ಹಾವೇರಿ: ಬಿಜೆಪಿ ಶಾಸಕ ನೆಹರು ಓಲೇಕಾರ ಕುಟುಂಬದ ವಿರುದ್ಧ ದಬ್ಬಾಳಿಕೆ ನಡೆಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಶಿಡೇನೂರು ಗ್ರಾಮದ ನಾಲ್ವರು ದಲಿತರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪಾಂಡಪ್ಪ ಲಮಾಣಿ (70), ಗುರುಚಪ್ಪ ಲಮಾಣಿ (72), ಗಂಗವ್ವ ಕಬ್ಬೂರು (65), ಮತ್ತು ಹನುಮಂತಪ್ಪ ಬಡಿಗೇರ (41) ಇವರು ತಮ್ಮ ಜಮೀನಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಜಮೀನಿನ ವಿಚಾರವಾಗಿ ಶಾಸಕ ನೆಹರು ಓಲೇಕಾರನ ಪುತ್ರ ಶಿಡೇನೂರು ಗ್ರಾಮದ ನಿವಾಸಿಗಳ ಮೇಲೆ ದಬ್ಬಾಳಿಕೆ ನಡೆಸಿರುವ ಆರೋಪ ಕೇಳಿಬಂದಿದ್ದು, ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಮುಂದಾಗಿದ್ದಾರೆ. ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ನಾಲ್ವರನ್ನು ಬ್ಯಾಡಗಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶಿಡೇನೂರು ಗ್ರಾಮದ 29 ಕುಟುಂಬಗಳು ಅಕ್ರಮ ಸಕ್ರಮ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಸದ್ಯ ಶಾಸಕ ಹಾಗೂ ಅವರ ಪುತ್ರ ಮಂಜುನಾಥ್ ಸಾಗುವಳಿ ಮಾಡುತ್ತಿರುವ ಜಮೀನಿನಲ್ಲಿ ಪ್ರತಿ ಕುಟುಂಬವೂ ತಲಾ 15 ಗುಂಟೆ ಜಮೀನು ಬಿಟ್ಟುಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಆಸ್ಪತ್ರೆ ಎದುರು ಜಮಾಯಿಸಿದ ಗ್ರಾಮಸ್ಥರು ಓಲೇಕಾರ ವಿರುದ್ಧ ಘೋಷಣೆ ಕೂಗಿ ಅವರನ್ನು ಬಂಧಿಸುವಂತೆ ಆಗ್ರಹಿಸಿದರು.
ಒಟ್ಟಿನಲ್ಲಿ ಜಮೀನು ಬಿಟ್ಟುಕೊಡಲು ನಿರಾಕರಿಸಿದ್ದಕ್ಕೆ ಶಾಸಕರ ಕುಟುಂಬ ನಮ್ಮ ಮೇಲೆ ದಬ್ಬಾಳಿಕೆ ನಡೆತ್ತಿದೆ ಎಂದು ಕೆಲ ರೈತರು ಆರೋಪಿಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮ ಪಂಚಾಯತಿ ಸದಸ್ಯ ಕುಮಾರ ಗುರುಶಾಂತಪ್ಪ ಮಾತನಾಡಿ, ಸದರಿ ಜಮೀನನ್ನು ಕಳೆದ ಐದಾರು ದಶಕಗಳಿಂದ ಸ್ವತಃ ನಾವೇ ಉಳುಮೆ ಮಾಡುತ್ತಾ ಬಂದಿದ್ದೇವೆ. 2008ರಲ್ಲಿ ಹಕ್ಕುಪತ್ರ ಪಡೆದಿದ್ದೇವೆ. ಜಮೀನು ಉಳುಮೆ ಮಾಡಲು ನೆಹರು ಓಲೇಕಾರ ಕುಟುಂಬದವರು ಬಿಡುತ್ತಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರೇ ಓಲೇಕಾರ ಕುಟುಂಬಕ್ಕೆ ಬುದ್ಧಿವಾದ ಹೇಳಿ ದಲಿತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದಿದ್ದಾರೆ.
