ರೋಹಿತ್‌ ವೇಮುಲ : ಬ್ರಾಹ್ಮಣವಾದಿ ವ್ಯವಸ್ಥೆ ಪಡೆದ ಬಲಿ

ಗುರುರಾಜ ದೇಸಾಯಿ 
ಜನವರಿ 17 ಪ್ರತಿಭಾವಂತ ರೋಹಿತ್ ವೆಮುಲಾ ಮತೀಯವಾದಿಗಳ ಕೃತ್ಯಕ್ಕೆ ಬಲಿಯಾಗಿ ಶೈಕ್ಷಣಿಕ ಹತ್ಯೆಯಾದ ಕರಾಳ ದಿನ.ಜೀವಗಳನ್ನು ಉಳಿಸಬೇಕು, ರಕ್ಷಿಸಬೇಕು,  ಶೋಷಣಾ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಂಶೋಧನೆ ನಡೆಸಿದ್ದ ಮಹಾನ್ ನಕ್ಷತ್ರ. ರೋಹಿತ್ ವೆಮೆಲಾ ಇಗ ನಮ್ಮ ಜೊತೆ ಇಲ್ಲದಿದ್ದರೂ ಸಾವಿರಾರು ರೋಹಿತ್ ವೆಮುಲಾರನ್ನು ಚಳುವಳಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹುಟ್ಟು ಹಾಕಿದ ಸ್ಪೂರ್ತಿಯ ಚಿಲುಮೆ.

ಹೈದ್ರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿನ ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿದ್ದ ವೇಮುಲ, ಜಾತಿದಮನದ ವಿರುದ್ಧ ದನಿಯೆತ್ತಿದ್ದರು. ದಲಿತರ ಆಹಾರವನ್ನು ಕಸಿಯತೊಡಗಿದ್ದ ವ್ಯವಸ್ಥೆಯ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡಲಾರಂಭಿಸಿದ್ದರು. ದಲಿತ ವಿದ್ಯಾರ್ಥಿಗಳನ್ನು ಅನ್ಯಾಯದ ವಿರುದ್ಧ ಸಂಘಟಿಸುವ ಕೆಲಸದಲ್ಲಿದ್ದರು. ಇದು ಹಿಂದೂರಾಷ್ಟ್ರದ ಕನಸನ್ನು ಕಂಡಿದ್ದವರ ಕಣ್ಣನ್ನು ಕೆಂಪಾಗಿಸಿತ್ತು. ಅದಕ್ಕಾಗಿ ಅವರು ಸಂಚು ರೂಪಿಸಿದರು. ಅದಕ್ಕಾಗಿ ಅವರದ್ದೆ ವಿದ್ಯಾರ್ಥಿ ಘಟಕವಾದ ಎಬಿವಿಪಿಯನ್ನು ಚೂ ಬಿಟ್ಟರು. ನ್ಯಾಯಕ್ಕಾಗಿ ವೇಮುಲ ಅವರು ಹೋರಾಡುತ್ತಿದ್ದರೆ, ಅದನ್ನು ದಮನಿಸಲೆಂದು ಹಠ ತೊಟ್ಟಂತಿದ್ದ ಎಬಿವಿಪಿಯ ಜೊತೆ ಈ ದೇಶದ ರಾಜಕಾರಣವೂ ಸೇರಿಕೊಂಡಿತು. ದಲಿತ ಸಮುದಾಯದ ಆತ್ಮವಿಶ್ವಾಸ ಕುಂದಿಸುವ ಅಡ್ಡದಾರಿಗಳು ಅಲ್ಲಿದ್ದವು. ಅದೆಲ್ಲವನ್ನೂ ವೇಮುಲ ಪ್ರತಿಭಟಿಸುತ್ತಲೇ ಬಂದರು. ಅದಕ್ಕಾಗಿ ಅವರು ಆರೋಪಗಳನ್ನು ಎದುರಿಸಬೇಕಾಯಿತು. ಕೋಮು ರಾಜಕಾರಣವು ದೇಶದ್ರೋಹದ ಪಟ್ಟವನ್ನು ಅವರಿಗೆ ಕಟ್ಟಿತು.  ವೆಮುಲಾ ಮೇಲೆ ಒಂದರ ಮೇಲೆ ಒಂದರಂತೆ ದಾಳಿ ನಡೆಸಲಾರಂಭಿಸಿದರು, ಅದು ಎಲ್ಲಿಯರಗೆ ಅಂದರೆ ಅವರ ಬಲಿಯಾಗುವವರೆಗೆ.

ಇದನ್ನೂ ಓದಿಜಾತಿವಾದಿ ವ್ಯವಸ್ಥೆಯ ಸಂಚಿನಿಂದ ಹತ್ಯೆಯಾದ ರೋಹಿತ್ ವೇಮುಲ ಅಗಲಿದ ದಿನವಿಂದು

ಮಾನವ ಸಂಪನ್ಮೂಲ ಸಚಿವೆಯಾಗಿದ್ದ ಸ್ಮೃತಿ ಇರಾನಿ ಎಬಿವಿಪಿಯ ಬೆಂಬಲಕ್ಕೆ ನಿಂತು, ರೋಹಿತ್‌ ವೆಮುಲಾರನ್ನು ಹಾಸ್ಟೇಲ್‌ ನಿಂದ ಹೊರ ಹಾಕುವಂತೆ ಆದೇಶಿಸಿದರು. ರೋಹಿತ್ ವೇಮುಲ ಮತ್ತು ಗೆಳೆಯರನ್ನು ಹಾಸ್ಟೆಲ್’ನಿಂದ ಹೊರದಬ್ಬಿದಾಗ, ಅವರು ಚಾಪೆ ಸುತ್ತಿಕೊಂಡು ಅಂಬೇಡ್ಕರ್ ಪಟ ಹಿಡಿದುಕೊಂಡು ರಸ್ತೆ ಬದಿಯಲ್ಲಿ ಕುಳಿತು ಹೋರಾಟ ಆರಂಭಿಸಿದರು. ರೋಹಿತ್‌ ವೆಮುಲಾ ಹೋರಾಟವನ್ನು ಎಸ್‌ಎಫ್‌ಐ, ಎಐಎಸ್‌ಎಫ್‌, ಎಐಎಸ್‌ಎ ಸೇರಿದಂತೆ ಎಡ ಪ್ರಗತಿಪರ ಸಂಘಟನೆಗಳು ಬೆಂಬಲಿಸಿದ್ದವು. ವಿಜ್ಞಾನಿ ಆಗಬೇಕೆಂದು ಕನಸು ಕಾಣುತ್ತಿದ್ದ ದಲಿತ ಸಂಶೋಧಕನೊಬ್ಬನನ್ನು ವ್ಯವಸ್ಥಿತವಾಗಿ ಬಲಿ ಪಡೆದ ಈ ವ್ಯವಸ್ಥೆ ಒಂದಿಡೀ ಸಮುದಾಯದ ಕನಸನ್ನು ದೋಚಿತ್ತು.

ಹೌದು ರೋಹಿತ್‌ ವೇಮುಲ ಇಲ್ಲವಾಗಿ ಇಂದಿಗೆ 8 ವರ್ಷಗಳು ಕಳಿದಿವೆ. ರೋಹಿತ್‌ ನ್ಯಾಯಕ್ಕಾಗಿ ಹೋರಾಟಗಳು ಬಲಗೊಂಡಿವೆ. ಈ ದಿನವನ್ನು ಸಾಮಾಜಿಕ ರಕ್ಷಣಾ ದಿನವನ್ನಾಗಿ ವಿದ್ಯಾರ್ಥಿ ಸಂಘಟನೆಗಳು ಆಚರಿಸುತ್ತಿವೆ. ರೋಹಿತ್‌ ವೆಮುಲಾ ಕೊನೆಯದಾಗ ಬರೆದ ಪತ್ರ ಈಗಲೂ ನಮ್ಮ ಮನಸ್ಸನ್ನು ಕಲಕುತ್ತದೆ, ರಕ್ತ ಕುದಿಯುತ್ತದೆ, ದಲಿತರು ತಮ್ಮ ಶಿಕ್ಷಣವನ್ನು ಮುಂದುವರಿಸುವುದು ಸಾಧ್ಯವಾಗದಂತಹ ಆತಂಕಕಾರಿ ವಾತಾವರಣವನ್ನು ಬಲಪಂಥೀಯ ಶಕ್ತಿಗಳು ಸೃಷ್ಟಿಸುತ್ತಿವೆ ಎಂಬುದನ್ನು ಈ ಪತ್ರ ಸಾಕ್ಷೀಕರಿಸುತ್ತದೆ.

ಬನ್ನಿ ಆ ಪತ್ರವನ್ನೊಮ್ಮೆ ಓದಿ ಬರೋಣ.

ನಾನು ಸದಾ ಒಬ್ಬ ಲೇಖಕನಾಗಬೇಕೆಂದಿದ್ದೆ, ವಿಜ್ಞಾನದ ಲೇಖಕ, ಕಾರ್ಲ ಸಾಗನ್‍ನಂತೆ. ಕೊನೆಗೂ ಬರೆಯುತ್ತಿರುವುದು ಇದೊಂದು ಪತ್ರ ಮಾತ್ರ………………………….

ನನಗೆ ವಿಜ್ಞಾನ, ನಕ್ಷತ್ರಗಳು, ಪ್ರಕೃತಿ ಎಂದರೆ ಪ್ರೀತಿ, ಆದರೆ ನಾನು ಜನರನ್ನ್ಮೂ ಪ್ರೀತಿಸುತ್ತಿದ್ದೆ, ಅವರು ಪ್ರಕೃತಿಯಿಂದ ದೂರವಾಗಿ ಬಹಳ ಕಾಲವೇ ಆಗಿದೆ ಎಂದು ತಿಳಿಯದೆ…………………….

ಒಬ್ಬ ಮನುಷ್ಯನ ಬೆಲೆಯನ್ನು ಅವನ ತಕ್ಷಣದ ಐಡೆಂಟಿಟಿಗೆ, ಅತೀ ನಿಕಟ ಸಾಧ್ಯತೆಗೆ ಇಳಿಸಲಾಗಿದೆ. ಒಂದು ವೋಟು, ಒಂದು ಸಂಖ್ಯೆಗೆ. ಒಂದು ವಸ್ತುವಾಗಿ. ಎಂದೂ ಮನುಷ್ಯನನ್ನು ಮನಸ್ಸು ಎಂದು ಕಂಡಿಲ್ಲ. ……ಪ್ರತಿಯೊಂದು ರಂಗದಲ್ಲೂ, ಅಧ್ಯಯನದಲ್ಲೂ, ರಸ್ತೆಗಳಲ್ಲೂ, ರಾಜಕೀಯದಲ್ಲೂ, ಮತ್ತು ಸಾವು, ಬದುಕಿನಲ್ಲೂ……

ನನ್ನ ಹುಟ್ಟು ಒಂದು ಮರಣಾಂತಿಕ ಅಪಘಾತ. ನಾನೆಂದೂ ನನ್ನ ಬಾಲ್ಯದ ಒಂಟಿತನದಿಂದ  ಮೇಲೇಳಲಾರೆ………..

ನೀವು ಯಾರಾದರೂ ಈ ಪತ್ರವನ್ನು ಓದಿದರೆ, ನನಗೆ ಏನಾದರೂ ಮಾಡಬೇಕೆಂದಿದ್ದರೆ, ನನಗೆ ಏಳು ತಿಂಗಳ ಫೆಲೋಶಿಪ್ ಬರಬೇಕಾಗಿದೆ, ಒಂದು ಲಕ್ಷ ಎಪ್ಪತ್ತೈದು ಸಾವಿರ ರೂಪಾಯಿ. ಅದು ನನ್ನ ಕುಟುಂಬಕ್ಕೆ ಪಾವತಿಯಾಗುವಂತೆ ದಯವಿಟ್ಟು ಮಾಡಿ. ನಾನು ಸುಮಾರು 40 ಸಾವಿರ ರಾಮ್‍ಜಿ ಗೆ ಕೊಡಬೇಕಾಗಿದೆ. ಅವನೆಂದೂ ಅದನ್ನು ಹಿಂದೆ ಕೇಳಿಲ್ಲ. ಆದರೆ ದಯವಿಟ್ಟು ಅವನಿಗೆ ಅದನ್ನು ಕೊಡಿ.

ಈ ಪತ್ರ ಶಿಕ್ಷಣ ರಂಗದಲ್ಲಿನ ಕೇಸರೀಕರಣದ ಕ್ರೂರ ವರ್ತನೆಯ ಎಂತಹದ್ದು ಎಂದು ತೋರಿಸಿಕೊಟ್ಟಿದೆ. ಅಸಹಿಷ್ಣುತೆಯ ಮಹಾಪೂರ 2013ರ ನಂತರ ತೀವ್ರವಾಗಿದೆ. ಅದಕ್ಕೆ ಕಾರಣವೆಂದರೆ,  ಸರ್ಕಾರ ಒಂದು ಕಡೆ ಮತ್ತು ಆಳುವ ಪಕ್ಷಗಳ ಕೃಪೆಯಲ್ಲಿನ ಸಂಘಟನೆಗಳು ಮತ್ತೊಂದು ಕಡೆ ತಮ್ಮ ತಮ್ಮ ಕೆಲಸಗಳನ್ನು ಹಂಚಿಕೊಂಡಿರುವುದರ ಪರಿಣಾಮವಾಗಿದೆ. ಇದು ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ. ಇದನ್ನು ಸೋಲಿಸದ ಹೊರತು ರೋಹಿತ್‌ ವೆಮುಲಾರಂತಹ ಪ್ರತಿಭಾವಂತರು ಶೈಕ್ಷಣಿಕ ಹತ್ಯೆಗೆ ಬಲಿಯಾಗುತ್ತಲೆ ಇರುತ್ತಾರೆ.

ರೋಹಿತ್ ಮತ್ತು ಗೆಳೆಯರ ಹೋರಾಟದ ಹಿನ್ನೆಲೆ

2013ರಲ್ಲಿ ಉತ್ತರಪ್ರದೇಶದ ಮುಝಫ್ಫರ್  ನಗರದಲ್ಲಿ ನಡೆದ ಕೋಮು ಹಿಂಸಾಚಾರದ ವಿಶ್ಲೇಷಣೆ ಮಾಡುವ, ಹೇಗೆ ಅದು ಕೋಮುಧ್ರುವೀಕರಣದ ಯೋಜಿತ ಪ್ರಯತ್ನವಾಗಿತ್ತು, ಇಂತಹ ಪ್ರಯತ್ನಗಳಿಂದ 2014ರ ಲೋಕಸಭಾ ಚುನಾವಣೆಗಳಲ್ಲಿ ಕೋಮುವಾದಿಗಳು ಹೇಗೆ ಭಾರೀ ಗೆಲುವನ್ನು ಪಡೆಯಲು ಸಾಧ್ಯವಾಯಿತು ಎಂಬುದನ್ನು ಬಿಂಬಿಸುವ ‘ಮುಝಫ್ಫರ್‍ಪುರ್ ಅಭೀ ಬಾಕಿ ಹೈ’ ಡಾಕ್ಯುಮೆಂಟರಿ ಚಿತ್ರ ಪ್ರದರ್ಶನ ಸಹಜವಾಗಿಯೇ ಕೋಮುವಾದಿಗಳನ್ನು ಹತಾಶಗೊಳಿಸಿತ್ತು. ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಇದರ ಪ್ರದರ್ಶನಕ್ಕೆ ಸಂಘ ಪರಿವಾರದ  ವಿದ್ಯಾರ್ಥಿ ಸಂಘಟನೆ ಎಬಿವಿಪಿ ಅಡ್ಡಿಪಡಿಸಿತು. ಇದರ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಇತರ ಪ್ರಜಾಪ್ರಭುತ್ವವಾದಿಗಳು ಆಕ್ರೋಶ ವ್ಯಕ್ತಪಡಿಸಿದರು.

ಇದರ ಭಾಗವಾಗಿ ಹೈದರಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲೂ ಅಂಬೇಡ್ಕರ್ ವಿದ್ಯಾರ್ಥಿ ಸಂಘ ಪ್ರತಿಭಟನೆ ಏರ್ಪಡಿಸಿತ್ತು. ಈ ಬಗ್ಗೆ  ಹೈದರಾಬಾದ್ ವಿಶ್ವವಿದ್ಯಾಲಯದ ಎಬಿವಿಪಿ ಘಟಕದ ಮುಖಂಡ ಸುಶೀಲ್ ಕುಮಾರ್ ಆಗಸ್ಟ್ 3, 2015 ರಂದು ತನ್ನ ಫೇಸ್‍ಬುಕ್‍ನಲ್ಲಿ ‘ಎಎಸ್‍ಎ ಗೂಂಡಾಗಳು ಗೂಂಡಾಗಿರಿಯ ಬಗ್ಗೆ ಮಾತಾಡುತ್ತಾರೆ-ತಮಾಷೆಯಾಗಿದೆ’ ಎಂದು ಬರೆದರು. ಇದರಿಂದ ಆಕ್ರೋಶಗೊಂಡ ರೋಹಿತ್ ಮತ್ತು ಅವರ ಗೆಳೆಯರು ಸುಶೀಲ್ ಕುಮಾರ್ ಬಳಿ ಹೋಗಿ ಆಕ್ಷೇಪ ವ್ಯಕ್ತಪಡಿಸಿದರು. ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿಯೂ ಅಲ್ಲಿದ್ದರು.  ‘ನೀವು ಎಬಿವಿಪಿಯನ್ನು ಗೂಂಡಾಗಳೆಂದಿರಿ, ಅದಕ್ಕೆ ನಾನೂ ಹಾಗೇ ಬರೆದೆ’ ಎಂದರಂತೆ. ಆದರೆ ಆತ ಉದಹರಿಸಿದ್ದ ಎಎಸ್‍ಎ ಪೋಸ್ಟರಿನಲ್ಲಿ ಅಂತಹ ಪದಪ್ರಯೋಗವೇನೂ ಇರಲಿಲ್ಲ. ಸುಶೀಲ್ ಕುಮಾರ್ ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿಯ ಸಮ್ಮುಖವೇ ‘ಕ್ಷಮಾಪಣೆ ‘ಕೇಳಿದರು.

ಆದರೆ ಮರುದಿನವೇ ಆತ ತನ್ನನ್ನು ರೋಹಿತ್ ಮತ್ತು ಆತನ ಎಎಸ್‍ಎ ಮಂದಿ ಥಳಿಸಿ ಭಾರೀ ಗಾಯ ಉಂಟು ಮಾಡಿದ್ದಾರೆ ಎಂದು ಖಾಸಗಿ ಆಸ್ಪತ್ರೆಗೆ ದಾಖಲಾದ. ಬಿಜೆಪಿ ಎಂಎಲ್‍ಸಿ ರಾಮಚಂದ್ರರಾವ್ ಆಗ ವಿವಿಯ ಉಪಕುಲಪತಿಯಾಗಿದ್ದ ಪ್ರೊ. ಆರ್.ಪಿ.ಶರ್ಮ ಅವರನ್ನು ಭೇಟಿ ಮಾಡಿ ರೋಹಿತ್ ಮತ್ತು ಆತನ ಎಎಸ್‍ಎ ಗೆಳೆಯರನ್ನು ‘ರಾಷ್ಟ್ರ-ವಿರೋಧಿ’ಗಳೆಂದು ಆಪಾದಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಉಪಕುಲಪತಿಗಳು ಪ್ರೊ. ಅಲೋಕ್ ಪಾಂಡೆ ಅಧ್ಯಕ್ಷತೆಯ ಒಂದು ತನಿಖಾ ಸಮಿತಿಯನ್ನು ನೇಮಿಸಿದರು. ಸುಶೀಲ್ ಕುಮಾರ್‍ಗೆ ಚಿಕಿತ್ಸೆ ನೀಡಿದ ವೈದ್ಯರು ಮತ್ತು ವಿಶ್ವವಿದ್ಯಾಲಯ ಡ್ಯೂಟಿ ಸೆಕ್ಯುರಿಟಿ ಆಫೀಸರ್ ಪ್ರಕಾರ ಯಾವುದೇ ದೈಹಿಕ ದಾಳಿ ನಡೆದ ಪುರಾವೆಗಳಿರಲಿಲ್ಲ. ಆದ್ದರಿಂದ  ಈ ಸಮಿತಿ ಇಂತಹ ಘಟನೆ ನಡೆದ ಬಗ್ಗೆ ಗಟ್ಟಿ ಪುರಾವೆಗಳೇನೂ ಇಲ್ಲ ಎಂಬ ತೀರ್ಮಾನಕ್ಕೆ ಬಂದು ಸುಶೀಲ್ ಕುಮಾರ್ ಕ್ಷಮಾಪಣೆಯೊಂದಿಗೆ ಈ ಪ್ರಸಂಗವನ್ನು ಮುಕ್ತಾಯಗೊಳಿಸಬೇಕೆಂದಿತು. ಆತನಿಗೆ ಆಗ ನಡೆದ ಶಸ್ತ್ರಚಿಕಿತ್ಸೆ ಅಪೆಂಡಿಸೈಟಿಸ್‍ಗಾಗಿ ಎಂಬ ಸಂಗತಿ ಬಹು ಬೇಗ ಹೊರಬಿದ್ದಿತು.

ಆದರೆ ಇಂತಹ ಸಹಜ ಮುಕ್ತಾಯ, ಶಿಕ್ಷಣ ರಂಗವನ್ನು ಕೇಸರೀಕರಿಸಬೇಕೆಂದಿದ್ದ ಸಂಘ ಪರಿವಾರದವರಿಗೆ ಬೇಕಿರಲಿಲ್ಲ. ವಿವಿಯ ಆಡಳಿತ ಮಂಡಳಿ ತನಿಖಾ ಸಮಿತಿಯ ವರದಿಯನ್ನು ಬದಿಗೊತ್ತಿತು. ಆದರೆ ತನಿಖೆಯಲ್ಲಿ ಆರಂಭದಲ್ಲಿ ಕಂಡು ಬಂದಿದ್ದ ಸಂಗತಿ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಉಪಕುಲಪತಿಗಳು ಹೊಸದೊಂದು ತನಿಖಾ ಸಮಿತಿಯನ್ನು ನೇಮಿಸಿದರು.

ಈ ನಡುವೆ ಪ್ರೊ. ಪೊದಿಲೆ ಅಪ್ಪಾರಾವ್ ಅವರನ್ನು ವಿವಿಯ ಉಪಕುಲಪತಿಯಾಗಿ ನೇಮಿಸಲಾಯಿತು. ಈತ ಯಾವುದೇ ಹೊಸ ತನಿಖೆ ನಡೆಸಲಿಲ್ಲ. ಅತ್ತ ದಿಲ್ಲಿಯಲ್ಲಿ ಸಿಕಂದರಾಬಾದ್‍ನ ಸಂಸತ್ ಸದಸ್ಯರೂ ಆದ ಮತ್ತು ಮೋದಿ ಸಂಪುಟದಲ್ಲಿ ಮಂತ್ರಿಯಾಗಿರುವ ಬಂಡಾರು ದತ್ತಾತ್ರೇಯ ಹೈದರಾಬಾದ್ ವಿವಿಯ ಯಲ್ಲಿ ‘ರಾಷ್ಟ್ರ-ವಿರೋಧಿ ಮತ್ತು ಜಾತಿವಾದಿ’ ಚಟುವಟಿಕೆಗಳಲ್ಲಿ ತೊಡಗಿರುವ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾನವ ಸಂಪನ್ಮೂಲ ಮಂತ್ರಿಗಳಿಗೆ ಪತ್ರ ಬರೆದರು. ಅದನ್ನು ಈ ಮಂತ್ರಿಗಳು ವಿಶ್ವವಿದ್ಯಾಲಯಕ್ಕೆ ಕಳಿಸಿದರು ‘ಸೂಕ್ತ ಕ್ರಮ’ಕ್ಕಾಗಿ. ನಂತರ ನಾಲ್ಕು ಬಾರಿ ಅದನ್ನು ನೆನಪಿಸುವ ಪತ್ರಗಳನ್ನೂ ಕಳಿಹಿಸಿದರು. ಅದು ಮುಂದುವರೆಯಿತು ಎಲ್ಲಿವರೆಗೆ ಅಂದರೆ, ಅವರ ಬಲಿಯಾಗುವವರೆಗೂ.

ಬ್ರಾಹ್ಮಣವಾದಿ ವ್ಯವಸ್ಥೆ ಉದ್ದೇಶ ಇಷ್ಟೆ…ದಲಿತ ಯುವಜನತೆಯನ್ನು  ಅತ್ಯುನ್ನತ ಶಿಕ್ಷಣದಿಂದ ಹೊರಗೆ ಹಾಕುವುದು ಮತ್ತು ಬಲಪಂಥೀಯ ಸಿದ್ಧಾಂತಕ್ಕೆ ಅತ್ಯಂತ ಪ್ರಬಲ ಸವಾಲಾಗಿರುವ ಅಂಬೇಡ್ಕರ್‍ವಾದವು ಮತ್ತು ಮಾರ್ಕ್ಸ್‌ವಾದ ಕ್ಯಾಂಪಸ್‍ಗಳಲ್ಲಿ ಬೆಳೆಯದಂತೆ ಮಾಡುವುದು. ಸಂಘಟಿತವಾದ ಹೋರಾಟಗಳು ಇಲ್ಲದಿದ್ದರೆ ಇನ್ನೆಷ್ಟು ಜನ ಶೋಷಿತರು ಬಲಿಪಶುಗಳಾಗುತ್ತಾ ಹೋಗುತ್ತಾರೆ.

ಈ ವಿಡಿಯೋ ನೋಡಿಶೈಕ್ಷಣಿಕ ಸಮಸ್ಯೆಗಳಿಗೆ “ಹೊಸ ಶಿಕ್ಷಣ ನೀತಿ” ರಾಮಬಾಣವೆ?

 

Donate Janashakthi Media

Leave a Reply

Your email address will not be published. Required fields are marked *