ಆಗ್ರಾ: ವಿಶ್ವಖ್ಯಾತಿಗೆ ಪ್ರಸಿದ್ಧಿಯಾಗಿರುವ, ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಭಾರತಕ್ಕೆ ಸೆಳೆಯುವ ಆಗ್ರಾದ ತಾಜ್ ಮಹಲ್ ಕಟ್ಟಡಕ್ಕೆ ಆಸ್ತಿ ತೆರಿಗೆ ಹಾಗೂ ನೀರಿನ ಬಿಲ್ಲು ಪಾವತಿಸಬೇಕೆಂದು ಇದೇ ಮೊದಲ ಬಾರಿಗೆ ಉತ್ತರ ಪ್ರದೇಶ ಸರ್ಕಾರ ನೋಟಿಸು ನೀಡಿದೆ.
ಉತ್ತರ ಪ್ರದೇಶದ ಆಗ್ರಾದ ನಾಗರಿಕ ಸಂಸ್ಥೆಯು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನೋಟಿಸು ನೀಡಿದ್ದು, ತಾಜ್ ಮಹಲ್ ಮೇಲಿನ ಆಸ್ತಿ ತೆರಿಗೆ 1.47 ಲಕ್ಷ ರೂಪಾಯಿ ಪಾವತಿಸಬೇಕು ಎಂದು ಸೂಚನೆ ನೀಡಿದೆ. 25 ನವೆಂಬರ್ 2022 ರಂದು ಆಗ್ರಾ ಮುನ್ಸಿಪಲ್ ಕಾರ್ಪೊರೇಶನ್‌ನ ತೆರಿಗೆ ಮೌಲ್ಯಮಾಪನ ಅಧಿಕಾರಿಗಳು ನೋಟಿಸು ನೀಡಿದೆ. ಈ ನೋಟಿಸು ಇತ್ತೀಚೆಗಷ್ಟೇ ಎಎಸ್‌ಐಗೆ ಬಂದಿದೆ.
ತಾಜ್ ಮಹಲ್ ಜೊತೆಗೆ, ಯಮುನಾ ನದಿಗೆ ಅಡ್ಡಲಾಗಿರುವ ಸ್ಮಾರಕವಾದ ಇತ್ಮಾದ್-ಉದ್-ದೌಲಾಗೆ ಸಹ ಮನೆ ತೆರಿಗೆ ನೋಟಿಸು ನೀಡಲಾಗಿದೆ. ಅಲ್ಲದೆ ತೆರಿಗೆಯನ್ನು ಠೇವಣಿ ಮಾಡಲು ಎಎಂಸಿಯು ಎಎಸ್‌ಐಗೆ 15 ದಿನಗಳ ಗಡುವನ್ನು ನಿಗದಿಪಡಿಸಿದೆ. ನಿಗದಿತ ಸಮಯದೊಳಗೆ ತೆರಿಗೆಯನ್ನು ಪಾವತಿಸದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಅದರಲ್ಲಿ ಸೂಚಿಸಲಾಗಿದೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ) ಅಧಿಕಾರಿಗಳು ಬಾಕಿ ಪಾವತಿ ನೋಟಿಸ್ಸು ಬಂದಿರುವುದಕ್ಕೆ ಆಶ್ಚರ್ಯಗೊಂಡಿದ್ದು, ಶತಮಾನದ ನಂತರ ಮೊದಲ ಬಾರಿಗೆ ಇಂತಹ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ಆಡಳಿತದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ವಿವಿಧ ಘಟಕಗಳು 320 ವರ್ಷಗಳ ಇತಿಹಾಸವಿರುವ ಆಗ್ರಾದ ತಾಜ್ ಮಹಲ್ ಹಾಗೂ ಆಗ್ರಾ ಕೋಟೆ ಎರಡಕ್ಕೂ ಬಾಕಿ ಮೊತ್ತವನ್ನು ಪಾವತಿ ಮಾಡಬೇಕೆಂದು ನೋಟಿಸು ನೀಡಿದೆ. ಈ ಬಗ್ಗೆ ಎಎಸ್‍ಐ ಅಧಿಕಾರಿಗಳು ಇದು, ತಪ್ಪು, ಶೀಘ್ರದಲ್ಲೇ ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಬಗ್ಗೆ ಆಗ್ರಾದ ಎಎಸ್‍ಐನ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ರಾಜ್‍ಕುಮಾರ್ ಪಟೇಲ್ ಮಾತನಾಡಿ, ಇಲ್ಲಿಯವರೆಗೆ 3 ನೋಟಿಸುಗಳು ಬಂದಿದ್ದು, ತಾಜ್‍ಮಹಲ್‍ಗೆ ಎರಡು ಮತ್ತು ಆಗ್ರಾ ಕೋಟೆಗೆ ಒಂದು ನೋಟಿಸು ನೀಡಲಾಗಿದೆ. ತಾಜ್ ಮಹಲ್‍ಗೆ ಸಂಬಂಧಿಸಿದಂತೆ, ಎರಡು ನೋಟಿಸ್‍ಗಳು ಬಂದಿವೆ. ಒಂದು ಆಸ್ತಿ ತೆರಿಗೆ ಮತ್ತು ಇನ್ನೊಂದು ನೀರು ಸರಬರಾಜು ಇಲಾಖೆಯಿಂದಾಗಿದೆ. ಒಟ್ಟು 1 ಕೋಟಿಗೂ ಅಧಿಕ ರೂಪಾಯಿಗಳನ್ನು ಪಾವತಿಸಬೇಕೆಂದು ಸೂಚಿಸಲಾಗಿದೆ. ಆದರೆ ಅಂತಹ ತೆರಿಗೆಗಳು ಸ್ಮಾರಕಗಳಿಗೆ ಅನ್ವಯಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಮನೆ ತೆರಿಗೆ 47,000 ರೂ.ಗಿಂತ ಹೆಚ್ಚಿನ ಮೊತ್ತ ಬಾಕಿ ಇದ್ದಲ್ಲಿ ಅದರ ಮೇಲಿನ ಮೊತ್ತಕ್ಕೆ ಬಡ್ಡಿಯನ್ನು ಸಹ ಒಳಗೊಂಡಿದೆ ಎನ್ನಲಾಗಿದೆ. ತಾಜ್ ಮಹಲ್ ಸ್ಮಾರಕದ ಮೇಲಿನ ವಾರ್ಷಿಕ ಮನೆ ತೆರಿಗೆ 11,098 ರೂ. ಆಗಿದೆ. 1920ರಲ್ಲಿ ತಾಜ್ ಮಹಲ್ ಅನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಲಾಗಿದ್ದು, ಬ್ರಿಟಿಷರ ಆಡಳಿತಾವಧಿಯಲ್ಲಿಯೂ ಈ ಸ್ಮಾರಕಕ್ಕೆ ಮನೆ ತೆರಿಗೆ ವಿಧಿಸಿರಲಿಲ್ಲ ಎಂದು ಎಎಸ್‌ಐ ತಿಳಿಸಿದ್ದಾರೆ.
ಸಂರಕ್ಷಿತ ಸ್ಮಾರಕವಾಗಿರುವ ಆಗ್ರಾದ ಮೊಘಲ್ ಸಮಾಧಿಯಾದ ಇತ್ಮಾದ್-ಉದ್-ದೌಲಾ ಸಮಾಧಿಗೆ ಬಾಕಿ ಇರುವ ಮನೆ ತೆರಿಗೆ ಪಾವತಿಗೆ ಇದೇ ರೀತಿಯ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೇಬಿ ತಾಜ್ ಎಂದೂ ಕರೆಯಲ್ಪಡುವ ಈ ಸಮಾಧಿಯನ್ನು ಮೊಘಲ್ ಚಕ್ರವರ್ತಿ ಜಹಾಂಗೀರನ ಪತ್ನಿ ನೂರ್ ಜಹಾನ್ ತನ್ನ ತಂದೆಗಾಗಿ ನಿಯೋಜಿಸಿದ್ದರು.
ಎಎಂಸಿ ಹೊರಡಿಸಿರುವ ನೋಟಿಸ್ಸಿನಲ್ಲಿ ಮಾರ್ಚ್ 31, 2022 ರವರೆಗೆ ಬಾಕಿ ಉಳಿದಿರುವ ಭೂ ತೆರಿಗೆಯು 88,784 ರೂ ಆಗಿರುತ್ತದೆ ಮತ್ತು ಅದರ ಮೇಲೆ ಸಂಗ್ರಹವಾದ 47,943 ರೂ ಬಡ್ಡಿಯಾಗಿದೆ. 2022-23ನೇ ಹಣಕಾಸು ವರ್ಷದ ಮನೆ ತೆರಿಗೆಯನ್ನು 11,098 ರೂ ಎಂದು ತೋರಿಸಲಾಗಿದೆ. ಸ್ಯಾಟಲೈಟ್ ಇಮೇಜ್ ಮ್ಯಾಪಿಂಗ್ ಮೂಲಕ ಮನೆ ತೆರಿಗೆಗಾಗಿ ಸಾಯಿ ಕನ್‌ಸ್ಟ್ರಕ್ಷನ್ ಕಂಪನಿ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ನೋಟಿಸು ನೀಡಲಾಗಿದೆ ಎಂದು ಸಹಾಯಕ ಮುನ್ಸಿಪಲ್ ಕಮಿಷನರ್ ಮತ್ತು ತಾಜ್‌ಗಂಜ್ ವಲಯ ಉಸ್ತುವಾರಿ ಸರಿತಾ ಸಿಂಗ್ ಹೇಳಿದ್ದಾರೆ.