ಎರಡನೇ ಕೋವಿಡ್ ಅಲೆಯ ಭಗ್ನಾವಶೇಷಗಳ ನಡುವಿನಿಂದ ಇನ್ನೊಂದು ಅನರ್ಥ ಮೂಡಿ ಬರುತ್ತಿದೆ, ಅದೇ ಆರ್ಥಿಕ ಅನಾಹುತ. ಕೋಟ್ಯಂತರ ಜನಗಳು ತಮ್ಮ ಜೀವನಾಧಾರಗಳನ್ನು ಕಳಕೊಂಡಿದ್ದಾರೆ, ಉದ್ಯೋಗಹೀನರಾಗಿದ್ದಾರೆ; ಸಣ್ಣ ವ್ಯವಹಾರಸ್ಥರು ಮತ್ತು ಅಂಗಡಿಕಾರರಿಗೆ ಕೇಡು ಉಂಟಾಗಿದೆ; ಹಲವು ಕುಟುಂಬಗಳು ಸಾಲದಲ್ಲಿ ಮುಳಗಿವೆ, ಹಸಿವು ರಾರಾಜಿಸುತ್ತಿದೆ. ಆದ್ದರಿಂದ, ಸುಮಾರಾಗಿ ಎಲ್ಲರೂ, ಕೆಲವು ಕಟ್ಟಾ ಹಣಕಾಸು ಮೂಲಭೂತವಾದಿಗಳನ್ನು ಬಿಟ್ಟು, ಸರಕಾರ ಈಗ ಹೆಚ್ಚು ವೆಚ್ಚ ಮಾಡಬೇಕಾಗಿದೆ ಎಂದು ಕರೆ ನೀಡುತ್ತಿದ್ದಾರೆ. ಆದರೆ ಮೋದಿ ಸರಕಾರ ಇವನ್ನೆಲ್ಲ ಕೇಳಿಯೂ ಕೇಳದಂತಿದೆ. ಸರಕಾರ ಬಡವರು ಮತ್ತು ನೆರವಿನ ಅಗತ್ಯವಿರುವವರಿಗೆ ನಗದು ಸಬ್ಸಿಡಿಗಳನ್ನು ಕೊಡುವುದಿಲ್ಲವೆಂದು ಹಟ ತೊಟ್ಟಿದೆ. ಲಸಿಕೆ ಇರಲಿ, ಅಥವ ನಗದು ಸಬ್ಸಿಡಿಗಳಿಗಾಗಿ ರಾಜ್ಯಗಳಿಗೆ ಹಣಕಾಸು ನೆರವು ಒದಗಿಸುವುದಿರಲಿ, ಕೇಂದ್ರ ಸರಕಾರ ತನ್ನ ಹೊಣೆಗಾರಿಕೆಗಳನ್ನು ಜಾರಿಸಿಕೊಳ್ಳುತ್ತಿದೆ. ಇದು ಮಾಯಾಮಂತ್ರದ ವಿಜ್ಞಾನ ಮತ್ತು ಮಾಯಾಮಂತ್ರದ ಅರ್ಥಶಾಸ್ತ್ರದ ಪ್ರಕರಣ ಆಗಿ ಬಿಟ್ಟಿದೆ: ಪ್ರಕಾಶ ಕಾರಟ್
ಕೋವಿಡ್ ಮಹಾಸೋಂಕಿನ ಎರಡನೇ ಅಲೆಯ ಶಿಖರ ನಿಧಾನವಾಗಿ ಹಿಂದಕ್ಕೆ ಸರಿಯುತ್ತಿರುವಂತೆ, ಇಡೀ ದೇಶದ ಗಮನ ಲಕ್ಷಾಂತರ ಕುಟುಂಬಗಳ ಮೇಲೆ ಅದು ಎಸಗಿರುವ ಹಾವಳಿಗಳ ಮೇಲೆ ನೆಟ್ಟಿದೆ. ಈ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಮೋದಿ ಸರಕಾರ ಯಾವುದೇ ಸಿದ್ಧತೆಯಿಲ್ಲದೆ ತಡಬಡಾಯಿಸಿರುವುದರ ಬಗ್ಗೆ ವ್ಯಾಪಕವಾದ ದಿಗಿಲು ಮತ್ತು ಆಕ್ರೋಶ ವ್ಯಕ್ತವಾಗಿದೆ. ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲಾಗದ ಅದರ ಅಸಮರ್ಥತೆ ಮತ್ತು ಅವೈಜ್ಞಾನಿಕ ನಿಲುವು ಇದನ್ನು ಜನತೆಗೆ ಒಂದು ಮಹಾ ಅನಾಹುತವಾಗಿ ಪರಿವರ್ತಿಸಿವೆ.
