ನವದೆಹಲಿ: ನ್ಯಾಯಮೂರ್ತಿಗಳ ನೇಮಕಾತಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಕೊಲಿಜಿಯಂ ನಡುವಿನ ಹಗ್ಗ ಜಗ್ಗಾಟದ ನಡುವೆ, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಿಗೆ ಪತ್ರ ಬರೆದು, ನ್ಯಾಯಾಧೀಶರ ನೇಮಕಾತಿಯನ್ನು ನಿರ್ಧರಿಸುವ ಕೊಲಿಜಿಯಂ ಸಮಿತಿಯಲ್ಲಿ ಸರ್ಕಾರದ ಪ್ರತಿನಿಧಿಗಳು ಇರಬೇಕು ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಸುಪ್ರೀಂ ಕೋರ್ಟ್: ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದ ಉನ್ನತ ಸಮಿತಿ ಸಭೆಯ ವಿವರಣೆ ಕೋರಿದ್ದ ಅರ್ಜಿ ವಜಾ
ಸುಪ್ರೀಂ ಕೋರ್ಟ್‌ನ ಉನ್ನತ ನ್ಯಾಯಾಧೀಶರ ಸಮಿತಿಯು ಪಾರದರ್ಶಕತೆ ಮತ್ತು ಸಾರ್ವಜನಿಕ ಹೊಣೆಗಾರಿಕೆಯನ್ನು ತುಂಬಲು ಸರ್ಕಾರಿ ಪ್ರತಿನಿಧಿಗಳನ್ನು ಒಳಗೊಂಡಿರಬೇಕು ಎಂದು ಕಾನೂನು ಸಚಿವ ಕಿರಣ್ ರಿಜಿಜು ಪತ್ರದಲ್ಲಿ ಬರೆದಿದ್ದಾರೆ, ಇದು ಸರ್ಕಾರ ಮತ್ತು ನ್ಯಾಯಾಂಗದ ನಡುವೆ ನಡೆಯುತ್ತಿರುವ ವಾದಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಈ ರೀತಿಯ ವ್ಯವಸ್ಥೆ ಕೇಂದ್ರದಂತೆ ರಾಜ್ಯಗಳಲ್ಲಿಯೂ ಇರಬೇಕೆಂದು ಉಲ್ಲೇಖಿಸಿದ್ದು, ರಾಜ್ಯದ ಪ್ರತಿನಿಧಿಗಳು ಹೈಕೋರ್ಟ್ ಕೊಲಿಜಿಯಂನ ಭಾಗವಾಗಿರಬೇಕು ಎಂದು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಇದನ್ನು ಓದಿ: ಕೊಲಿಜಿಯಂ ಕುರಿತ ಕಾನೂನು ಸಚಿವ ಕಿರಣ್ ರಿಜಿಜು ಹೇಳಿಕೆ: ಸುಪ್ರೀಂ ಕೋರ್ಟ್ ತೀವ್ರ ಅತೃಪ್ತಿ
ನ್ಯಾಯಾಧೀಶರ ನೇಮಕಾತಿಯ ಕುರಿತಾದ ಮಾತಿನ ಸಮರದಲ್ಲಿ, ಹಲವಾರು ಸಚಿವರು ಮತ್ತು ಉಪರಾಷ್ಟ್ರಪತಿ ಜಗದೀಪ್ ಧನಖರ್ ಅವರು ಕೆಲವು ದಿನಗಳ ಹಿಂದೆ ತಮ್ಮ ಗಂಭೀರ ಆರೋಪಗಳನ್ನು ಉಲ್ಲೇಖಿಸಿದ್ದರು.
ಕೊಲಿಜಿಯಂ ಶಿಫಾರಸುಗಳ ಹೊರತಾಗಿಯೂ ನ್ಯಾಯಾಧೀಶರ ನೇಮಕವನ್ನು ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೋರಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿದ ಅರ್ಜಿಯ ಮೇಲಿನ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಇದರ ನಡುವೆ ಕೇಂದ್ರ ಕಾನೂನು ಸಚಿವರು ಪತ್ರ ಬರೆದಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