ಜುಲೈ 3ರಂದು ಗಾಜಿಯಾಬಾದ್‍ನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ(ಎಸ್.ಕೆ.ಎಂ.)ಕ್ಕೆ ಸೇರಿದ ಎಲ್ಲ ರೈತ ಸಂಘಟನೆಗಳ ಪ್ರತಿನಿಧಿಗಳ ರಾಷ್ಟ್ರೀಯ ಸಭೆ ನಡೆಯಿತು. ಅದರಲ್ಲಿ ರೈತರ ಚಳವಳಿಗೆ ಸಂಬಂಧಿಸಿದಂತೆ ಮೂರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಎಸ್.ಕೆ.ಎಂ.ನ ರಾಷ್ಟ್ರೀಯ ಮುಖಂಡರಾದ ಡಾ. ದರ್ಶನ್ ಪಾಲ್, ಹನ್ನನ್ ಮೊಲ್ಲಾ, ಜೋಗಿಂದರ್ ಸಿಂಗ್ ಉಗ್ರನ್, ಯುದ್ವೀರ್ ಸಿಂಗ್ ಮತ್ತು ಯೋಗೇಂದ್ರ ಯಾದವ್ ನೀಡಿರುವ ಜಂಟಿ ಹೇಳಿಕೆ ತಿಳಿಸಿದೆ.
- ಕನಿಷ್ಟ ಬೆಂಬಲ ಬೆಲೆಗೆ ಕಾನೂನು ಖಾತ್ರಿ ಮತ್ತು ಇತರ ಬಾಕಿಇರುವ ಬೇಡಿಕೆಗಳನ್ನು ಒತ್ತಾಯಿಸಿ ರೈತರ ಆಂದೋಲನದ ಜುಲೈ 31 ರಂದು ದೇಶಾದ್ಯಂತ ರಾಸ್ತಾ ರೋಕೋ ನಡೆಸುತ್ತದೆ.
- ಅಗ್ನಿಪಥ್ ಯೋಜನೆಯನ್ನು ಬಯಲಿಗೆಳೆಯಲು, ದೇಶಾದ್ಯಂತ ಆಗಸ್ಟ್ 7 ರಿಂದ ಆಗಸ್ಟ್ 14 ರವರೆಗೆ “ಜೈ ಜವಾನ್, ಜೈ ಕಿಸಾನ್” ಸಮಾವೇಶಗಳನ್ನು ಆಯೋಜಿಸುತ್ತದೆ.
- ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಅಂಗವಾಗಿ ಅಜಯ್ ಮಿಶ್ರಾ ತೇನಿ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಆಗಸ್ಟ್ 18, 19, 20ರಂದು ಲಖೀಂಪುರ ಖೇರಿಯಲ್ಲಿ 75 ಗಂಟೆಗಳ ಸಾಮೂಹಿಕ ಧರಣಿ ನಡೆಸಲಾಗುವುದು.
ಪಂಜಾಬ್ ಚುನಾವಣೆಯ ಸಮಯದಲ್ಲಿ ಎಸ್‌ಕೆಎಂನಿಂದ ಅಮಾನತುಗೊಂಡಿದ್ದ ಹೆಚ್ಚಿನ ರೈತ ಸಂಘಟನೆಗಳು ಮೋರ್ಚಾಕ್ಕೆ ಮರಳಿವೆ. ಅವುಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.
ರೈತರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರ ಮೇಲೆ ಹೆಚ್ಚುತ್ತಿರುವ ದಬ್ಬಾಳಿಕೆ ವಿರುದ್ಧ ಖಂಡನಾ ನಿರ್ಣಯವನ್ನು ಸಭೆಯಲ್ಲಿ ಅಂಗೀಕರಿಸಲಾಯಿತು. ತೀಸ್ತಾ ಸೆಟಲ್ವಾಡ್ ಮತ್ತು ಮೊಹಮ್ಮದ್ ಜುಬೇರ್ ಬಂಧನಕ್ಕೆ ಸಭೆ ಪ್ರತಿಭಟನೆ ವ್ಯಕ್ತಪಡಿಸಿತು.
ಡಿಸೆಂಬರ್ 9, 2021 ರಂದು ದಿಲ್ಲಿಯಲ್ಲಿ ಪ್ರತಿಭಟನೆಯನ್ನು ಹಿಂತೆಗೆದುಕೊಂಡಾಗ ರೈತರಿಗೆ ನೀಡಿದ್ದ ಲಿಖಿತ ಭರವಸೆಯಿಂದ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಹಿಂದಕ್ಕೆ ಸರಿದಿರುವ ಬಗ್ಗೆ ಸಭೆ ತನ್ನ ನಿರಾಶೆಯನ್ನು ವ್ಯಕ್ತಪಡಿಸಿತು. ಎಂಎಸ್‍ಪಿ ಕುರಿತು ಸಮಿತಿಯನ್ನು ರಚಿಸಲೂ ಇಲ್ಲ , ಚಳುವಳಿಯ ಸಮಯದಲ್ಲಿ ರೈತರ ವಿರುದ್ಧ ಹಾಕಿದ ಸುಳ್ಳು ಪ್ರಕರಣಗಳನ್ನು ಹಿಂತೆಗೆದುಕೊಳ್ಳಲೂ ಇಲ್ಲ. ಅಲ್ಲದೆ ಸಂಸತ್ತಿನಲ್ಲಿ ವಿದ್ಯುತ್ ಮಸೂದೆಯನ್ನು ಮಂಡಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ರೈತರ ಬಹುದೊಡ್ಡ ಬೇಡಿಕೆಯಾದ ಕನಿಷ್ಠ ಬೆಂಬಲ ಬೆಲೆಯ ಕಾನೂನಾತ್ಮಕ ಖಾತರಿಯನ್ನು ಪರಿಗಣಿಸಲು ಸರ್ಕಾರ ಸಿದ್ಧವಾಗಿಲ್ಲ.
ಸರ್ಕಾರದ ಈ ವಿಶ್ವಾಸದ್ರೋಹವನ್ನು ಪ್ರತಿಭಟಿಸಿ, ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗುವ ಜುಲೈ 18ರಿಂದ ಸರ್ದಾರ್ ಉಧಮ್ ಸಿಂಗ್ ಹುತಾತ್ಮ ದಿನವಾದ ಜುಲೈ 31 ರವರೆಗೆ ದೇಶದಾದ್ಯಂತ ಜಿಲ್ಲಾ ಮಟ್ಟದಲ್ಲಿ “ವಿಶ್ವಾಸದ್ರೋಹ ವಿರುದ್ಧ ಪ್ರತಿಭಟನೆ” ಸಾರ್ವಜನಿಕ ಸಭೆಗಳನ್ನು ಆಯೋಜಿಸುವ ಮೂಲಕ ನಡೆಸಲಾಗುವುದು. ಈ ಅಭಿಯಾನದ ಕೊನೆಯಲ್ಲಿ,
ಜುಲೈ 31 ರಂದು, ದೇಶಾದ್ಯಂತ ಎಲ್ಲಾ ಪ್ರಮುಖ ಹೆದ್ದಾರಿಗಳಲ್ಲಿ ಚಕ್ಕಾ ಜಾಮ್ ಅನ್ನು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 3:00 ರವರೆಗೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು.
ರಾಷ್ಟ್ರವಿರೋಧಿ ಹಾಗೂ ಯುವಜನ ವಿರೋಧಿ ಹಾಗೂ ರೈತ ವಿರೋಧಿಯಾಗಿರುವ ಅಗ್ನಿಪಥ್ ಯೋಜನೆ ವಿರುದ್ಧ ರೈತ ಸಂಘಟನೆಗಳು ನಿರುದ್ಯೋಗಿ ಯುವಕರು ಮತ್ತು ಮಾಜಿ ಸೈನಿಕರನ್ನು ಸಂಘಟಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಅಗ್ನಿಪಥ್ ಯೋಜನೆಯನ್ನು ಬಯಲಿಗೆಳೆಯಲು, ಆಗಸ್ಟ್ 7 ರಿಂದ ಆಗಸ್ಟ್ 14 ರವರೆಗೆ ದೇಶಾದ್ಯಂತ “ಜೈ ಜವಾನ್, ಜೈ ಕಿಸಾನ್” ಸಮಾವೇಶಗಳನ್ನು ಆಯೋಜಿಸಲಾಗುವುದು, ಇದರಲ್ಲಿ ಮಾಜಿ ಸೈನಿಕರು ಮತ್ತು ನಿರುದ್ಯೋಗಿ ಯುವಕರನ್ನು ಸಹ ಆಹ್ವಾನಿಸಲಾಗುತ್ತದೆ.
ಲಖಿಂಪುರ ಖೇರಿ ಹತ್ಯಾಕಾಂಡದ 10 ತಿಂಗಳ ನಂತರವೂ ಅಜಯ್ ಮಿಶ್ರಾ ತೇನಿ ಕೇಂದ್ರ ಸಚಿವ ಸಂಪುಟದಲ್ಲಿ ಮುಂದುವರೆಯುವುದು ದೇಶದ ಕಾನೂನು ಮತ್ತು ಸುವ್ಯವಸ್ಥೆಯ ಕ್ರೂರ ವಿಡಂಬನೆಯಾಗಿದೆ.. ಮೊದಲಿನಿಂದಲೂ ಸಂಯುಕ್ತ ಕಿಸಾನ್ ಮೋರ್ಚಾ ರೈತರಿಗೆ ನ್ಯಾಯ ದೊರಕಿಸಿಕೊಡಲು ಬದ್ಧವಾಗಿದ್ದು, ಸಂತ್ರಸ್ತರ ಕುಟುಂಬಗಳಿಗೆ ಕಾನೂನು ಮತ್ತು ಇತರ ನೆರವು ನೀಡುತ್ತಿದೆ. ಈ ವಿಷಯವನ್ನು ಬಲವಾಗಿ ಪ್ರಸ್ತಾಪಿಸಲು, ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಸಂಯುಕ್ತ ಕಿಸಾನ್ ಮೋರ್ಚಾವು ಆಗಸ್ಟ್ 18-19-20 ರಂದು ಲಖೀಂಪುರ ಖೇರಿಯಲ್ಲಿ 75 ಗಂಟೆಗಳ ಬೃಹತ್ ಧರಣಿಯನ್ನು ಆಯೋಜಿಸುತ್ತದೆ, ಇದರಲ್ಲಿ ದೇಶಾದ್ಯಂತದ ರೈತ ಮುಖಂಡರು ಮತ್ತು ಕಾರ್ಮಿಕರು ಭಾಗವಹಿಸಲಿದ್ದಾರೆ. .
ಈ ರಾಷ್ಟ್ರೀಯ ಸಭೆಯಲ್ಲಿ ರೈತರ ಮೇಲೆ ಹೆಚ್ಚುತ್ತಿರುವ ದಬ್ಬಾಳಿಕೆ ಮತ್ತು ಮಾನವ ಹಕ್ಕುಗಳ ಆಂದೋಲನದ ವಿರುದ್ಧ ದಾಳಿಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಲಾಯಿತು. ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ರೈತ ಮುಖಂಡ ಆಶಿಶ್ ಮಿತ್ತಲ್ ವಿರುದ್ಧ ಸುಳ್ಳು ಕೇಸುಗಳನ್ನು ಹಾಕಿರುವುದು, ಬಂಗಾಳದ ಫರಕ್ಕಾದಲ್ಲಿ ಅದಾನಿ ಹೈವೋಲ್ಟೇಜ್ ವೈರ್ ವಿರುದ್ಧ ಪ್ರತಿಭಟನೆ ನಡೆಸಿದ ರೈತರ ಮೇಲೆ ಲಾಠಿ ಚಾರ್ಜ್ ಮತ್ತು ಛತ್ತೀಸ್‌ಗಢದಲ್ಲಿ ಪ್ರತಿಭಟನಾ ನಿರತ ರೈತರ ದಮನವನ್ನು ಅದು ಖಂಡಿಸಿದೆ. ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರಾದ ಶ್ರೀಮತಿ ತೀಸ್ತಾ ಸೆಟಲ್ವಾಡ್, ಆರ್.ಬಿ. ಶ್ರೀಕುಮಾರ್ ಮತ್ತು ಮುಹಮ್ಮದ್ ಜುಬೇರ್ ಅವರ ಬಂಧನಗಳು ದೇಶಾದ್ಯಂತ ಪ್ರಜಾಪ್ರಭುತ್ವ ಹಕ್ಕುಗಳ ಹೆಚ್ಚುತ್ತಿರುವ ದಮನವನ್ನು ಸೂಚಿಸುತ್ತವೆ. ಈ ಪ್ರಜಾಸತ್ತಾತ್ಮಕ ಹೋರಾಟದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಈ ಎಲ್ಲಾ ಕಾರ್ಯಕರ್ತರು ಮತ್ತು ಸಂಘಟನೆಗಳೊಂದಿಗೆ ನಿಲ್ಲುವುದಾಗಿ ಸಭೆ ಹೇಳಿದೆ.
ಈ ಸಭೆಯಲ್ಲಿ ದೇಶದ 15 ರಾಜ್ಯಗಳಿಂದ ಸುಮಾರು 200 ಪ್ರತಿನಿಧಿಗಳು ಭಾಗವಹಿಸಿದ್ದರು. ಪಂಜಾಬ್ ಚುನಾವಣೆ ವಿಚಾರವಾಗಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ಅಮಾನತುಗೊಂಡಿದ್ದ 16 ಸಂಘಟನೆಗಳನ್ನು ಮೋರ್ಚಾದಲ್ಲಿ ಮರು ಸೇರ್ಪಡೆಗೊಳಿಸಲಾಯಿತು. ಚಂದ್ರಶೇಖರ್ ಕೋಡಿಹಳ್ಳಿ ನೇತೃತ್ವದ “ಕರ್ನಾಟಕ ರಾಜ್ಯ ರೈತ ಸಂಘ”ವನ್ನು ಸಂಯುಕ್ತ ಕಿಸಾನ್ ಮೋರ್ಚಾದಿಂದ ಉಚ್ಚಾಟಿಸಲು ಈ ಸಭೆಯಲ್ಲಿ ನಿರ್ಧರಿಸಲಾಯಿತು. ಸಂಯುಕ್ತ ಕಿಸಾನ್ ಮೋರ್ಚಾ ದೇಶದ ಎಲ್ಲಾ ರೈತರು ಮತ್ತು ರೈತ ಸಂಘಟನೆಗಳಿಗೆ ತನ್ನ ಬಾಗಿಲು ಯಾವಾಗಲೂ ತೆರೆದಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಜಂಟಿ ಹೇಳಿಕೆ , ಸರ್ಕಾರದ ದಬ್ಬಾಳಿಕೆಯ ವಿರುದ್ಧ ರೈತರ ಹೋರಾಟವು ಇನ್ನಷ್ಟು ತೀವ್ರ ಮತ್ತು ಶಕ್ತಿಯುತವಾಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದೆ.