ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯತ್ವಕ್ಕೆ ಭಾರತ ಇನ್ನೆಷ್ಟು ದಿನ ಕಾಯಬೇಕು? ಮೋದಿ ಪ್ರಶ್ನೆ

– ವಿಶ್ವಸಂಸ್ಥೆಯ 75ನೇ ಸಾಮಾನ್ಯ ಸಭೆಯಲ್ಲಿ ಭಾರತದ ಆಕ್ಷೇಪ

 

ನವದೆಹಲಿ: ಜಾಗತಿಕ ಮಟ್ಟದಲ್ಲಿ ಭಾರತ ಧ್ವನಿಯೆತ್ತಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸ್ಥಾನ ಪಡೆಯಲು ಭಾರತ ಇನ್ನೆಷ್ಟು ಕಾಲ ಕಾಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.

ವಿಶ್ವಸಂಸ್ಥೆಯ 75ನೇ ಸಾಮಾನ್ಯ ಸಭೆಯ ವರ್ಚುವಲ್ ​ ವೇದಿಕೆಯಲ್ಲಿ ಮಾತನಾಡಿದ ಅವರು, ವಿಶ್ವಸಂಸ್ಥೆಯಲ್ಲಿ ಸುಧಾರಣೆ ಅಗತ್ಯವಿದ್ದು, ಆ ಸುಧಾರಣೆಗಾಗಿ ಭಾರತ ಕಾಯುತ್ತಿದೆ. ವಿಶ್ವಸಂಸ್ಥೆಯ ಆದರ್ಶ ಭಾರತದ ವಸುದೈವ ಕುಟುಂಬಕಂ ಎಂಬ ತತ್ವವನ್ನು ಹೋಲುತ್ತದೆ. ಇದೇ ತತ್ವವನ್ನು ಅನೇಕ ಬಾರಿ ವಿಶ್ವಸಂಸ್ಥೆಯ ಸಭೆಯಲ್ಲಿ ತಿಳಿಸಲಾಗಿದೆ, ಭಾರತ ಯಾವಾಗಲೂ ವಿಶ್ವ ಕಲ್ಯಾಣವನ್ನೇ ಚಿಂತಿಸಿದೆ . ಜನರ ಸುರಕ್ಷತೆ, ಶಾಂತಿ, ಸಮೃದ್ಧಿಗಾಗಿ ಧ್ವನಿ ಎತ್ತುತ್ತೇವೆ ಎಂದರು.

ನಾವು ಅಶಕ್ತರಾಗಿದ್ದಾಗ ಪ್ರಪಂಚಕ್ಕೆ ತೊಂದರೆ ಕೊಡಲಿಲ್ಲ. ಶಕ್ತಿಹೊಂದಿದಾಗಲೂ ನಾವು ಜಗತ್ತಿಗೆ ಹೊರೆಯಾಗಲಿಲ್ಲ. ಆದರೂ ಎಷ್ಟು ಕಾಲ ನಾವು ಕಾಯಬೇಕು. ಭದ್ರತಾ ಮಂಡಳಿ ಸೇರುವ ಭಾರತದ ಪ್ರಕ್ರಿಯೆಗೆ ಅಂತ್ಯ ಇದೆ ಎಂಬುದರ ಬಗ್ಗೆ ಭಾರತೀಯರು ಚಿಂತಿತರಾಗಿದ್ದಾರೆ. ವಿಶ್ವಸಂಸ್ಥೆಯ ನಿರ್ಧಾರ ತೆಗೆದುಕೊಳ್ಳುವ ಭದ್ರತಾ ಮಂಡಳಿಯಿಂದ ಎಷ್ಟು ಕಾಲ ನಮ್ಮನ್ನು ದೂರವಿಡಲಾಗುತ್ತದೆ ಎಂದು ಕೇಳಿದ್ದಾರೆ.
ಇದೇ ವೇಳೆ ಪ್ರಪಂಚಕ್ಕೆ ಕಾಡುತ್ತಿರುವ ಕೋವಿಡ್​-19 ವಿರುದ್ಧ ಹೋರಾಡಲು ಅಂತಾರಾಷ್ಟ್ರೀಯ ಮಂಡಳಿ ಏನು ಮಾಡಿದೆ ಎಂದು ಪ್ರಶ್ನಿಸಿದ ಮೋದಿ, ಕಳೆದ ಏಂಟು-ಒಂಭತ್ತು ತಿಂಗಳಿನಿಂದ ಇಡೀ ಜಗತ್ತು ಸಾಂಕ್ರಾಮಿಕ ಸೋಂಕಿನಿಂದ ನಲುಗುತ್ತಿದೆ. ಈ ಜಾಗತಿಕ ಸೋಂಕಿನ ಎದುರಿಸಲು ವಿಶ್ವ ಸಂಸ್ಥೆ ನಡೆಸಿರುವ ಪ್ರಯತ್ನವೇನು? ಎಲ್ಲಿದೆ ಪರಿಣಾಮಕಾರಿ ಜವಾಬ್ದಾರಿ ಎಂದು ಕೇಳಿದರು.

