ಬೆಂಗಳೂರು, ಜ.02 : ರಾಜ್ಯದ ರೈತರು ಹಾಗೂ ಪ್ರತಿಪಕ್ಷಗಳ ವಿರೋಧದ ಮಧ್ಯೆಯು ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ರಾಜ್ಯಪಾಲರು ಅಂಕಿತದೊಂದಿಗೆ ಅಂಗೀಕಾರಗೊಂಡಿದೆ ಎಂದು ರಾಜ್ಯಪತ್ರ ಪ್ರಕಟಿಸಲಾಗಿದೆ.
‘ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಅಧಿನಿಯಮ-2020’ಕ್ಕೆ ರಾಜ್ಯಪಾಲರು ಸಹಿ ಹೊಂದಿಗೆ ಒಪ್ಪಿಗೆ ನೀಡಿದ್ದಾರೆ. 1966ರ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಮಾಡಿದ್ದು, ಎಪಿಎಂಸಿ ಪ್ರಾಂಗಣ ಮತ್ತು ಉಪ ಮಾರುಕಟ್ಟೆ ಪ್ರಾಂಗಣಗಳಲ್ಲಿ ಅಧಿಸೂಚಿತ ಕೃಷಿ ಉತ್ಪನ್ನಗಳ ಮಾರಾಟ ನಿಯಂತ್ರಣಕ್ಕೆ ಕಾಯ್ದೆ ರೂಪಿಸಲಾಗಿದೆ ಎಂದು ಹೇಳಲಾಗಿದೆ.
ವರ್ತಕರು ನೇರವಾಗಿ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸಲು ಅವಕಾಶ ಕಲ್ಪಿಸಲು ಮತ್ತು ಎಪಿಎಂಸಿ ಪ್ರಾಂಗಣಗಳ ಹೊರಗೆ ನಡೆಯುವ ಕೃಷಿ ಉತ್ಪನ್ನಗಳ ಮಾರಾಟದ ಮೇಲೆ ಸೆಸ್ ವಿಧಿಸುವುದನ್ನು ರದ್ದುಗೊಳಿಸುವ ತಿದ್ದುಪಡಿಯನ್ನು ಈ ಕಾಯ್ದೆಯಲ್ಲಿ ಸೇರಿಸಲಾಗಿದೆ.
ಆದರೆ ಈ ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಕೃಷಿ ಉತ್ಪನ್ನಗಳ ಮಾರಾಟಕ್ಕೆ ತೊಂದರೆಯಾಗಲಿದ್ದು, ಮಾರುಕಟ್ಟೆಗೆ ಖಾಸಗಿ ಕಂಪೆನಿಗಳು ಲಗ್ಗೆಯಿಡುವುದರಿಂದ ರೈತರಿಗೆ ನಷ್ಟವಾಗಲಿದೆ ಎಂದು ಆರೋಪಿಸಿ ರೈತರು 16 ದಿನಗಳ ಕಾಲ ಬೆಂಗಳೂರಿನ ಮೌರ್ಯ ವೃತ್ತದ ಬಳಿ ರೈತರು ಪ್ರತಿಭಟನೆ ನಡೆಸಿದ್ದರು.
ಮಾತು ತಪ್ಪಿದ ರಾಜ್ಯಪಾಲರು ಕೆ.ಪಿ. ಆರ್.ಎಸ್. ಆರೋಪ : ರಾಜ್ಯಪಾಲರ ನಡೆಗೆ ಕೆ.ಪಿ.ಆರ್. ಎಸ್ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯಪಾಲರು ಮಾತಿಗೆ ತಪ್ಪಿದ್ದಾರೆ ಎಂದು ಆರೋಪಿಸಿದೆ. ಸರಕಾರ ಹಾಗೂ ರಾಜ್ಯಪಾಲರ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ಕರ್ನಾಟಕ ಪ್ರಾಂತರೈತ ಸಂಘ ಎಚ್ಚರಿಕೆ ನೀಡಿದೆ.
ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಆಗುವ ಸಂಕಷ್ಟಗಳ ಕುರಿತು ರೈತರು ರಾಜ ಭವನ ಚಲೋ ನಡೆಸಿದಾಗ ರಾಜ್ಯ ಪಾಲ ವಜುಭಾಯಿ ವಾಲಾ ರೈತರ ಮಾತುಗಳಿಗೆ ಸಮ್ಮತಿಯನ್ನು ಸೂಚಿಸಿ ನಾನು ಇದಕ್ಕೆ ಸಹಿಹಾಕುವುದಿಲ್ಲ ಎಂದಿದ್ದರು. ಸರಕಾರದ ಜೊತೆ ಚರ್ಚಿಸಿ, ನಿಮ್ಮ ಜೊತೆ ಮಾತನಾಡಿ ಅಂತಿಮ ನಿರ್ಧಾರಕ್ಕೆ ಬರೋಣ ಎಂದಿದ್ದರು. ಈಗ ಮಾತು ತಪ್ಪಿದ್ದಾರೆ. ಸರಕಾರವೂ ನಮ್ಮನ್ನು ಕೈಬಿಟ್ಟಿತ್ತು, ರಾಜ್ಯಪಾಲರಾದರೂ ನಮ್ಮನ್ನು ಕೈ ಹಿಡಿಯುತ್ತಾರೆ ಎಂದು ಕೊಂಡಿದ್ದೆವು ಆದರೆ ಅವರು ಕೇಶವಕೃಪದ ಮಾತುಗಳಿಗೆ ಸಮ್ಮತಿಸಿ ಸಹಿ ಹಾಕಿದ್ದಾರೆ. – ಜಿ.ಸಿ.ಬಯ್ಯಾರೆಡ್ಡಿ, ರಾಜ್ಯಾಧ್ಯಕ್ಷರು ಕರ್ನಾಟಕ ಪ್ರಾಂತ ರೈತ ಸಂಘ