ಆಸ್ಪತ್ರೆಯಲ್ಲಿ ಪದ್ಮಶ್ರೀ ಪುರಸ್ಕೃತೆಗೆ ಬಲವಂತವಾಗಿ ನೃತ್ಯ ಮಾಡಿಸಿದ ಸಾಮಾಜಿಕ ಕಾರ್ಯಕರ್ತೆ

ಭುವನೇಶ್ವರ: ಪದ್ಮಶ್ರೀ ಪುರಸ್ಕೃತೆ ಕಮಲಾ ಪೂಜಾರಿ ಅವರನ್ನು ಅನಾರೋಗ್ಯ ಕಾರಣದಿಂದ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಿದ್ದ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತೆ ಮಮತಾ ಬೆಹೆರಾ ಎಂಬವರು ನೃತ್ಯ ಮಾಡಿಸಿದ ಘಟನೆ ನಡೆದಿದೆ.

ಒಡಿಶಾದ ಪರಾಜ ಬುಡಕಟ್ಟು ಸಮುದಾಯದ ಕಮಲಾ ಪೂಜಾರಿ ಇತ್ತೀಚೆಗೆ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಗುಣಮುಖರಾದ ಅವರನ್ನು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಗೊಳಿಸುವುದಕ್ಕೂ ಮುನ್ನ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಬಲವಂತವಾಗಿ ನೃತ್ಯ ಮಾಡಿಸಿರುವ ಘಟನೆ ಕಟಕ್ ನಗರದ ಆಸ್ಪತ್ರೆಯಲ್ಲಿ ನಡೆದಿದೆ.

ಕಮಲಾ ಪೂಜಾರಿ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಸಾಮಾಜಿಕ ಕಾರ್ಯಕರ್ತೆಯೂ ಸಹ ಅವರೊಂದಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.

ನಾನು ಅನಾರೋಗ್ಯದಿಂದ ಬಳಲುತ್ತಿದ್ದು, ನನಗೆ ನೃತ್ಯ ಮಾಡಲು ಇಷ್ಟವಿರಲಿಲ್ಲ. ಆದರೂ ನನಗೆ ನೃತ್ಯ ಮಾಡಲು ಒತ್ತಾಯಿಸಲಾಗಿತ್ತು. ನಾನು ಪದೇ ಪದೇ ನಿರಾಕರಿಸಿದರೂ ಅವರು ಕೇಳಲಿಲ್ಲ ಎಂದು ಕಮಲಾ ಪೂಜಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೊಂದಿಗೆ ಹಲವು ಫೋಟೋಗಳನ್ನು ಹಿಡಿದುಕೊಂಡ ಬೆಹೆರಾ ಅವರ ಪರಿಚಯವಿಲ್ಲ ಎಂದು ಕಮಲಾ ಪೂಜಾರಿ ಅವರ ಸಹಾಯಕ ರಾಜೀಬ್ ಹಿಯಾಲ್ ಹೇಳಿದ್ದಾರೆ.

ಇದರ ಬೆನ್ನಲ್ಲೇ ಪರಾಜ ಬುಡಕಟ್ಟು ಸಮುದಾಯದ ಸದಸ್ಯರು ಸಾಮಾಜಿಕ ಕಾರ್ಯಕರ್ತೆಯ ವಿರುದ್ಧ ಕ್ರಮಕೈಗೊಳ್ಳಲು ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರ ಕ್ರಮಕೈಗೊಳ್ಳಲು ವಿಫಲವಾದರೆ, ನಮ್ಮ ಸದಸ್ಯರು ಬೀದಿಗಿಳಿಯುತ್ತಾರೆ ಎಂದು ಬುಡಕಟ್ಟು ಸಮುದಾಯ ಪರಜಾ ಸಮಾಜದ ಅಧ್ಯಕ್ಷ ಹರೀಶ್ ಮುದುಳಿ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಮತಾ ಬೆಹೆರಾ, ಕಮಲಾ ಪೂಜಾರಿ ಅವರಿಂದ ನೃತ್ಯ ಮಾಡಿಸಿದ್ದರ ಹಿಂದೆ ತನ್ನ ಕಡೆಯಿಂದ ಯಾವುದೇ ಕೆಟ್ಟ ಉದ್ದೇಶವಿಲ್ಲ ಮತ್ತು ಪೂಜಾರಿ ಅವರ ಸೋಮಾರಿತನವನ್ನು ದೂರವಿಡಲೆಂದು’ ಹಾಗೆ ಮಾಡಿದ್ದಾಗಿ ತಿಳಿಸಿದ್ದಾರೆ.

ಸಾವಯವ ಕೃಷಿಯನ್ನು ಉತ್ತೇಜಿಸಿದ ಹಾಗೂ ಭತ್ತ ಸೇರಿದಂತೆ ವಿವಿಧ ಬೆಳೆಗಳ 100ಕ್ಕೂ ಹೆಚ್ಚು ದೇಶೀಯ ಬೀಜಗಳನ್ನು ಸಂರಕ್ಷಿಸಿದ್ದಕ್ಕಾಗಿ 2019ರಲ್ಲಿ ಕಮಲಾ ಪುಜಾರಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. ಇತ್ತೀಚೆಗೆ ಅವರು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು, ಕಟಕ್‌ ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *