ಬೆಂಗಳೂರು : ರಾಜ್ಯದ ಕಟ್ಟಡ ನಿರ್ಮಾಣ ವಲಯ ಸಾವಿರಾರು ಕಾರ್ಮಿಕರು ಇಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್(ಸಿಐಟಿಯು) ನೇತೃತ್ವದಲ್ಲಿ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಾರ್ಮಿಕ ಕಚೇರಿಗಳ ಮುಂಭಾಗ ಹಾಗೂ ಬೆಂಗಳೂರಿನ ಹಲವಡೆ ಮನೆ ಮನೆ ಮುಂದೆಯೂ ಹಾಗೂ ಕೆಲಸದ ಸ್ಥಳಗಳಲ್ಲಿಯೂ ಪ್ರತಿಭಟನೆ ನಡೆಸಿದರು.
ಬಾಕಿ ಕೋವಿಡ್ ಪರಿಹಾರ ನೀಡಬೇಕು, ವೈದ್ಯಕೀಯ ನೆರವು-ಶಿಕ್ಷಣ, ಮದುವೆ, ಪಿಂಚಣಿ ಅರ್ಜಿಗಳನ್ನು ಕೂಡಲೇ ಇತ್ಯರ್ಥಪಡಿಸಬೇಕು, ಮಂಡಳಿಯಿಂದ ಸಿಐಟಿಯು ಸಂಘಟನೆಗೆ ನೇಮಕಾತಿ, ಕಟ್ಟಡ ಕಾರ್ಮಿಕ ಕಾನೂನು ಸೆಸ್ ಕಾನೂನು ರಕ್ಷಣೆ, ಕಟ್ಟಡ ಸಾಮಾಗ್ರಿಗಳ ಮೇಲೆ ತೆರಿಗೆ ಕಡಿತ ಮಾಡಬೇಕು ಹಾಗೂ ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿ ದುರುಪಯೋಗ ತಡೆ ಹಾಗೂ ತನಿಖೆಗಾಗಿ ಆಗ್ರಹಿಸಿ ಈ ಹೋರಾಟಕ್ಕೆ ಕರೆ ನೀಡಲಾಗಿತ್ತು.
ಕಟ್ಟಡ ಕಾರ್ಮಿಕರಿಗೆ ನೊಂದಣಿ ಪ್ರಕ್ರಿಯೆಗಳು ಸ್ಥಗಿತಗೊಂಡಿದ್ದು, ಕೂಡಲೇ ಆರಂಭಿಸಬೇಕು. ಸೌಲಭ್ಯ ಮಂಜೂರಾದ ಫಲಾನುಭವಿಗಳಿಗೆ ಒಂದು ತಿಂಗಳ ಒಳಗಾಗಿ ಹಣ ವರ್ಗಾವಣೆ ಮಾಡಬೇಕು ವಿವಿಧ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿ, ನಿರ್ಮಾಣ ಕಾರ್ಮಿಕರು ಅಲ್ಲ ಎಂದು ತಿರಸ್ಕೃತಗೊಂಡಿರುವ ನಿಜವಾದ ಕಟ್ಟಡ ಕಾರ್ಮಿಕರ ಅರ್ಜಿಗಳನ್ನು ಮರು ಪರಿಶೀಲನೆಗೆ ಈಗಾಗಲೇ ಮನವಿ ಸಲ್ಲಿಸಿದ್ದು, ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಕಾರ್ಮಿಕರ ಸಹಜ ಮರಣ ಪರಿಹಾರದ ಮೊತ್ತ ರೂ.2 ಲಕ್ಷಕ್ಕೆ ಹೆಚ್ಚಿಸಬೇಕು. ಅಪಘಾತ ಮರಣ ಪರಿಹಾರದ ಮೊತ್ತವನ್ನು ರೂ.10 ಲಕ್ಷ ಕ್ಕೆ ಹೆಚ್ಚಿಸಬೇಕು. ಬೋಗಸ್ ಕಾರ್ಡ್ಗಳಿಗೆ ನಿಯಂತ್ರಣ ಹಾಕಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಸಕ್ರಮಗೊಳಿಸಲಾದ ಅನಧಿಕೃತ ಕಟ್ಟಡಗಳಿಂದ ಸೆಸ್ ಸಂಗ್ರಹಕ್ಕೆ ಕ್ರಮವಹಿಸಬೇಕು. ಕಾರ್ಮಿಕ ಮಂಡಳಿಯಲ್ಲಿ ಹಾಗೂ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕು. ರೇಷನ್ ಕಿಟ್, ಟೂಲ್ ಕಿಟ್, ಸುರಕ್ಷಾ ಕಿಟ್, ಬೂಸ್ಟರ್ ಕಿಟ್ ಖರೀದಿಯಲ್ಲಿನ ಅಕ್ರಮ ಕುರಿತು ತನಿಖೆಗೆ ಒತ್ತಾಯಿಸಿದರು.
ರಾಜ್ಯದ ಬೀದರ ಜಿಲ್ಲೆಯಿಂದ ಹಿಡಿದು ಬೆಂಗಳೂರಿನವರೆಗೆ ಹಾಗೂ ಕುಂದಾಪುರದಿಂದ ಕೋಲಾರದವರೆಗೂ ಕಾರ್ಮಿಕರು ನೂರಾರು ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಹೋರಾಟ ಯಶಸ್ವಿಗೊಳಿಸಿದ್ದಾರೆ.
ಈಗಾಗಲೇ ರಾಜ್ಯದ ನಿಯೋಗವೊಂದು ಫೆಬ್ರವರಿ 8 ರಂದು ಕಲ್ಯಾಣ ಮಂಡಳಿ ಕಾರ್ಯದರ್ಶಿಯನ್ನು ಭೇಟಿಮಾಡಿ ಹೋರಾಟದಲ್ಲಿ ಸಲ್ಲಿಸಲಾದ ಬೇಡಿಕೆಗಳ ಕುರಿತಾಗಿ ಸುದೀರ್ಘವಾದ ಮಾತುಕತೆಯನ್ನು ನಡೆಸಲಾಗಿತ್ತು ಮತ್ತು ಈ ಬೇಡಿಕೆಗಳ ಬಗ್ಗೆ ಅಗತ್ಯ ಕ್ರಮವಹಿಸುವ ಬಗ್ಗೆ ಮಂಡಳಿ ಕಾರ್ಯದರ್ಶಿ ಭರವಸೆ ನೀಡಿದ್ದಾರೆ.