ಈ ಎರಡನೇ ಅಲೆಯ ಭಗ್ನಾವಶೇಷಗಳ ನಡುವಿನಿಂದ ಇನ್ನೊಂದು ಅನರ್ಥ ಮೂಡಿ ಬರುತ್ತಿದೆ, ಅದೇ ಆರ್ಥಿಕ ಅನಾಹುತ. ಕೋಟ್ಯಂತರ ಜನಗಳು ತಮ್ಮ ಜೀವನಾಧಾರಗಳನ್ನು ಕಳಕೊಂಡಿದ್ದಾರೆ, ಉದ್ಯೋಗಹೀನರಾಗಿದ್ದಾರೆ; ಸಣ್ಣ ವ್ಯವಹಾರಸ್ಥರು ಮತ್ತು ಅಂಗಡಿಕಾರರಿಗೆ ಕೇಡು ಉಂಟಾಗಿದೆ; ಹಲವು ಕುಟುಂಬಗಳು ಸಾಲದಲ್ಲಿ ಮುಳಗಿವೆ, ಹಸಿವು ರಾರಾಜಿಸುತ್ತಿದೆ.
ರಾಷ್ಟ್ರೀಯ ಅಂಕಿ-ಅಂಶಗಳ ಸಂಘಟನೆ(ಎನ್.ಎಸ್.ಒ.) ಪ್ರಕಟಿಸಿರುವ ಪ್ರಕಾರ 2021ರ ಜಿಡಿಪಿ 7.3% ದಷ್ಟು ಸಂಕುಚನಗೊಂಡಿದೆ. ಇದು ಕಳೆದ ನಾಲ್ಕು ದಶಕಗಳಲ್ಲೇ ಅತ್ಯಂತ ಕೆಟ್ಟ ನಿರ್ವಹಣೆ. ಕೃಷಿ ವಲಯವೊಂದನ್ನು ಬಿಟ್ಟು ಅರ್ಥವ್ಯವಸ್ಥೆಯ ಪ್ರತಿಯೊಂದೂ ವಲಯದಲ್ಲಿ ಉತ್ಪಾದನೆ ಕುಸಿದಿದೆ. ನಾಲ್ಕನೇ ತ್ರೈಮಾಸಿಕದಲ್ಲಿ(ಜನವರಿಯಿಂದ ಮಾರ್ಚ್ 2021) 1.6% ಬೆಳವಣಿಗೆ ಅರ್ಥವ್ಯವಸ್ಥೆ ಚೇತರಿಸಿಕೊಳ್ಳುತ್ತಿರುವ ಲಕ್ಷಣ ಎಂದು ಸರಕಾರ ಹೇಳುತ್ತಿದೆ. ಆದರೆ ಏಪ್ರಿಲ್-ಜೂನ್ ಅವಧಿಯಲ್ಲಿ ಎರಡನೇ ಕೋವಿಡ್ ಅಲೆ ಮತ್ತು ಅದರಿಂದಾಗಿ ಹಲವಾರು ರಾಜ್ಯಗಳಲ್ಲಿ ಹಾಕಬೇಕಾಗಿ ಬಂದಿರುವ ಲಾಕ್‌ಡೌನ್‌ಗಳಿಂದಾಗಿ ಪರಿಸ್ಥಿತಿ ಮತ್ತಷ್ಟು ಕೆಟ್ಟುಹೋಗಬಹುದಷ್ಟೇ.
