ಬೆಂಗಳೂರು ಫೆ 3: ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪ ಚಂದ್ರ ಶೆಟ್ಟಿ ವಿರುದ್ಧದ ಅವಿಶ್ವಾಸ ನಿರ್ಣಯವೂ ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಮಂಗಳವಾರ ರಾತ್ರಿ ಪಕ್ಷದ ಶಾಸಕರ ಜತೆ ಖಾಸಗೀ ಹೋಟೆಲ್ ನಲ್ಲಿ ಸುದೀರ್ಘ ಸಭೆ ನಡೆಸಿದ್ದಾರೆ.
ಬಹುತೇಕ ಶಾಸಕರು ಸಭೆಗೆ ಹಾಜರಾಗಿದ್ದರು. ಪರಿಷತ್ ಸಭಾಪತಿಯ ಪದಚ್ಯುತಿ, ನೂತನ ಸಭಾಪತಿಯ ಆಯ್ಕೆ, ವಿಧಾನಮಂಡಲ ಅಧಿವೇಶನದಲ್ಲಿ ತೆಗೆದುಕೊಳ್ಳಬುದಾದ ನಿಲುವುಗಳ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಸಭೆಗೂ ಮುನ್ನ ಮಾಧ್ಯಮದವರ ಜೊತೆ ಮಾತನಾಡಿದ ಕುಮಾರಸ್ವಾಮಿ, ‘ಸಭಾಪತಿ ಮತ್ತು ಉಪ ಸಭಾಪತಿ ಸ್ಥಾನದ ವಿಷಯದಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಅದು ನಾಡಿನ ಅಭಿವೃದ್ಧಿಗಾಗಿ ಬಿಜೆಪಿ ಜೊತೆ ಹೋಗುತ್ತಿರುವುದಾಗಿ ಎಚ್.ಡಿ.ಕೆ ಸ್ಪಷ್ಟಪಡಿಸದರು. ಗೋಹತ್ಯೆ ನಿಷೇಧ ಕಾಯ್ದೆಗೆ ನಮ್ಮ ವಿರೋಧವಿದೆ. ವಿಷಯಾಧಾರಿತವಾಗಿ ಬೆಂಬಲ ನೀಡುತ್ತೇವೆ’ ಎಂದರು.
ಸಿದ್ಧು ಗೆ ಟಾಂಗ್ : ‘ಪ್ರತಾಪಚಂದ್ರ ಶೆಟ್ಟಿ ಅವರಿಗೆ ಸಭಾಪತಿ ಸ್ಥಾನದಲ್ಲಿ ಮುಂದುವರಿಯಲು ಇಷ್ಟವಿಲ್ಲ. ಆದರೆ, ಕಾಂಗ್ರೆಸ್‌ನ ಒಂದು ಗುಂಪಿನ ನಾಯಕರ ಒತ್ತಡದಿಂದ ಮುಂದುವರಿದಿದ್ದಾರೆ. ಬಹುಮತ ಇಲ್ಲದೆಯೂ ನಾಚಿಕೆ ಬಿಟ್ಟು ಹುದ್ದೆಯಲ್ಲಿದ್ದಾರೆ. ಸಭಾಪತಿ ಚುನಾವಣೆಯಲ್ಲಿ ಬಿಜೆಪಿ ಜತೆ ಜೆಡಿಎಸ್ ಕೈ ಜೋಡಿಸಿರುವುದನ್ನು ಸಹಿಸಲು ಸಿದ್ದರಾಮಯ್ಯ ಅವರಿಗೆ ಸಾಧ್ಯವಾಗುತ್ತಿಲ್ಲ’ ಎಂದು ಕುಮಾರಸ್ವಾಮಿ ಟೀಕಿಸಿದರು.
ಮಾತೆತ್ತಿದರೆ ಜೆಡಿಎಸ್ ಪಕ್ಷ ಪಕ್ಷವೇ ಅಲ್ಲ ಎಂದು ದಿನಂಪತ್ರಿ ಮಾತನಾಡುತ್ತಾರೆ. ಪಕ್ಷ ಅಲ್ಲ ಎಂದಾದರೆ ಯಾಕೆ ಮಾತನಾಡುತ್ತೀರಿ? ನಮ್ಮ ಬಣ್ಣ ಬಯಲು ಮಾಡುವುದಕ್ಕಿಂತ ನಿಮ್ಮ ಬಣ್ಣ ಬಯಲಾಗುವುದು ಮುಖ್ಯ ಇದೆ. ಈಗಾಗಲೆ ನಿಮ್ಮ ಸಹವಾಸ ಮಾಡಿ ಒಬ್ಬ ಒಳ್ಳೆಯ ಗೆಳೆಯನನ್ನು ಕಳೆದುಕೊಂಡಿದ್ದೇನೆ.
ಜೆಡಿಎಸ್ ಸಣ್ಣ ಪ್ರಮಾಣದಲ್ಲಿ ಇರಬಹುದು. ಆದರೆ, ರಾಜ್ಯಕ್ಕೆ ಅನಿವಾರ್ಯ. ಅದೇ ಕಾರಣಕ್ಕಾಗಿ ತಮ್ಮ ಪಕ್ಷವನ್ನು ಜನರು ಇನ್ನೂ ಉಳಿಸಿದ್ದಾರೆ. ನಮಗೆ ಸಿದ್ದರಾಮಯ್ಯ ಅವರ ಪ್ರಮಾಣಪತ್ರ ಬೇಕಿಲ್ಲ ಎಂದು ಡಿಕೆಶಿ ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದರು.