– ಉತ್ತರ ಪ್ರದೇಶ, ಹರ್ಯಾಣ ರಾಜ್ಯಗಳ ಮಾದರಿಯಲ್ಲಿ ಕಾನೂನು
ಬೆಂಗಳೂರು: ಅಂತರ್ ಧರ್ಮಿಯ ಮದುವೆಗಾಗಿ ಬಲವಂತವಾಗಿ ಮತಾಂತರ ನಡೆಸಿದರೆ ಅವರನ್ನು ‘ರಾಮ ನಾಮ ಸತ್ಯ ಪ್ರಯಾಣ’ಕ್ಕೆ ಕಳುಹಿಸಿಕೊಡಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಿಂಗ್ ಕಳೆದ ಎರಡು ದಿನಗಳ ಹಿಂದೆ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯದಲ್ಲಿ ಕೂಡ ಬಲವಂತ ಮತಾಂತರ ನಡೆಸುವವರಿಗೆ ಶಿಕ್ಷೆ ವಿಧಿಸುವ ಕಾನೂನು ತರುವುದಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಎಚ್ಚರಿಕೆ ನೀಡಿದ್ದಾರೆ.
On lines of Allahabad High Court's order, Karnataka will enact a law banning religious conversions for the sake of marriage.
We will not remain silent when Jihadis strip the dignity of Our Sisters.
Any one involved in the act of conversion shall face severe & swift punishment.
— C T Ravi 🇮🇳 ಸಿ ಟಿ ರವಿ (@CTRavi_BJP) November 3, 2020
ಈ ಕುರಿತು ಟ್ವೀಟ್ ಮಾಡಿರುವ ಅವರು, ಮದುವೆಗಾಗಿ ಬಲವಂತವಾಗಿ ಮತಾಂತರವಾಗುವುದನ್ನು ತಡೆಯುವ ಉದ್ದೇಶದಿಂದ ರಾಜ್ಯದಲ್ಲಿ ಧಾರ್ಮಿಕ ಮತಾಂತರ ನಿಷೇಧಿಸುವ ಕಾನೂನನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ. ಅಲಹಾಬಾದ್ ನ್ಯಾಯಾಲಯದ ತೀರ್ಪು ಉಲ್ಲೇಖಿಸಿ, ಟ್ವೀಟ್ ಮಾಡಿರುವ ಅವರು, ಮಹಿಳೆಯರ ಘನತೆಗೆ ಕುಂದು ಉಂಟಾಗುವ ಕಾರ್ಯ ನಡೆಸಿದರೆ ಸುಮ್ಮನಿರುವುದಿಲ್ಲ ಎಂದು ಇದೇ ವೇಳೆ ಎಚ್ಚರಿಸಿದ್ದಾರೆ.
ಅಲಹಾಬಾದ್ ಹೈ ಕೋರ್ಟ್ ಆದೇಶದಂತೆ ಮದುವೆಗಾಗಿ ಮಹಿಳೆಯರನ್ನು ಬಲವಂತದ ಮತಾಂತರಗೊಳಿಸುವುದನ್ನು ನಿಷೇಧಿಸಲು ಕಾನೂನನ್ನು ಜಾರಿಗೆ ತರಲಾಗುವುದು. ಜಿಹಾದಿಗಳು ನಮ್ಮ ಸಹೋದರಿಯರ ಘನತೆಯನ್ನು ಮರೆಮಾಚಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಯಾವುದೇ ಮತಾಂತರದ ಕೃತ್ಯದಲ್ಲಿ ಭಾಗಿಯಾದವರು ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಕೇವಲ ವಿವಾಹಕ್ಕಾಗಿ ಮತಾಂತರವಾದರೆ ಅದು ಮಾನ್ಯವಲ್ಲ: ಅಲಹಾಬಾದ್ ಹೈಕೋರ್ಟ್
ಮದುವೆ ಕಾರಣದಿಂದಾಗಿ ಧರ್ಮ ಬಯಾಯಿಸಿಕೊಳ್ಳುವುದು ಮಾನ್ಯವಲ್ಲ ಎಂದು ಅಲಹಾಬಾದ್ ಕೋರ್ಟ್ ತಿಳಿಸಿದೆ. ನವ ದಂಪತಿಗಳ ಪ್ರಕರಣವೊಂದರಲ್ಲಿ ಈ ಹೇಳಿಕೆ ನೀಡಿದ್ದು, ಅವರ ಅರ್ಜಿ ವಜಾಗೊಳಿಸಲಾಗಿದೆ. ಅಂತರ್ ಧರ್ಮಿಯ ಮದುವೆಯಿಂದ ತೊಡಗು ಉಂಟಾಗಬಹುದು ಎಂದು ಪೊಲೀಸರಿಗೆ ನಿರ್ದೇಶಿಸಲು ಯುವತಿಯ ತಂದೆ ನ್ಯಾಯಾಲಯ ಮೊರೆ ಹೋಗಿದ್ದರು.
ಇದನ್ನೂ ಓದಿ: ಲವ್ ಜಿಹಾದ್ ನಡೆಸಿದರೆ ರಾಮ್ನಾಮ್ ಸತ್ಯ ಮಾರ್ಗ; ಸಿಎಂ ಯೋಗಿ ಆದಿತ್ಯನಾಥ್
ಬಲಪಂಥೀಯ ಗುಂಪುಗಳ ಪ್ರಕಾರ ‘ಲವ್ ಜಿಹಾದ್’ ಎಂಬುದು ಪಿತೂರಿಯಾಗಿದೆ. ಮುಸ್ಲಿಂ ಸಮುದಾಯಕ್ಕೆ ಮಹಿಳೆಯರನ್ನು ಮತಾಂತರಗೊಳಿಸುವ ಉದ್ದೇಶದಿಂದ ತಮ್ಮ ನಿಜ ವ್ಯಕ್ತಿತ್ವ ಮರೆಮಾಚಿ ಅವರನ್ನು ಕೆಲವು ಯುವಕರು ಮದುವೆಯಾಗುತ್ತಾರೆ ಎನ್ನಲಾಗಿದೆ.