ಪರಿಸ್ಥಿತಿಯ ಗಂಭೀರತೆಯ ಕೆಲವು ಸೂಚನೆಗಳು ಆಗಲೇ ಕಾಣಬರುತ್ತಿವೆ. ಮೇ ತಿಂಗಳಲ್ಲಿ ನಿರುದ್ಯೋಗ ದರ 12 ಶೇಕಡಾ ಹತ್ತಿರ ಇದೆ ಎಂದು ಸಿ.ಎಂ.ಐ.ಇ. ಹೇಳಿದೆ. ಆ ತಿಂಗಳಲ್ಲಿ ನಗರಗಳಲ್ಲಿ ನಿರುದ್ಯೋಗ ದರ 15%ಕ್ಕೆ ಹತ್ತಿರ ಬಂದಿದೆ. ಭಾರತದ ಒಳಗಿನ ಕಾರ್ಖಾನೆಗಳ ಆರ್ಡರ್ ಪ್ರಮಾಣ ಮತ್ತು ಉತ್ಪಾದನೆ ಕಳೆದ 10 ತಿಂಗಳಲ್ಲೇ ಅತೀ ಕಡಿಮೆ ಮಟ್ಟಕ್ಕೆ ಇಳಿದಿದೆ. ಕುಟುಂಬಗಳ ಉಪಭೋಗದ ಪ್ರಮಾಣ ಮತ್ತಷ್ಟು ಕೆಳಗಿಳಿದಿದೆ; ಬೇಡಿಕೆಯಿಲ್ಲದ್ದರಿಂದ ಹೂಡಿಕೆಗಳು ಬರುತ್ತಿಲ್ಲ.
ಇಂತಹ ಸಮಯದಲ್ಲಿ ಸರಕಾರ ಅರ್ಥವ್ಯವಸ್ಥೆಯಲ್ಲಿ ವೆಚ್ಚಗಳ ಪ್ರಮಾಣವನ್ನು ಹೆಚ್ಚಿಸಲು ಮಧ್ಯಪ್ರವೇಶಿಸಬೇಕಾಗಿತ್ತು. ನಗದು ಸಬ್ಸಿಡಿಗಳು, ಉದ್ಯೋಗ ಭತ್ತೆಗಳು, ಮನರೇಗ ವೆಚ್ಚದಲ್ಲಿ ಹೆಚ್ಚಳ ಹಾಗೂ ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳಿಗೆ ಹೆಚ್ಚಿನ ಸಾಲಗಳ ಮೂಲಕ ಸರಕಾರೀ ವೆಚ್ಚವನ್ನು ಹೆಚ್ಚಿಸುವ ಮೂಲಕ ಮಾತ್ರವೇ ಜನಗಳಿಗೆ ಪರಿಹಾರವನ್ನು, ಅವರ ಕೈಗಳಲ್ಲಿ ಖರೀದಿ ಸಾಮರ್ಥ್ಯವನ್ನು ಇಟ್ಟು ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯನ್ನು ಉತ್ತೇಜಿಸಲು ಸಾಧ್ಯ. ಮೂಲರಚನೆ ಮತ್ತು ಗ್ರಾಮೀಣ ಅಭಿವೃದ್ದಿಗೆ ಹೆಚ್ಚಿನ ಸಾರ್ವಜನಿಕ ಹೂಡಿಕೆ ಮಧ್ಯಮಾವಧಿ ಮತ್ತು ದೀರ್ಘಾವಧಿಯಲ್ಲಿಯೂ ನೆರವಾಗುತ್ತದೆ.
