ಹಾಸನ: ಮುಸ್ಲಿಂ ಸಮುದಾಯದ ಮತದಾರರು ಹೆಚ್ಚಿರುವ ಶ್ರೀನಗರ ಬಡಾವಣೆಗೆ ಭೇಟಿ ನೀಡಿದ್ದ ಬಿಜೆಪಿ ಶಾಸಕ ಪ್ರೀತಂಗೌಡ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನಗೆ ಮತ ಹಾಕದಿದ್ದರೆ ಯುಜಿಡಿ ಕಾಮಗಾರಿ ಮಾಡಲ್ಲ ಎಂದು ಮತದಾರರಿಗೆ ನೇರವಾಗಿಯೇ ಹೇಳಿದ್ದಾರೆ.
ರಾತ್ರಿ ವೇಳೆ ಶಾಸಕ ಪ್ರೀತಂಗೌಡ ಭೇಟಿ ನೀಡಿದ್ದರು, ಆ ವೇಳೆ ವಿದ್ಯುತ್ ಕಡಿತಗೊಂಡಿತ್ತು. ಆದರೂ ಕತ್ತಲಲ್ಲೇ ಸ್ಥಳೀಯರನ್ನು ಉದ್ದೇಶಿಸಿ ಮಾತನಾಡಿ, ಯಾರು ಕೆಲಸ ಮಾಡುತ್ತಾರೆ ಅವರಿಗೆ ಮತ ಹಾಕಬೇಕು. ಕೆಲಸವಾಗುವವರೆಗೂ ನಮ್ಮ ಜೊತೆಯಲ್ಲೇ ಇದ್ದು, ಬಾಯಲ್ಲಿ ಅಣ್ಣಾ ಅಂತ ಹೇಳಿ ಕೊನೆಗೆ ನಾವು ಬಿಜೆಪಿಗೆ ಮತ ಹಾಕಲ್ಲ ಅಂತ ಹೇಳಿದರೆ ಕೆಲಸ ಮಾಡಿರೋರಿಗೆ ಉರಿ ಹತ್ತುತ್ತೆ ಎಂದು ನೇರವಾಗಿ ಹೇಳಿಕೆ ನೀಡಿದ್ದಾರೆ.
ನೀವು ಬೆಳಗ್ಗೆಯಿಂದಲೂ ಕೂಲಿಗೆ ಹೋಗುತ್ತೀರಾ, ಸಂಜೆ ಕೂಲಿ ಕೊಡದೇ ಹೋದರೆ ಬಿಡ್ತೀರಾ? ಅದೇ ರೀತಿಯೇ ನಾನು ಇಲ್ಲಿ ಕೆಲಸ ಮಾಡಿರುತ್ತೇನೆ. ಅದಕ್ಕೆ ಮತವನ್ನು ಕೇಳುತ್ತೇವೆ, ಆಗ ನೀವು ನನಗೆ ಮತ ಹಾಕದೇ ನಾನು ಕಾಂಗ್ರೆಸ್, ನಿಮಗೆ ಮತ ಹಾಕುವುದಿಲ್ಲ ಎಂದರೆ ನಾನು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ನಾನು ಬಿಡಿಸಿ ಹೇಳುತ್ತಿದ್ದೇನೆ ಚಿಕ್ಕ ಮಕ್ಕಳಿಗೂ ಅರ್ಥವಾಗಲಿ ಎಂದು. ಇಲ್ಲಿ ಇರುವವರೆಲ್ಲರೂ ದೊಡ್ಡವರು, ಮತದಾನ ಮಾಡುವವರು. ನಾನು ಮನ:ಪೂರ್ವಕವಾಗಿ ಹೇಳುತ್ತಿದ್ದೇನೆ ಮುಸಲ್ಮಾನರನ್ನು ನಮ್ಮ ಸಹೋದರರ ರೀತಿ. ಮುಂದೆಯೂ ಇದೇ ಭಾವನೆ ಇರುತ್ತದೆ. ಆದರೆ, ನಾನು ಕೆಲಸ ಮಾಡಿದ ಸಂದರ್ಭದಲ್ಲಿ ನೀವೇನಾದರೂ ಸಹಾಯ ಮಾಡಿಲ್ಲ ಅಂದರೆ, ಇವರಿಗೆ ಎಷ್ಟೇ ಕೆಲಸ ಮಾಡಿದರೂ ಇಷ್ಟೇ ನಮ್ಮ ಹಣೆಬರಹ ಬದಲಾಗಲ್ಲ ಅಂತ ಹೇಳಿ ಈ ಕಡೆ ತಿರುಗಿ ನೋಡಬಾರದು ಅನ್ನುವ ತೀರ್ಮಾನಕ್ಕೆ ಬರುವೆ. ಆ ತೀರ್ಮಾನಕ್ಕೆ ಬರದೇ ಇರುವ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು ಎಂದರು.