ಶಾಸಕ ನೆಹರು ಓಲೇಕಾರ ಮಾತನಾಡಿ, ನಾವೆ ಹೊಲ ಕೊಡಿಸಿದ್ವಿ, ನಾವ್ಯಾಕೆ ಅವರಿಗೆ ಕೇಳೋಣ. ನಾವ್ಯಾರಿಗೂ ಬಿಟ್ಟು ಕೊಡಲು ಹೇಳಿಲ್ಲ. ‘ಕೈ’ ಮುಖಂಡರೊಬ್ಬರ ಕುಮ್ಮಕ್ಕಿನಿಂದ ಹೀಗೆ ಆಗಿದೆ. ಊರಿನ ಅಭಿವೃದ್ಧಿ ಸಲುವಾಗಿ ಇಟ್ಟಿರುವ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ. ಅದಕ್ಕೆ ಊರಿನವರು ಅವಕಾಶ ಕೊಡುತ್ತಿಲ್ಲ ಎಂದರು.
ʻನಾನು ಜಮೀನಿನ ಪಟ್ಟಾ ಕೊಟ್ಟಾಗ 18ರಿಂದ 19 ಕುಟುಂಬಗಳಿತ್ತು. ಈಗ ಅವರ ಸಂಖ್ಯೆ ಜಾಸ್ತಿಯಾಗಿದೆ. ಹಿಂದೆ ಕೊಟ್ಟಿದ್ದ ಜಾಗದ ಜತೆಗೆ ಹೆಚ್ಚುವರಿ ಜಾಗವನ್ನು ಒತ್ತುವರಿ ಮಾಡಿದ್ದಾರೆ. ಒತ್ತುವರಿ ಮಾಡಿದ ಭೂಮಿ ತೆರವುಗೊಳಿಸುವಂತೆ ಗ್ರಾಮಸ್ಥರು ಅವರಿಗೆ ಸೂಚಿಸಿದ್ದಾರೆ. ಸ್ಮಶಾನದ ಭೂಮಿಯ ಹಿಂದೆ ಇರುವ ಜಾಗವನ್ನು ಆ ಕುಟುಂಬಗಳಿಗೆ ನೀಡಲಾಗಿತ್ತು’ ಎಂದು ತಿಳಿಸಿದ್ದಾರೆ.
ಜಮೀನು ಬಿಟ್ಟುಕೊಡದಿದ್ದಕ್ಕೆ ಗ್ರಾಮದಲ್ಲಿನ ಜನರು ಕೃಷಿಗೆ ಸಹಕಾರ ಕೊಡದಂತೆ ಮಾಡಿದ್ದಾರೆ. ಗ್ರಾಮದ ಶೇಖರಗೌಡ ಪಾಟೀಲ ಎಂಬುವರು ದಲಿತ ಕುಟುಂಬಗಳಿಗೆ ನೀಡಿರುವ ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದಾರೆ. ಮಂಜುನಾಥ್ ಅವರಿಗೆ ಬೆಂಬಲ ನೀಡಿದ್ದು, 15 ಗುಂಟೆ ಜಮೀನು ನೀಡುವಂತೆ ದಲಿತ ಕುಟುಂಬಗಳಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ನನ್ನ ಪಾತ್ರವಿಲ್ಲ
ಕಾಂಗ್ರೆಸ್ ಮುಖಂಡ ಎಸ್.ಆರ್.ಪಾಟೀಲ ಪ್ರತಿಕ್ರಿಯಿಸಿ, ‘ಶಾಸಕ ನೆಹರು ಓಲೇಕಾರ ಕುಟುಂಬದ ಸರ್ವಾಧಿಕಾರತ್ವ ಧೋರಣೆಯಿಂದಾಗಿ ಬಡವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನೊಂದ ಕುಟುಂಬದವರು ಕಳೆದ ವಾರ ನನ್ನನ್ನು ಭೇಟಿ ಮಾಡಿದ್ದರು. ತಹಶೀಲ್ದಾರ್ ಬಳಿ ನ್ಯಾಯ ಕೇಳುವಂತೆ ಸಲಹೆ ನೀಡಿದ್ದೆ. ಆತ್ಮಹತ್ಯೆ ಘಟನೆಗೂ ನನಗೂ ಸಂಬಂಧವಿಲ್ಲ. ಇದರಲ್ಲಿ ನನ್ನ ಪಾತ್ರವಿಲ್ಲ’ ಎಂದಿದ್ದಾರೆ.