ಭಾರತ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶ, ಪ್ರಪಂಚದ ಶೇ.18ರಷ್ಟು ಜನಸಂಖ್ಯೆ ಹೊಂದಿರುವ ದೇಶ, ನೂರಾರು ಭಾಷೆ, ಸಂಸ್ಕೃತಿ ಚಿಂತನೆಗಳನ್ನು ಹೊಂದಿರುವ ದೇಶವಾಗಿದೆ.
ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಿಸುವ ದೇಶವಾಗಿ ಭಾರತ ಜಾಗತಿಕ ಸಮುದಾಯಕ್ಕೆ ಮತ್ತೊಂದು ಭರವಸೆ ನೀಡಲು ಬಯಸುತ್ತದೆ. ಜಗತ್ತಿನಲ್ಲಿ ಉಂಟಾಗಿರುವ ಈ ಬಿಕ್ಕಟ್ಟಿನಿಂದ ಹೊರಬರು ಭಾರತದ ಲಸಿಕೆ ಉತ್ಪಾದನೆ ಕಾರ್ಯ ಶ್ರಮಿಸುತ್ತದೆ ಎಂದರು.

ಅಮಾನವೀಯತೆ, ಜನಾಂಗೀಯ ದ್ವೇಷ, ಭಯೋತ್ಪಾದನೆ, ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ, ಮಾದಕ ವಸ್ತುಗಳ ವಿರುದ್ಧ ಧ್ವನಿ ಎತ್ತುತ್ತದೆ. ಭಾರತದಲ್ಲಿ ಅತಿ ದೊಡ್ಡ ಮಟ್ಟದಲ್ಲಿ ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ, ಸಣ್ಣ ಹಣಕಾಸಿನ ಯೋಜನೆಗಳ ಲಾಭವನ್ನು ಭಾರತದ ಮಹಿಳೆಯರು ಪಡೆಯುತ್ತಿದ್ದಾರೆ. ಮಹಿಳೆಯರಿಗೆ 26 ವಾರಗಳ ಕಾಲ ತಾಯ್ತನದ ರಜೆ ನೀಡುತ್ತಿರುವ ದೇಶಗಳಲ್ಲಿ ಭಾರತ ಕೂಡ ಒಂದಾಗಿದೆ, ತೃತೀಯ ಲಿಂಗಿಗಳ ಹಕ್ಕು ಕಾಪಾಡುವಲ್ಲಿ ಕಾನೂನಾತ್ಮಕ ಕ್ರಮಗಳನ್ನು ಭಾರತ ಕೈಗೊಳ್ಳುತ್ತಿದೆ ಎಂದು ಸಾಮಾನ್ಯ ಸಭೆಯಲ್ಲಿ ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *