ಇಂಫಾಲ್: ಕೋಮು ಉದ್ವಿಗ್ನ ಮಣಿಪುರದಲ್ಲಿ ಬುಧವಾರ ಮತ್ತೆ ಹಿಂಸಾಚಾರ ನಡೆದಿದೆ. ರಾಜ್ಯದ ಮ್ಯಾನ್ಮಾರ್ ಗಡಿ ಪ್ರದೇಶವಾದ ಮೊರೆಹ್‌ನಲ್ಲಿ ಶಂಕಿತ ಶಸ್ತ್ರಸಜ್ಜಿತ ಉಗ್ರರು ನಡೆಸಿದ ದಾಳಿಯಲ್ಲಿ ರಾಜ್ಯದ ಪೊಲೀಸ್ ಕಮಾಂಡೋ ಒಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘರ್ಷಣೆಯಲ್ಲಿ ಬುಡಕಟ್ಟು ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗಾಯಗೊಂಡ ಮೂವರು ಪೊಲೀಸರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಭದ್ರತಾ ಸಿಬ್ಬಂದಿ ಪ್ರಯತ್ನಿಸಿದಾಗ, ಮಹಿಳೆಯರು ಸೇರಿದಂತೆ ಕೆಲವು ಆದಿವಾಸಿಗಳು ಅವರನ್ನು ತಡೆದಿದ್ದು ಪಡೆಗಳೊಂದಿಗೆ ಘರ್ಷಣೆ ನಡೆಸಿದ್ದಾರೆ ಎಂದು ವರದಿಯಾಗಿದೆ. ರಾಜ್ಯದ ರಾಜಧಾನಿ ಇಂಫಾಲ್‌ನಿಂದ 110 ಕಿಮೀ ದೂರದಲ್ಲಿರುವ ಮೊರೆಹ್‌ನಲ್ಲಿ ಈ ಘಟನೆ ನಡೆದಿದೆ.
ತೆಂಗನೌಪಾಲ್ ಜಿಲ್ಲೆಯ ಮೊರೆಹ್‌ನಲ್ಲಿ ಉಗ್ರರನ್ನು ಬಂಧಿಸಲು ವಿವಿಧ ವಾಹನಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಭದ್ರತಾ ಪಡೆಗಳ ಮೇಲೆ ಶಂಕಿತ ಉಗ್ರರು ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸ್ ಕಮಾಂಡೋ ವಾಂಗ್‌ಖೇಮ್ ಸೊಮೊರ್ಜಿತ್ ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಇಂಫಾಲ್‌ನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಸೊಮೊರ್ಜಿತ್ ಇಂಫಾಲ್ ಪಶ್ಚಿಮ ಜಿಲ್ಲೆಯ ಮಾಲೋಮ್ ಪ್ರದೇಶವರಾಗಿದ್ದಾರೆ.
ಇದನ್ನೂ ಓದಿ: ದೇಶದ ಪ್ರಮುಖ ನೀತಿ ಸಂಶೋಧನಾ ಸಂಸ್ಥೆ ‘ಸಿಪಿಆರ್’ನ ‘ಎಫ್‌ಸಿಆರ್‌ಎ’ ಪರವಾನಗಿ ರದ್ದು!
ಬುಧವಾರ ಬೆಳಗ್ಗೆಯಿಂದ ಮೊರೆಹ್ ಪ್ರದೇಶದ ಮೂರು ವಿಭಿನ್ನ ಸ್ಥಳಗಳಲ್ಲಿ ಭದ್ರತಾ ಪಡೆಗಳು ಮತ್ತು ಶಂಕಿತ ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಗ್ರರು ಭದ್ರತಾ ಪಡೆಗಳ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ ಶೆಲ್‌ಗಳನ್ನು ಸಹ ಹಾರಿಸಿದ್ದಾರೆ ಎನ್ನಲಾಗಿದೆ.
ಗಡಿ ಪ್ರದೇಶಗಳಲ್ಲಿ ಉದ್ವಿಗ್ನತೆ ಹೆಚ್ಚಿದ್ದು, ಅಸ್ಸಾಂ ರೈಫಲ್ಸ್ ಸೇರಿದಂತೆ ಹೆಚ್ಚುವರಿ ಭದ್ರತಾ ಪಡೆಗಳು ಪರಿಸ್ಥಿತಿಯನ್ನು ತಣಿಸಲು ಪ್ರದೇಶಗಳಿಗೆ ಧಾವಿಸಿವೆ. ಹೊಸ ಹಿಂಸಾಚಾರದ ಹಿನ್ನೆಲೆ ಜಿಲ್ಲಾಡಳಿತ ಮಂಗಳವಾರ ಮಧ್ಯಾಹ್ನದಿಂದ ತೆಂಗನೌಪಾಲ್ ಜಿಲ್ಲೆಯಲ್ಲಿ ಸಂಪೂರ್ಣ ಕರ್ಫ್ಯೂ ವಿಧಿಸಿದೆ.
