ವಿಠಲ ಮಲೆಕುಡಿಯ ನಿರ್ದೋಷಿಯೆಂದು ನ್ಯಾಯಾಲಯ ತೀರ್ಪು

ಮಂಗಳೂರು: ವಿಠಲ ಮಲೆಕುಡಿಯ ಮತ್ತು ಅವರ ತಂದೆ ಲಿಂಗಣ್ಣ ಮಲೆಕುಡಿಯ ಮೇಲೆ ನಕ್ಸಲೀಯರೆಂದು ಹೂಡಲಾಗಿದ್ದ ಮೊಕದ್ದಮೆಯಲ್ಲಿ ಅವರು ನಿರ್ದೋಷಿಗಳೆಂದು ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಇಂದು ತೀರ್ಪು ನೀಡಿದೆ.

ಜನಪರ ಹೋರಾಟ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ವಿಠಲ ಮಲೆಕುಡಿಯ ವಿರುದ್ಧ ರಾಜ್ಯ ಸರ್ಕಾರ ನಕ್ಸಲ್ ಮತ್ತು ರಾಜದ್ರೋಹ ಆರೋಪ ಮಾಡಿ, ಒಂಬತ್ತು ವರ್ಷಗಳ ಹಿಂದೆ ನಕ್ಸಲರು ಎಂದು ಆರೋಪಿಸಿ ಯುಎಪಿಎ ಕಾಯ್ದೆ ಅಡಿ ದೇಶದ್ರೋಹ ಪ್ರಕರಣ ದಾಖಲಿಸಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿ ವಿಠಲ ಮಲೆಕುಡಿಯ ʻನಾನು ನಕ್ಸಲ್ ಅಲ್ಲ. ಆದರೆ ನನ್ನನ್ನು ನಕ್ಸಲ್ ಎಂದು ಸುಳ್ಳು ಆರೋಪ ಮಾಡಲಾಗುತ್ತಿದ್ದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಸಫಲರಾಗಿದ್ದಾರೆ.

ವಿಠಲ ಮಲೆಕುಡಿಯ ನಕ್ಸಲರ ಜೊತೆ ನಂಟು ಹೊಂದಿದ್ದಾರೆ ಎಂಬ ಆರೋಪ ದೇಶಾದ್ಯಂತ ಭಾರೀ ಚರ್ಚೆ ಹುಟ್ಟು ಹಾಕಿತ್ತು. 9 ವರ್ಷಗಳ ಕಾಲ ವಿಚಾರಣೆ ನಡೆಸಿದ ಬಳಿಕ ಅಂತಿಮ ತೀರ್ಪು ಪ್ರಕಟವಾಗಿದೆ. ಆರೋಪ ಬಂದಾಗ ವಿಠಲ ಮಲೆಕುಡಿಯ ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದರು.

2012ರಲ್ಲಿ ಸುಮಾರು 20-30 ಪೊಲೀಸರು ವಿಠಲ ಮಲೆಕುಡಿಯ ಮನೆಗೆ ನುಗ್ಗಿ ಅವನ ತಂದೆಯ ಕಾಲಿಗೆ ಗಾಯ ಮಾಡಿದ್ದು ಅಲ್ಲದೇ, 21 ಸಾವಿರ ಹಣವನ್ನು ದೋಚಿದ್ದರು. ಭಗತ್ ಸಿಂಗ್ ಸಂಬಂಧಪಟ್ಟ ಪುಸ್ತಕ ಮನೆಯಲ್ಲಿದ್ದ ಕಾರಣಕ್ಕೆ ನಕ್ಸಲ್ ಎಂದು ಸಾಬೀತು ಪಡಿಸಲು ಬಳಸಿಕೊಂಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಗತ್ ಸಿಂಗ್ ಪುಸ್ತಕ ಮನೆಯಲ್ಲಿ ಇಟ್ಟಿಕೊಂಡಿದ್ದಕ್ಕೇ ನಕ್ಸಲ್ ಎಂದು ಬಿಂಬಿಸಲಾಗಿತ್ತು.

