ಬೆಂಗಳೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದಲ್ಲಿ ಜು.3ರಂದು ಬೆಳಗ್ಗೆ 9.30ಕ್ಕೆ ವಿಧಾನಸೌಧದ ಮುಂಭಾಗದಿಂದ ಕಂಠೀರವ ಕ್ರೀಡಾಂಗಣಕ್ಕೆ ಪರಿಸರ ನಡಿಗೆ ಆಯೋಜಿಸಲಾಗಿದೆ.
ಲೋಕಸಭೆ ಮತ್ತು ರಾಜ್ಯ ವಿಧಾನಪರಿಷತ್ ಚುನಾವಣೆ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯ ಸರ್ಕಾರ ವಿಶ್ವ ಪರಿಸರ ದಿನದ ಪ್ರಧಾನ ಸಮಾರಂಭ ಆಯೋಜಿಸಿರಲಿಲ್ಲ. ಈಗ ಜುಲೈ 3ರಂದು ವಿಶ್ವಪರಿಸರ ದಿನ ಮತ್ತು ವನಮಹೋತ್ಸವವನ್ನು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದಾರೆ.
ಪರಿಸರಕ್ಕಾಗಿ ನಡಿಗೆ:
ಪರಿಸರ ದಿನದ ಕಾರ್ಯಕ್ರಮದ ಭಾಗವಾಗಿ ವಿಧಾನಸೌಧದ ಮುಂಭಾಗದಲ್ಲಿ ಜು.3, ಬುಧವಾರ ಬೆಳಗ್ಗೆ 9.30ಕ್ಕೆ ಪರಿಸರ ನಡಿಗೆಗೆ ಆಯೋಜಿಸಲಾಗಿದ್ದು, ಕಂಠೀರವ ಒಳಾಂಗಣ ಕ್ರೀಡಾಂಗಣದವರೆಗೆ ಪರಿಸರ ಪ್ರೇಮಿಗಳು ಹೆಜ್ಜೆ ಹಾಕಲಿದ್ದಾರೆ.
ಇದನ್ನು ಓದಿ : ಸೂರಜ್ ರೇವಣ್ಣಗೆ ಹೆಚ್ಚಿನ ವಿಚಾರಣೆಗಾಗಿ ಎರಡು ದಿನ ಪೊಲೀಸ್ ಕಸ್ಟಡಿ ವಿಸ್ತರಣೆ
ಜೀವವೈವಿಧ್ಯ, ಪರಿಸರ ಪ್ರಶಸ್ತಿ ಪ್ರದಾನ:
ಭೂ ಪುನಶ್ಚೇತನ, ಬರ ನಿರ್ವಹಣೆ, ಬರಡುಭೂಮಿ ಚೇತರಿಕೆ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುವ ವಿಶ್ವ ಪರಿಸರ ದಿನದ ಕಾರ್ಯಕ್ರಮದಲ್ಲಿ ಜೀವವೈವಿಧ್ಯ ಮತ್ತು ಪರಿಸರ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಮತ್ತಿತರ ಗಣ್ಯರು ಭಾಗಿಯಾಗಲಿದ್ದಾರೆ.
ಇದಕ್ಕೂ ಮುನ್ನ ಮುಖ್ಯಮಂತ್ರಿ ಮತ್ತು ಗಣ್ಯರು ಕಂಠೀರವ ಕ್ರೀಡಾಂಗಣದ ಕಬಡ್ಡಿ ಮೈದಾನದ ಬಳಿ ಸಸಿ ನೆಟ್ಟು, ನೀರೆರೆಯುವ ಮೂಲಕ 2024ನೇ ಸಾಲಿನ ವನಮಹೋತ್ಸವಕ್ಕೂ ಚಾಲನೆ ನೀಡಲಿದ್ದಾರೆ.
ಇದನ್ನು ನೋಡಿ : ವಚನಾನುಭವ – 02| ದೇಹಾರಕ್ಕೆ ಆಹಾರವೆ ನಿಚ್ಚಣಿಗೆ – ಡಾ. ಮೀನಾಕ್ಷಿ ಬಾಳಿJanashakthi Media