ಪಶ್ಚಿಮ ಕಾಂಗೋ: ಜಗತ್ತು ಈಗಾಗಲೇ ಕೊರೊನಾ ಸೇರಿದಂತೆ ಹಲವು ಸಾಂಕ್ರಾಮಿಕ ರೋಗಗಳ ಭೀತಿಯನ್ನು ಕಂಡಿದೆ. ಆದರೆ ಇದೀಗ ಪಶ್ಚಿಮ ಕಾಂಗೋದಲ್ಲಿ ಹೊಸ ರೀತಿಯ ಸಾಂಕ್ರಾಮಿಕ ರೋಗ ತಲೆ ಎತ್ತಿದ್ದು, ಕಳೆದ 48 ಗಂಟೆಗಳಲ್ಲಿ 50 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಈ ರೋಗದ ಬಗ್ಗೆ ವೈದ್ಯರು ಇನ್ನೂ ಸ್ಪಷ್ಟ ಮಾಹಿತಿ ನೀಡದಿರುವುದು ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ. ಐದು ವಾರಗಳ ಹಿಂದೆ ಬಾವಲಿ ಮಾಂಸ ಸೇವಿಸಿದ ಮೂವರು ಮಕ್ಕಳಲ್ಲಿ ಮೊದಲು ಕಂಡುಬಂದ ಈ ರೋಗ ಹಲವು ಜನರಿಗೆ ವ್ಯಾಪಿಸಿದೆ.
ಇದನ್ನು ಓದಿ:ಪೊಲೀಸ್ ಠಾಣೆಯಿಂದ ಕೇವಲ 100 ಮೀಟರ್ ದೂರದಲ್ಲಿ ನಿಲ್ಲಿಸಿದ್ದ ಬಸ್ಸಿನೊಳಗೆ ಪುಣೆಯ ಮಹಿಳೆ ಮೇಲೆ ಅತ್ಯಾಚಾರ
ಜ್ವರ, ವಾಂತಿ, ಆಂತರಿಕ ರಕ್ತಸ್ರಾವ ಈ ರೋಗದ ಲಕ್ಷಣಗಳೆಂದು ಹೇಳಲಾಗಿದೆ. ಈ ರೋಗದ ಲಕ್ಷಣಗಳು ಕಾಣಿಸಿಕೊಂಡ 48 ಗಂಟೆಗಳ ಒಳಗೆ ಸಾವು ಸಂಭವಿಸುತ್ತಿದೆ ಎಂದು ಬಿಕೊರೊ ಆಸ್ಪತ್ರೆಯ ನಿರ್ದೇಶಕರು ತಿಳಿಸಿದ್ದಾರೆ. ಸಾಮಾನ್ಯವಾಗಿ ರಕ್ತಸ್ರಾವ ಜ್ವರದ ರೋಗಲಕ್ಷಣಗಳು ಎಬೋಲಾ, ಡೆಂಗ್ಯೂ, ಮಾರ್ಬರ್ಗ್, ಹಳದಿ ಜ್ವರದಂತಹ ರೋಗಗಳ ಲಕ್ಷಣಗಳ ಜೊತೆ ಸಂಬಂಧ ಹೊಂದಿದೆ. ಆದರೆ ಸಂಗ್ರಹಿಸಲಾದ ಮಾದರಿಗಳನ್ನು ಪರೀಕ್ಷಿಸಿದಾಗ ಈ ಯಾವುದೇ ರೋಗಗಳೂ ಇರುವುದು ದೃಢಪಟ್ಟಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಜನವರಿ 21 ರಿಂದ ಈ ರೋಗ ಹರಡುತ್ತಿದ್ದು, ಈವರೆಗೆ 419 ಪ್ರಕರಣಗಳು ದಾಖಲಾಗಿವೆ ಮತ್ತು 53 ಜನರು ಸಾವನ್ನಪ್ಪಿದ್ದಾರೆ.
ಬೊಲೊಕೊ ಗ್ರಾಮದಲ್ಲಿ ಬಾವಲಿ ತಿಂದ ಮೂರು ಮಕ್ಕಳ ಸಾವಿನ ನಂತರ ಈ ರೋಗ ಬೆಳಕಿಗೆ ಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ನಂತರ ಬೊಮೇಟ್ ಗ್ರಾಮದಲ್ಲಿ ಹರಡಿದ ಈ ನಿಗೂಢ ಕಾಯಿಲೆಯ ಬಗ್ಗೆ ಹೆಚ್ಚಿನ ಪರೀಕ್ಷೆ ನಡೆಸಲಾಗುತ್ತಿದೆ. 13 ಜನರ ರಕ್ತದ ಮಾದರಿಗಳನ್ನು ಕಿನ್ಶಾಸಾದಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೆಲವು ಮಾದರಿಗಳು ಮಲೇರಿಯಾ ಸೋಂಕು ಇರುವುದನ್ನು ತೋರಿಸಿವೆಯಾದರೂ, ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ರೋಗವನ್ನು ಸಮಯಕ್ಕೆ ಸರಿಯಾಗಿ ತಡೆಯದಿದ್ದರೆ ಮತ್ತಷ್ಟು ಜನರಿಗೆ ಹರಡುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.