ನವದೆಹಲಿ: ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿ ಸ್ಪರ್ಧಿಸಿ ಗೆಲುವು ದಾಖಲಿಸಿರುವ ಒಲಿಂಪಿಕ್ ಪದಕ ವಂಚಿತ ಕುಸ್ತಿಪಟು ವಿನೇಶ್ ಫೋಗಟ್ ವಿರುದ್ಧ ಮಾತನಾಡಿದ್ದಾರೆ.
90 ಸ್ಥಾನಗಳ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ದಾಖಲಿಸಿದ ಫೋಗಟ್ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಬ್ರಿಜ್ ಭೂಷಣ್, ‘ಅವಳು ಗೆದ್ದಿರಬಹುದು. ಆದರೆ ಅವರ ಪಕ್ಷ ಸೋತಿದೆ’ ಎಂದಿದ್ದಾರೆ.
‘ಜಾಟ್ ಸಮುದಾಯದವರು ಅಧಿಕ ಸಂಖ್ಯೆ ಇರುವಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಕುಸ್ತಿಪಟುಗಳು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಯಾವುದೇ ಕುಸ್ತಿಪಟುವೂ ಹರಿಯಾಣದ ಹೀರೊ ಆಗಲು ಸಾಧ್ಯವಿಲ್ಲ. ಕಿರಿಯ ಕುಸ್ತಿಪಟುಗಳ ಪಾಲಿಗೆ ಅವರು ಖಳನಾಯಕರೇ’ ಎಂದಿದ್ದಾರೆ.
ಇದನ್ನ ಓದಿ: ಎಸ್‌ಕೆಎಂ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಪ್ರಬಲಗೊಳಿಸಬೇಕು: ರೈತ ಸಂಘಟನೆಗಳ ನಿರ್ಧಾರ
‘ಚುನಾವಣೆಯಲ್ಲಿ ಗೆಲ್ಲಲು ಆಕೆ (ವಿನೇಶ್) ನನ್ನ ಹೆಸರು ಬಳಸಿಕೊಂಡಿದ್ದರೆ, ಆಕೆಯ ಗೆಲುವಿಗೆ ಕಾರಣನಾದ ನಾನು ದೊಡ್ಡ ವ್ಯಕ್ತಿಯಾಗಿದ್ದೇನೆ. ಆಕೆ ಎಲ್ಲಿ ಹೋಗುತ್ತಾಳೋ ಅಲ್ಲಿ ಸತ್ಯನಾಶವಾಗಲಿದೆ’ ಎಂದು ಬ್ರಿಜ್‌ಭೂಷಣ್ ಹೇಳಿದ್ದಾರೆ.
‘ಜನರಿಗೆ ತಪ್ಪು ಸಂದೇಶ ರವಾನಿಸುವ ಬಹಳಷ್ಟು ಪ್ರಯತ್ನಗಳು ಈ ಚುನಾವಣೆಯಲ್ಲಿ ನಡೆದವು. ಆದರೆ ಅಂತಿಮವಾಗಿ ಬಿಜೆಪಿಯನ್ನು ಬೆಂಬಲಿಸಿದ ಹರಿಯಾಣದ ಮತದಾರರಿಗೆ ಧನ್ಯವಾದಗಳು’ ಎಂದಿದ್ದಾರೆ.
ಜುಲಾನ್ ಕ್ಷೇತ್ರದಿಂದ ಗೆಲುವು ದಾಖಲಿಸಿದ ನಂತರ ಪ್ರತಿಕ್ರಿಯಿಸಿರುವ ವಿನೇಶ್, ‘ನನ್ನ ಈ ಗೆಲುವು ಹೋರಾಟದ ಹಾದಿಯನ್ನು ಆಯ್ಕೆ ಮಾಡಿಕೊಂಡ ಪ್ರತಿಯೊಬ್ಬ ಹೆಣ್ಣುಮಗಳ, ಮಹಿಳೆಯರ ಗೆಲುವಾಗಿದೆ. ಈ ದೇಶ ನನ್ನ ಮೇಲೆ ಇಟ್ಟಿರುವ ನಂಬಿಕೆ ಹಾಗೂ ಪ್ರೀತಿಯನ್ನು ನಾನು ಎಂದಿಗೂ ನೆನಪಿಟ್ಟುಕೊಳ್ಳುತ್ತೇನೆ’ ಎಂದಿದ್ದಾರೆ.
ಕುಸ್ತಿ ಫೆಡರೇಷನ್‌ನಲ್ಲಿ ಮಹಿಳಾ ಕುಸ್ತಿಪಟುಗಳ ಮೇಲೆ ಅಂದಿನ ಅಧ್ಯಕ್ಷರಾಗಿದ್ದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವಿನೇಶ್ ಸೇರಿದಂತೆ ಹಲವು ಹಿರಿಯ ಹಾಗೂ ಕಿರಿಯ ಕುಸ್ತಿಪಟುಗಳು ಹಲವು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು.
ಇದನ್ನೂ ನೋಡಿ: ಜಮ್ಮು ಕಾಶ್ಮೀರಕ್ಕೆ ಇಂಡಿಯಾ ಕೂಟ, ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್Janashakthi Media