ವಿಶಾಖಪಟ್ಟಣ ಉಕ್ಕು ಸ್ಥಾವರದ ಖಾಸಗೀಕರಣ ನಿಲ್ಲಿಸಿ – ಸಿಪಿಐ(ಎಂ) ಪೊಲಿಟ್‍ ಬ್ಯುರೊ

ಆಂಧ್ರ ಪ್ರದೇಶದ ಜನತೆಯ ದೀರ್ಘಹೋರಾಟ, 32 ಮಂದಿಯ ಪ್ರಾಣಾರ್ಪಣೆಯಿಂದ ನಿರ್ಮಾಣಗೊಂಡ ನವರತ್ನ ಕಂಪನಿಯಿದು.

ನವದೆಹಲಿ ಫೆ 10 : ರಾಷ್ಟ್ರೀಯ ಇಸ್ಪಾತ್ ನಿಗಮ ಲಿ.ನ 100ಶೇ. ಆಯಕಟ್ಟಿನ ಶೇರು ಹಿಂಪಡಿಕೆ ನಡೆಸುವ ಮೂಲಕ ಅದರ ಅಡಿಯಲ್ಲಿರುವ ಸಂಸ್ಥೆಯಾದ ವಿಶಾಖಪಟ್ಟಣ ಉಕ್ಕು ಸ್ಥಾವರ(ವಿ.ಎಸ್.ಪಿ.)ವನ್ನು ಖಾಸಗೀಕರಿಸುವ ಕೇಂದ್ರ ಸರಕಾರದ ನಿರ್ಧಾರಕ್ಕೆ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಬಲವಾದ ವಿರೋಧವನ್ನು ವ್ಯಕ್ತಪಡಿಸಿದೆ.

ವಿಶಾಖಪಟ್ಟಣ ಉಕ್ಕು ಸ್ಥಾವರ ಆಂಧ್ರಪ್ರದೇಶದ ಜನತೆಯ ದೀರ್ಘ ಹೋರಾಟದಿಂದ ರಚನೆಗೊಂಡ ಸಂಸ್ಥೆ. ಈ ಹೋರಾಟದಲ್ಲಿ 32 ಮಂದಿ ಪ್ರಾಣಾರ್ಪಣೆ ಮಾಡಿದ್ದಾರೆ. ಇದರಲ್ಲಿ ಸುಮಾರು 20,000 ಜನಗಳು ದುಡಿಯುತ್ತಿದ್ದಾರೆ, ಅಲ್ಲದೆ ವಿಶಾಖಪಟ್ಟಣ ನಗರದಲ್ಲಿ ಇದು ಇತರ ಪರೋಕ್ಷ ಉದ್ಯೋಗಾವಕಾಶಗಳನ್ನೂ ಸೃಷ್ಟಿಸಿದೆ.

ಇದು ಒಂದು ನವರತ್ನ ಕಂಪನಿ ಮತ್ತು ಭಾರತದ ಮೊದಲ ತಟ-ಆಧಾರಿತ ಸಮಗ್ರೀಕೃತ ಉಕ್ಕು ಸ್ಥಾವರವಾಗಿದೆ. 2015ರ ವರೆಗೂ ಲಾಭ ಮಾಡುತ್ತಿದ್ದ ಉದ್ದಿಮೆಯಾಗಿದ್ದ ಇದು, ನಂತರ ನೇರ ಹತೋಟಿಯ ಗಣಿಗಳ ಕೊರತೆ ಮುಂತಾದ ತಾರತಮ್ಯದ ಧೋರಣೆಗಳಿಂದಾಗಿ ತೊಂದರೆಗೊಳಗಾಗಿದೆ.
ಆಂಧ್ರಪ್ರದೇಶದ ಜನತೆ ವಿಶಾಖಪಟ್ಟಣ ಉಕ್ಕು ಸ್ಥಾವರದ ಖಾಸಗೀಕರಣಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದ್ದಾರೆ ಎಂದಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ, ಸರಕಾರ ಈ ಉಕ್ಕುಸ್ಥಾವರವನ್ನು ಖಾಸಗೀಕರಿಸುವ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು  ಮತ್ತು ಈ ಉದ್ದಿಮೆ ತನ್ನ ಪೂರ್ಣ ಸಾಮರ್ಥ್ಯವನ್ನು  ಹೊಂದುವಂತೆ ಇದನ್ನು ಪುನಶ್ಚೇತನಗೊಳಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
Donate Janashakthi Media

Leave a Reply

Your email address will not be published. Required fields are marked *