ಕಲ್ಲಂಗಡಿ ಹಣ್ಣಿನಿಂದ ಬೆಲ್ಲದ ಆವಿಷ್ಕಾರ – ರೈತರ ಮೊಗದಲ್ಲಿ ಸಂತಸ

ಬೆಂಗಳೂರು:  ಪದೇ ಪದೇ ಲಾಕ್‌ಡೌನ್‌ ಕಾರಣದಿಂದ ಕಲ್ಲಂಗಡಿ ಬೆಳೆದು ತೀವ್ರ ನಷ್ಟಕ್ಕೆ ಗುರಿಯಾಗುವ ಹಂತದಲ್ಲಿದ್ದ ಕೃಷಿಕ, ಹೊಸದಾಗಿ ಬೆಲ್ಲ ತಯಾರಿಕೆ ಮಾರ್ಗೋಪಾಯ ಕಂಡುಕೊಂಡಿದ್ದು, ರೈತ ಸಮುದಾಯಕ್ಕೆ ಸಿಹಿ ಸುದ್ದಿ ನೀಡಿದ್ದಾರೆ.

ಮಲೆನಾಡು, ಉತ್ತರ ಕರ್ನಾಟದಲ್ಲಿ ಕಲ್ಲಂಗಡಿ ಹಣ್ಣನ್ನು ವ್ಯಾಪಕವಾಗಿ ಬೆಳಯಲಾಗುತ್ತದೆ. ಇತ್ತೀಚೆಗೆ ಲಾಕ್‌ಡೌನ್‌ ಕಾರಣದಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದ ಕಾರಣ, ಅನೇಕ ರೈತರು ಲಕ್ಷಾಂತರ ರೂ ಕಲ್ಲಂಗಡಿ ಬೆಳೆಯನ್ನು ನಾಶ ಮಾಡಿದ ಘಟನೆಗಳನ್ನು ರಾಜ್ಯದ ತುಂಬೆಲ್ಲ ಕೇಳಿದ್ದೇವೆ.  ಆದರೆ ಶಿವಮೊಗ್ಗದ ನಿಟ್ಟೂರು ನಿವಾಸಿ ಜಯರಾಮ ಶೆಟ್ಟಿ ಇದಕ್ಕೆ ಎದೆಗುಂದದೆ ಕಲ್ಲಂಗಡಿಯಿಂದ ಬೆಲ್ಲವನ್ನು ತಯಾರಿಸುವ ಹೊಸ ಆವಿಷ್ಕಾರ ನಡೆಸಿದ್ದು ರೈತರ ಮೊಗದಲ್ಲಿ ಸಂತಸ ತಂದಿದೆ.

ಹೌದು,  ಲಾಕ್​ಡೌನ್​​ ಸದುಪಯೋಗಪಡಿಸಿಕೊಂಡು ವಿನೂತನ ಆವಿಷ್ಕಾರ ಮಾಡಿರುವ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ‌ ನಿಟ್ಟೂರು ಗ್ರಾಮದ ನಿವಾಸಿ ಜಯರಾಮ ಶೆಟ್ಟಿ ಎಂಬುವರು ಕಲ್ಲಂಗಡಿ ಹಣ್ಣಿನಿಂದ ಬೆಲ್ಲ ತಯಾರಿಸಿದ್ದಾರೆ. ಶೆಟ್ಟಿಯವರ ಈ ವಿನೂತನ ಆವಿಷ್ಕಾರಕ್ಕೆ ಸ್ನೇಹಿತರು ಸಹ ಸಾಥ್​ ನೀಡಿದ್ದಾರೆ. ಕಲ್ಲಂಗಡಿ ಹಣ್ಣಿನಲ್ಲಿ ಬೆಲ್ಲವನ್ನು ತಯಾರಿಸಿ, ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಮಲೆನಾಡು ಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕಲ್ಲಂಗಡಿ ಹಣ್ಣನ್ನು ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ಈ ವರ್ಷವೂ ಕೂಡ ಲಾಕ್‌ ಡೌನ್‌ ಕಾರಣದಿಂದ ಸಾವಿರಾರು ಟನ್‌ಗಳಷ್ಟು ಕಲ್ಲಂಗಡಿ ಕೊಳ್ಳುವವರಿಲ್ಲದೆ ಬೇಡಿಕೆ ಕಳೆದುಕೊಂಡಿದೆ. ಬೆಳೆದ ಬೆಳೆಯನ್ನು ಮಾರಲಾಗದೆ ಭಾರಿ ಪ್ರಮಾಣದ ನಷ್ಟ ಉಂಟಾಗಿದೆ. ಅಲ್ಲದೆ ಗದ್ದೆಯಲ್ಲಿಯೇ ಬೆಳೆದ ಬೆಳೆ ಕೊಯ್ಯದೇ ಕೊಳೆತು ಹೋಗುತ್ತಿದೆ. ಬೆಳೆ ನಷ್ಟದ ಎದುರು ಪರ್ಯಾಯ ಮಾರ್ಗ ಕಂಡುಕೊಂಡ ನಿಟ್ಟೂರಿನ ಕೃಷಿಕ, ಹೋಟೆಲ್‌ ಉದ್ಯಮಿ ಸಂಪದಮನೆ ಜಯರಾಮ ಶೆಟ್ಟಿ ಅವರು ಕಲ್ಲಂಗಡಿ ಹಣ್ಣಿನಿಂದ ಬೆಲ್ಲ ತಯಾರಿಸಲು ಸಾಧ್ಯವೆ ಎಂಬ ಪ್ರಯೋಗವನ್ನು ನಡೆಸಿದ್ದಾರೆ. ತಮ್ಮ ಹೋಟೆಲ್‌ ಸಿಬ್ಬಂದಿಯನ್ನೇ ಬಳಸಿಕೊಂಡು, ಕಲ್ಲಂಗಡಿ ಹಣ್ಣಿನಿಂದ ಬೆಲ್ಲ ತೆಗೆದು ಭರವಸೆ ಮೂಡಿಸಿದ್ದಾರೆ.

ಇದನ್ನೂ ಓದಿ : ಲಾಕ್‌ಡೌನ್‌ನಿಂದ ರೈತರಿಗೆ 1 ಲಕ್ಷ ಕೋಟಿ ರೂ. ನಷ್ಟ – ಬಡಗಲಪುರ ನಾಗೇಂದ್ರ

ಬೆಲ್ಲದ ತಯಾರಿಕೆ ಹೇಗೆ..?: ಒಂದು ಟನ್‌ ಕಲ್ಲಂಗಡಿ ಹಣ್ಣನ್ನು ಸಿಪ್ಪೆ ತೆಗೆದು ಜ್ಯೂಸ್‌ ಮಾಡುವ ಮಿಷನ್‌ ಬಳಸಿ ಸುಮಾರು 700 ಲೀಟರ್‌ ಆಗುವಂತೆ ಜ್ಯೂಸ್‌ ತಯಾರಿಸಿಕೊಳ್ಳಬೇಕು. ಎರಡು ಬಾರಿ ಅದನ್ನು ಫಿಲ್ಟರ್‌ ಮಾಡಿಕೊಂಡು ಕೊಪ್ಪರಿಗೆಗೆ ಹಾಕಿ 4-5 ಗಂಟೆ ಚೆನ್ನಾಗಿ ಕುದಿಸಬೇಕು. ನಂತರ ಅದರಲ್ಲಿನ ನೀರಿನ ಅಂಶ ಸಂಪೂರ್ಣ ಆವಿಯಾಗಿ ಬೆಲ್ಲದ ಪಾಕ ಮಾತ್ರ ಉಳಿಯುತ್ತದೆ. ನಂತರ ಹದ ನೋಡಿ ಕೊಪ್ಪರಿಗೆ ಇಳಿಸಿದರೆ ಬೆಲ್ಲ ತಯಾರಾಗಿರುತ್ತದೆ. ರುಚಿಯಲ್ಲಾಗಲೀ ಬಣ್ಣದಲ್ಲಾಗಲೀ ಕಬ್ಬಿನ ಬೆಲ್ಲಕ್ಕೂ ಕಲ್ಲಂಗಡಿ ಬೆಲ್ಲಕ್ಕೂ ವ್ಯತ್ಯಾಸವಿರುವುದಿಲ್ಲ.

