ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರ ಬಹುನಿರೀಕ್ಷಿತ ಸಾಕ್ಷ್ಯಚಿತ್ರ ‘ಗಂಧದ ಗುಡಿ’ ಇಂದು(ಅಕ್ಟೋಬರ್ 28) ಬಿಡುಗಡೆಯಾಗಿದ್ದು ಎಲ್ಲೆಡೆ ಭಾರೀ ಪ್ರದರ್ಶನ ಕಾಣುತ್ತಿದೆ. ಬೆಳಗ್ಗೆ 6 ಗಂಟೆಯಿಂದಲೇ ಚಿತ್ರಮಂದಿರಗಳ ಮುಂದೆ ಜನಸಾಗರ ಹರಿದಿದೆ. ಅಲ್ಲದೆ, ಅಭಿಮಾನಿಗಳು ಭರ್ಜರಿ ಸ್ಪಂದನೆ ವ್ಯಕ್ತಪಡಿಸುತ್ತಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಕನಸಿನ ಸಿನಿಮಾʻ ಗಂಧದ ಗುಡಿʼ ಕರ್ನಾಟಕ ಮಾತ್ರವಲ್ಲದೆ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಕರ್ನಾಟಕದಲ್ಲಿ 225ಕ್ಕೂ ಹೆಚ್ಚು ಚಿತ್ರಮಂದಿರಗಳು ಅದ್ಧೂರಿಯಾಗಿ ಅಲಂಕಾರಗೊಂಡು ಕಂಗೊಳಿಸುತ್ತಿದೆ. ಬೆಳಗ್ಗೆಯಿಂದಲೇ ಗಂಧದಗುಡಿ ವೀಕ್ಷಣೆಗೆ ಎಲ್ಲಾ ಚಿತ್ರಮಂದಿರಗಳು ಭರ್ತಿ ಪ್ರದರ್ಶನ ಕಂಡಿದ್ದು, ಚಿತ್ರಮಂದಿರ ಭರ್ತಿಯಾಗಿದೆ ಎಂಬ ಫಕಲಗಳನ್ನು ಅಳವಡಿಸಲಾಗಿತ್ತು. ಬೆಂಗಳೂರಿನಲ್ಲಿಯೂ ಅಧಿಕೃತ ಬಿಡುಗಡೆ ಸಮಯಕ್ಕೂ ಮುಂಚಿತವಾಗಿ ತೆರೆಕಂಡಿದ್ದು, ಚಿತ್ರ ಪ್ರದರ್ಶನ ದಾಖಲೆ ನಿರ್ಮಿಸಿದೆ.
ಬೆಂಗಳೂರಿನ ಅನೇಕ ಚಿತ್ರಮಂದಿಗಳ ಮುಂಭಾಗ ಜನಸಾಗರ ಸೇರಿದೆ. ಅಭಿಮಾನಿಗಳು ಜಾತ್ರೆಯಂತೆ, ಹಬ್ಬದ ರೀತಿಯಲ್ಲಿ ತಮ್ಮ ನೆಚ್ಚಿನ ನಟನ ಚಿತ್ರವನ್ನು ಆಚರಿಸುತ್ತಿದ್ದಾರೆ. ಡಾ ರಾಜ್ ಕುಮಾರ್ ಕುಟುಂಬಸ್ಥರು ಸಹ ಅಭಿಮಾನಿಗಳ ಜೊತೆ ಸಂತೋಷದಲ್ಲಿ ಭಾಗಿಯಾಗಿದ್ದಾರೆ.
ಬೆಂಗಳೂರಿನ 29 ಪ್ರದರ್ಶನಗಳು ಭರ್ತಿ ಪ್ರದರ್ಶನ ಕಂಡಿದೆ. ಕೆಂಪೇಗೌಡ ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಂಭ್ರಮ ಮನೆ ಮಾಡಿದೆ. ಅಭಿಮಾನಿಗಳ ಜೊತೆ ಡಾ. ರಾಜ್‌ಕುಮಾರ್ ಕುಟುಂಬ ನೋಡುವುದಕ್ಕೆ ನರ್ತಕಿ ಚಿತ್ರಮಂದಿರಕ್ಕೆ ಬಂದಿದ್ದು, ರಾಘವೇಂದ್ರ ರಾಜ್ ಕುಮಾರ್ ಅಭಿಮಾನಿಗಳ ಜೊತೆ ನರ್ತಿಸುವ ಮೂಲಕ ಸಂಭ್ರಮಾಚರಿಸಿದರು.
ವಿವಿಧ ಸಿನಿಮಾಗಳಲ್ಲಿ ಪುನೀತ್ ರಾಜ್‌ಕುಮಾರ್ ಅವರನ್ನು ಬೇರೆ ಬೇರೆ ಪಾತ್ರಗಳಲ್ಲಿ ನೋಡುತ್ತಿದ್ದ ವೀಕ್ಷಕರು ‘ಗಂಧದ ಗುಡಿ’ಯಲ್ಲಿ ಪುನೀತ್‌ರನ್ನು ಪುನೀತ್‌ರಾಗಿಯೇ ನೋಡಬಹುದು. ಗಂಧದ ಗುಡಿ ಸಾಕ್ಷ್ಯಚಿತ್ರದ ಅವಧಿ 1 ಗಂಟೆ 37 ನಿಮಿಷಗಳು. ಕರ್ನಾಟಕದ ಅರಣ್ಯ ಸಂಪತ್ತು, ಜೀವ ವೈವಿಧ್ಯತೆ, ಪ್ರಾಣಿ-ಪಕ್ಷಿಗಳು, ಪಶ್ಚಿಮ ಘಟ್ಟಗಳು, ಕರಾವಳಿ ತೀರ, ಮಲೆನಾಡು, ಕುರುಚುಲು ಕಾಡು, ಬೆಟ್ಟ-ಗುಡ್ಡ, ತುಂಗಭದ್ರಾ ನದಿ, ಕಾಳಿ ನದಿ, ಆನೆ ಬಿಡಾರಗಳು. ನಾಗರಹೊಳೆಯಿಂದ ಡಾ. ರಾಜ್‌ಕುಮಾರ್ ಹುಟ್ಟೂರು ಗಾಜನೂರು ತಲುಪಿ, ಅಲ್ಲಿಂದ ಮಲೆನಾಡು, ವಿಜಯನಗರ, ದಾಂಡೇಲಿ, ಬಿಆರ್‌ಟಿ ಟೈಗರ್ ರಿಸರ್ವ್, ಜೋಗ ಹೀಗೆ ಸಾಕಷ್ಟು ಸ್ಥಳಗಳನ್ನು ಚಿತ್ರೀಕರಿಸಲಾಗಿದೆ.
ಗಂಧದ ಗುಡಿ ಸಾಕ್ಷ್ಯಚಿತ್ರವು ಇಂದು ಬಿಡುಗಡೆಯಾಗಿದ್ದು, ಬೆಳಗ್ಗೆಯೇ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ವಿಶೇಷ ಪ್ರದರ್ಶನವನ್ನು ಆಯೋಜನೆಗೊಂಡವು. ಗಂಧದಗುಡಿ ನೋಡಿದ ಅಭಿಮಾನಿಗಳು ಕಣ್ಣೀರಿಟ್ಟದ್ದಾರೆ. ತೆರೆಮೇಲೆ ಪುನೀತ್ ಪರಿಸರ ಪ್ರೀತಿ. ಗಂಧದಗುಡಿಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಧ್ವನಿ, ಗಂಧದಗುಡಿಯ ಸಿನಿಮಾದಲ್ಲಿ ಕಣಕಣದಲ್ಲೂ ಅಪ್ಪು ಪರಿಸರ ಕಾಳಜಿ, ಕಾಡುಗಳಲ್ಲಿ ಪುನೀತ್ ಸಂಚಾರಿಸುವ ಮಾರ್ಗಗಳು ಹಾಗೂ ಪ್ಲಾಸ್ಟಿಕ್ ಬಳಕೆಯ ನಿಯಂತ್ರಣದ ಬಗ್ಗೆ ಪುನೀತ್ ಸಂದೇಶ ನೀಡಿದ್ದಾರೆ. ಹುಟ್ಟೂರು ಗಾಜನೂರಿನ ಕಥೆ ಹೇಳುವುದು ಹೀಗೆ ಸಾಗುತ್ತದೆ. ಕೊನೆಬಾರಿ ಅಭಿಮಾನಿಗಳು ‘ಪರಮಾತ್ಮ’ನ ದರ್ಶನವನ್ನು ಬೆಳ್ಳಿ ತೆರೆ ಮೇಲೆ ಕಂಡು ಭಾವುಕರಾದರು.
ಕಂಠೀರವ ಸ್ಟುಡಿಯೋ ಬಳಿ ರಸ್ತೆಯುದ್ದಕ್ಕೂ ಕಟೌಟ್ ಗಳು
ಪುನೀತ್ ರಾಜ್‌ಕುಮಾರ್ ಸಮಾಧಿ ಇರುವ ಕಂಠೀರವ ಸ್ಟುಡಿಯೋ ಬಳಿ ರಸ್ತೆಯುದ್ದಕ್ಕೂ 40ಕ್ಕೂ ಅಧಿಕ ಕಟೌಟ್ ಗಳು ಅಳವಡಿಸಲಾಗಿದೆ. ಒಂದೊಂದು ಕಟೌಟ್ 30 ಅಡಿ ಎತ್ತರವಿದ್ದು, ಎಲ್ಲ ಕಟೌಟ್ ಗೆ ದೊಡ್ಡ ದೊಡ್ಡ ಹೂವಿನ ಹಾರ ಹಾಕಿ ಅಲಂಕರಿಸಲಾಗಿದೆ. ಅಪ್ಪು ಕಟೌಡ್ಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.
ವರ್ಷದ ಬಳಿಕ ಟ್ವಿಟ್ಟರ್ ಖಾತೆ ಚಾಲನೆ
ಪುನೀತ್ ರಾಜ್ ಕುಮಾರ್ ಕನಸಿನ ಗಂಧದ ಗುಡಿ ಚಿತ್ರ ಬಿಡುಗಡೆಯ ಹಿನ್ನೆಲೆಯಲ್ಲಿ ಅವರು ಬಳಸುತ್ತಿದ್ದ ಅವರ ಅಧಿಕೃತ ಟ್ವಿಟ್ಟರ್ ಖಾತೆ ಮತ್ತೆ ಚಾಲನೆಗೊಂಡಿದೆ. ಕಳೆದೊಂದು ವರ್ಷದಿಂದ ಈ ಖಾತೆಯನ್ನೂ ಯಾರೂ ಬಳಸುತ್ತಿರಲಿಲ್ಲ. ವರ್ಷದ ನಂತರ, ಅದೂ ಗಂಧದ ಗುಡಿ ಬಿಡುಗಡೆ ಆಗುತ್ತಿರುವ ಸಂದರ್ಭದಲ್ಲಿ ಅದು ಮತ್ತೆ ಚಾಲನೆಗೊಂಡಿದೆ. ಟ್ವಿಟ್ಟರ್ ಖಾತೆಯಲ್ಲಿ ಗಂಧದ ಗುಡಿ ಬಗ್ಗೆ ತಿಳಿಸಲಾಗಿದ್ದು, ‘ನಿಮ್ಮನ್ನೆಲ್ಲ ನೋಡುವ ಕಾತರದಲ್ಲಿ’ ಎಂದು ಬರೆಯಲಾಗಿದೆ. ಅಪ್ಪು ಮತ್ತೆ ಹುಟ್ಟಿ ಬಂದರು ಎನ್ನುವಷ್ಟರ ಮಟ್ಟಿಗೆ ಅಭಿಮಾನಿಗಳು ಟ್ವಿಟ್ ನೋಡಿ ಭಾವುಕರಾಗಿದ್ದಾರೆ.