ನವದೆಹಲಿ: ಐಸಿಸಿ ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಹೀನಾಯ ಪ್ರದರ್ಶನ ನೀಡಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ. ಈ ನಡುವೆ ಇದೇ ನೆಪವನ್ನು ಮುಂದಿಟ್ಟುಕೊಂಡು ವಿಕೃತರು ಸಾಮಾಜಿಕ ಮಾಧ್ಯಮದ ಮೂಲಕ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯ ಮಗಳಿಗೆ ಅತ್ಯಾಚಾರದ ಬೆದರಿಕೆ ಹಾಕಿರುವ ಘಟನೆಯೊಂದು ನಡೆದಿದೆ.
ಬೆದರಿಕೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸಿನ ಸೈಬರ್ ಅಪರಾಧ ವಿಭಾಗದಲ್ಲಿ ಪ್ರಕರಣವನ್ನು ದಾಖಲಿಕೊಂಡಿರುವ ವಿವರವಾದ ಮಾಹಿತಿಯನ್ನು ಸಲ್ಲಿಸುವಂತೆ ದೆಹಲಿ ಮಹಿಳಾ ಆಯೋಗವು ಪತ್ರವನ್ನು ಬರೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಮೊಕದ್ದಮೆ ವಿವರಗಳು, ಆರೋಪಿಯ ವಿವರ, ಆರೋಪಿಯನ್ನು ಬಂಧಿಸಲು ಪೊಲೀಸರು ಕೈಗೊಂಡಿರುವ ಕ್ರಮಗಳ ಬಗೆಗಿನ ವಿಸ್ತೃತವಾದ ವರದಿಯನ್ನು ನವೆಂಬರ್ 8ರ ಒಳಗೆ ಸಲ್ಲಿಸುವಂತೆ ದೆಹಲಿ ಮಹಿಳಾ ಆಯೋಗವು ತಿಳಿಸಿದೆ.
ವಿಶ್ವ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಸೋಲು ಕಂಡಿದ್ದಕ್ಕೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಒಂಭತ್ತು ತಿಂಗಳ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಲಾಗುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ.
ಅಕ್ಟೋಬರ್ 24 ರಂದು ಪಾಕಿಸ್ತಾನ್ ವಿರುದ್ದದ ಪಂದ್ಯದಲ್ಲಿ ಭಾರತ 10 ವಿಕೆಟ್ಗಳ ಅಂತರದಿಂದ ಹೀನಾಯವಾಗಿ ಸೋಲನುಭವಿಸಿತ್ತು. ಈ ಪಂದ್ಯದ ಮೊಹಮ್ಮದ್ ಶಮಿ ವಿರುದ್ದ ಕಿಡಿಗೇಡಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕೋಮು ದಾಳಿ ನಡೆಸಿದ್ದರು. ಈ ಬಗ್ಗೆ ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ಸೆಹ್ವಾಗ್ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿ ಮೊಹಮ್ಮದ್ ಶಮಿ ಪರವಾಗಿ ನಿಂತಿದ್ದರು.
ಇದಾದ ಬಳಿಕ ನ್ಯೂಜಿಲೆಂಡ್ ವಿರುದ್ದದ ಪಂದ್ಯ ಆರಂಭಕ್ಕೂ ಮೊದಲು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇದೇ ವಿಷಯವನ್ನು ಪ್ರಸ್ತಾಪಿಸಿ ಶಮಿ ವಿರುದ್ದದ ಕೋಮು ನಿಂದನೆಯನ್ನು ಖಂಡಿಸಿದರು. ಒಂದು ಧರ್ಮವನ್ನು ಗುರಿಯಾಗಿಸಿ ಆಕ್ರಮಣ ಮಾಡುವುದು ಒಬ್ಬ ಮನುಷ್ಯ ಮಾಡಬಹುದಾದ ಅತ್ಯಂತ ಹೀನಾಯ ಕೃತ್ಯ. ಏಕೆಂದರೆ ಧರ್ಮ ಎಂಬುದು ಅತ್ಯಂತ ಪವಿತ್ರ ಮತ್ತು ವೈಯಕ್ತಿಕ ವಿಷಯವಾಗಿದೆ. ಯಾವುದೇ ವ್ಯಕ್ತಿಯನ್ನು ಅವರ ಧರ್ಮದ ಆಧಾರದ ಮೇಲೆ ಗುರಿಯಾಗಿಸಬಾರದು ಎಂದು ವಿರಾಟ್ ಕೊಹ್ಲಿ ಸ್ಪಷ್ಟವಾಗಿ ಹೇಳಿದರು.
ಅಷ್ಟೇ ಅಲ್ಲದೆ ಮೊಹಮ್ಮದ್ ಶಮಿ ಭಾರತ ತಂಡದ ಪ್ರಮುಖ ಭಾಗ. ಅವರು ಭಾರತಕ್ಕಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಇಂತಹ ಟೀಕೆಗಳನ್ನು ಮಾಡುವವರಿಗಾಗಿ ನನ್ನ ಸಮಯವನ್ನು ವ್ಯರ್ಥ ಮಾಡಲು ನಾನು ಬಯಸುವುದಿಲ್ಲ. ನಾವು ಶಮಿ ಜೊತೆ ಶೇಕಡಾ 200 ರಷ್ಟು ನಿಲ್ಲುತ್ತೇವೆ. ತಂಡದಲ್ಲಿನ ನಮ್ಮ ಸಹೋದರತ್ವವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದರು.
ವಿರಾಟ್ ಕೊಹ್ಲಿ ವಿರುದ್ದ ತಿರುಗಿದ್ದಾರೆ. ಅನ್ಯಧರ್ಮೀಯನ ಪರ ನಿಂತಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಕೊಹ್ಲಿಯ ಮಗುವಿನ ಮೇಲೆ ಅತ್ಯಾಚಾರ ಎಸೆಗುವುದಾಗಿ ಬೆದರಿಕೆಗಳ ಸಂದೇಶವನ್ನು ಹಾಕಿದ್ದಾರೆ.