ವಿವಿಧ ಇಲಾಖೆಗಳಿಂದ ರೂ.12 ಸಾವಿರ ಕೋಟಿ ಬಾಕಿ – ಗ್ರಾಹಕರಿಗೆ ಮತ್ತೊಮ್ಮೆ ವಿದ್ಯುತ್‌ ದರ ಏರಿಕೆಯ ಬರೆ

ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ವಿದ್ಯುತ್ ದರ ಹೆಚ್ಚಳ ಮಾಡುವುದು ಅನಿವಾರ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಖಾತೆ ಸಚಿವ ಸುನೀಲ್‍ಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುತ್ ಮಾರ್ಗ ಬದಲಾವಣೆ, ಹೊಸ ಉಪ ವಿಭಾಗ ನಿರ್ಮಾಣ ಸೇರಿದಂತೆ ಅಭಿವೃದ್ದಿ ಕಾಮಗಾರಿಗಳ ಹೊರೆಯನ್ನು ಗ್ರಾಹಕರ ಮೇಲೆ ಹಾಕುವುದು ಅನಿವಾರ್ಯವಾಗಿದೆ ಎಂದಿದ್ದಾರೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಒಪ್ಪಿಗೆ ಕೊಟ್ಟ ನಂತರ ವಿದ್ಯುತ್ ವಿತರಣಾ ಕಂಪೆನಿಗಳು ದರ ಪರಿಷ್ಕರಣೆ ಮಾಡಲಿವೆ ಎಂದು ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ನಾಲ್ಕು ಸಾವಿರ ಕೋಟಿ ರೂ. ಸೇರಿದಂತೆ ಬೆಂಗಳೂರು ಜಲ ಮಂಡಳಿ, ನಗರಾಭಿವೃದ್ಧಿ ಇಲಾಖೆ, ಜಲಸಂಪನ್ಮೂಲ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ರೂ.12 ಸಾವಿರ ಕೋಟಿ ಮೊತ್ತದ ವಿದ್ಯುತ್ ಬಿಲ್ ಬಾಕಿ ಇದೆ. ಇಲಾಖಾವಾರು ಸಭೆ ನಡೆಸಲಾಗಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ವಿದ್ಯುತ್ ಬಾಕಿ ಪಾವತಿಗೆ ಪ್ರಯತ್ನ ಮಾಡಲಾಗುವುದು ಎಂದರು.

ಸದ್ಯಕ್ಕೆ ರಾಜ್ಯದಲ್ಲಿ ಕಲ್ಲಿದ್ದಲು ಸಮಸ್ಯೆ ಇಲ್ಲ. ವಿದ್ಯುತ್ ಬಳಕೆ ಪ್ರಮಾಣ 15,000 ಮೆಗಾವ್ಯಾಟ್‌ ನಷ್ಟಿದೆ. ಈ ಬಾರಿ ಮಳೆ ಚೆನ್ನಾಗಿ ಆಗಿರುವುದರಿಂದ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುವುದಿಲ್ಲ.  ಟಿಸಿ ಸುಟ್ಟು ಹೋದ 24 ಗಂಟೆಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದರು.

ಅದೇ ರೀತಿ ಟಿಸಿ ಸುಡದಂತೆ ಎಚ್ಚರಿಕೆ ವಹಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಹಣ ಪಾವತಿಸಿದ 30 ದಿನಗಳಲ್ಲಿ ಗಂಗಾಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಶಾಲಾ ಆವರಣದಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ.

ಖಾಲಿ ಇದ್ದ 1872 ಕಿರಿಯ ಪವರ್ ಮ್ಯಾನ್ ಮತ್ತು ಕಿರಿಯ ಪರಿಚಾರಕ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ ಆಯ್ಕೆ ಪಟ್ಟಿ ಪ್ರಕಟವಾಗಿದೆ. 15 ದಿನಗಳಲ್ಲಿ ಅಭ್ಯರ್ಥಿಗಳಿಗೆ ಆದೇಶ ನೀಡಲಾಗುವುದು ಎಂದರು.

Donate Janashakthi Media

Leave a Reply

Your email address will not be published. Required fields are marked *