ಈಗಾಲೇ ಮೂರು ಸಾರಿ ಕೈಕೊಟ್ಟಿದ್ದೀರಾ. ಹಿಂದಿನ ವಿಧಾನಸಭಾ ಚುನಾವಣೆ ನಡೆದಾಗಲೂ ಮತ ಹಾಕಿಲ್ಲ. ಅದಾದ ಬಳಿಕ ಪಾಲಿಕೆ ಹಾಗೂ ಸಂಸದರ ಚುನಾವಣೆಯಲ್ಲೂ ಮತ ಹಾಕಿರಲಿಲ್ಲ. ಇದೀಗ ವಿಧಾನಸಭಾ ಚುನಾವಣೆ ಬರುತ್ತಿದೆ. ಆ ಸಂದರ್ಭದಲ್ಲಿ ನೀವೇನಾದರೂ ಕೈಕೊಟ್ಟರೆ ನಾನು ಕೈ, ಕಾಲು ಕೊಡ್ತೀನಿ. ನನ್ನ ಮನೆಗೆ ಬಂದರೆ ಕಾಫಿ ಕುಡಿಸಿ ಕಳುಹಿಸುತ್ತೇನೆ. ಯಾವ ಕೆಲಸವನ್ನು ಮಾಡಿಕೊಡುವುದಿಲ್ಲ ಎಂದು ತಿಳಿಸಿದರು.
ಅವರಿಗೆ ಮತ ಹಾಕಬೇಡಿ, ನಾನು ನಿಮ್ಮ ಕೆಲಸವನ್ನೆಲ್ಲಾ ಮಾಡಿಕೊಡುತ್ತೇನೆ ಎಂದು ಹೇಳುತ್ತಾರೆ. ಆ ರೀತಿ ಹೇಳುವವರ ಮನೆಯಲ್ಲಿ ಮೂರು ಸಾರಿ ಮುಖ್ಯಮಂತ್ರಿ ಆಗಿದ್ದರು. ದೊಡ್ಡಗೌಡರು ಒಂದು ಸಾರಿ, ಕುಮಾರಣ್ಣ ಎರಡು ಸಾರಿ ಮುಖ್ಯಮಂತ್ರಿ ಆಗಿದ್ದರು. ರೇವಣ್ಣ ಅವರು ನಾಲ್ಕು ಸಾರಿ ಮಂತ್ರಿಯಾಗಿದ್ದರು. ಆದರೆ ಯಾವತ್ತೂ ಶ್ರೀನಗರಕ್ಕೆ ಬಂದಿಲ್ಲ ಎಂದು ಆರೋಪಿಸಿದರು.
ನಾನು ಶಾಸಕನಾಗಿ ನಾಲ್ಕು ವರ್ಷವಾಗಿದೆ. ಈ ನಾಲ್ಕು ವರ್ಷದಲ್ಲಿ ನಿಮಗೆ ಎಲ್ಲವನ್ನೂ ರೆಡಿ ಮಾಡಿದ್ದೀನಿ. ಯುಜಿಡಿ ಮಾಡಬೇಕು ಬೇಡವೋ ಅಂತ ಕೇಳಕ್ಕೆ ಬಂದಿದ್ದೀನಿ. ಮತ ಹಾಕದಿದ್ದರೆ ಯುಜಿಡಿ ಕಾಮಗಾರಿ ಮಾಡಲ್ಲ ಎಂದು ಶಾಸಕ ಪ್ರೀತಂಗೌಡ ನೇರವಾಗಿ ಹೇಳಿದರು.