ಸುಮಾರಾಗಿ ಎಲ್ಲರೂ, ಕೆಲವು ಕಟ್ಟಾ ಹಣಕಾಸು ಮೂಲಭೂತವಾದಿಗಳನ್ನು ಬಿಟ್ಟು, ಸರಕಾರ ಈಗ ಹೆಚ್ಚು ವೆಚ್ಚ ಮಾಡಬೇಕಾಗಿದೆ ಎಂದು ಕರೆ ನೀಡುತ್ತಿದ್ದಾರೆ. ಭಾರತೀಯ ಉದ್ದಿಮೆಗಳ ಮಹಾಒಕ್ಕೂಟ(ಸಿ.ಐ.ಐ.)ದ ಅಧ್ಯಕ್ಷ ಉದಯ್ ಕೊಟಕ್, ನಗದು ಸಬ್ಸಿಡಿಗಳೂ ಸೇರಿದಂತೆ ಒಂದು ದೊಡ್ಡ ಆರ್ಥಿಕ ಉತ್ತೇಜನಾ ಕ್ರಮಕ್ಕೆ ಕರೆ ನೀಡಿದ್ದಾರೆ. ನವ-ಉದಾರವಾದದ ಒಬ್ಬ ದೃಢ ಅನುಯಾಯಿಯಾಗಿರುವ ಮಾಜಿ ಹಣಕಾಸು ಮಂತ್ರಿ ಪಿ.ಚಿದಂಬರಂ ಸಾಲ ತಂದು, ನೋಟು ಪ್ರಿಂಟ್ ಮಾಡಿಯಾದರೂ ಸರಕಾರ ಹೆಚ್ಚು ವೆಚ್ಚ ಮಾಡಬೇಕಾಗಿದೆ ಎಂದು ಕರೆ ನೀಡಿದ್ದಾರೆ. ಅದೇ ರೀತಿ ಹಲವಾರು ಅರ್ಥಶಾಸ್ತ್ರಜ್ಞರು ಮತ್ತು ಸಾರ್ವಜನಿಕ ಹಣಕಾಸು ಪರಿಣಿತರೂ ಕರೆ ನೀಡಿದ್ದಾರೆ.
ಆದರೆ ಮೋದಿ ಸರಕಾರ ಇವನ್ನೆಲ್ಲ ಕೇಳಿಯೂ ಕೇಳದಂತಿದೆ. ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್, ಒಂದು ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ, ಮೊದಲಿಗೆ ಬಜೆಟಿನಲ್ಲಿ ಹೇಳಿರುವ ವೆಚ್ಚಗಳು ಜನರಿಗೆ ತಲುಪಲಿ ಎಂದಿದ್ದಾರೆ. ಬಜೆಟ್ ಈಗಾಗಲೇ ಕೋವಿಡ್ ಸಂಬಂಧಿ ವೆಚ್ಚಗಳ ಪ್ಯಾಕೇಜಿಗೆ ಹಣ ಎತ್ತಿಟ್ಟಿದೆ ಎಂದು ಅವರು ಹೇಳಿದ್ದಾರೆ.
ಆದರೆ ಇದೊಂದು ಟೊಳ್ಳು ದಾವೆ. 2021-22ರ ಬಜೆಟ್ ರೂ. 34,83,236 ಕೋಟಿ ಸರಕಾರೀ ವೆಚ್ಚದ ಲೆಕ್ಕಾಚಾರ ಕೊಟ್ಟಿದೆ. 2020-21ರಲ್ಲಿ ಮಾಡಿರುವ ಖರ್ಚು ರೂ.34,50,305 ಕೋಟಿ. ಅಂದರೆ 2021-22ರಲ್ಲಿ ಹೆಚ್ಚುವರಿ ವೆಚ್ಚ ಕೇವಲ 32,931 ಕೊಟಿ ರೂ. ಬಜೆಟ್ ನೀಡಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮನರೇಗಕ್ಕೆ ಮತ್ತು ಆಹಾರ ಸಬ್ಸಿಡಿಗೆ ಹೆಚ್ಚಳ ಎಂಬುದೇನೂ ಇಲ್ಲ. ಆರೋಗ್ಯ ಬಜೆಟಿನಲ್ಲಿ ಮಾಡಿರುವ ಕೈಚಳಕವಂತೂ ಕಣ್ಣಿಗೆ ರಾಚುವಂತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ಕಳೆದ ವರ್ಷದ ವೆಚ್ಚಕ್ಕೆ ಹೋಲಿಸಿದರೆ ಕೇವಲ 11ಶೇ. ಹೆಚ್ಚಳವಷ್ಟೇ ಇದೆ.
ಸರಕಾರ ಬಡವರು ಮತ್ತು ನೆರವಿನ ಅಗತ್ಯವಿರುವವರಿಗೆ ನಗದು ಸಬ್ಸಿಡಿಗಳನ್ನು ಕೊಡುವುದಿಲ್ಲವೆಂದು ಹಟ ತೊಟ್ಟಿದೆ. ಕಳೆದ ವರ್ಷದ ಮಧ್ಯಭಾಗದಿಂದಲೇ ಪ್ರತಿಪಕ್ಷಗಳು ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲರಿಗೂ ಮಾಸಿಕ ರೂ.7,500 ನಗದು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸುತ್ತ ಬಂದಿವೆ. ಆದರೆ ಸರಕಾರ ಈ ವಿಷಯದಲ್ಲಿ ಎಳ್ಳಷ್ಟೂ ಜಗ್ಗಿಲ್ಲ.
ಎರಡನೇ ಅಲೆಯ ಅವಧಿಯಲ್ಲಿ ಸರಕಾರ ಕೈಗೊಂಡಿರುವ ಒಂದೇ ಕ್ರಮವೆಂದರೆ ಆಹಾರ ಭದ್ರತೆ ಕಾಯ್ದೆಯ ಅಡಿಯಲ್ಲಿ ಬರುವವರಿಗೆ 5 ಕೆ.ಜಿ. ಆಹಾರಧಾನ್ಯಗಳನ್ನು ಕೊಡುವ ಯೋಜನೆಯನ್ನು ಮೂರು ತಿಂಗಳಿಗೆ ವಿಸ್ತರಿಸಿರುವುದಷ್ಟೇ. ಆದರೆ ಕಳೆದ ವರ್ಷ ಕೊಟ್ಟಿದ್ದ 1 ಕೆ.ಜಿ. ಬೇಳೆಯನ್ನು ಈಗ ನಿಲ್ಲಿಸಲಾಗಿದೆ.
ನವ-ಉದಾರವಾದಿ ಧೋರಣೆಗಳ ಮೂಲ ಕರ್ತೃಗಳಾದ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಬ್ರಿಟನ್ನಿನ ಸರಕಾರಗಳು ಅನುಸರಿಸರುವ ಧೋರಣೆಗಳನ್ನು ಅನುಕರಿಸುವುದು ಕೂಡ ಮೋದಿ ಸರಕಾರಕ್ಕೆ ಇಷ್ಟವಿಲ್ಲ. ಟ್ರಂಪ್ ಆಡಳಿತ ಮತ್ತು ಈಗ ಬಿಡೆನ್ ಆಡಳಿತ ಒಟ್ಟಾಗಿ 5 ಟ್ರಿಲಿಯನ್ ಡಾಲರುಗಳ ಹಣಕಾಸು ಉತ್ತೇಜನೆಯನ್ನು ಮತ್ತು ನಗದು ವರ್ಗಾವಣೆಗಳನ್ನು ಕೊಟ್ಟಿವೆ. ಇದು ಅಲ್ಲಿಯ ಜಿಡಿಪಿಯ 27ಶೇ.ದಷ್ಟಾಗುತ್ತದೆ.
ಬ್ರಿಟೀಷ್ ಸರಕಾರ ಜಿಡಿಪಿಯ 17ಶೇ.ದಷ್ಟು ಹಣಕಾಸು ಉತ್ತೇಜನೆ ನೀಡಿದೆ. ಇದರಲ್ಲಿ ಉದ್ಯೋಗ ಬೆಂಬಲ ಮತ್ತು ನಗದು ವರ್ಗಾವಣೆಗಳೂ ಸೇರಿವೆ.
ಭಾರತ ಸರಕಾರ ಮಾಡಿರುವ ಹೆಚ್ಚುವರಿ ವೆಚ್ಚ ಜಿಡಿಪಿಯ 2% ಮಾತ್ರ.
