ನವದೆಹಲಿ: ಆನ್ಲೈನ್ ಗೇಮಿಂಗ್ ಮೇಲೆ ನಿಷೇಧ ಹೇರುವ ರಾಜ್ಯ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸುವ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಕರ್ನಾಟಕ ಸರ್ಕಾರ ಸಲ್ಲಿರುವ ಅರ್ಜಿ ವಿಚಾರಣೆ ಇಂದು(ಸೆಪ್ಟಂಬರ್ 16) ನಡೆಸಿತು. ಅರ್ಜಿ ವಿಚಾರಣೆ ವೇಳೆ ಕೌಶಲ್ಯ ಆಧಾರಿತ ಗೇಮಿಂಗ್ ಕಂಪನಿಗಳು ಮತ್ತು ಉದ್ಯಮ ಸಂಸ್ಥೆಗಳಿಗೆ ನೋಟಿಸು ಜಾರಿ ಮಾಡಲಾಗಿದೆ.
ಆನ್ಲೈನ್ ಗೇಮಿಂಗ್ ಹಾಗೂ ಗ್ಯಾಮ್ಲಿಂಗ್ ಮೇಲೆ ರಾಜ್ಯ ಸರ್ಕಾರ ನಿಷೇಧ ಹೇರಿತ್ತು. ಆದರೆ, ಸರ್ಕಾರದ ನಿರ್ಧಾರ ಹಾಗೂ ಕರ್ನಾಟಕ ಪೊಲೀಸ್ ಕಾಯಿದೆಯ ವಿವಾದಾತ್ಮಕ ನಿಬಂಧನೆಗಳನ್ನು ಫೆಬ್ರವರಿ 14ರಂದು ಕರ್ನಾಟಕ ಉಚ್ಚ ನ್ಯಾಯಾಲಯ ಅಸಾಂವಿಧಾನಿಕ ಎಂದು ಪರಿಗಣಿಸಿ ರದ್ದು ಮಾಡಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಮಾರ್ಚ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
ಇದೇ ರೀತಿಯ ಪ್ರಕರಣದಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯ ತೀರ್ಪಿನ ವಿರುದ್ಧ ತಮಿಳುನಾಡು ಸರ್ಕಾರ ಕೂಡ ಅರ್ಜಿ ಸಲ್ಲಿಸಿದೆ. ಹೀಗಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್ ಮತ್ತು ವಿ. ರಾಮ ಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯ ಪೀಠವು ಎರಡೂ ವಿಷಯಗಳನ್ನು ಒಟ್ಟಾಗಿ ವಿಚಾರಣೆ ನಡೆಸಿ ನೋಟಿಸು ಜಾರಿ ಮಾಡಿದೆ.
ಇದರಲ್ಲಿ ಕೌಶಲ್ಯ ಗೇಮಿಂಗ್ ಉದ್ಯಮ ಸಂಸ್ಥೆಯಾದ ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್ (ಎಐಜಿಎಫ್), ಸ್ವಯಂ ನಿಯಂತ್ರಿತ ಫ್ಯಾಂಟಸಿ ಕ್ರೀಡಾ ಉದ್ಯಮ ಸಂಸ್ಥೆಯಾದ ಫೆಡರೇಶನ್ ಆಫ್ ಇಂಡಿಯನ್ ಫ್ಯಾಂಟಸಿ ಸ್ಪೋರ್ಟ್ಸ್ (ಎಫ್ಐಎಫ್ಎಸ್), ಗೇಮಿಂಗ್ ಸಂಸ್ಥೆಗಳಾದ ಮೊಬೈಲ್ ಪ್ರೀಮಿಯರ್ ಲೀಗ್ (ಎಂಪಿಎಲ್), ಗೇಮ್ಸ್ 24×7, ಹೆಡ್ ಡಿಜಿಟಲ್ ವರ್ಕ್ಸ್, ಜಂಗ್ಲೀ ಗೇಮ್ಸ್ ಮತ್ತು ಗೇಮ್ಸ್ಕ್ರಾಫ್ಟ್ ಸಂಸ್ಥೆಗಳಿಗೆ ನೋಟಿಸು ಜಾರಿಗೊಳಿಸಲಾಗಿದೆ.
ಸೆಪ್ಟೆಂಬರ್ 9ರಂದು ತಮಿಳುನಾಡು ಸರ್ಕಾರದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಪ್ರತ್ಯೇಕ ನ್ಯಾಯ ಪೀಠವು 10 ವಾರಗಳ ನಂತರ ವಿಚಾರಣೆಗೆ ಪಟ್ಟಿ ಮಾಡಿತ್ತು. ಈಗ ಗೇಮಿಂಗ್ ಕಂಪನಿಗಳು ಮತ್ತು ಉದ್ಯಮ ಸಂಸ್ಥೆಗಳಿಗೆ ತಮ್ಮ ಉತ್ತರಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ಮರು ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಬಯಸಿದರೆ ಅದಕ್ಕೆ ಇನ್ನೂ ಎರಡು ವಾರಗಳ ಕಾಲಾವಕಾಶ ಸಿಗಲಿದೆ.