ಏನಿದು ಘಟನೆ?:
ಸರ್ಕಾರವು ಬಡವರಿಗೆಂದು ಉಳುಮೆ ಮಾಡಿಕೊಳ್ಳಲು ಅಕ್ರಮ-ಸಕ್ರಮದ ಯೋಜನೆಯಡಿಯಲ್ಲಿ ಭೂಮಿ ನೀಡಿದೆ. ಶಿಡೇನೂರಿನ 29 ದಲಿತ ಕುಟುಂಬಗಳಿಗೆ ರಿ.ಸ.ನಂ.244 ಮತ್ತು 245 ರಲ್ಲಿ ಪ್ರತಿಯೊಬ್ಬರಿಗೆ 1.15 ಎಕರೆ ಭೂಮಿ ಮಂಜೂರಾಗಿದೆ. 23-11-2007ರಂದು ಪಟ್ಟಾ ನೀಡಿದ್ದಲ್ಲದೇ, 11-12-2008ರಂದು ಪಹಣಿ(ಉತಾರ) ವಿತರಣೆಯಾಗಿದೆ. ಸರ್ಕಾರ ನೀಡಿದ ಜಾಗದಲ್ಲಿ ನೆಮ್ಮದಿಯಿಂದ ಉಳುಮೆ ಮಾಡುಕೊಂಡಿದ್ದ ಕುಟುಂಬಗಳಿಗೆ ಪ್ರಸಕ್ತ ಸಾಲಿನ ಮುಂಗಾರು ಆರಂಭದಿಂದಲೇ ಶಾಸಕ ನೆಹರು ಓಲೇಕಾರ ಪುತ್ರ ಮಂಜುನಾಥ ಓಲೇಕಾರ ತಕರಾರು ಮಾಡುತ್ತಾ ಬಂದಿದ್ದರು. ಮಂಗಳವಾರ(ಜೂನ್ 14)ವೂ ಮಂಜುನಾಥ ತಕರಾರು ತೆಗೆದಿದ್ದರಿಂದ ನಾಲ್ಕು ಜನರ ಆತ್ಮಹತ್ಯೆ ಯತ್ನಕ್ಕೆ ಕಾರಣವೆನ್ನಲಾಗುತ್ತಿದೆ.
ಅನಧಿಕೃತ ಬಣವೆ-ಮನೆ ನಿರ್ಮಾಣ
ದಲಿತರ ಕೃಷಿ ಭೂಮಿಗಳಲ್ಲಿ ಹಳೇ ಶಿಡೇನೂರಿನ ಶೇಖರಗೌಡ ಪಾಟೀಲ ಅನ ಧಿಕೃತವಾಗಿ ಬಣವೆ ನಿರ್ಮಿಸಿದ್ದಲ್ಲದೇ, ಮನೆ ನಿರ್ಮಾಣಕ್ಕೆ ಮಂದಾಗಿದ್ದಾರೆ. ಇದಕ್ಕೆ ಶಾಸಕರ ಪುತ್ರ ಮಂಜುನಾಥ ಓಲೇಕಾರ ಕುಮ್ಮಕ್ಕಿದೆ ಎಂದು ಪ್ರತಿಭಟನಾನಿರತ ದಲಿತ ಕುಟುಂಬಗಳು ಆರೋಪಿಸಿವೆ.