ಭಾರತದ ಮೋದಿ ಸರಕಾರ ಈ ಅವಧಿಯಲ್ಲಿ ದೊಡ್ಡ ಕಾರ್ಪೊರೇಟ್‌ಗಳು ಮತ್ತು ಖಾಸಗಿ ಹಣಕಾಸು ಹಿತಾಸಕ್ತಿಗಳನ್ನು ಶ್ರೀಮಂತಗೊಳಿಸಲು ಕೆಲಸ ಮಾಡಿದೆ. ಅದು ಕಾರ್ಪೊರೇಟ್ ತೆರಿಗೆಗಳನ್ನು 2020-21ರ ಬಜೆಟಿನಲ್ಲೂ, ಮತ್ತು 2021-22ರ ಬಜೆಟಿನಲ್ಲೂ ಇಳಿಸಿದೆ. ಮತ್ತು ಸಾರ್ವಜನಿಕ ವಲಯದ ಘಟಕಗಳನ್ನು ಮಾರುವ ಅಥವಾ ಶೇರು ಹಿಂಪಡೆಯುವ ಮೂಲಕ ರೂ.2.1 ಲಕ್ಷ ಕೋಟಿ ಮತ್ತು ರೂ. 1.75 ಲಕ್ಷ ಕೋಟಿ ಎತ್ತುವ ಪ್ರಸ್ತಾವವನ್ನು ಇಟ್ಟಿದೆ. ಈ ಗುರಿ ಸಾಧನೆಯ ಹತ್ತಿರವೂ ಬರಲು ಅದಕ್ಕೆ ಆಗಿಲ್ಲ ಎನ್ನುವುದು ಬೇರೆ ಮಾತು.
ನವ-ಉದಾರವಾದಿ ಧೋರಣೆಗಳಿಗೆ ಬಿಜೆಪಿ ಸರಕಾರದ ವಿಧೇಯತೆ ಎಂತಹದೆಂದರೆ, ಮಹಾಸೋಂಕಿನ ಅವಧಿಯಲ್ಲೂ ಶೇರು ಮಾರುಕಟ್ಟೆಯಲ್ಲಿ ಭಾರೀ ತೇಜಿ ಮತ್ತು ದೊಡ್ಡ ಮಾಲಕರು ಹಾಗೂ ಸಟ್ಟಾ ಕೋರರ ಸಂಪತ್ತು ಏರಿರುವ ಹೊಲಸು ದೃಶ್ಯಗಳು ಕಾಣ ಬಂದಿವೆ.
ಇದರ ಫಲಿತಾಂಶವೆಂದರೆ, 2020ರಲ್ಲಿ ಬಿಲಿಯಾಧಿಪತಿಗಳ ಸಂಖ್ಯೆಯಲ್ಲಿ 55 ಹೆಚ್ಚಳವಾಗಿದೆ ಮತ್ತು ಮೊದಲ 100 ಬಿಲಿಯಾಧಿಪತಿಗಳ ಸಂಪತ್ತಿನಲ್ಲಿ 35ಶೇ. ಏರಿಕೆಯಾಗಿದೆ. ಅದರ ಇನ್ನೊಂದು ಮಗ್ಗುಲಲ್ಲಿ ವಲಸೆ ಕಾರ್ಮಿಕರ, ಅನೌಪಚಾರಿಕ ಕಾರ್ಮಿಕರ, ಗ್ರಾಮೀಣ ಶ್ರಮಿಕರ ಹಾಗೂ ಉದ್ಯೋಗಹೀನರಾಗಿ ಬಿಟ್ಟಿರುವ, ಸಾಲದಲ್ಲಿ ಮುಳುಗಿರುವ, ಹಸಿವು-ಅಪೌಷ್ಟಿಕತೆಗೆ ತುತ್ತಾಗಿ ದಾರಿದ್ರ್ಯಕ್ಕೆ ಇಳಿದ ಕೋಟ್ಯಂತರ ಜನಗಳ ಪಾಡು.
ಸರಕಾರ ಹೆಚ್ಚುವರಿ ವೆಚ್ಚಗಳನ್ನು ಮಾಡಲು ಸಂಪನ್ಮೂಲಗಳನ್ನು ಎತ್ತುವುದಕ್ಕಾಗಿ ಕಾರ್ಪೊರೇಟ್ ತೆರಿಗೆಗಳನ್ನು ಹೆಚ್ಚಿಸಲು, ಬಂಡವಾಳ ಗಳಿಕೆಗಳು ಅಥವ ಸಂಪತ್ತಿನ ಮೇಲೆ ತೆರಿಗೆ ಹಾಕಲು ನಿರಾಕರಿಸಿದೆ. ಬದಲಿಗೆ, ಆದಾಯಗಳಲ್ಲಿ ಇಳಿಕೆಯನ್ನು ಸರಿದೂಗಿಸಲು ಪೆಟ್ರೋಲ್ ಮತ್ತು ಡೀಸೆಲಿನ ಮೇಲೆ ವಿಪರೀತ ಸುಂಕಗಳನ್ನು ವಸೂಲಿ ಮಾಡುತ್ತಿದೆ. ಚುನಾವಣಾ ಫಲಿತಾಂಶಗಳು ಪ್ರಕಟವಾದ ಮೇಲೆ, ಕೋವಿಡ್ ಅಲೆ ಶಿಖರಕ್ಕೇರುತ್ತಿರುವ ಸಮಯದಲ್ಲೂ, ಮೇ 2ರಿಂದ ತಿಂಗಳ ಕೊನೆಯ ನಡುವೆ 17 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಸಲಾಗಿದೆ. ಇದರಿಂದಾಗಿ ಮೇ ಒಂದು ತಿಂಗಳಲ್ಲೇ ಡೀಸೆಲ್ ಬೆಲೆಗಳಲ್ಲಿ ಲೀಟರಿಗೆ 4.65 ರೂ. ಮತ್ತು ಪೆಟ್ರೋಲ್ ಬೆಲೆಗಳಲ್ಲಿ 4.09 ರೂ. ಏರಿಕೆಯಾಗಿದೆ.
ಸಗಟು ಬೆಲೆ ಸೂಚ್ಯಂಕ ಮತ್ತು ಹಣದುಬ್ಬರದಲ್ಲಿ ಏರಿಕೆ ಪೆಟ್ರೋಲಿಯಂ ಉತ್ಪನ್ನಗಳ ತೀವ್ರ ಹೆಚ್ಚಳದ ಫಲಿತಾಂಶ. ಏಕೆಂದರೆ ಇವು ಇತರೆಲ್ಲ ಸರಕುಗಳ ಬೆಲೆಗಳನ್ನು ತಟ್ಟುವ ಸಾರ್ವತ್ರಿಕ ಮಧ್ಯವರ್ತಿ. ಆದಾಯಗಳನ್ನು ಕಳಕೊಂಡು ಅಥವ ಕಡಿತವಾಗಿ ಜನಗಳು ನರಳುತ್ತಿರುವ ಸನ್ನಿವೇಶದಲ್ಲಿ ಅಗತ್ಯ ಸರಕುಗಳು ಮತ್ತು ಆಹಾರ ವಸ್ತುಗಳ ಬೆಲೆಗಳಲ್ಲಿ ಏರಿಕೆ ಅವರಿಗೆ ಒಂದು ದುಪ್ಪಟ್ಟು ಹೊಡೆತ.
ಆರ್ಥಿಕ ಬಿಕ್ಕಟ್ಟಿನ ಇನ್ನೊಂದು ಆಯಾಮವೆಂದರೆ, ಹೊರೆಯನ್ನು ರಾಜ್ಯಗಳ ಮೇಲೆ ದಾಟಿಸುವ ಕೇಂದ್ರ ಸರಕಾರದ ಸಿನಿಕ ಪ್ರಯತ್ನಗಳು. ನಿರ್ಲಕ್ಷ್ಯಪೂರ್ಣ ಮತ್ತು ಜನ-ವಿರೋಧಿ ಲಸಿಕೆ ಧೋರಣೆಯ ಅಂತಿಮ ಪರಿಣಾಮವಾಗಿ, ರಾಜ್ಯಗಳು ಲಸಿಕೆಗಳಿಗೆ ಹೆಚ್ಚಿನ ಬೆಲೆಗಳು ತೆರುವಂತಾಗಿದೆ ಮತ್ತು ಲಸಿಕೆಗಳನ್ನು ಜನಗಳಿಗೆ ಉಚಿತವಾಗಿ ಬದ್ಧವಾಗಿರುವುದರಿಂದಾಗಿ ಅದಕ್ಕೆ ಹೆಚ್ಚಿನ ವೆಚ್ಚವನ್ನು ಭರಿಸಬೇಕಾಗಿ ಬಂದಿದೆ.