“ತೆಂಗನೌಪಾಲ್ ಜಿಲ್ಲೆಯ ಕಂದಾಯ ವ್ಯಾಪ್ತಿಯಲ್ಲಿ ಶಾಂತಿ ಭಂಗ, ಸಾರ್ವಜನಿಕ ನೆಮ್ಮದಿಯ ಭಂಗ ಮತ್ತು ಮಾನವ ಜೀವ ಮತ್ತು ಆಸ್ತಿಗೆ ಗಂಭೀರ ಅಪಾಯ ಆಗುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಂಪೂರ್ಣ ಕರ್ಫ್ಯೂ ವಿಧಿಸಲಾಗಿದೆ” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ದ್ವೇಷ ಭಾಷಣ ದಾಖಲಿಸುವ ‘ಹಿಂದುತ್ವ ವಾಚ್’ ಟ್ವಿಟರ್ ಖಾತೆ ತಡೆ ಹಿಡಿದ ಮೋದಿ ಸರ್ಕಾರ!
ಮೋರೆಹ್ ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ರಾಜ್ಯದ ಅತ್ಯಂತ ಹಳೆಯ ಮತ್ತು ಪ್ರಮುಖ ವ್ಯಾಪಾರಿ ಪಟ್ಟಣವಾಗಿದೆ. ಇದು ಮ್ಯಾನ್ಮಾರ್‌ನ ಅತಿದೊಡ್ಡ ಗಡಿ ಪಟ್ಟಣವಾದ ತಮುವಿನ ಪಶ್ಚಿಮಕ್ಕೆ ಕೇವಲ ನಾಲ್ಕು ಕಿಮೀ ಮತ್ತು ಇಂಫಾಲ್‌ನ ದಕ್ಷಿಣಕ್ಕೆ 110 ಕಿಮೀ ದೂರದಲ್ಲಿದೆ. ಕುಕಿ, ಮೈತೇಯಿ, ನಾಗಾ, ತಮಿಳು, ಪಂಗಲ್ (ಮುಸ್ಲಿಂ), ಗೂರ್ಖಾ, ಸಿಖ್ ಮತ್ತು ಇತರ ಸಮುದಾಯಗಳ ಜನರು ಮೋರೆಹ್‌ನಲ್ಲಿ ದಶಕಗಳಿಂದ ಶಾಂತಿ ಮತ್ತು ಸಾಮರಸ್ಯದಿಂದ ವಾಸಿಸುತ್ತಿದ್ದಾರೆ.
ಈ ಮಧ್ಯೆ, ಅಕ್ಟೋಬರ್‌ನಲ್ಲಿ ಉಪವಿಭಾಗೀಯ ಪೊಲೀಸ್ ಅಧಿಕಾರಿ ಚಿಂಗ್ತಮ್ ಆನಂದ್ ಕುಮಾರ್ ಅವರನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿಯ ನಾಯಕ ಹೇಮಖೋಲಾಲ್ ಮೇಟ್ (36) ಮತ್ತು ಸೇನೆಯ ಮಾಜಿ ಸೈನಿಕ ಫಿಲಿಪ್ ಖೈಖೋಲಾಲ್ ಖೋಂಗ್ಸಾಯಿ (49) ಅವರನ್ನು ಸೋಮವಾರ ರಾತ್ರಿ ಮೋರೆಹ್‌ನಿಂದ ಬಂಧಿಸಲಾಗಿದೆ.
ಇಬ್ಬರ ಬಂಧನದ ನಂತರ, ಮಂಗಳವಾರ ಗಡಿ ಪಟ್ಟಣದ ಬುಡಕಟ್ಟು ಜನರು ಅವರ ಬಿಡುಗಡೆಗೆ ಒತ್ತಾಯಿಸಿದ್ದು, ಇಂಫಾಲ್ ಕಣಿವೆಯ ಜನರು ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಹಸ್ತಾಂತರಿಸುವಂತೆ ಮತ್ತು ಬಂಧಿತರಿಗೆ ಅನುಕರಣೀಯ ಶಿಕ್ಷೆಯನ್ನು ನೀಡುವಂತೆ ಒತ್ತಾಯಿಸಿ ವ್ಯಾಪಕ ಪ್ರತಿಭಟನೆ ನಡೆಸಿದ್ದಾರೆ.
ಡಿಸೆಂಬರ್ 30 ರಿಂದ ಮೊರೆಹ್‌ನಲ್ಲಿ ಶಂಕಿತ ಕುಕಿ ಉಗ್ರಗಾಮಿಗಳು ನಡೆಸಿದ ವಿವಿಧ ದಾಳಿಗಳಲ್ಲಿ ಕನಿಷ್ಠ 10 ಮಣಿಪುರ ಪೊಲೀಸ್ ಕಮಾಂಡೋಗಳು ಮತ್ತು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸೈನಿಕರು ಗಾಯಗೊಂಡಿದ್ದಾರೆ.
ವಿಡಿಯೊ ನೋಡಿ: ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಆಧಾರ್ ಆಧಾರಿತ ವೇತನ : ಮೋದಿ ಸರ್ಕಾರದ ಕ್ರೂರ ಉಡುಗೊರೆ Janashakthi Media