ಬೆಂಗಳೂರು: ಜನಸಾಹಿತ್ಯ ಸಮ್ಮೇಳನದ ಚಂಪಾ ವೇದಿಕೆಯಲ್ಲಿ ಹಮ್ಮಿಕೊಂಡ ಪ್ರಮುಖ ವಿಚಾರ ಗೋಷ್ಟಿಯಾದ ಸಾಹಿತ್ಯ ಮತ್ತು ಪ್ರಭುತ್ವ ಮತ್ತು ಬಹುತ್ವದ ಬಗ್ಗೆ ವಿಷಯ ಮಂಡಿಸಿದ ಡಾ. ಮಹಮ್ಮದ್ ಮುಸ್ತಾಫಾ ಅವರು ಮಾತನಾಡಿ, ಟಿಪ್ಪು ತನ್ನನ್ನು ತಾನು ಸಾಮಾನ್ಯ ಮನುಷ್ಯ ಎಂದು ಕರೆಸಿಕೊಂಡ. ವಿಶ್ವದಲ್ಲಿ ತನ್ನನ್ನು ತಾನು ಸಾಮಾನ್ಯ ಎಂದು ಕರೆಸಿಕೊಂಡವ ಮೊದಲಿಗೆ ಟಿಪ್ಪು. ಕನ್ನಡದ ನೆಲಕ್ಕೆ ಕರ್ನಾಟಕ ಎನ್ನುವ ಹೆಸರನ್ನು ಕೊಟ್ಟವ ಟಿಪ್ಪು. ಆತನನ್ನು ನಂಬಿಕೆ ದ್ರೋಹಿ ಎನ್ನಲು ಸಾಧ್ಯವೇ. ಕಾವೇರಿ ನೀರಿನ್ನು ಸವಿಯುವ ಪ್ರತಿ ಹನಿಯಲ್ಲೂ ಟಿಪ್ಪು ಹೆಸರಿದೆ. ಟಿಪ್ಪು ಮುಸಲ್ಮಾನ ಎಂಬ ಕಾರಣಕ್ಕೆ ಆತನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಕೃಷ್ಣರಾಜ ಸಾಗರಕ್ಕೆ ಅಡಿಗಲ್ಲು ಹಾಕಿದ್ದು ಟಿಪ್ಪು. ಪೂರ್ಣಗೊಳಿಸಿದ್ದು ಮಿರ್ಜಾ ಇಸ್ಮಾಯಿಲ್ ಅವರು ಆಗಿದ್ದಾರೆ ಎಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಡಾ. ಮಹಮ್ಮದ್ ಮುಸ್ತಾಫಾ ಅವರು, ಕನ್ನಡದ ಮಣ್ಣಿಗೆ ರೇಷ್ಮೆಯನ್ನು ಪರಿಚಯಿಸಿದವನನ್ನು ಮರೆಯುತ್ತಿದ್ದೇವೆ. ಕನ್ನಡಿಗರಿಗೆ ರೇಷ್ಮೆಯನ್ನು ಪರಿಚಯ ಮಾಡಿಕೊಟ್ಟವರು ಟಿಪ್ಪು ಸುಲ್ತಾನ್. ಇಂದು ವಿಭಜಿಸುವ ಕೆಲಸಗಳು ಮಾಡಲಾಗುತ್ತಿದೆ ಎಂದು ಹೇಳಿದರು.
1347ರಲ್ಲೇ ಕನ್ನಡ ನೆಲದಲ್ಲಿ ಮುಸ್ಲಿಂ ದೊರೆಗಳ ಆಳ್ವಿಕೆ ಇತ್ತು. ರಾಜ ಮಹಾರಾಜರ ವಿವಾಹ ಕರೆಯೋಲೆಯಲ್ಲಿ ಪರ್ಶಿಯನ್ ಪ್ರಭಾವ ಕಾಣಬಹುದು. ಶೃಂಗೇರಿ ಪೀಠ ಕನ್ನಡ ಸಂಸ್ಕೃತಿಯ ಅಗ್ರಪೂಜೆ ನಡೆಸಿದ ಪೀಠ. ಮರಾಠ ಪುಂಡರ ಪಡೆ ಶೃಂಗೇರಿಗೆ ದಾಳಿ ಮಾಡಿ ವಜ್ರಾಭರಣಗಳನ್ನು ಅಪಹರಿಸಿ, ಸ್ವಾಮೀಜಿಯನ್ನು ಹತ್ಯೆ ಮಾಡಲು ಮುಂದಾದಾಗ ಆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಮುಸಲ್ಮಾನ ದೊರೆ ಟಿಪ್ಪುವಿಗೆ ಓಲೆ ಕಳುಹಿಸಲಾಗುತ್ತದೆ. ಮಠದ ನೆರವಿಗೆ ಬರಬೇಕು ಎಂದು ಹೇಳಲಾಗಿತ್ತು.
ಕನ್ನಡದ ಹೆಮ್ಮೆ ಟಿಪ್ಪು. ಪಠ್ಯದಿಂದ ಟಿಪ್ಪು ಹೆಸರನ್ನು ಅಳಿಸಿದ ಮಾತ್ರಕ್ಕೆ ಟಿಪ್ಪು ಸಾಧನೆ ಮರೆಯಾಗಲು ಸಾಧ್ಯವಿಲ್ಲ. ಮುಂದಿನ 25 ತಲೆಮಾರು ಬಂದರೂ ಟಿಪ್ಪು ಹೆಸರನ್ನು ಅಳಿಸಲು ಸಾಧ್ಯವಿಲ್ಲ . ಸ್ವಾರ್ಥಕ್ಕೆ ಸಮಾಜದ ವಿವೇಕವನ್ನು ಬಲಿಕೊಡಬೇಡಿ ಎಂದು ಹೇಳಿದರು.