ವಿನೋದ ಶ್ರೀರಾಮಪುರ
ಬೆಂಗಳೂರು: ಒಂದು ಜ್ಞಾನ ಶಾಖೆಯಿಂದ ಮತ್ತೊಂದು ಜ್ಞಾನ ಶಾಖೆಯಲ್ಲಿ ನೆಗೆದು ಕಲಿಯುವಂತಹ ಕೆಲಸ ಮಾಡಿದ್ದಾರೆ. ಅಲ್ಲದೆ ಸಂಬಂಧವಿಲ್ಲದ ಬಗ್ಗೆಯೂ ಸಂಬಂಧವನ್ನು ಕಲ್ಪಿಸುವ ಪ್ರತಿಭಾವಂತ ವ್ಯಕ್ತಿತ್ವದವರು ಡಾ. ಚಿರಂಜೀವಿ ಸಿಂಘ್ ಅವರದು. ಅವರ ʻಯಾವ ಜನ್ಮದ ಮೈತ್ರಿ?ʼ ಪುಸ್ತಕ ಒಂದು ರೀತಿಯಲ್ಲಿ ನಮಗೆ ವಿಶ್ವಕೋಶವನ್ನು ಪರಿಚಯಿಸುತ್ತದೆ.
ಇಂದು ನಗರದ ನಯನ ಸಭಾಂಗಣದಲ್ಲಿ ನಿವೃತ್ತ ಅಧಿಕಾರಿ ಡಾ. ಚಿರಂಜೀವಿ ಸಿಂಘ್ ಅವರ ಯಾವ ಜನ್ಮದ ಮೈತ್ರಿ? ಕೃತಿಯ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ನವಕರ್ನಾಟಕ 60ರ ಸಂಭ್ರಮದಲ್ಲಿ ಸಾಹಿತಿ – ಕಲಾವಿದರ ಬಳಗದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಮಾತನಾಡಿದರು.
ಪಂಜಾಬ ರಾಜ್ಯದವರಾದರೂ ಕರ್ನಾಟಕದಲ್ಲಿ ತಮ್ಮ ವೃತ್ತಿ ಆರಂಭಿಸಿದ್ದು ಮಾತ್ರವಲ್ಲ, ಕನ್ನಡ ಕಲಿತು, ಬರೆಯುವ ಮೂಲಕ ಕನ್ನಡ ಸಾಹಿತ್ಯದ ಇತಿಹಾಸವನ್ನು ರಚಿಸಿದ ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಘ್ ಅವರ ಪುಸ್ತಕದ ಕುರಿತು ಸಂವಾದ ಏರ್ಪಡಿಸಲಾಗಿತ್ತು.
ಇದನ್ನು ಓದಿ: ʻಯಾವ ಜನ್ಮದ ಮೈತ್ರಿ?ʼ ಕೃತಿಯ ಕುರಿತು ಸಂವಾದ
ಸಾಹಿತಿ ಡಾ|| ಎಚ್.ಎಸ್.ಶಿವಪ್ರಕಾಶ್ ಮಾತನಾಡಿ ʻʻವೈವಿದ್ಯತೆಯನ್ನು ಒಳಗೊಂಡು ಏಕಸೂತ್ರತೆ ಒಂದಿದ್ದರೆ ಅಲ್ಲಿ ನಿಜವಾದ ಪ್ರತಿಭೆ ಇರುತ್ತದೆ. ಕನ್ನಡದ ಹಿರಿಯ ಸಾಹಿತಿಗಳ ಸಾಲಿಗೆ ಜಿರಂಜೀವಿ ಸಿಂಘ್ ಅವರು ಸೇರಿದ್ದಾರೆ. ಸಾಹಿತ್ಯ ಕೃತಿಗಳನ್ನು ಅರಗಿಸಿಕೊಂಡು ವಿಷಯವಲ್ಲದನ್ನು ಪರಿಚಯಿಸುವ ಸಾಹಸವನ್ನು ಅವರು ಮಾಡಿದ್ದಾರೆ. ನಮ್ಮಲ್ಲಿನ ಜನಪದರಿಗೆ ಭಾಷೆ ಶುದ್ಧಿಗಿಂತ ಭಾವ ಶುದ್ಧಿ ಇರುವವರು. ವಚನಗಳಲ್ಲಿಯೂ ತಳಸ್ತರದ ವಿಚಾರಗಳು ಜನಜನಿತವಾಗಿದೆ. ಚಿರಂಜೀವಿ ಸಿಂಘ್ ಅವರ ಭಾಷೆಯೂ ಸಹ ಕನ್ನಡತನವನ್ನು ಪ್ರದರ್ಶಿಸಿದೆ. ಅಲ್ಲದೆ, ಎಲ್ಲವನ್ನು ಪರಿಚಯಿಸಿಕೊಟ್ಟ ಅವರ ಬರವಣಿಗೆ ಶೈಲಿ ಆಯಾ ಸಂದರ್ಭಕ್ಕಿಂತ ಪ್ರತಿಬಾರಿಯೂ ಪ್ರಸ್ತುತವೆನಿಸುವಂತಹದನ್ನು ಪ್ರದರ್ಶಿಸುವ ಗುಣವಿದೆ. ‘ಯಾವ ಜನ್ಮದ ಮೈತ್ರಿ’ ಎಂಬ ಕೃತಿಯು ಗದ್ಯಕಾವ್ಯವಾಗಿದೆ. ಬುದ್ಧನ ಮಹಾಕರುಣೆ, ಜೀವಕಾರುಣ್ಯ, ಬಸವಣ್ಣನವರು ‘ದಯವೇ ಧರ್ಮದ ಮೂಲ’ ಇಂತಹ ಮೌಲ್ಯಗಳ ಮನೋಭಾವ ವ್ಯಕ್ತಿತ್ವ ಒಳಗೊಂಡಿರುವ ಪುಸ್ತಕ ಇದಾಗಿದೆʼʼ ಎಂದು ಹೇಳಿದರು.
ಪತ್ರಕರ್ತ ಸುಗತ ಶ್ರೀನಿವಾಸರಾಜು ಮಾತನಾಡಿ ʻʻಸಾಂಸ್ಕೃತಿಕತೆಯನ್ನು ಅಪ್ಪಿಕೊಳ್ಳುವ ಗುಣ ಚಿರಂಜೀವಿ ಸಿಂಘ್ ಅವರಲ್ಲಿದೆ. ಅವರು ಕಳೆದ 50 ವರ್ಷಗಳಿಂದ ಕರ್ನಾಟಕದಲ್ಲಿಯೇ ಇದ್ದು ನಮ್ಮವರೇ ಆಗಿದ್ದಾರೆ. ಅವರ ಮೃದುತ್ವ ಭಾವನೆ ಅವರ ಬರವಣಿಗೆಯಲ್ಲಿಯೂ ಗುರುತಿಸಬಹುದಾಗಿದೆ. ಚಿರಂಜೀವಿ ಸಿಂಘ್ ಅವರೊಂದಿಗಿನ ಸಂಬಂಧವು ಒಂದು ರೀತಿ ದಡ್ಡ ಕಾಡಿನಲ್ಲಿ ಒಂದು ಸಣ್ಣ ತೊರೆ ಹರಿದು ಹೋಗುತ್ತಿರುವಂತ ಅನುಭವ ಉಂಟಾಗುತ್ತದೆ. ಉತ್ತಮ ಪ್ರವಾಸಿಗರೊಬ್ಬರಲ್ಲಿರುವ ‘ನಮ್ಮತನ’ ಎಂಬುದನ್ನು ಬಿಟ್ಟುಕೊಡುವುದಿಲ್ಲ. ಎಲ್ಲವನ್ನೂ ಅಪ್ಪಿಕೊಳ್ಳುವ ಮನೋಭಾವವಿದೆ. ಇದು ಅವರ ಬರಹದ ಗುಣವೂ ಆಗಿದೆ. ಪ್ರತಿಬಾರಿಯೂ ಅವರ ಬರವಣಿಗೆಯ ಸಮಯದಲ್ಲಿ ಹೊಸತನವನ್ನು ಮತ್ತೆ ಮತ್ತೆ ಸೃಷ್ಠಿಸುವ ಸಾಹಸವನ್ನು ಅವರು ಮಾಡುತ್ತಾರೆʼʼ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ದೇಶಕ ಅಧಿಕಾರಿ ಐ.ಎಂ. ವಿಠ್ಠಲ್ ಮೂರ್ತಿ ಮಾತನಾಡಿ ʻʻಅಧಿಕಾರಿಗಳಿಗೆ ಬರವಣಿಗೆ ಎಂಬುದು ಬಹಳ ಕಷ್ಟದ ಕೆಲಸವೇ ಆಗಿದೆ. ಬಹಳ ಪ್ರಯಾಸಪಟ್ಟು ರಚಿಸುವ ಸಾಹಸಕ್ಕೆ ಹೋಗಬೇಕಾಗುತ್ತದೆ. ಪ್ರಕಾಶಕರ ಮುದ್ರಣದ ಪರಿಸ್ಥಿತಿಯ ಬಗ್ಗೆ ಒಮ್ಮೆ ಪೂರ್ಣಚಂದ್ರ ತೇಜಸ್ವಿಯವರು ಚರ್ಚಿಸುವಾಗ ಪುಸ್ತಕಗಳ ಮುದ್ರಣಕ್ಕೆ ಸಂಬಂಧಿಸಿದ ಕೆಲವು ಉಪಯುಕ್ತ ಮಾಹಿತಿಗಳನ್ನು ಅಂಚಿಕೊಂಡರು. ಆದರೂ ಪುಸ್ತಕ ಪ್ರಾಧಿಕಾರ ಅಧ್ಯಕ್ಷರು ತಮಗೆ ಸಚಿವದರ್ಜೆ ಸ್ಥಾನಮಾನದ ಆಕಾಂಕ್ಷಿಯಾಗಿರುವರೆ ವಿನಃ ಪ್ರಕಾಶನಕ್ಕೆ ಸಂಬಂಧಿಸಿದಂತೆ ಹೊಸತನವನ್ನು ರೂಪಿಸುವಲ್ಲಿ ವಿಫಲರಾಗುವರುʼʼ ಎಂದರು. ಇದೇ ಸಂದರ್ಭದಲ್ಲಿ ತಮ್ಮ ಆರಂಭದ ಅಧಿಕಾರವಾಧಿಯಿಂದಲೂ ಚಿರಂಜೀವಿ ಸಿಂಘ್ ಅವರ ಸರಳತೆ, ವಿನಮ್ರತೆ, ಉದಾರತೆ, ಸಂಗೀತ-ಕಲಾ ಪ್ರೇಮವನ್ನು, ಪ್ರಶಂಸಿಸಿ, ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು. ಚಿರಂಜೀವಿ ಸಿಂಘ್ ಅವರ ಮಗಳ ಮದುವೆಯೂ ಮಂತ್ರಮಾಂಗಲ್ಯ ಮಾದರಿಯಲ್ಲಿ ನಡೆದದ್ದು ಹಾಗೂ ಅಲ್ಲಿ ತಾವು ಪುರೋಹಿತ ಕಾರ್ಯವನ್ನು ನೆರವೇರಿಸಿದ ಬಗೆಗಿಗನ ನೆನಪುಗಳನ್ನು ಐ.ಎಂ. ವಿಠ್ಠಲ್ ಮೂರ್ತಿ ಹಂಚಿಕೊಂಡರು.
ಶುಭ ಹಾರೈಕೆ ನುಡಿಗಳನ್ನು ಆಗಿದ ಸಾಹಿತಿ ಡಾ||ಹಂ.ಪ.ನಾಗರಾಜಯ್ಯ ಅವರು ಸಹ ಸಾಹಿತ್ಯ, ಕೃತಿ ಮತ್ತು ಬರವಣಿಗೆಯ ತಿರುಳುಗಳ ಬಗ್ಗೆ ಮಾತನಾಡಿದರು. ಅಲ್ಲದೆ ಯಾವ ಜನ್ಮದ ಮೈತ್ರಿ? ಪುಸ್ತಕದ ಮುಖಪುಟಕ್ಕೆ ಬಳಸಲಾಗಿರುವ ಫೋಟೋ ಮತ್ತು ಆ ಮೂಲಕ ಪುಸ್ತಕದ ಮಹತ್ವ, ಪುಸ್ತಕ ಕೊಳ್ಳುವವರ ಮತ್ತು ಮಾರಾಟದ ಬಗೆಗಿನ ಸ್ವಾರಸ್ಯಕರವಾದ ಅನುಭವವನ್ನು ಹಂಚಿಕೊಂಡರು.
ನಿವೃತ್ತ ಪೊಲೀಸ್ ಅಧಿಕಾರಿ ಡಾ. ಅಜಯ ಕುಮಾರ ಸಿಂಘ್ ಮಾತನಾಡಿ : ‘ಚಿರಂಜೀವಿ ಸಿಂಘ್ ಅವರು ಪಂಜಾಬ ರಾಜ್ಯದಿಂದ ಬಂದಿದ್ದರೂ ಕನ್ನಡ ಸಾಹಿತ್ಯ, ಸಾಹಿತಿ, ಕಲಾವಿದರ ಪರಿಚಯವನ್ನು ಹೊಂದಿದ್ದಾರೆ. ಕನ್ನಡ ಸಾಹಿತ್ಯದ ಕುರಿತು ಅಧಿಕೃತ ಎಂಬಂತೆ ಮಾತನಾಡುವ ಅಭಿಮಾನದ ಸಂಗತಿ. ಕನ್ನಡದ ನೆಲದಲ್ಲಿದ್ದು, ಕನ್ನಡ ಕಲಿತು ಕನ್ನಡಿಗರಿಗೇ ಮಾದರಿಯಾಗುವ, ಪ್ರಾಮಾಣಿಕ ಬದುಕು ಅವರದ್ದಾಗಿದೆ. ನಿಷ್ಠುರ ಅಧಿಕಾರಿಯಾಗಿದ್ದರೂ ಚಿರಂಜೀವಿ ಸಿಂಘ್ ಅವರಲ್ಲಿ ಸುಂದರ ಚೇತನವಿದೆ. ಆದ್ದರಿಂದಲೇ, ಅವರು ತೆರೆದ ಮನಸ್ಸಿನವರಾಗಿರಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಶ್ರೀನಿವಾಸ ಜಿ.ಕಪ್ಪಣ್ಣ ಚಿರಂಜೀವಿ ಸಿಂಘ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಖಸ್ಥರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಇಲಾಖೆಯಿಂದ ಹಮ್ಮಿಕೊಂಡಂತ ನೂತನ ಯೋಜನೆಗಳ ಬಗ್ಗೆ ಅವರ ಕಾರ್ಯಶೈಲಿಯ ಬಗೆಗಿನ ವಿಚಾರಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಸೇರಿದಂತೆ ರಾಜ್ಯದ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳಾದ ಮದನಗೋಪಾಲ, ಜಯರಾಜ, ಡಾ. ರವಿಕಾಂತೇಗೌಡ, ಲೇಖಕ ಜಿ. ರಾಮಕೃಷ್ಣ, ಕೆ.ಇ.ರಾಧಾಕೃಷ್ಣ, ಸಿ.ಕೆ.ಗುಂಡಣ್ಣ ಸೇರಿದಂತೆ ಇತರು ಉಪಸ್ಥಿತರಿದ್ದರು. ಕುವೆಂಪು ವಿರಚಿತ ‘ಶಿವ ಕಾಣದ ಕಣ್ಣು ಕುರುಡು’ ಹಾಡನ್ನು ಎಚ್.ಕೆ.ಆರ್.ಪ್ರಶಾಂತ ಸುಶ್ರಾವ್ಯವಾಗಿ ಹಾಡಿದರು.