ಬೇಸಿಗೆಯ ಕುಡಿವ ನೀರು ಹಾಗೂ ನಿಂತ ಬೆಳೆಗೆ ಯಾವುದೇ ಸಮಸ್ಯೆಯಾಗದಂತೆ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗೆ ಏ.9 ಅಥವಾ 10ರ ವರೆಗೆ ನೀರು ಹರಿಸಲು ತೀರ್ಮಾನಿಸಲಾಗಿದೆ ಎಂದು ತುಂಗಭದ್ರ ಐಸಿಸಿ ಅಧ್ಯಕ್ಷರೂ ಆಗಿರುವ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆದ ತುಂಗಭದ್ರ ಐಸಿಸಿ ಸಮಿತಿಯ ನಿರ್ಣಯಗಳ ಬಗ್ಗೆ ಪ್ರಕಟಣೆ ನೀಡಿರುವ ಸಚಿವರು, ಸರಕಾರದ ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ವಿಧಾನ ಸೌಧದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ನಮ್ಮ ಸರಕಾರ ರೈತರ ಪರವಾಗಿದೆ. ಕುಡಿವ ನೀರಿಗೂ ಯಾವುದೇ ಸಮಸ್ಯೆಯಾಗದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನು ಓದಿ :-ರೋಗಿಯನ್ನು ಡೋಲಿಯ ಮೂಲಕ ಆಸ್ಪತ್ರೆಗೆ ಸಾಗಿಸಿದ ಸ್ಥಳೀಯರು
ತುಂಗಭದ್ರ ಎಡದಂಡೆ ಮುಖ್ಯಕಾಲುವೆ ಮೂಲಕ ಏ.9 ಅಥವಾ 10ರ ವರೆಗೆ ಕುಡಿಯುವ ನೀರು ಒಳಗೊಂಡಂತೆ ಹಾಗೂ ನಿಂತ ಬೆಳೆ ಸಂರಕ್ಷಣೆಗೆ 3 ಸಾವಿರ ಕ್ಯೂಸೆಕ್ ನಂತೆ ನೀರು ಹರಿಸಲು ಸೂಚನೆ ನೀಡಲಾಗಿದೆ. ಕಟಾವಿಗೆ ಬಂದಿರುವ ಬೆಳೆಗಳಿಗೆ ನೀರು ಒದಗಿಸಲಾಗುವುದು. ಕೊನೆಯ ಭಾಗದ ರೈತರಿಗೆ ನೀರು ತಲುಪುವಂತೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಸೂಚಿಸಲಾಗಿದೆ. ನೀರು ಕಳ್ಳತನ ತಡೆಗೆ ಕಾಲುವೆ ಮೇಲೆ ನಿಷೇಧಜ್ಞೆ ಹಾಕಿ, ನೀರು ಹರಿಸಲಾಗುವುದು. ರೈತರು ಮತ್ತು ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ.
