ಬೆಳಗಾವಿ: ವಕ್ಫ್ ಆಸ್ತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆಗೆ ಸರ್ಕಾರ ಸಿದ್ದವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು.
ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಗುರುವಾರ ನಿಯಮ 69 ಅಡಿ ವಕ್ಫ್ ಕುರಿತು ವಿರೋಧ ಪಕ್ಷದ ನಾಯಕರು ಪ್ರಸ್ತಾಪಿಸಿದ್ದ ವಿಚಾರಗಳಿಗೆ ಉತ್ತರಿಸಿ ಅವರು ಮಾತನಾಡಿ, ವಿರೋಧ ಪಕ್ಷಗಳ ಆರೋಪಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿವರವಾಗಿ ಉತ್ತರ ನೀಡಿದ್ದಾರೆ.
1954ರಲ್ಲಿ ವಕ್ಫ್ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಈ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತರಲು ಸಾಧ್ಯವಿಲ್ಲ. ರಾಜ್ಯದಲ್ಲಿ 2008 ರಿಂದ 2013ರ ವರೆಗೆ ಹಾಗೂ 2019 ರಿಂದ 2023ರವೆಗೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತದಲ್ಲಿತ್ತು. ಕೇಂದ್ರದಲ್ಲಿ 2014 ರಿಂದ ಬಿಜೆಪಿ ಅಧಿಕಾರದಲ್ಲಿದೆ. ಆಗ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಆಲೋಚಿಸದೆ, ಈಗ ವಿವಾದ ಮಾಡುತ್ತಿದ್ದಾರೆ. ಕೇಂದ್ರ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಮುಸ್ಲಿಂ ಧಾರ್ಮಿಕ ಗುರುಗಳೊಂದಿಗೆ ಚರ್ಚಿಸಿ ಒತ್ತುವರಿಯಾದ ವಕ್ಫ್ ಆಸ್ತಿ ತೆರವು ಮಾಡಿ ರಕ್ಷಿಸುವುದಾಗಿ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸುಮಾರು 17,969 ಎಕರೆ ವಕ್ಫ್ ಜಮೀನನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿದ್ದಾರೆ. ಇವುಗಳನ್ನು ರಕ್ಷಿಸಲು ಸುಪ್ರಿಂ ಕೋರ್ಟ್ ಆದೇಶವಿದೆ. ಒಮ್ಮೆ ವಕ್ಫ್ ಆಸ್ತಿ ಎಂದು ನಮೂದಾದರೆ ಅದು ಯಾವಾಗಲೂ ವಕ್ಫ್ ಆಸ್ತಿಯಾಗಿಯೇ ಇರುವುದು. ಸರ್ಕಾರದ ಉತ್ತರ ವಿರೋಧ ಪಕ್ಷಗಳು ಸಮಾದಾನ ತರದಿದ್ದರೆ, ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆಗೆ ಸರ್ಕಾರ ಸಿದ್ದವಿದೆ. ಇದರಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.