ಆದಿವಾಸಿಗಳ ಪರಿಸ್ಥಿತಿ ಹದಗೆಟ್ಟಿದೆ. ಆರ್ಥಿಕವಾಗಿ ಹಿಂದುಳಿದಿದ್ದಾರೆ. ನಮ್ಮ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲ. ಹುಲಿ ಪ್ರಾಂತ್ಯದಲ್ಲಿ ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ಪೊಲೀಸರು ಪ್ರಯತ್ನಿಸುತ್ತಿದ್ದರು. ಇದಕ್ಕೆ ನಾವು ವಿರೋಧ ವ್ಯಕ್ತಪಡಿಸುತ್ತಿದ್ದಕ್ಕೆ ನನ್ನನ್ನು ನಕ್ಸಲ್ ಎಂದು ಸುಳ್ಳು ಆರೋಪವನ್ನು ನಕ್ಸಲ್ ನಿಗ್ರಹ ದಳ ಮತ್ತು ಸರ್ಕಾರ ಮಾಡಿತ್ತು. ಆದರೆ, ನಾವು ಹಲವು ವರ್ಷಗಳು ನ್ಯಾಯಾಲಯದಲ್ಲಿ ಹೋರಾಟ ಮಾಡಿ ನಮ್ಮ ಮೇಲಿನ ಆರೋಪಗಳು ಸುಳ್ಳು ಎಂದು ಸಾಬೀತುಪಡಿಸಲಾಗಿದೆ ಎಂದು ವಿಠಲ ಮಲೆಕುಡಿಯ ಈ ಸಂದರ್ಭದಲ್ಲಿ ಹರ್ಷವ್ಯಕ್ತಪಡಿಸಿದ್ದಾರೆ.

ಮಂಗಳೂರು ವಿವಿಯಲ್ಲಿ ಎಂಸಿಜೆ ವಿದ್ಯಾರ್ಥಿಯಾಗಿದ್ದ ವಿಠಲ ಮಲೆಕುಡಿಯ ಅವರನ್ನು 2012ರ ಮಾರ್ಚ್‌ 3ರಂದು ನಕ್ಸಲ್ ನಿಗ್ರಹದಳದ ಪೊಲೀಸರಿಂದ ಬಂಧನಕ್ಕೊಳಗಾಗಿ ದೇಶಾದ್ಯಂತ ಸುದ್ದಿಯಾಗಿದ್ದರು. ಈ ಪ್ರಕರಣವನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷ ಸವಾಲಾಗಿ ಸ್ವೀಕರಿಸಿ ಹೋರಾಟ ನಡೆಸಿತ್ತು. ವಿಠಲ ಮಲೆಕುಡಿಯ 4 ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಕಲಿಕೆ ಜತೆ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು.

ಕುಲದೀಪ್ ನಯ್ಯರ್ ಬರೆದ ಭಗತ್ ಸಿಂಗ್ ಪುಸ್ತಕ, ಧರ್ಮಸ್ಥಳದ ಜಾತ್ರೆಯಲ್ಲಿ ಖರೀದಿಸಿದ್ದ ಆಟಿಕೆ ಬೈನಾಕುಲರ್, ನೂರು ಗ್ರಾಂ ಕಾಮತ್ ಕಾಫಿ ಪುಡಿ, ಕಾಲು ಕೆಜಿ ಸಕ್ಕರೆ, ಎರಡು ಸ್ಟೀಲ್ ತಟ್ಟೆಯನ್ನು ಇಟ್ಟು ಯುಎಪಿಎ ಕಾಯ್ದೆಯಡಿ ಆದಿವಾಸಿ ವಿದ್ಯಾರ್ಥಿಯ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿದ ಸರಕಾರಕ್ಕೆ ನ್ಯಾಯಾಲಯದ ತೀರ್ಪಿನಿಂದ ಮುಖಭಂಗವಾಗಿದೆ.

ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿರುವ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಂಘಟನಾ ಸಮಿತಿಯು ‘ಇದು ನ್ಯಾಯಯುತ ಹೋರಾಟಕ್ಕೆ, ಸತ್ಯಕ್ಕೆ ಸಂದ ಜಯ. ಈ ತೀರ್ಪು ಆಳುವ ಸರ್ಕಾರ ಮತ್ತು ಸ್ಥಾಪಿತ ಹಿತಾಸಕ್ತಿಗಳ ಕುತಂತ್ರವನ್ನು ಬಯಲಿಗೆಳೆದಿದೆʼ ಎಂದು ತಿಳಿಸಿದೆ.

ನ್ಯಾಯಾಯಾಲಯದ ತೀರ್ಪನ್ನು ಸ್ವಾಗತಿಸಿರುವ ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ಅವರು ‘ಹೋರಾಟಕ್ಕೆ ಮತ್ತು ಸತ್ಯಕ್ಕೆ ಲಭಿಸಿದ ಜಯವಾಗಿದೆ. ಈ ತೀರ್ಪು ಸರ್ಕಾರ ಮತ್ತು ಸ್ಥಾಪಿತ ಹಿತಾಸಕ್ತಿಗಳ ಕುತಂತ್ರವನ್ನು ಬಯಲಿಗೆಳೆದಿದೆ. ಸಂತ್ರಸ್ತರಾಗಿ ಒಂಬತ್ತು ವರ್ಷಗಳ ಕಾಲ  ದೇಶದ್ರೋಹದ ಆರೋಪ ಹೊತ್ತ ವಿಠಲ ಮಲೆಕುಡಿಯ ಹಾಗೂ ಅವರ ತಂದೆ ಲಿಂಗಣ್ಣ ಮಲೆಕುಡಿಯರವರಿಗೆ ಸರಕಾರ ನಷ್ಟ ಪರಿಹಾರ ಒದಗಿಸುವಂತೆ  ಆಗ್ರಹಿಸಿದ್ದಾರೆ.

ಡಿವೈಎಫ್ಐ ಸಂಘಟನೆ ವಿಠಲ ಮಲೆಕುಡಿಯ ಮತ್ತವನ ತಂದೆಯ ಪರವಾಗಿ ಆಗ ದೊಡ್ಡ ಹೋರಾಟ ಸಂಘಟಿಸಿತ್ತು‌. ಆಗ ಸಿಪಿಐ(ಎಂ) ಲೋಕಸಭಾ ಸದಸ್ಯರು ಹಾಗೂ ಪ್ರಸಕ್ತ ಕೇರಳ ವಿಧಾನಸಭಾಧ್ಯಕ್ಷರಾದ ಎಂ.ಬಿ.ರಾಜೇಶ್, ಸಿಪಿಐ(ಎಂ) ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್  ಜೈಲಿಗೆ ಭೇಟಿ ನೀಡಿ ವಿಠಲ ಮಲೆಕುಡಿಯ ಮತ್ತವರ ತಂದೆ ನಿಂಗಣ್ಣ ಮಲೆಕುಡಿಯರಿಗೆ ಧೈರ್ಯ ತುಂಬಿದ್ದರು.

ಆಗ ಎಂ ಬಿ ರಾಜೇಶ್ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು‌. ಸಿಪಿಐ(ಎಂ) ಪಾಲಿಟ್‌ಬ್ಯೂರೋ ಸದಸ್ಯೆ ಬೃಂದಾ ಕಾರಟ್ ರಾಜ್ಯದ ಆಗಿನ ಮುಖ್ಯಮಂತ್ರಿ ಸದಾನಂದಗೌಡ ಮನೆ ಮುಂದೆ ಧರಣಿ ಕೂತಿದ್ದರು.

ಅಂತಿಮವಾಗಿ ನ್ಯಾಯಾಲಯ ನ್ಯಾಯ ಒದಗಿಸಿದೆ. ಸರಕಾರಕ್ಕೆ ಮುಖಭಂಗವಾಗಿದೆ. ವಕೀಲ ದಿನೇಶ್ ಹೆಗ್ಡೆ ನ್ಯಾಯಾಲಯದಲ್ಲಿ ಉಚಿತವಾಗಿ ವಾದ ಮಂಡಿಸಿದ್ದರು. ಮಾಧ್ಯಮಗಳು ನಮ್ಮ ಜೊತೆ ನಿಂತಿದ್ದವು. ಎಲ್ಲರಿಗೂ ಡಿವೈಎಫ್ಐ ರಾಜ್ಯ ಸಮಿತಿ ಕೃತಜ್ಞತೆ ಸಲ್ಲಿಸುತ್ತದೆ ಎಂದು ಮುನೀರ್‌ ಕಾಟಿಪಳ್ಳ ತಿಳಿಸಿದರು.

ವರದಿ: ವಿನೋದ ಶ್ರೀರಾಮಪುರ

Donate Janashakthi Media

Leave a Reply

Your email address will not be published. Required fields are marked *