1 ಟನ್‌ ಕಲ್ಲಂಗಡಿ ಹಣ್ಣಿಗೆ 60-65 ಕೆಜಿ ಬೆಲ್ಲ ಬಂದಿದ್ದು, ಇಂದಿನ ಬೆಲ್ಲದ ಮಾರುಕಟ್ಟೆ ಬೆಲೆಯಲ್ಲಿ ಸುಮಾರು 5 ಸಾವಿರ ರೂ. ದೊರೆಯುತ್ತದೆ. ಬೆಲ್ಲವೂ ಸಹ ಯಾವುದೇ ಅಡ್ಡ ಪರಿಣಾಮ, ವಾಸನೆ ಬರದೇ ಕಬ್ಬಿನ ಬೆಲ್ಲದಷ್ಟೇ ಉತ್ತಮವಾಗಿದೆ. ನೋಡಲು ಸಹ ಕಬ್ಬಿನ ಬೆಲ್ಲದಂತೆಯೇ ತೋರುತ್ತದೆ ಎಂದು ಜಯರಾಮ ಶೆಟ್ಟಿ ತಿಳಿಸಿದ್ದಾರೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು  ಲಿಂಕ್ ಕ್ಲಿಕ್ ಮಾಡಿ

ಉಚಿತವಾಗಿ ಸವಿಯಲು ಅವಕಾಶ:  ಕಲ್ಲಂಗಡಿಯಿಂದ ಬೆಲ್ಲ ಮಾಡಿದ್ದಾರೆ ಎಂಬ ಸುದ್ದಿ ಜನರ ಕಿವಿಗೆ ಬೀಳುತ್ತಿದ್ದಂತೆ, ಹೊಸ ಬೆಲ್ಲದ ರುಚಿಯನ್ನು ಜನರು ಸವಿಯುವಂತೆ ಮಾಡಲು ಜಯರಾಮ ಶೆಟ್ಟರು 2 ಕ್ವಿಂಟಾಲ್‌ ಬೆಲ್ಲವನ್ನು ತೆಗೆದಿಟ್ಟಿದ್ದಾರೆ. ನಿಟ್ಟೂರಿನ ತಮ್ಮ ಹೋಟೆಲ್‌ನಲ್ಲಿ ಲಾಕ್‌ ಡೌನ್‌ ಸಮಯಮಿತಿಯಲ್ಲಿ ಉಚಿತವಾಗಿ ಕಲ್ಲಂಗಡಿ ಬೆಲ್ಲ ಸವಿಯಲು ಅವಕಾಶ ಮಾಡಿಕೊಟ್ಟಿದ್ದಾರೆ.

ಸಾವಿರಾರು ರೈತರು ಕಲ್ಲಂಗಡಿ ಬೆಳೆದು ಮಾರಲಾಗದೇ ದೊಡ್ಡ ನಷ್ಟ ಹೊಂದಿ ತಲೆಯ ಮೇಲೆ ಕೈಹೊತ್ತು ಕುಳಿತಿರುವಾಗ ಕೃಷಿಕ ಜಯರಾಮ ಶೆಟ್ಟರು ಬೆಲ್ಲ ತಯಾರಿಸಿ ರೈತ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಕಲ್ಲಂಗಡಿ ಹಣ್ಣಿನ ಬೆಲ್ಲ ಮಾರುಕಟ್ಟೆ ಪ್ರವೇಶಿಸಿ ಕಬ್ಬಿನ ಬೆಲ್ಲದಂತೆಯೇ ಬೇಡಿಕೆ ಪಡೆದುಕೊಂಡರೆ ಕಲ್ಲಂಗಡಿ ಬೆಳೆಗಾರರ ಶಾಶ್ವತ ಸಮಸ್ಯೆ ಬಗೆಹರಿಯುವುದರಲ್ಲಿ ಸಂಶಯವಿಲ್ಲ ಎಂದು ಭೇಟಿ ನೀಡಿ ಬೆಲ್ಲ ಸವಿದ ಜನ ಸಕ್ಕರೆಯ ಮಾತುಗಳನ್ನಾಡುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *