ಬೆಂಗಳೂರು: ಬೆಂಗಳೂರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಬಿಎಂಪಿ ದೂರು ಆಧರಿಸಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಿಬಿಎಂಪಿ ಸಲ್ಲಿಸಿದ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಇನ್ನು ಚಿಲುಮೆ ಸಂಸ್ಥೆಗೆ ಐಡಿ ಕಾರ್ಡ್ ನೀಡಿದ್ದ ಆರ್ಒ ಸಸ್ಪೆಂಡ್ ಆಗಿದ್ದಾರೆ.
ಬೆಂಗಳೂರಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಚುನಾವಣೆಗೆ ಆಯೋಗ ಈ ಬಗ್ಗೆ ವರದಿ ನೀಡುವಂತೆ ಬಿಬಿಎಂಪಿಗೆ ಹೇಳಿತ್ತು. ಅದರಂತೆ ಇದೀಗ ಬಿಬಿಎಂಪಿ ಚುನಾವಣೆ ಆಯೋಗಕ್ಕೆ ವರದಿ ನೀಡಿದ್ದು, ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಚಿಲುಮೆ ಸಂಸ್ಥೆಗೆ ವೋಟರ್ ಐಡಿ, ಆಧಾರ್ ಲಿಂಕ್ ಮಾಡುವ ಹೊಣೆ ನೀಡಲಾಗಿತ್ತು. ಉಚಿತವಾಗಿ ಜೋಡಣೆ ಮಾಡುವುದಾಗಿ ‘ಚಿಲುಮೆ’ ಅರ್ಜಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಚಿಲುಮೆ ಸಂಸ್ಥೆಗೆ ವೋಟರ್ ಐಡಿ ಹಾಗೂ ಆಧಾರ್ ಲಿಂಕ್ ಮಾಡುವ ಜವಾಬ್ದಾರಿ ನೀಡಲಾಗಿತ್ತು ಎಂದು ಚುನಾವಣೆ ಆಯೋಗಕ್ಕೆ ಬಿಬಿಎಂಪಿ ನೀಡಿದ ವರದಿಯಲ್ಲಿ ಸ್ಪೋಟಕ ಮಾಹಿತಿ ಬಯಲಾಗಿದೆ. ಅಲ್ಲದೇ ಇದೀಗ ಮಹದೇವಪುರ ವಲಯದ ಆರ್ಒ ಚಂದ್ರಶೇಖರ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಚಿಲುಮೆ ಸಂಸ್ಥೆಗೆ ಐಡಿ ಕಾರ್ಡ್ ನೀಡಿದ್ದ ಆರೋಪ ಮೇರೆಗೆ ಆರ್ಒ ಚಂದ್ರಶೇಖರ್ ಅವರನ್ನು ಅಮಾನತು ಮಾಡಲಾಗಿದೆ.
ನಾಲ್ವರು ವಶಕ್ಕೆ : ಮತದಾರರ ವೈಯಕ್ತಿಕ ಮಾಹಿತಿ (ದತ್ತಾಂಶ) ಕಳವು ಪ್ರಕರಣದ ಸಂಬಂಧ ಚಿಲುವೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಿರುದ್ಧ ಹಲಸೂರುಗೇಟ್ ಮತ್ತು ಕಾಡುಗೋಡಿ ಪೊಲೀಸ್ ಠಾಣೆಗಳಲ್ಲಿ ಬಿಬಿಎಂಪಿ ದೂರು ದಾಖಲಿಸಿತ್ತು. ಬಿಬಿಎಂಪಿ ದೂರು ನೀಡಿದ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ ಪೊಲೀಸರು, ಈಗ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಚಿಲುಮೆ ಸಂಸ್ಥೆಯ ಸಿಬ್ಬಂದಿಗಳಾದ ರೇಣುಕಾಪ್ರಸಾದ್, ಧರ್ಮೇಶ್, ಸುಧಾಕರ್ ಮತ್ತು ರಕ್ಷಿತ್ ಎನ್ನುವರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತೀವ್ರ ವಿಚಾರಣೆ ನಡೆಸಿದ್ದಾರೆ.
NICE INFORMATION