ಬೆಂಗಳೂರು: 2021ರಲ್ಲಿ ಜರುಗಿದ ರೈತರ ಪ್ರತಿಭಟನೆ, ಅದರಲ್ಲೂ ವಿಶೇಷವಾಗಿ ದೆಹಲಿ ಗಡಿಗಳಲ್ಲಿ ನಡೆದ ಐತಿಹಾಸಿಕ ಹೋರಾಟದ ಅವಧಿಯಲ್ಲಿ ಹಲವಾರು ಟ್ವಿಟ್ಟರ್ ಖಾತೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ತನಗೆ ಸೂಚಿಸಿತ್ತು ಎಂದು ಸಾಮಾಜಿಕ ಮಾಧ್ಯಮ ತಾಣ ಟ್ವಿಟರ್ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ನೇತೃತ್ವದ ಪೀಠ ವಿಚಾರಣೆ ನಡೆಸುತ್ತಿದ್ದು, ಫೆಬ್ರವರಿ 2021 ಮತ್ತು ಫೆಬ್ರವರಿ 2022 ರ ನಡುವೆ ಕೇಂದ್ರ ಸರ್ಕಾರ 10 ನಿರ್ಬಂಧಿಸುವ ಆದೇಶಗಳಿಗೆ ಸಂಬಂಧಿಸಿದಂತೆ ಟ್ವಿಟ್ಟರ್ ಪರವಾಗಿ ಹಾಜರಾದ ಹಿರಿಯ ವಕೀಲ ಅರವಿಂದ್ ಎಸ್ ದಾತರ್ ಅವರು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಪ್ರಕಾರ ಖಾತೆಗಳನ್ನು ಸಂಪೂರ್ಣ ನಿರ್ಬಂಧಿಸಲು ಅವಕಾಶ ಇಲ್ಲ ಎಂದು ಹೇಳಿದ್ದಾರೆ.
ಪತ್ರಿಕೆಗಳು ಮತ್ತು ಟೆಲಿವಿಷನ್ ಚಾನೆಲ್‌ಗಳು ರೈತರ ಆಂದೋಲನವನ್ನು ವರದಿ ಮಾಡುತ್ತಿರುವಾಗ, ಖಾತೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಏಕೆ ಸೂಚಿಸಿದರು ಎಂದು ನ್ಯಾಯಪೀಠ ಪ್ರಶ್ನೆ ಮಾಡಿದ್ದು, ಪುನರಾವರ್ತಿತ ಅಪರಾಧದ ಹೊರತು ರಾಜಕೀಯ ಟೀಕೆಗಳ ಹಿನ್ನೆಲೆಯಲ್ಲಿ ವೈಯಕ್ತಿಕ ಟ್ವೀಟ್ ಅನ್ನು ಮಾತ್ರ ನಿರ್ಬಂಧಿಸಲು ಅವಕಾಶವಿದೆ. ಖಾತೆಯನ್ನು ನಿರ್ಬಂಧಿಸಲು ಅವಕಾಶವಿಲ್ಲ ಎಂದಿದೆ.
ಅರವಿಂದ್ ಎಸ್ ದಾತರ್ ಅವರು, ವಾಕ್ ಸ್ವಾತಂತ್ರ್ಯವು ಸರ್ಕಾರವನ್ನು ಟೀಕಿಸುವ ಹಕ್ಕನ್ನು ಒಳಗೊಂಡಿದೆ. ಕಾನೂನಿನ ಮಿತಿಯಲ್ಲಿ ಟೀಕೆ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಸಹ ಹೇಳಿದೆ. ಆದರೆ ಕೇಂದ್ರ ಸರ್ಕಾರದ ಆದೇಶ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ವಾದಿಸಿದರು.
ನ್ಯಾಯಮೂರ್ತಿ ದೀಕ್ಷಿತ್ ಅವರು ಅಮೆರಿಕ ಸೇರಿದಂತೆ ವಿಶ್ವದ ಇತರ ದೇಶಗಳಲ್ಲಿ ನ್ಯಾಯವ್ಯಾಪ್ತಿಗಳಲ್ಲಿ ಇಂತಹ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತಾರೆ ಎಂಬುದನ್ನು ತಿಳಿಸಿ ಎಂದರು. ಇದಕ್ಕೆ ವಕೀಲರು ಸಮಯ ಕೋರಿದ್ದಾರೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 17ಕ್ಕೆ ನಿಗದಿಪಡಿಸಲಾಗಿದೆ.