಿತ ಯು.ಎಸ್. ಸಾಮ್ರಾಜ್ಯಶಾಹಿ ಕಳೆದ ಕಾಲು ಶತಮಾನದಲ್ಲಿ ವೆನೆಜುವೇಲಾದ ಮೇಲೆ ಮಿಲಿಟರಿ, ರಾಜಕೀಯ, ಆರ್ಥಿಕ ದಾಳಿ ಮತ್ತು ಹಸ್ತಕ್ಷೇಪಗಳನ್ನು ನಡೆಸುತ್ತಾ ಬಂದಿದೆ.
ಮೂರು ಮಿಲಿಟರಿ ಕ್ಷಿಪ್ರಕ್ರಾಂತಿ ಪ್ರಯತ್ನ, ಚುನಾವಣೆಗಳಲ್ಲಿ ಹಸ್ತಕ್ಷೇಪ, ಹಿಂಸಾತ್ಮಕ ಬುಡಮೇಲು ಕೃತ್ಯಗಳು, ವಿಚ್ಛಿದ್ರಕಾರಿ ಚಟುಟವಟಿಕೆಗಳಿಗೆ ಸಾಂಸ್ಥಿಕ ಹಣಕಾಸು ಬೆಂಬಲ, ಆರ್ಥಿಕ ದಿಗ್ಬಂಧನ-ಇವೆಲ್ಲವುಗಳ ಮೂಲಕ ಬೊಲಿವಾರಿಯನ್ ಸರಕಾರ, ಪಕ್ಷ, ಜನತೆಯನ್ನು ಮಣಿಸುವ ಯು.ಎಸ್.-ಪರ ಸರಕಾರ ಸ್ತಾಪಿಸುವ ಅವಿರತ ಪ್ರಯತ್ನ ನಡೆಸುತ್ತಾ ಬಂದಿದೆ. ಈ ಕ್ರೂರ ಕ್ರಮಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಮತ್ತು ಜನರ ಜೀವನ ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ೮೦ ಲಕ್ಷ ನಾಗರಿಕರು ವಿದೇಶಗಳಿಗೆ ವಲಸೆ ಹೋಗಬೇಕಾಗಿ ಬಂದಿದೆ.
ಆದರೆ ವೆನೆಜುವೇಲಾದ ಬೊಲಿವಾರಿಯನ್ ಸರಕಾರ, ಪಕ್ಷ, ಜನತೆಯ ದಟ್ಟ ಸಾಮ್ರಾಜ್ಯಶಾಹಿ-ವಿರೋಧಿ ರಾಜಕೀಯ ಪ್ರಜ್ಞೆ, ದಿಟ್ಟತನದಿಂದ ಹೋರಾಡುವ ಸ್ಫೂರ್ತಿಗಳಿಂದಾಗಿ ಯು.ಎಸ್. ಹತಾಶವಾಗಿ ಸೆಪ್ಟೆಂಬರ್ 2025ರಿಂದ ನೇರ ಮಿಲಿಟರಿ ದಾಳಿ ನಡೆಸಲು ತಯಾರಿ ನಡೆಸಿತ್ತು. ಅದರ ವಿರುದ್ಧವೂ ಬೊಲಿವಾರಿಯನ್ ಸರಕಾರ, ಪಕ್ಷ, ಜನತೆ ಸನ್ನದ್ಧವಾಗಿದ್ದವು. ಮಿಲಿಟರಿ ಯಲ್ಲದೆ ೪೦ ಲಕ್ಷ ಜನತಾ ಪಡೆಯ (ಮಿಲಿಶಿಯ) ಸ್ವಯಂಸೇವಕರನ್ನು ಸನ್ನದ್ಧಗೊಳಿಸಲಾಗಿತ್ತು. ಈ ಸನ್ನದ್ಧತೆಯಿಂದ ಬೆದರಿ ಯು.ಎಸ್. ಪೂರ್ಣ ಪ್ರಮಾಣದ ಯುದ್ಧದ ಬದಲು ಮದುರೊ ಅಪಹರಣದ ಯೋಜನೆ ಹಾಕಿರಬಹುದು. ಆ ಮೂಲಕ ಅರಾಜಕತೆ ಉಂಟಾಗಿ ನಾಯಕತ್ವವನ್ನು ಮತ್ತು ಜನತೆಯನ್ನು ಅಧೀರಗೊಳಿಸಿ ಮಣಿಸುವ ಲೆಖ್ಖಾಚಾರವನ್ನು ಹಾಕಿದೆ ಎಂದು ಹೇಳಿದೆ.

ಆದರೆ ಈ ಕಾರ್ಯಾಚರಣೆಯಿಂದ ವೆನೆಜುವೆಲಾದ ಸರಕಾರವಾಗಲಿ, ಜನತೆಯಾಗಲಿ ಹಿಮ್ಮೆಟ್ಟಿಲ್ಲ. ಉಪಾಧ್ಯಕ್ಷರು ಅಧಿಕಾರ ವಹಿಸಿಕೊಂಡಿದ್ದು ಸರಕಾರ ಮತ್ತು ಜನತೆ ದೃಢವಾಗಿ ನಿಂತಿದೆ. ಅಲ್ಲಿಂದ ಬರುತ್ತಿರುವ ವರದಿಗಳು ಜನರು ಅಮೆರಿಕದ ಆಕ್ರಮಣದ ವಿರುದ್ಧ ಮತ್ತು ತಮ್ಮ ದೇಶದ ಸಾರ್ವಭೌಮತ್ವದ ರಕ್ಷಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಜ್ಜುಗೊಳ್ಳುತ್ತಿದ್ದಾರೆ ಎಂದು ಸೂಚಿಸುತ್ತವೆ. ಆದರೂ ಯು.ಎಸ್. ಪೂರ್ಣ ಪ್ರಮಾಣದ ಯುದ್ಧ ಸಾರುವ ಎಲ್ಲ ಸಾಧ್ಯತೆಗಳೂ ಇವೆ. ಹಾಗಾಗಿ ನಾವು “ವೆನೆಜುವೇಲಾದ ಮೇಲೆ ಯುದ್ಧ ಬೇಡ ಮತ್ತು ಅಧ್ಯಕ್ಷ ಮದುರೊ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸುತ್ತೇವೆ. ಹಾಗೇನಾದರೂ ಯು.ಎಸ್. ಯುದ್ಧ ಸಾರಿದರೆ ಅದು ಇನ್ನೊಂದು ವಿಯೇಟ್ನಾಂ ಎದುರಿಸಲಿದೆ, ಇರಾಕ್ ಲಿಬ್ಯಾವನ್ನಲ್ಲ ಎಂದು ಎಚ್ಚರಿಸಿದೆ.
ವೆನೆಜುವೆಲಾದ ಹೋರಾಟ ನಿರತ ಜನರಿಗೆ ಭಾರತದ ಎಡಪಕ್ಷಗಳ ಪರವಾಗಿ ನಾವು ಹಾರ್ದಿಕ ಬೆಂಬಲ ಮತ್ತು ಬೆಂಬಲವನ್ನು ಮತ್ತು ವ್ಯಕ್ತಪಡಿಸುತ್ತೇವೆ. ಭಾರತ ಸರ್ಕಾರ ಅಮೆರಿಕದ ಆಕ್ರಮಣವನ್ನು ಖಂಡಿಸುವ ಪ್ರಪಂಚದಾದ್ಯAತದ ದೇಶಗಳೊಂದಿಗೆ ದನಿಗೂಡಿಸಬೇಕು ಮತ್ತು ವೆನೆಜುವೆಲಾದೊಂದಿಗೆ ದೃಢವಾಗಿ ನಿಲ್ಲಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ.ಕೆ.ಪ್ರಕಾಶ್, ಸಿಪಿಐ ರಾಜ್ಯಕಾರ್ಯದರ್ಶಿ ಸಾತಿ ಸುಂದರೇಶ್, ಸಿಪಿಐ(ಎಂಎಲ್- ಲಿಬರೇಶನ್) ರಾಜ್ಯ ಕಾರ್ಯದರ್ಶಿ ಫ್ಟನ್ ಡಿ ರೊಜಾರಿಯೋ, ಎಸ್‌ಯುಸಿಐ(ಸಿ) ರಾಜ್ಯ ಕಾರ್ಯದರ್ಶಿ ಉಮಾ, ಮಾಜಿ ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ ಸೇರಿದಂತೆ ನೂರಾರು ಪ್ರತಿಭಟನೆಕಾರು ಇದ್ದರು.
ಇದನ್ನೂ ನೋಡಿ: ವೆನೆಜುವೇಲಾದ ಮೇಲೆ ಯುದ್ದ ಹೂಡಿದರೆ ,ಯು.ಎಸ್ ಗೆ ಅದು ಇನ್ನೊಂದು ವಿಯೇಟ್ನಾಂ ಆಗುತ್ತದೆ! ಇರಾಕ್, ಲಿಬ್ಯ ಅಲ್ಲ !
