ವಿಪಕ್ಷಗಳ ಸಭೆಗೆ ನಮಗೆ ಆಹ್ವಾನ ನೀಡಿಲ್ಲ ನಾವು ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ: ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು:ರಾಷ್ಟ್ರಮಟ್ಟದಲ್ಲಿ ಅಧಿಕಾರದಲ್ಲಿರುವ ಎನ್ ಡಿಎ ಮೈತ್ರಿಕೂಟವನ್ನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮಣಿಸಲು ಮಹಾ ಘಟಬಂಧನ ಹೆಸರಿನಲ್ಲಿ ರಾಷ್ಟ್ರಮಟ್ಟದ ಮತ್ತು ರಾಜ್ಯಗಳ ಘಟಾನುಘಟಿ ನಾಯಕರ ಸಭೆ ಇಂದು ಮತ್ತು ನಾಳೆ ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್ ನಲ್ಲಿ ನಡೆಯುತ್ತಿದ್ದು ಸಭೆಗೆ ಕರ್ನಾಟಕದ ಪ್ರಾದೇಶಿಕ ಪಕ್ಷ ಜಾತ್ಯತೀತ ಜನತಾದಳ(ಜೆಡಿಎಸ್‌) ಭಾಗವಹಿಸುತ್ತಿಲ್ಲ, ಅದಕ್ಕೆ ಆಹ್ವಾನ ನೀಡಿಲ್ಲ ಎಂಬ ಸುದ್ದಿ ಹರಿದಾಡುತ್ತಿತ್ತು.

ಈ ಬಗ್ಗೆ ಸ್ವತಃ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಪಕ್ಷಗಳ ಸಭೆಗೆ ನಮಗೆ ಆಹ್ವಾನವನ್ನು ನೀಡಿಲ್ಲ, ನಾಳೆಯ ಎನ್ ಡಿಎ ಮೈತ್ರಿಕೂಟ ಸಭೆಗೂ ಆಹ್ವಾನವಿಲ್ಲ, ನೋಡೋಣ ಮುಂದೆ ಏನಾಗುತ್ತದೆ ಎಂದು, ನಾವು ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ಬಿಜೆಪಿ-ಕಾಂಗ್ರೆಸ್‌ ಪಕ್ಷಗಳೆರಡೂ ಅವ್ಯವಹಾರದಲ್ಲಿ ಪರಿಣಿತಿ ಹೊಂದಿರುವವರು: ಹೆಚ್‌.ಡಿ.ಕುಮಾರಸ್ವಾಮಿ ಆರೋಪ

ಮಹಾಘಟಬಂಧನ್​​ ನಮ್ಮ ಪಕ್ಷವನ್ನು ಲೆಕ್ಕಕ್ಕೇ ಇಟ್ಟಿಲ್ಲ ಅವರು. ಮಹಾಘಟಬಂದನ್ ವ್ಯವಸ್ಥಾಪಕರು ಜೆಡಿಎಸ್ ಮುಳುಗಿಹೋಗಿದೆ ಅನ್ನುವ ಭ್ರಮೆಯಲ್ಲಿದ್ದಾರೆ. ಆಹ್ವಾನ ಕೊಟ್ಟರೊ, ಇಲ್ಲವೋ ಅನ್ನೊದಕ್ಕೆ ತಲೆ ಕೂಡ ಕೆಡಿಸಿಕೊಂಡಿಲ್ಲ. ನಮಗೆ ಎಲ್ಲೂ ಕೂಡ ಆಹ್ವಾನ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಹೇಳಿದರು.

ನಮ್ಮ ಪಕ್ಷದ ಸಂಘಟನೆ ಹೇಗೆ ಮಾಡಬೇಕು, ನಾಡಿನ ಜನತೆ ಸಮಸ್ಯೆಯನ್ನು ಯಾವ ರೀತಿ ಬಗೆಹರಿಸಬೇಕೋ ಅದರ ಬಗ್ಗೆ ಚಿಂತಿಸಿ ಕಾರ್ಯಪ್ರವೃತ್ತರಾಗುತ್ತೇವೆ. ಇವತ್ತು  ಪತ್ರಿಕೆಗಳಲ್ಲಿ ನೋಡ್ತಾ ಇದ್ದೆ ಈಗಾಗಲೇ 42 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಈ ಸರ್ಕಾರಕ್ಕೆ ಚಿಂತೆಯಿಲ್ಲ, ಮಹಾಘಟ ಬಂಧನ ಎಂದು ರಸ್ತೆಯುದ್ಧಕ್ಕೂ ದೊಡ್ಡ ದೊಡ್ಡ ಕಟೌಟ್, ಬ್ಯಾನರ್ ಹಾಕಿ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿ ಯಾರೂ ಮಾಡದ ಸಾಧನೆ ಮಾಡಿದ್ದೇವೆ ಎಂದು ತೋರಿಸುತ್ತಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ಏನಾದರೂ ಪ್ರಯೋಜನವಿದೆಯೇ ಎಂದು ಕುಮಾರಸ್ವಾಮಿ ಕೇಳಿದರು.

ಇವತ್ತಿನವರೆಗೆ ರಾಜ್ಯದಲ್ಲಿ 42 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ರೈತರ ಸಂಕಷ್ಟಕ್ಕೆ ಮಿಡಿಯುವ ಬಗ್ಗೆ ಸರ್ಕಾರ ಒಂದಾದರೂ ಸಂದೇಶ ಕೊಟ್ಟಿದೆಯೇ? ರೈತರ ಬಗ್ಗೆ ಸರ್ಕಾರ ಯಾವುದೇ ಹೇಳಿಕೆಯನ್ನೂ ನೀಡಿಲ್ಲ, ಇದು ಇಂದಿನ ಪರಿಸ್ಥಿತಿಯಾಗಿದೆ ಎಂದು ಹೇಳಿದರು.

ನಮ್ಮ ಪಕ್ಷಕ್ಕೆ ಕಾರ್ಯಕರ್ತರಿದ್ದಾರೆ. ಒಂದೊಂದು ಚುನಾವಣೆಯಲ್ಲಿ ಒಂದೊಂದು ರೀತಿ ನಾಡಿನ ಜನತೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಮ್ಮ ಪಕ್ಷ ಮೊದಲಿನಿಂದಲೂ ಹೋರಾಟ ನಡೆಸಿಕೊಂಡು ಬಂದಿದೆ. ಇಂತಹ ಸಭೆಗಳೆಲ್ಲ ಪ್ರಿಮೆಚ್ಯೂರ್ ಆಗಿದ್ದು, ಇನ್ನೂ ಏಳೆಂಟು ತಿಂಗಳು ಚುನಾವಣೆಗೆ ಬಾಕಿಯಿದೆ, ನೋಡೋಣ ಏನೆಲ್ಲಾ ಆಗುತ್ತದೆ ಎಂದರು.

Donate Janashakthi Media

Leave a Reply

Your email address will not be published. Required fields are marked *