ರಾಜ್ಯಗಳಿಗೆ ಜಿಎಸ್‌ಟಿ ಅಡಿಯಲ್ಲಿ ಕಾನೂನಿನ ಪ್ರಕಾರ ಸಲ್ಲಬೇಕಾಗಿರುವ ಬಾಕಿಗಳನ್ನು ಕೂಡ ನಿರಾಕರಿಸಲಾಗುತ್ತಿದೆ. ಕೋವಿಡ್ ಸಂಬಂಧಿ ಮಹತ್ವದ ಔಷಧಿಗಳು ಮತ್ತು ವೈದ್ಯಕೀಯ ಸಲಕರಣೆಗಳ ಮೇಲೆ ತೆರಿಗೆ ವಿನಾಯ್ತಿಗಳನ್ನು ಪರಿಶೀಲಿಸಲು ಕೂಡ ಕೇಂದ್ರ ಸರಕಾರ ನಿರಾಕರಿಸುತ್ತಿದೆ. ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ವಿಷಯವನ್ನು ಪರಿಶೀಲಿಸಲೆಂದು ಒಂದು ಮಂತ್ರಿಗಳ ಗುಂಪನ್ನು ರಚಿಸಿ ಈ ಪ್ರಶ್ನೆಯನ್ನು ಬದಿಗೆ ಸರಿಸಲಾಗಿದೆ.
ಲಸಿಕೆ ಇರಲಿ, ಅಥವ ನಗದು ಸಬ್ಸಿಡಿಗಳಿಗಾಗಿ ರಾಜ್ಯಗಳಿಗೆ ಹಣಕಾಸು ನೆರವು ಒದಗಿಸುವುದಿರಲಿ, ಕೇಂದ್ರ ಸರಕಾರ ತನ್ನ ಹೊಣೆಗಾರಿಕೆಗಳನ್ನು ಜಾರಿಸಿಕೊಳ್ಳುತ್ತಿದೆ. ಇದು ಮಾಯಾಮಂತ್ರದ ವಿಜ್ಞಾನ ಮತ್ತು ಮಾಯಾಮಂತ್ರದ ಅರ್ಥಶಾಸ್ತ್ರದ ಪ್ರಕರಣ ಆಗಿ ಬಿಟ್ಟಿದೆ.
ಕೇಂದ್ರ ಸರಕಾರ ಸಾರಾ ಸಗಟು ಲಸಿಕೆಗಳನ್ನು ಪಡೆದು, ಅವನ್ನು ರಾಜ್ಯಗಳಿಗೆ ವಿತರಿಸುವ ಮೂಲಕ ಎಲ್ಲರಿಗೂ ಉಚಿತ ಲಸಿಕೆಯನ್ನು ಖಾತ್ರಿಪಡಿಸುವಂತಹ ಹೋರಾಟವನ್ನು ಎಲ್ಲ ಪ್ರತಿಪಕ್ಷಗಳು ನಡೆಸುವ ರಾಜ್ಯ ಸರಕಾರಗಳು, ಸಂಬಂಧಪಟ್ಟ ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಸಂಘಟನೆಗಳು ನಡೆಸಬೇಕಾಗಿದೆ. ಜನಗಳಿಗೆ ತುರ್ತು ಪರಿಹಾರವನ್ನು ಕೊಡಿಸುವ ಹೋರಾಟ, ನಗದು ಸಬ್ಸಿಡಿ, ಮನರೇಗ ನಿಧಿಗಳು, ಉಚಿತ ಆಹಾರಧಾನ್ಯಗಳು ಮತ್ತು ಸಂಬಂಧಪಟ್ಟ ಸಾಮಗ್ರಿಗಳು, ನಿರುದ್ಯೋಗ ಭತ್ತೆ ಮತ್ತು ಸಾರ್ವಜನಿಕ ಆರೋಗ್ಯ ವೆಚ್ಚದ ಬಾಬ್ತಿನಲ್ಲಿ ಹೆಚ್ಚಳ ಇವನ್ನೆಲ್ಲ ಪಡೆಯುವ ಹೋರಾಟ ಮುಂಬರುವ ದಿನಗಳಲ್ಲಿ ಎಲ್ಲ ಪ್ರಜಾಪ್ರಭುತ್ವವಾದಿ, ರಾಜಕೀಯ ಮತ್ತು ಸಾಮಾಜಿಕ ಶಕ್ತಿಗಳಿಗೆ ಜನಗಳನ್ನು ಅಣಿನೆರೆಸುವ ಅಂಶವಾಗಬೇಕು.