ನೀರು ಹಂಚಿಕೆ: ತುಂಗಭದ್ರ ಎಡದಂಡೆ ಮುಖ್ಯ ಕಾಲುವೆಗೆ ಲಭ್ಯ ನೀರಿನ ಪೈಕಿ ಏ. 1 ರಿಂದ ಏ.10 ರವರೆಗೆ ಕುಡಿವ ನೀರು ಒಳಗೊಂಡಂತೆ ನಿಂತ ಬೆಳೆ ಸಂರಕ್ಷಣೆಗೆ 3 ಸಾವಿರ ಕ್ಯೂಸೆಕ್ ನಷ್ಟು ನೀರು ಹರಿಸಲಾಗುವುದು. ಎಡದಂಡೆ ವಿಜಯನಗರ ಕಾಲುವೆಗೆ ಏ. 11 ರಿಂದ ಮೇ 10 ರವರೆಗೆ 150 ಕ್ಯೂಸೆಕ್, ವಿತರಣಾ ಕಾಲುವೆ 1 ರಿಂದ 11ರ ವರೆಗೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆ ಇರುವವರೆಗೆ. ತುಂಗಭದ್ರ ಬಲದಂಡೆ ಕೆಳಮಟ್ಟದ ಕಾಲುವೆಗೆ ಬಲದಂಡೆ ಕೆಳಮಟ್ಟದ ಕಾಲುವೆಯಡಿ ಲಭ್ಯವಾಗುವ ನೀರಿನಲ್ಲಿ ಏ. 1 ರಿಂದ ಮೇ 10ರ ವರೆಗೆ ಕುಡಿವ ನೀರು ಒಳ ಗೊಂಡಂತೆ ಹಾಗೂ ನಿಂತ ಬೆಳೆ ಸಂರಕ್ಷಣೆಗೆ 450 ಕ್ಯೂಸೆಕ್ ನೀರು ಹರಿಸಲಾಗುವುದು. ರಾಯ- ಬಸವಣ್ಣ ಕಾಲುವೆಗೆ ಏ. 1 ರಿಂದ ಮೇ 31ರ ವರೆಗೆ 200 ಕ್ಯೂಸೆಕ್ ನಂತೆ ನೀರು ಹರಿಸಲಾಗುವುದು. ಸುಮಾರು 90 ಕ್ಯೂಸೆಕ್ ನಂತೆ ಪೂರಕ ಕಾರ್ಖಾನೆ ನೀರು ಒದಗಿಸಲಾಗುವುದು ಎಂದು ಸಭೆ ತೀರ್ಮಾನಿಸಿದೆ.
ಇದನ್ನು ಓದಿ :-‘ಶೇ. 40 ಕಮಿಷನ್’ ಆರೋಪ: ಬಿಜೆಪಿ ಮಾಜಿ ಶಾಸಕರ ಹೆಸರು ಉಲ್ಲೇಖ
ಯಾವ ಕಾಲುವೆಗೆ ಎಷ್ಟು?: ಏ. 1ರ ವರೆಗೆ ಜಲಾಶಯದಲ್ಲಿ ಲಭ್ಯವಾದ ನೀರಿನಲ್ಲಿ ಕರ್ನಾಟಕದ ಪಾಲು 5.565 ಟಿಎಂಸಿ ಬಳಕೆಗೆ ಅವಕಾಶ ಇದೆ. ಇದರಲ್ಲಿ ಕುಡಿವ ನೀರಿಗೆ 2 ಟಿಎಂಸಿ ಕಾಯ್ದಿರಿಸಿ ಬಾಕಿ 3.565 ಟಿಎಂಸಿ ನೀರನಲ್ಲಿ ರಾಯಬಸವ ಕಾಲುವೆಗೆ 1.517 ಟಿಎಂಸಿ, ಎಡದಂಡೆ ವಿಜಯನಗರ ಕಾಲುವೆಗೆ ಹಾಗೂ ಇತರೆ ವಿಜಯನಗರ ಕಾಲುವೆಗೆ, ನದಿಪೂರಕ ಮತ್ತು ಕಾರ್ಖಾನೆಗೆ 0.474 ಟಿಎಂಸಿ ನೀರನ್ನು ಮುಂದುವರಿಸಲಾಗುವುದು. ಉಳಿದ 1.574 ಟಿಎಂಸಿ ಹಾಗೂ ‘ದ್ರಾ ಜಲಾಶಯದಿಂದ 0.500 ಟಿಎಂಸಿ ನೀರು ಹರಿದು ಬರುವುದಾಗಿ ಅಂದಾಜಿಸಿ ಒಟ್ಟು 2 ಟಿಎಂಸಿ ಗೆ ಅನುಗುಣವಾಗಿ ತುಂಗಭದ್ರ ಎಡದಂಡೆ ಮುಖ್ಯ ಕಾಲುವೆ ಹಾಗೂ ತುಂಗಭದ್ರ ಬಲದಂಡೆ ಕೆಳಮಟ್ಟದ ಕಾಲುವೆಗೆ ಹರಿಸಲು ತೀರ್ಮಾನಿಸಲಾಗಿದೆ.