ಬೀದರ| ಸರ್ಕಾರಿ ಜಮೀನು ಕಬಳಿಕೆ ಪ್ರಕರಣ: ಜಿಲ್ಲಾಧಿಕಾರಿಗೆ ವಾರಂಟ್ ಜಾರಿ

ಬೀದರ್:‌ ಬೆಂಗಳೂರಿನ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಔರಾದ್ ಶಾಸಕ ಪ್ರಭು ಚವಾಣ್ ವಿರುದ್ಧದ ಸರ್ಕಾರಿ ಜಮೀನು ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡದ ಕಾರಣಕ್ಕೆ ಬೀದರ ಜಿಲ್ಲಾಧಿಕಾರಿಗೆ ವಾರಂಟ್ ಜಾರಿಗೆ ಆದೇಶಿಸಿದೆ.

ಒಂದು ಲಕ್ಷ ರೂ. ಭದ್ರತೆಯ ಜಾಮೀನು ಸಹಿತ ವಾರಂಟ್ ಜಾರಿಗೊಳಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಆದೇಶ ಹೊರಡಿಸಿದೆ.

ಪ್ರಕರಣದ ವಿವರ

ಶಾಸಕ ಪ್ರಭು ಚವಾಣ್ ಅವರು ನಕಲಿ ದಾಖಲೆ ಸೃಷ್ಟಿಸಿ ಬೀದರ ತಾಲ್ಲೂಕಿನ ಕೊಳಾರ (ಬಿ) ಗ್ರಾಮದ ಸರ್ವೇ ಸಂಖ್ಯೆ 102 ರಲ್ಲಿರುವ 3 ಎಕರೆ 19 ಗುಂಟೆ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಔರಾದ್ ಚಾಂದೋರಿ ಗ್ರಾ.ಪಂ ಮಾಜಿ ಅಧ್ಯಕ್ಷ ದೀಪಕ್ ಪಾಟೀಲ ಚಾಂದೋರಿ ಅವರು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ಚವಾಣ್ ಜತೆಗೆ ಬೀದರ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ಭೂ ದಾಖಲೆಗಳ ಹೆಚ್ಚುವರಿ ನಿರ್ದೇಶಕ ಹಾಗೂ ಬೀದರ ಸಬ್ ರಿಜಿಸ್ಟ್ರಾರ್ ಅವರ ಮೇಲೂ ಖಟ್ಲೆ ಹೂಡಿದ್ದರು. ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಒತ್ತುವರಿಗೆ ಸಹಕಾರ ನೀಡಿದ್ದಾರೆ ಎಂದು ಆರೋಪಿಸಿದ್ದರು. ಜಮೀನು ಕಬಳಿಕೆ ಮಾಡಿಕೊಂಡವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಜಮೀನು ಮರಳಿ ಸರ್ಕಾರದ ಸುಪರ್ದಿಗೆ ಪಡೆಯಬೇಕು ಎಂದು ಮನವಿ ಮಾಡಿದ್ದರು.

ಇದನ್ನೂ ಓದಿ: ಹಾಸನ: ಹೇಮಾವತಿ ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲು

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ 2024 ರ ಅ. 5 ರಂದು ದೀಪಕ್ ಪಾಟೀಲ ಚಾಂದೋರಿ ಅವರ ಹೇಳಿಕೆ ಪಡೆದಿತ್ತು. 2024 ರ ಡಿ. 12 ರ ಒಳಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗೆ ಆದೇಶಿಸಿತ್ತು. ಬಳಿಕ ವರದಿ ಸಲ್ಲಿಕೆಗೆ 2025 ರ ಫೆ. 21 ರ ವರೆಗೆ ಕಾಲಾವಕಾಶ ನೀಡಿತ್ತು. ಅನಂತರ ಮಾರ್ಚ್ 13 ರ ವರೆಗೆ ಕಾಲಾವಕಾಶ ಕೊಟ್ಟಿತ್ತು. ಆದರೂ, ಜಿಲ್ಲಾಡಳಿತ ವರದಿ ಸಲ್ಲಿಸಿರಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗೆ ಜಾಮೀನು ಸಹಿತ ವಾರಂಟ್ ಜಾರಿಗೊಳಿಸಲು ಆದೇಶಿಸಿದೆ.

ರಾಜಕೀಯ ಪ್ರಭಾವಕ್ಕೆ ಮಣಿದು ವರದಿ ಸಲ್ಲಿಸಿಲ್ಲ

ಶಾಸಕ ಪ್ರಭು ಚವಾಣ್ ಅವರ ವಿರುದ್ಧದ ಸರ್ಕಾರಿ ಜಮೀನು ಒತ್ತುವರಿ ಪ್ರಕರಣದಲ್ಲಿ ಜಿಲ್ಲಾಡಳಿತ ರಾಜಕೀಯ ಪ್ರಭಾವಕ್ಕೆ ಮಣಿದು ವರದಿ ಸಲ್ಲಿಸಿಲ್ಲ ಎಂದು ಪ್ರಕರಣದ ದೂರುದಾರ ದೀಪಕ್ ಪಾಟೀಲ ಚಾಂದೋರಿ ಆರೋಪಿಸಿದ್ದಾರೆ.

ನಾನು ಪ್ರಕರಣ ದಾಖಲಿಸಿದ್ದು ಸರ್ಕಾರದ ಆಸ್ತಿ ಉಳಿಸುವುದಕ್ಕಾಗಿಯೇ ಹೊರತು ವೈಯಕ್ತಿಕ ಲಾಭಕ್ಕಾಗಿ ಅಲ್ಲ. ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಎಚ್.ಆರ್. ಮಹಾದೇವ ಅವರು ಜಮೀನು ಸರ್ಕಾರಕ್ಕೆ ಸೇರಿದ್ದು ಎಂದು ಆದೇಶ ಹೊರಡಿಸಿದ್ದರು. ಆದರೆ, ಅನಂತರ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅನಿವಾರ್ಯವಾಗಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಮೊರೆ ಹೋಗಬೇಕಾಯಿತು ಎಂದು ಹೇಳಿದ್ದಾರೆ.

ವಿಶೇಷ ನ್ಯಾಯಾಲಯದ ಆದೇಶವು ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂಬ ಸಂದೇಶ ನೀಡಿದೆ ಎಂದು ತಿಳಿಸಿದ್ದಾರೆ.

ಪ್ರಕರಣದಲ್ಲಿ ನ್ಯಾಯಾಲಯದ ಸೂಚನೆ ನಂತರವೂ ವರದಿ ಸಲ್ಲಿಸದಿರುವುದು ಜಿಲ್ಲಾಡಳಿತ ಸಂಪೂರ್ಣ ರಾಜಕೀಯ ಪ್ರಭಾವಕ್ಕೆ ಒಳಗಾಗಿರುವುದರ ನಿದರ್ಶನವಾಗಿದೆ.

ಸರ್ಕಾರಿ ನೌಕರರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ನಿಯಮಾನುಸಾರ ಕಾರ್ಯ ನಿರ್ವಹಿಸಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಇದನ್ನೂ ನೋಡಿ: ಇಂಗ್ಲೀಷ್‌ ಕಲಿಯೋಣ ಬನ್ನಿ | Have – Had – Has ಬಳಸುವುದು ಹೇಗೆ? | ತೇಜಸ್ವಿನಿ Janashakthi Media

Donate Janashakthi Media

Leave a Reply

Your email address will not be published. Required fields are marked *